ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ, ಅಮೋಘ ಬ್ಯಾಟಿಂಗ್ ಲಯದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಗಳಿಸಿದ ವಿರಾಟ್, ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ್ದ (49 ಶತಕ) ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದರು.
ಆದರೆ ವಿರಾಟ್ ಕೊಹ್ಲಿ ಸ್ವಾರ್ಥಿಯಾಗಿದ್ದು, ವೈಯಕ್ತಿಕ ದಾಖಲೆಗಾಗಿ (ಶತಕ) ಆಡಿದರು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಟೀಕೆ ಮಾಡಿದ್ದರು.
ಇದಕ್ಕೆ ಕ್ರಿಕೆಟ್ ದಿಗ್ಗಜರಿಂದಲೇ ತೀವ್ರ ಟೀಕೆ ವ್ಯಕ್ತವಾಗಿವೆ. ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್, 'ಇದು ಅಸಂಬಂಧ' ಎಂದು ಹಫೀಜ್‌ಗೆ ತಕ್ಕ ಉತ್ತರ ನೀಡಿದ್ದಾರೆ.
'ಅದ್ಭುತ ಕ್ರಿಕೆಟ್ ಆಡುವ ಮೂಲಕ ಭಾರತ, ಎಂಟು ತಂಡಗಳ ವಿರುದ್ಧ ಗೆಲುವು ಸಾಧಿಸಿದೆ. ವಿರಾಟ್ ಬಳಿ 49 ಶತಕಗಳಿದ್ದು, ಕೋಲ್ಕತ್ತದ ಕಠಿಣ ಪಿಚ್‌ನಲ್ಲೂ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಭಾರತ ತಂಡವು 200ಕ್ಕೂ ಹೆಚ್ಚು ರನ್‌ಗಳಿಂದ ಗೆಲುವು ದಾಖಲಿಸಿದೆ' ಎಂದು ಅವರು ಹೇಳಿದ್ದಾರೆ.
ಭಾರತದ ಮಾಜಿ ವೇಗದ ಬೌಲರ್, ಕರ್ನಾಟಕದ ವೆಂಕಟೇಶ್ ಪ್ರಸಾದ್ ಕೂಡ ತಿರುಗೇಟು ನೀಡಿದ್ದರು. 'ವಿರಾಟ್ ಸ್ವಾರ್ಥಿಯಾಗಿದ್ದು, ವೈಯಕ್ತಿಕ ಮೈಲಿಗಲ್ಲಿಗಾಗಿ ಆಡುತ್ತಾರೆ ಎಂಬ ತಮಾಷೆಯ ವಾದವನ್ನು ಕೇಳಿದ್ದೇನೆ. ಹೌದು ಕೊಹ್ಲಿ ಸ್ವಾರ್ಥಿಯೇ. ಕೋಟಿಗಟ್ಟಲೆ ಜನರ ಕನಸನ್ನು ನನಸು ಮಾಡುವ ಸ್ವಾರ್ಥಿ. ತುಂಬಾ ಸಾಧನೆ ಮಾಡಿದ್ದರೂ ಉನ್ನತವಾದುದ್ದು ಸಾಧಿಸಲು ಯತ್ನಿಸುತ್ತಿರುವ ಸ್ವಾರ್ಥಿ. ಹೊಸ ಮೈಲುಗಲ್ಲಿಗಳನ್ನು ಸೃಜಿಸುತ್ತಿರುವ ಸ್ವಾರ್ಥಿ. ತಂಡವನ್ನುಗೆಲ್ಲಿಸುವ ಸ್ವಾರ್ಥಿ' ಎಂದು ಹೇಳಿದರು.
ಈ ಮೊದಲು 'ನನಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಸ್ವಾರ್ಥತೆ ಕಾಣಿಸಿತ್ತು. ಅವರು 49ನೇ ಓವರ್‌ನಲ್ಲಿ ಒಂಟಿ ರನ್ ಗಳಿಸುವ ಮೂಲಕ ಶತಕ ಗಳಿಸಲು ಯತ್ನಿಸುತ್ತಿದ್ದರು. ಈ ವಿಶ್ವಕಪ್‌ನಲ್ಲಿ ಮೂರನೇ ಬಾರಿ ಹೀಗಾಗಿತ್ತು. ಮತ್ತೊಂದೆಡೆ ರೋಹಿತ್ ಶರ್ಮಾ ತಂಡಕ್ಕಾಗಿ ಆಡುತ್ತಾರೆ' ಎಂದು ಹಫೀಜ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.