ADVERTISEMENT

Timed Out: ನೀವೂ ನಿರ್ಗಮಿಸುವ ಸಮಯ ಬಂತು - ಶಕೀಬ್‌ಗೆ ಮ್ಯಾಥ್ಯೂಸ್ ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2023, 2:19 IST
Last Updated 7 ನವೆಂಬರ್ 2023, 2:19 IST
<div class="paragraphs"><p>ಶಕೀಬ್‌ ಅಲ್‌ ಹಸನ್‌‌ಗೆ&nbsp;ಏಂಜೆಲೊ ಮ್ಯಾಥ್ಯೂಸ್ ತಿರುಗೇಟು</p></div>

ಶಕೀಬ್‌ ಅಲ್‌ ಹಸನ್‌‌ಗೆ ಏಂಜೆಲೊ ಮ್ಯಾಥ್ಯೂಸ್ ತಿರುಗೇಟು

   

ಚಿತ್ರ ಕೃಪೆ: ಐಸಿಸಿ

ನವದೆಹಲಿ: ಶ್ರೀಲಂಕಾ ತಂಡದ ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್, ಅಂತರರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲೇ 'ಟೈಮ್ಡ್‌ ಔಟ್‌' ಆಗಿ ನಿರ್ಗಮಿಸಿದ ಮೊದಲ ಬ್ಯಾಟರ್‌ ಎನಿಸಿದರು.

ADVERTISEMENT

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಮ್ಯಾಥ್ಯೂಸ್ ಟೈಮ್ಡ್ ಔಟ್ ಆದರು. ಇದರಿಂದ ಕುಪಿತಗೊಂಡ ಮ್ಯಾಥ್ಯೂಸ್, ಅಸಮಾಧಾನದಿಂದಲೇ ಕ್ರೀಸಿನಿಂದ ಹೊರನಡೆದಿದ್ದರು.

ಬಳಿಕ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರ ವಿಕೆಟ್ ಗಳಿಸಿದ ಮ್ಯಾಥ್ಯೂಸ್ ತಕ್ಕ ಉತ್ತರವನ್ನೇ ನೀಡಿದರು. ಬಾಂಗ್ಲಾ ನಾಯಕನತ್ತ ದಿಟ್ಟಿಸಿ ನೋಡಿದ ಮ್ಯಾಥ್ಯೂಸ್, 'ಈಗ ನೀವು ನಿರ್ಗಮಿಸುವ ಸಮಯ ಬಂತು' ಎಂಬಂತೆ ಸನ್ನೆ ಮಾಡಿದರು.

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಟೈಮ್ಡ್ ಔಟ್‌ಗಾಗಿ ಮನವಿ ಮಾಡಿದ್ದರು. ಅಂಪೈರ್‌ಗಳು ಎರಡೆರಡು ಮನವಿ ಹಿಂಪಡೆಯುತ್ತಿರೋ ಎಂದು ಪ್ರಶ್ನಿಸಿದ್ದರೂ ಬಾಂಗ್ಲಾ ನಾಯಕ ಹಿಂದೆ ಸರಿದಿರಲಿಲ್ಲ. ಹೆಲ್ಮೆಟ್ ಪಟ್ಟಿ ಹರಿದಿದ್ದರಿಂದ ವಿಳಂಬವಾಯಿತು ಎಂಬ ಮ್ಯಾಥ್ಯೂಸ್ ಮನವಿಯನ್ನು ಆಲಿಸಲಿಲ್ಲ.

ಇದು ಲಂಕಾ ಆಟಗಾರರ ಆಕ್ರೋಶಕ್ಕೆ ಕಾರಣವಾಯಿತು. ಈ ಘಟನೆಯ ಬಳಿಕ ಉಭಯ ತಂಡಗಳ ಆಟಗಾರರ ನಡುವೆ ಕಾವೇರಿದ ವಾತಾವರಣಕ್ಕೆ ಸಾಕ್ಷಿಯಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ಶ್ರೀಲಂಕಾದ ನಾಯಕ ಕುಸಾಲ್ ಮೆಂಡಿಸ್, 'ಮ್ಯಾಥ್ಯೂಸ್ ಕ್ರೀಸಿಗೆ ಪ್ರವೇಶಿಸಿದಾಗ ಇನ್ನೂ ಸ್ವಲ್ಪ ಸೆಕೆಂಡುಗಳು ಬಾಕಿಯಿತ್ತು. ಈ ವೇಳೆ ಹೆಲ್ಮೆಟ್‌ನ ಪಟ್ಟಿ ಹರಿದಿರುವುದು ಗಮನಕ್ಕೆ ಬಂತು. ಅಂಪೈರ್ ಸರಿಯಾದ ನಿರ್ಣಯ ನೀಡದೇ ಇರುವುದರಲ್ಲಿ ಬೇಸರವಿದೆ' ಎಂದು ಹೇಳಿದ್ದಾರೆ.

ಮತ್ತೊಂದೆಡೆ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು ನಿಯಮದ ಪ್ರಕಾರವೇ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದ್ದಾರೆ.

ಏಂಜೆಲೊ ಮ್ಯಾಥ್ಯೂಸ್ ಟೈಮ್ಡ್ ಔಟ್

ಏನಿದು ಎರಡು ನಿಮಿಷ ನಿಯಮ?

ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಒಬ್ಬ ಬ್ಯಾಟರ್ ಔಟ್ ಆಗಿ ಅಥವಾ ಗಾಯಗೊಂಡು ನಿವೃತ್ತಿ ಪಡೆದು ನಿರ್ಗಮಿಸಿದ ಎರಡು ನಿಮಿಷಗಳೊಳಗೆ ಮುಂದಿನ ಬ್ಯಾಟರ್ ಕ್ರೀಸ್‌ಗೆ ಬರಬೇಕು. ಅಷ್ಟೇ ಅಲ್ಲ. ಗಾರ್ಡ್‌ ತೆಗೆದುಕೊಂಡು ಎಸೆತ ಎದುರಿಸಲು ಸಿದ್ಧನಾಗಬೇಕು ಎಂಬುದು ಐಸಿಸಿ ವಿಶ್ವಕಪ್ ಟೂರ್ನಿಯ ನಿಯಮವಾಗಿದೆ. ಏಂಜೆಲೊ ಮ್ಯಾಥ್ಯೂಸ್ ಕ್ರೀಸ್‌ ಬಳಿ ಬಂದಿದ್ದರು. ಆದರೆ ಗಾರ್ಡ್‌ ತೆಗೆದುಕೊಂಡಿರಲಿಲ್ಲ. ಬ್ಯಾಟರ್ ಟೈಮ್‌ ಔಟ್ ಆದಲ್ಲಿ ಆ ವಿಕೆಟ್‌ ಯಾವುದೇ ಬೌಲರ್‌ಗಳ ಖಾತೆಗೂ ಸೇರ್ಪಡೆಗೊಳ್ಳುವುದಿಲ್ಲ.

ಏಂಜೆಲೊ ಮ್ಯಾಥ್ಯೂಸ್ ಟೈಮ್ಡ್ ಔಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.