ಅಹಮದಾಬಾದ್(ಪಿಟಿಐ): ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ಸ್ ಅಪ್ ನ್ಯೂಜಿಲೆಂಡ್ ಗುರುವಾರ ಮುಖಾಮುಖಿಯಾಗಲಿವೆ.
2019ರಲ್ಲಿ ಟೈ ಆಗಿದ್ದ ಫೈನಲ್‌ನಲ್ಲಿ ‘ಬೌಂಡರಿ ಕೌಂಟ್‘ ಆಧಾರದಲ್ಲಿ ಇಂಗ್ಲೆಂಡ್ ತಂಡವು ಕಿವೀಸ್ ಬಳಗದ ಎದುರು ಜಯ ಸಾಧಿಸಿತ್ತು. ಇದೀಗ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
ಜೋಸ್ ಬಟ್ಲರ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಇಂಗ್ಲೆಂಡ್ ತಂಡದ ಆಟಗಾರರು ತಮ್ಮ ಆಟದ ಶೈಲಿಯನ್ನು ಬದಲಿಸಿಕೊಂಡಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಇಂಗ್ಲೆಂಡ್ ಆಟಗಾರರ ‘ಬಜ್ ಬಾಲ್ ಸೂತ್ರ‘ವು ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದೆ.
ಯಾವುದೇ ಮಾರಿಯಿರಲಿ ಮಿಂಚಿನ ಬ್ಯಾಟಿಂಗ್ ಮಾಡುವುದು ಈ ತಂಡದ ವಿಶೇಷ. ಅದರಲ್ಲೂ ಕೊನೆಯ ಹಂತದ ಓವರ್‌ಗಳಲ್ಲಿ ರನ್ ಸೂರೆ ಮಾಡುವಲ್ಲಿ ಹ್ಯಾರಿ ಬ್ರೂಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಬೆನ್ ಸ್ಟೋಕ್ಸ್ ಅವರಂತಹವರು ನಿಸ್ಸೀಮರಾಗಿದ್ದಾರೆ.
ಇವರ ಆಟಕ್ಕೆ ಕಡಿವಾಣ ಹಾಕುವುದೇ ಈ ಬಾರಿ ಟೂರ್ನಿಯಲ್ಲಿ ಎಲ್ಲ ತಂಡಗಳ ಬೌಲರ್‌ಗಳ ಮುಂದಿರುವ ದೊಡ್ಡ ಸವಾಲಾಗಿದೆ. ಇಂಗ್ಲೆಂಡ್ ಆಲ್‌ರೌಂಡರ್‌ಗಳಾದ ಮೊಯಿನ್ ಅಲಿ, ಕ್ರಿಸ್ ವೋಕ್ಸ್ ಮತ್ತು ಸ್ಯಾಮ್ ಕರನ್ ಅವರೂ ಪಂದ್ಯ ಗೆದ್ದುಕೊಡಬಲ್ಲ ಸಮರ್ಥರು.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ತಂಡದ ಬಹುತೇಕರಿಗೆ ಭಾರತದ ವಾತಾವರಣ ಮತ್ತು ಪಿಚ್‌ಗಳಿಗೆ ಹೊಂದಿಕೊಳ್ಳುವುದು ಸುಲಭವಾಗಿದೆ.
ಆದರೆ ನ್ಯೂಜಿಲೆಂಡ್ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ನಾಯಕ ಕೇನ್ ವಿಲಿಯಮ್ಸನ್ ಅವರೇ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಆದ್ದರಿಂದ ಟಾಮ್ ಲಥಾಮ್ ನಾಯಕತ್ವ ವಹಿಸಿದ್ದಾರೆ.
ಟಾಮ್, ಡೇವೊನ್ ಕಾನ್ವೆ, ಜೇಮ್ಸ್ ನಿಶಾಮ್ ಹಾಗೂ ಗ್ಲೆನ್ ಫಿಲಿಪ್ಸ್ ಅವರು ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆದರೆ ಬೌಲಿಂಗ್ ವಿಭಾಗದಲ್ಲಿ ಅನುಭವಿ ವೇಗಿ ಟಿಮ್ ಸೌಥಿ ಅವರ ಫಿಟ್‌ನೆಸ್ ಇನ್ನೂ ಪರೀಕ್ಷೆಗೊಳಪಡಬೇಕಿದೆ. ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್ ಮತ್ತು ಈಶ ಸೌಧಿ ಅವರ ಅವರ ಮೇಲೆ ಬೌಲಿಂಗ್ ವಿಭಾಗ ಅವಲಂಬಿಸಿದೆ.
ಪಿಚ್ ಹೇಗಿದೆ?
ಈ ಹಿಂದೆ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡಿದ ಇತಿಹಾಸ ಇಲ್ಲಿಯ ಪಿಚ್‌ಗೆ ಇದೆ. ಆದರೆ ಈಗ ವಿಶ್ವಕಪ್ ಪಂದ್ಯಕ್ಕೆ ಸಿದ್ಧಗೊಂಡಿರುವ ಪಿಚ್‌ನಲ್ಲಿ ಕೆಂಪು ಮಣ್ಣಿನ ಪಟ್ಟಿಗಳು ಎದ್ದುಕಾಣುತ್ತಿವೆ. ಇದು ಮಧ್ಯಮವೇಗಿಗಳಿಗೆ ನೆರವು ನೀಡುವುದರ ಜೊತೆಗೆ ಬ್ಯಾಟರ್‌ಗಳಿಗೂ ಆಡುವ ಅವಕಾಶವು ಇನಿಂಗ್ಸ್‌ನ ಮಧ್ಯ ಭಾಗದಲ್ಲಿ ಸಿಗುವ ಸಾಧ್ಯತೆ ಇದೆ. ಆದ್ದರಿಂದ ಆರಂಭಿಕ ಓವರ್‌ಗಳಲ್ಲಿ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡಿದರೆ ನಂತರದಲ್ಲಿ ಬೀಸಾಟಕ್ಕೆ ಅವಕಾಶವಿದೆ.
ತಂಡಗಳು
ಇಂಗ್ಲೆಂಡ್: ಜಾಸ್ ಬಟ್ಲರ್ (ನಾಯಕ–ವಿಕೆಟ್‌ಕೀಪರ್), ಜೋ ರೂಟ್, ಜಾನಿ ಬೆಸ್ಟೊ (ವಿಕೆಟ್‌ಕೀಪರ್), ಹ್ಯಾರಿ ಬ್ರೂಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಮೋಯಿನ್ ಅಲಿ, ಕ್ರಿಸ್ ವೋಕ್ಸ್, ಸ್ಯಾಮ್ ಕರನ್, ಡೇವಿಡ್ ವಿಲಿ, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟಾಪ್ಲಿ, ಗಸ್ ಅಟ್ಕಿನ್ಸನ್.
ನ್ಯೂಜಿಲೆಂಡ್: ಟಾಮ್ ಲಥಾಮ್ (ನಾಯಕ–ವಿಕೆಟ್‌ಕೀಪರ್), ವಿಲ್ ಯಂಗ್, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಜೇಮ್ಸ್ ನಿಶಾಮ್, ಗ್ಲೆನ್ ಫಿಲಿಪ್ಸ್ (ವಿಕೆಟ್‌ಕೀಪರ್), ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟನರ್, ಈಶ್ ಸೋಧಿ, ಟಿಮ್ ಸೌಧಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್, ಮ್ಯಾಟ್ ಹೆನ್ರಿ.
ಪಂದ್ಯ ಆರಂಭ: ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.