ADVERTISEMENT

ಪಾಕ್ ಎದುರು ಹೆಚ್ಚು ರನ್, ವಿಕೆಟ್ ಗಳಿಸುವ ಆಟಗಾರರನ್ನು ಹೆಸರಿಸಿದ ರಮಿಜ್ ರಾಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2023, 10:46 IST
Last Updated 13 ಅಕ್ಟೋಬರ್ 2023, 10:46 IST
ಬಾಬರ್ ಆಜಂ ಹಾಗೂ ರೋಹಿತ್ ಶರ್ಮಾ
ಬಾಬರ್ ಆಜಂ ಹಾಗೂ ರೋಹಿತ್ ಶರ್ಮಾ   

ಅಹಮದಾಬಾದ್‌: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಬಹುನಿರೀಕ್ಷಿತ ಭಾರತ–ಪಾಕಿಸ್ತಾನ ಪಂದ್ಯ ನಾಳೆ (ಅಕ್ಟೋಬರ್‌ 14ರಂದು) ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಏಕದಿನ ವಿಶ್ವಕಪ್‌ನಲ್ಲಿ ಭಾರತದ ಎದುರು ಆಡಿರುವ ಎಲ್ಲ ಪಂದ್ಯಗಳಲ್ಲೂ ಮುಗ್ಗರಿಸಿರುವ ಪಾಕಿಸ್ತಾನ, ಸೋಲಿನ ಸರಪಳಿಯನ್ನು ಕಳಚಿಕೊಳ್ಳುವುದೇ? ಭಾರತದ ಆರಂಭಿಕರಿಗೆ ಶಾಹಿನ್‌ ಅಫ್ರಿದಿ ಕಾಟ ಕೊಡುವರೇ? ಪಾಕ್‌ ಎದುರು ವಿರಾಟ್‌ ಕೊಹ್ಲಿ ಮತ್ತೊಮ್ಮೆ ಹೀರೊ ಆಗುವುರೇ? ಪಾಕ್‌ ಬ್ಯಾಟರ್‌ಗಳನ್ನು ಜಸ್‌ಪ್ರಿತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌ ದಿಕ್ಕುತಪ್ಪಿಸುವರೇ ಎಂಬಿತ್ಯಾದಿ ಚರ್ಚೆಗಳು ಕ್ರಿಕೆಟ್‌ ವಲಯದಲ್ಲಿ ನಡೆಯುತ್ತಿವೆ.

ಇದರ ನಡುವೆ ಈ ಬಾರಿಯ ವಿಶ್ವಕಪ್‌ ಪಂದ್ಯದಲ್ಲಿ ಹೆಚ್ಚು ರನ್ ಮತ್ತು ಹೆಚ್ಚು ವಿಕೆಟ್‌ ಗಳಿಸಬಲ್ಲ ಇಬ್ಬರು ಆಟಗಾರರನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ರಮೀಜ್‌ ರಾಜಾ ಹೆಸರಿಸಿದ್ದಾರೆ.

ADVERTISEMENT

ಜಿಯೊಸಿನಿಮಾದ 'ಆಕಾಶವಾಣಿ' ಕಾರ್ಯಕ್ರಮ ಕಾರ್ಯಕ್ರದಲ್ಲಿ ಮಾತನಾಡಿರುವ ರಮೀಜ್‌, ಭಾರತದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಮತ್ತು ಎಡಗೈ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಪಾಕ್ ಎದುರು ಪರಿಣಾಮಕಾರಿಯಾಗಬಲ್ಲರು ಅಭಿಪ್ರಾಯಪಟ್ಟಿದ್ದಾರೆ.

'ವಿರಾಟ್‌ ಕೊಹ್ಲಿ ಅತಿಹೆಚ್ಚು ರನ್‌ ಗಳಿಸಲಿದ್ದಾರೆ ಮತ್ತು ಹಿಂದಿನಂತೆಯೇ ಈ ಬಾರಿಯೂ ನಿರ್ಣಾಯಕ ಪ್ರದರ್ಶನ ನೀಡಲಿದ್ದಾರೆ ಎಂದು ನಂಬಿದ್ದೇನೆ. ಕೊಹ್ಲಿ ಆಟ ಪಾಕಿಸ್ತಾನದ ಬೌಲಿಂಗ್‌ಗೆ ತಕ್ಕಂತಿದೆ' ಎಂದು ಹೇಳಿದ್ದಾರೆ.

'ಅದೇರೀತಿ, ಕುಲದೀಪ್‌ ಯಾದವ್‌ ಅಧಿಕ ವಿಕೆಟ್‌ ಕಬಳಿಸಲಿದ್ದಾರೆ ಎಂಬ ವಿಶ್ವಾಸವಿದೆ. ಯಾದವ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿರುವುದು ಪಾಕ್‌ ಪಡೆಗೆ ತಲೆನೋವಾಗಿದೆ. ಏಕೆಂದರೆ ಪಾಕ್ ಬ್ಯಾಟರ್‌ಗಳು ಮಣಿಕಟ್ಟಿನ ಸ್ಪಿನ್ನರ್‌ ಎದುರು ತಿಣುಕಾಡುತ್ತಾರೆ' ಎಂದಿದ್ದಾರೆ.

ಉಭಯ ತಂಡಗಳ ಅಜೇಯ ಓಟ
ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಸದ್ಯ ತಲಾ ಎರಡು ಪಂದ್ಯಗಳನ್ನು ಗೆದ್ದಿದ್ದು, ಜಯದ ಓಟ ಮುಂದುವರಿಸುವ ಲೆಕ್ಕಾಚಾರದಲ್ಲಿವೆ.

ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು 6 ವಿಕೆಟ್‌ ಅಂತರದ ಗೆಲುವು ಸಾಧಿಸಿರುವ ಭಾರತ, ಎರಡನೇ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು 8 ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು.

ಇತ್ತ ಪಾಕಿಸ್ತಾನ ತಂಡ ನೆದರ್ಲೆಂಡ್ಸ್‌ ಮತ್ತು ಶ್ರೀಲಂಕಾ ವಿರುದ್ಧ ಗೆಲುವು ಗಳಿಸಿದೆ. ಉಭಯ ತಂಡಗಳು ಪಾಯಿಂಟ್‌ ಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.