ಅಹಮದಾಬಾದ್ : ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಪಂದ್ಯ ವೀಕ್ಷಿಸಲು ಅಭಿಮಾನಿಗಳ ದಂಡೇ ಕ್ರೀಡಾಂಗಣದ ಸುತ್ತ ನರೆದಿದೆ.
ನೀಲಿ ಜರ್ಸಿ, ತ್ರಿವರ್ಣ ಧ್ವಜ ಹಿಡಿದಿರುವ ಅಭಿಮಾನಿಗಳು ಭಾರತ ತಂಡದ ಗೆಲುವಿಗೆ ಶುಭ ಕೋರಿದ್ದಾರೆ. ತಮ್ಮ ನೆಚ್ಚಿನ ನಾಯಕನ ಫೋಟೊ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳಿಂದ ಕ್ರೀಡಾಂಗಣದ ರಸ್ತೆಯ ಇಕ್ಕೆಲಗಳೆಲ್ಲ ನೀಲಿಮಯವಾಗಿವೆ.
ಕ್ರಿಕೆಟ್ ನೋಡಲು ಭಾರತಕ್ಕೆ ಬಂದ ಅಮೆರಿಕ ರಾಯಭಾರಿ
ರೋಚಕ ಪಂದ್ಯ ವೀಕ್ಷಿಸಲು ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಂದಿದ್ದಾರೆ. ‘ಪಂದ್ಯ ನೋಡಲು ಬಹಳ ಉತ್ಸುಕನಾಗಿದ್ದೇನೆ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಂದೆಯೊಂದಿಗೆ ಬಂದ ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆಯೊಂದಿಗೆ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಂದಿದ್ದು, ಪಂದ್ಯ ವೀಕ್ಷಿಸಲು ಕಾತರಳಾಗಿದ್ದೇನೆ ಎಂದು ಹೇಳಿದ್ದಾರೆ.
1,600 ಪೊಲೀಸ್ ಸಿಬ್ಬಂದಿ ನೇಮಕ
ಕ್ರಿಕೆಟ್ ವೀಕ್ಷಿಸಲು ಸಾವಿರಾರು ಜನರು ಕ್ರೀಡಾಂಗಣದಕ್ಕೆ ಬಂದಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಸಂಚಾರ ದಟ್ಟಣೆ ನಿಯಂತ್ರಕ್ಕೆ ಸುಮಾರು 1,600 ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಸಂಚಾರಿ ಪೊಲೀಸ್ ನರೇಂದ್ರ ಚೌಧರಿ ತಿಳಿಸಿದ್ದಾರೆ.
ಭಾರತದ ಗೆಲುವಿಗೆ ಹೋಮ ಹವನ, ಪೂಜೆ
ಭಾರತದ ಗೆಲುವಿಗಾಗಿ ದೇಶದ ಹಲವಾರು ಕಡೆ ಅಭಿಮಾನಿಗಳು ಹೋಮ, ಹವನ ನಡೆಸಿದ್ದಾರೆ. ಉಜ್ಜಯನಿಯ ಮಹಾಕಾಳೇಶ್ವರ ದೇವಸ್ಥಾನ, ವಾರಾಣಾಸಿಯ ಶಿವ ದೇವಾಲಯ, ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಾಲಯಗಳಲ್ಲಿ ಇಂದು ಭಾರತ ತಂಡದ ಗೆಲುವಿಗೆ ಹಾರೈಸಿ ಪೂಜೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.