ಅಹಮದಾಬಾದ್: 2011ರಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಾಗಿ ಟೀಮ್ ಇಂಡಿಯಾ ವಿಶ್ವಕಪ್ ಜಯಿಸಿತ್ತು. ಈ ಬಾರಿ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗಾಗಿ ವಿಶ್ವಕಪ್ ಗೆಲ್ಲಬೇಕು ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಕನ್ನಡಿಗ ದ್ರಾವಿಡ್ ಅವರಿಗೆ ಭಾರತಕ್ಕಾಗಿ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. 2007ರಲ್ಲಿ ದ್ರಾವಿಡ್ ನಾಯಕತ್ವದಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು.
ಈಗ ಟೀಮ್ ಇಂಡಿಯಾದ ಮುಖ್ಯ ತರಬೇತುದಾರನ ಕರ್ತವ್ಯ ಅಚ್ಚುಕಟ್ಟಾಗಿ ನಿಭಾಯಿಸಿರುವ ದ್ರಾವಿಡ್, ತಂಡವನ್ನು ಫೈನಲ್‌ನತ್ತ ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ವಿಶ್ವಕಪ್ ಫೈನಲ್ ಪಂದ್ಯಕ್ಕೂ ನಡೆದ ಸುದ್ದಿಗೋಷ್ಠಿಯಲ್ಲೂ ನಾಯಕ ರೋಹಿತ್ ಶರ್ಮಾ ಇದನ್ನೇ ಪ್ರತಿಪಾದಿಸಿದ್ದಾರೆ.
ಪ್ರತಿಯೊಬ್ಬ ಆಟಗಾರನಿಗೂ ನಿರ್ದಿಷ್ಟ ಜವಾಬ್ದಾರಿ ನೀಡುವ ಕುರಿತಂತೆ ತಂಡದಲ್ಲಿ ಕೋಚ್ ರಾಹುಲ್ ಪಾತ್ರ ಅತ್ಯಂತ ಮಹತ್ವದೆನಿಸಿದೆ. ನಾನು ಆಲೋಚಿಸುವ ಎಲ್ಲ ವಿಚಾರಗಳಿಗೆ ಕೋಚ್ ಒಪ್ಪಬೇಕೆಂದಿಲ್ಲ. ಆದರೆ ನನ್ನ ನಿರ್ಧಾರವನ್ನು ಒಪ್ಪಿಕೊಂಡು ನನಗೆ ಸ್ವಾತಂತ್ರ್ಯವನ್ನು ನೀಡಿರುವುದು ಅವರ ದೊಡ್ಡಗುಣಕ್ಕೆ ಸಾಕ್ಷಿಯಾಗಿದೆ ಎಂದು ಹೊಗಳಿದ್ದಾರೆ.
ಕಷ್ಟದ ಸಮಯದಲ್ಲಿ ದ್ರಾವಿಡ್ ಸದಾ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ವರ್ಷ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕವಂತೂ ಆಟಗಾರರಿಗೆ ನೆರವಾಗಿದ್ದರು. ಭಾರತ ಕ್ರಿಕೆಟ್ ತಂಡಕ್ಕೆ ದ್ರಾವಿಡ್ ನೀಡಿರುವ ಕೊಡುಗೆ ಅಪಾರ. ಈಗ ದ್ರಾವಿಡ್ ಅವರಿಗಾಗಿ ನಾವು ಈ ವಿಶ್ವಕಪ್ ಗೆಲ್ಲಬೇಕಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.