ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಟೀಮ್ ಇಂಡಿಯಾ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.
ಟೀಮ್ ಇಂಡಿಯಾ ಮೂರನೇ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ಗುರಿ ಹೊಂದಿದೆ. ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದು ಬಹಳಷ್ಟು ಕುತೂಹಲ ಮೂಡಿಸಿದೆ.
ಟೀಮ್ ಇಂಡಿಯಾದ ರಣನೀತಿ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗ ನಾಯಕ ರೋಹಿತ್ ಶರ್ಮಾ ಗುಟ್ಟು ಬಿಟ್ಟು ಕೊಟ್ಟಿಲ್ಲ. ನಾವು ಇನ್ನೂ ಆಡುವ ಬಳಗದ ಕುರಿತು ನಿರ್ಧಾರ ಕೈಗೊಂಡಿಲ್ಲ. ತಂಡದಲ್ಲಿರುವ 15 ಆಟಗಾರರ ಪೈಕಿ ಯಾರೂ ಬೇಕಾದರೂ ಆಡಬಹುದು. ನಾವು ಎದುರಾಳಿ ತಂಡದ ಬಲಾಬಲ ಮತ್ತು ಪಿಚ್ ಅನ್ನು ಅವಲೋಕಿಸಿದ ಬಳಿಕವಷ್ಟೇ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಹಾಗಾಗಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವಕಾಶ ಸಿಗಬಹುದೇ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಇದೇ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಚೆನ್ನೈಯಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್. ಅಶ್ವಿನ್ ತಂಡದ ಭಾಗವಾಗಿದ್ದರಲ್ಲದೆ 10 ಓವರ್‌ಗಳಲ್ಲಿ ಕೇವಲ 34 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಗಳಿಸಿದ್ದರು. ಇದರಲ್ಲಿ ಒಂದು ಮೇಡನ್ ಓವರ್ ಸೇರಿತ್ತು.
ಕೆಳ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವಕಾಶವನ್ನು ಸಮರ್ಥವಾಗಿ ಬಾಚಿಕೊಳ್ಳಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಅಶ್ವಿನ್‌ಗೆ ಬಾಗಿಲು ತೆರೆಯಬಹುದೇ ಎಂಬುದಕ್ಕೆ ಟಾಸ್ ವೇಳೆಯಷ್ಟೇ ಉತ್ತರ ಸಿಗಲಿದೆ.
ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಗಾಯಗೊಂಡ ಪರಿಣಾಮ ಮೊಹಮ್ಮದ್ ಶಮಿ ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಈ ಕುರಿತು ನಾಯಕ ರೋಹಿತ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಶಮಿಗೆ ಮೊದಲ ಕೆಲವು ಪಂದ್ಯಗಳಲ್ಲಿ ಅವಕಾಶ ಸಿಗಲಿಲ್ಲ. ಆದರೂ ಮೊಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬೂಮ್ರಾಗೆ ನೆರವಾಗುತ್ತಿದ್ದರು. ಅವರಿಗೆ ಅವಕಾಶ ಸಿಗದಿದ್ದಾಗ ಈ ಕುರಿತು ಅವರೊಂದಿಗೆ ಚರ್ಚಿಸಿದ್ದೆವು. ಅಲ್ಲದೆ ತಂಡಕ್ಕಾಗಿ ಅವಕಾಶ ಸಿಕ್ಕಾಗೆಲ್ಲ ಉತ್ತಮ ಪ್ರದರ್ಶನ ನೀಡುವ ಹಂಬಲ ಅವರಲ್ಲಿತ್ತು. ಅದಕ್ಕಾಗಿ ಕಠಿಣ ಪರಿಶ್ರಮ ವಹಿಸಿದ್ದರು ಎಂದು ರೋಹಿತ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.