ADVERTISEMENT

ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಕ್ರೀಡಾಂಗಣಕ್ಕೆ ನುಗ್ಗಿದ ಪ್ಯಾಲೆಸ್ಟೀನ್ ಬೆಂಬಲಿಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2023, 14:24 IST
Last Updated 19 ನವೆಂಬರ್ 2023, 14:24 IST
<div class="paragraphs"><p> ಮೈದಾನಕ್ಕೆ ನುಗ್ಗಿದ&nbsp;ಪ್ಯಾಲೆಸ್ಟೀನ್ ಬೆಂಬಲಿಗ</p></div>

ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ಟೀನ್ ಬೆಂಬಲಿಗ

   

ರಾಯಿಟರ್ಸ್‌ ಚಿತ್ರ

ಅಹಮದಾಬಾದ್: ಪ್ಯಾಲೆಸ್ಟೀನ್ ಬೆಂಬಲಿಗ ವ್ಯಕ್ತಿಯೊಬ್ಬ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ವೇಳೆ ಪಿಚ್‌ಗೆ ನುಗ್ಗಿದ್ದರಿಂದ ಕೆಲಕಾಲ ಆಟ ಸ್ಥಗಿತಗೊಂಡಿತು.

ADVERTISEMENT

ಈ ವ್ಯಕ್ತಿಯನ್ನು ಆಸ್ಟ್ರೇಲಿಯಾದ ವೇಯ್ನ್ ಜಾನ್ಸನ್ ಎಂದು ಗುರುತಿಸಲಾಗಿದೆ. ಈತ ಚೀನಾ–ಫಿಲಿಪಿನೊ  ಮೂಲದ ವ್ಯಕ್ತಿ ಎಂದೂ ಪೊಲೀಸರು ತಿಳಿಸಿದ್ದಾರೆ.

ಭಾರತದ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಪಂದ್ಯ ವೀಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದ ಕಾರಣ ಅತ್ಯಂತ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಆದರೂ ಯುವಕನೊಬ್ಬ ಎಲ್ಲವನ್ನೂ ದಾಟಿ ಮೈದಾನಕ್ಕೆ ನುಗ್ಗಿ, ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಅವರತ್ತ ಸಾಗಿದ. ಅವರನ್ನು ಆಲಂಗಿಸಿಕೊಳ್ಳಲು ಯತ್ನಿಸಿದ. ಆತನ ಟಿಶರ್ಟ್‌ ಮೇಲೆ ‘ಸ್ಟಾಪ್ ಬಾಂಬಿಂಗ್ ಆನ್ ಪ್ಯಾಲೆಸ್ಟೈನ್‌’ (ಪ್ಯಾಲೆಸ್ಟೈನ್ ಮೇಲೆ ಬಾಂಬ್ ದಾಳಿ ನಿಲ್ಲಿಸಿ) ಎಂಬ ಒಕ್ಕಣೆಗಳಿದ್ದವು. ಬಹುವರ್ಣದ ಪ್ರೈಡ್ ಧ್ವಜವನ್ನೂ ಹಿಡಿದುಕೊಂಡಿದ್ದು, ಮುಖಗವಸು ಪ್ಯಾಲೆಸ್ಟೈನ್ ಧ್ವಜದಂತಿತ್ತು.

ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಮೈದಾನದಿಂದ ಹೊರಕ್ಕೆ ಕರೆದೊಯ್ದರು. ನಂತರ ಪೊಲೀಸರು ಬಂಧಿಸಿದರು ಎಂದು ಕ್ರೀಡಾಂಗಣದ ಮೂಲಗಳು ತಿಳಿಸಿವೆ.

ಹಮಾಸ್ ಮತ್ತು ಇಸ್ರೇಲ್ ನಡುವಣ ಯುದ್ಧದಲ್ಲಿ ಪ್ಯಾಲೆಸ್ಟೈನ್ ಮೇಲೆ ನಡೆಯುತ್ತಿರುವ ಬಾಂಬ್ ದಾಳಿಯನ್ನು ಹಲವು ದೇಶಗಳು ಖಂಡಿಸುತ್ತಿವೆ. ಯುದ್ಧ ನಿಲ್ಲಿಸುವಂತೆ ಇಸ್ರೇಲ್‌ ಅನ್ನು ಒತ್ತಾಯಿಸಿವೆ. ಕೆಲವು ದೇಶಗಳಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ.

ಸೂರ್ಯ ಕಿರಣದ ರೋಮಾಂಚನ:

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತೀಯ ವಾಯುಪಡೆಯ ಸೂರ್ಯಕಿರಣ ವಿಮಾನಗಳ ಏರ್‌ ಷೋ ಕಣ್ಮನ ಸೆಳೆಯಿತು.

ಈ ತಂಡವು ಇದೇ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯವೊಂದರ ಸಂದರ್ಭದಲ್ಲಿ ಏರ್‌ ಶೋ ನೀಡಿದ ಇತಿಹಾಸ ದಾಖಲಾಯಿತು.

ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಈ ಏರ್ ಷೋ ನಡೆಯಿತು. ಸೂರ್ಯಕಿರಣ ತಂಡದ ಹಾಕ್‌ ಎಂ.ಕೆ 132 ಸ್ಕಾಟ್ ವಿಮಾನಗಳು ಆಗಸದಲ್ಲಿಯೇ ಹಲವು ಸಾಹಸಮಯ ದೃಶ್ಯಗಳನ್ನು ತೋರಿಸಿ ನೋಡುಗರನ್ನು ರೋಮಾಂಚನಗೊಳಿಸಿದವು.

ಆ ಹೊತ್ತಿನಲ್ಲಿ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದ ಉಭಯ ತಂಡಗಳ ಆಟಗಾರರು ಮತ್ತು ಪಿಚ್‌ ಸಿಬ್ಬಂದಿಗಳೂ ಈ ಪ್ರದರ್ಶನವನ್ನು ನೋಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.