ಅಹಮದಾಬಾದ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶಿಸ್ತಿನ ಬೌಲಿಂಗ್ ಸಂಘಟಿಸಿದ ಆಸ್ಟ್ರೇಲಿಯಾ ತಂಡ ಭಾರತ ಬ್ಯಾಟರ್‌ಗಳನ್ನು 240 ರನ್‌ಗಳಿಗೆ ಕಟ್ಟಿಹಾಕಿದರು.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆ ತಂಡದ ಬೌಲರ್‌ಗಳು ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದರು.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಹೊರತುಪಡಿಸಿ ಉಳಿದವರ ಬ್ಯಾಟ್‌ನಿಂದ ರನ್ ಬರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಸಾಧಾರಣ ಮೊತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ವೇಗಿ ಮಿಚೇಲ್ ಸ್ಟಾರ್ಕ್ ರೋಹಿತ್ ಪಡೆಗೆ ಆರಂಭಿಕ ಆಘಾತ ನೀಡಿದರು. ಇನಿಂಗ್ಸ್ ಆರಂಭಿಸಿದ ಶುಭಮನ್ ಗಿಲ್ (4) ಐದನೇ ಓವರ್‌ನಲ್ಲಿ ಔಟಾದರು. ಆದರೂ, ಬಿರುಸಿನ ಬ್ಯಾಟಿಂಗ್ ನಡೆಸಿದ ರೋಹಿತ್ ಕೇವಲ 31 ಎಸೆತಗಳಲ್ಲಿ 47 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾಗ ವಿಕೆಟ್ ಕೈಚೆಲ್ಲಿದರು.
ಕಳೆದೆರಡು ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಶ್ರೇಯಸ್ ಅಯ್ಯರ್‌ಗೆ (4) ಪ್ಯಾಟ್ ಕಮಿನ್ಸ್ ಪೆವಿಲಿಯನ್ ದಾರಿ ತೋರಿದರು. ತಂಡದ ಮೊತ್ತ 3 ವಿಕೆಟ್‌ಗೆ 81 ರನ್ ಆಗಿದ್ದಾಗ ಜೊತೆಯಾದ ಕೊಹ್ಲಿ ಮತ್ತು ರಾಹುಲ್, ನಾಲ್ಕನೇ ವಿಕೆಟ್‌ಗೆ 67 ರನ್ ಕೂಡಿಸಿದರು.
ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಕೊಹ್ಲಿಗೆ 29ನೇ ಓವರ್‌ನಲ್ಲಿ ಅದೃಷ್ಟ ಕೈಕೊಟ್ಟಿತು. ಪ್ಯಾಟ್ ಕಮಿನ್ಸ್ ಎಸೆದ ಈ ಓವರ್‌ನ ಮೂರನೇ ಎಸೆತನಲ್ಲಿ ಚೆಂಡು ಬ್ಯಾಟ್‌ಗೆ ತಾಗಿ, ವಿಕೆಟ್‌ಗೆ ಬಡಿಯಿತು. 63 ಎಸೆತಗಳಲ್ಲಿ 54 ರನ್ ಗಳಿಸಿದ್ದ ಕೊಹ್ಲಿ ಇನಿಂಗ್ಸ್‌ಗೆ ಇದರೊಂದಿಗೆ ತೆರೆ ಬಿದ್ದಿತು.
107 ಎಸೆತಗಳಲ್ಲಿ 66 ರನ್ ಗಳಿಸಿ ಇನಿಂಗ್ಸ್ ಬೆಳೆಸುವ ಹೊಣೆ ಹೊತ್ತಿದ್ದ ರಾಹುಲ್, ಸ್ಟಾರ್ಕ್ ಬೌಲಿಂಗ್‌ನಲ್ಲೇ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ರವೀಂದ್ರ ಜಡೇಜ (9), ಸೂರ್ಯಕುಮಾರ್ ಯಾದವ್ (18) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನಿಂಗ್ಸ್ ಕೊನೇ ಎಸೆತದಲ್ಲಿ ರನೌಟ್ ಆದ ಕುಲದೀಪ್ ಯಾದವ್ (10), ಮೊಹಮ್ಮದ್ ಸಿರಾಜ್ ಜೊತೆಗೂಡಿ ತಂಡದ ಮೊತ್ತವನ್ನು 240ಕ್ಕೇರಿಸಿದರು.
ಆಸ್ಟ್ರೇಲಿಯಾ ಪರ ಮಿಂಚಿದ ಮಿಚೇಲ್ ಸ್ಟಾರ್ಕ್ 3 ವಿಕೆಟ್ ಉರುಳಿಸಿದರೆ, ಜೋಶ್ ಹ್ಯಾಜಲ್‌ವುಡ್ ಮತ್ತು ಪ್ಯಾಟ್ ಕಮಿನ್ಸ್ ತಲಾ ಎರಡು ವಿಕೆಟ್ ಪಡೆದರು. ಇನ್ನೆರಡು ವಿಕೆಟ್‌ಗಳನ್ನು ಸ್ಪಿನ್ನರ್‌ಗಳಾದ ಆ್ಯಡಂ ಜಂಪಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.