ಬ್ರಿಜ್‌ಟೌನ್, ಬಾರ್ಬಾಡೋಸ್: ಸೂರ್ಯಕುಮಾರ್ ಯಾದವ್ ಆರ್ಭಟ ಮತ್ತು ಜಸ್‌ಪ್ರೀತ್ ಬೂಮ್ರಾ ನಿಖರ ದಾಳಿಯ ಬಲದಿಂದ ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತದಲ್ಲಿ ಶುಭಾರಂಭ ಮಾಡಿತು.
ಕೆನ್ಸಿಂಗ್ಟನ್ ಒವಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಒಂದನೇ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 47 ರನ್‌ಗಳಿಂದ ಅಫ್ಗಾನಿಸ್ತಾನ ವಿರುದ್ಧ ಜಯಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಆರಂಭದಲ್ಲಿ ಆತಂಕ ಎದುರಿಸಿತ್ತು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ (53; 28ಎ, 4X5, 6X3) ಮಿಂಚಿನ ಬ್ಯಾಟಿಂಗ್‌ನಿಂದಾಗಿ ಆತಂಕ ದೂರವಾಯಿತು. ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 181 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನ ತಂಡವು ಬೂಮ್ರಾ (4–1–7–3) ದಾಳಿಗೆ ಶರಣಾಯಿತು. 20 ಓವರ್‌ಗಳಲ್ಲಿ 134 ರನ್ ಗಳಿಸಿ ಶರಣಾಯಿತು. ಗುಲ್ಬದೀನ್ ನೈಬ್ (17 ರನ್), ಅಜ್ಮತ್‌ಉಲ್ಲಾ ಒಮರ್‌ಝೈ (26 ರನ್) ಹಾಗೂ ನಜೀಬುಲ್ಲಾ ಜದ್ರಾನ್ (19 ರನ್) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಬೂಮ್ರಾ ಅವರಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ (36ಕ್ಕೆ3) ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ (32ಕ್ಕೆ2) ಉತ್ತಮ ಜೊತೆ ನೀಡಿದರು. ಇದರಿಂದಾಗಿ ಅಫ್ಗನ್ ತಂಡದ ಬ್ಯಾಟಿಂಗ್ ಪಡೆ ಕುಸಿಯಿತು.
ಸೂರ್ಯ ಆರ್ಭಟ; ಪಾಂಡ್ಯ ಮಿಂಚು: ಅಫ್ಗನ್ ತಂಡದ ಬೌಲರ್ ಫಜಲ್‌ಹಕ್ ಫರೂಕಿ (33ಕ್ಕೆ3) ಮತ್ತು ನಾಯಕ ರಶೀದ್ ಖಾನ್ (26ಕ್ಕೆ3) ಅವರ ದಾಳಿಯ ಮುಂದೆ ಭಾರತ ತಂಡವು ಒಂದು ಹಂತದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತ್ತು. 90 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ರೋಹಿತ್ 61.54ರ ಸ್ಟ್ರೈಕ್‌ರೇಟ್‌ನಲ್ಲಿ 8 ರನ್ ಗಳಿಸಿದರು. ಕೊಹ್ಲಿ 24 ಎಸೆತಗಳಲ್ಲಿ 24 ರನ್ ಹೊಡೆದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಷಭ್ ಪಂತ್ (20; 11ಎ, 4X4) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ.
ಈ ಹಂತದಲ್ಲಿ ದಿಟ್ಟತನದಿಂದ ಬ್ಯಾಟ್ ಬೀಸಿದ ಸೂರ್ಯ ಬೆಳಗಿದರು. 189.29ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಸೂರೆ ಮಾಡಿದರು. ಆದರೆ ಶಿವಂ ದುಬೆ ಕೇವಲ ಒಂದು ಸಿಕ್ಸರ್ ಮಾತ್ರ ಗಳಿಸಿದರು. ಸೂರ್ಯ ಜೊತೆಗೂಡಿದ ಹಾರ್ದಿಕ್ ಬೌಲರ್‌ಗಳ ಬೆವರಿಳಿಸಿದರು. ಐದನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿದರು. ಇದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸಲು ಸಾಧ್ಯವಾಯಿತು. ಸೂರ್ಯ 27 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
17ನೇ ಓವರ್‌ನಲ್ಲಿ ಸೂರ್ಯ ಕುಮಾರ್ ವಿಕೆಟ್ ಗಳಿಸಿದ ಫರೂಕಿ ಜೊತೆಯಾಟವನ್ನು ಮುರಿದರು. ನಂತರದ ಓವರ್‌ನಲ್ಲಿ ಹಾರ್ದಿಕ್ ಕೂಡ ಔಟಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.