ಬೆಂಗಳೂರು: ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ’ಶತಕಗಳ ಅರ್ಧಶತಕ’ ಸಾಧಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಗಳಿಸಲು ಭಾರತದ ವಿರಾಟ್ ಕೊಹ್ಲಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ.
ನರಕ ಚತುರ್ದಶಿಯ ದಿನವೂ ಆಗಿರುವ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡುವ ನಿರೀಕ್ಷೆ ಗರಿಗೆದರಿದೆ. ಆದ್ದರಿಂದಾಗಿಯೇ ಈ ಪಂದ್ಯವು ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಶನಿವಾರ ರಾತ್ರಿಯವರೆಗೂ ಟಿಕೆಟ್, ಪಾಸ್‌ಗಳಿಗಾಗಿ ಹಲವರು ಮೈದಾನದ ಸುತ್ತ ಎಡತಾಕಿದರು. ಆದರೆ ಕ್ರೀಡಾಂಗಣದ ಸಿಬ್ಬಂದಿ ‘ಸೋಲ್ಡ್ ಔಟ್’ ಎಂದು ಹೇಳಿ ಜನರನ್ನು ಸಾಗಹಾಕುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ದಶಕಕ್ಕೂ ಹೆಚ್ಚು ಸಮಯದಿಂದ ಆಡುತ್ತಿರುವ ಕೊಹ್ಲಿಗೆ ಈ ನಗರವು ಎರಡನೇ ತವರೂರಿನಂತಿದೆ. ಆದ್ದರಿಂದಲೇ ಅವರಿಗೆ ಇಲ್ಲಿ ಅತಿ ಹೆಚ್ಚು ಅಭಿಮಾನಿಗಳು ಇಲ್ಲಿದ್ದಾರೆ. ಹೋದವಾರ ದಕ್ಷಿಣ ಆಫ್ರಿಕಾ ವಿರುದ್ಧ ಅವರು ಏಕದಿನ ಕ್ರಿಕೆಟ್‌ನ 49ನೇ ಶತಕ ಗಳಿಸಿದ್ದರು.
ಅದಲ್ಲದೇ ಈ ಬಾರಿಯ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಬಳಗವು ಒಂದೂ ಪಂದ್ಯ ಸೋತಿಲ್ಲ. ಎಲ್ಲ ವಿಭಾಗಗಳಲ್ಲಿಯೂ ಪರಿಣಾಮಕಾರಿಯಾಗಿ ಆಡುವ ಮೂಲಕ ಆತಿಥೇಯರು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಸೆಮಿಫೈನಲ್‌ಗೂ ಪ್ರವೇಶಿಸಿದೆ.
ಕನ್ನಡಿಗ ಕೆ.ಎಲ್. ರಾಹುಲ್ ವಿಕೆಟ್‌ಕೀಪಿಂಗ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಇದಲ್ಲದೇ ಟೂರ್ನಿಯುದ್ದಕೂ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿರುವ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ರವೀಂದ್ರ ಜಡೇಜ ಹಾಗೂ ಆರ್‌ಸಿಬಿ ಬೌಲರ್ ಕೂಡ ಆಗಿರುವ ಮೊಹಮ್ಮದ್ ಸಿರಾಜ್ ಕೂಡ ಆಕರ್ಷಣೆಯಾಗಿದ್ದಾರೆ.
ಎಲ್ಲ ರೀತಿಯಿಂದಲೂ ನೆದರ್ಲೆಂಡ್ಸ್ ತಂಡಕ್ಕಿಂತ ಭಾರತವೇ ಹೆಚ್ಚು ಬಲಶಾಲಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶಗಳ ವಿರುದ್ಧ ಜಯಭೇರಿ ಬಾರಿಸಿದ್ದ ಸ್ಕಾಟ್ ಎಡ್ವರ್ಡ್ ಬಳಗವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ನೆದರ್ಲೆಂಡ್ಸ್ ಗೆ ಈ ಬಾರಿ ಸೆಮಿ ಕನಸು ಕೈಗೂಡಿಲ್ಲ.
‘ನೆದರ್ಲೆಂಡ್ಸ್ ತಂಡವು ಉತ್ತಮವಾಗಿ ಆಡಿದೆ. ಸಹಸದಸ್ಯತ್ವದ ತಂಡಗಳು ಈ ಹಂತಕ್ಕೆ ತಲುಪಲು ಎಷ್ಟು ಕಷ್ಟಗಳ ಹಾದಿಯನ್ನು ಸವೆಸಿ ಬಂದಿರುತ್ತವೆ ಎಂಬುದು ನಮಗೆ ಚೆನ್ನಾಗಿ ಅರಿವಿದೆ. 2000ನೇ ಇಸವಿಗೂ ಮುನ್ನ ನಾನು ಕೂಡ ಕೆಲಕಾಲ ಸ್ಕಾಟ್ಲೆಂಡ್‌ನಲ್ಲಿದ್ದೆ. ಅವರು ಮಾಡುತ್ತ ಬಂದಿರುವ ಪ್ರಯತ್ನಗಳು, ಬದ್ದತೆಗಳು ಮೆಚ್ಚುವಂತವು. ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿರುವ ಮತ್ತು ತರಬೇತುಗೊಂಡಿರುವ ತಂಡ ಅದಾಗಿದೆ’ ಎಂದು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ಶ್ಲಾಘಿಸಿದರು.
ಆ ಮೂಲಕ ಬೇರೆ ತಂಡಗಳಂತೆಯೇ ಡಚ್ ಬಳಗವನ್ನೂ ಗಂಭೀರವಾಗಿ ಪರಿಗಣಿಸುವುದಾಗಿ ಸೂಚ್ಯವಾಗಿ ಹೇಳಿದರು.
ಡಚ್ ಬಳಗದ ವೇಗಿ ಬೆಸ್ ಡಿ ಲೀಡ್ ಅವರು ಎಂಟು ಪಂದ್ಯಗಳಿಂದ 14 ವಿಕೆಟ್ ಗಳಿಸಿದ್ದಾರೆ. ಭಾರತದ ಬ್ಯಾಟರ್‌ಗಳಿಗೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಸ್ಕಾಟ್, ತೇಜಾ ನಿಡಮಾನೂರು ಕೂಡ ಭರವಸೆಯ ಆಟಗಾರರಾಗಿದ್ಧಾರೆ. ಅದರೆ ಅತಿಥೇಯ ಬೌಲರ್‌ಗಳನ್ನು ಎದುರಿಸಿ ನಿಲ್ಲುವ ಕಠಿಣ ಸವಾಲು ಇವರ ಮುಂದಿದೆ.
‘ಬೆಂಗಳೂರಿನಲ್ಲಿ ಪಂದ್ಯ ಆಡುವುದು ನಮ್ಮ ಕನಸಾಗಿತ್ತು. ಟೂರ್ನಿಗೂ ಮುನ್ನ ಇಲ್ಲಿಯೇ ಅಭ್ಯಾಸ ಮಾಡಿದ್ದೆವು. ಇದೀಗ ದೀಪಾವಳಿ ಹಬ್ಬದ ದಿನ. ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿದ ಮೈದಾನದಲ್ಲಿ ಬಲಾಢ್ಯ ಭಾರತದ ಎದುರು ಆಡುವುದು ನಮಗೆ ಹೊಸ ಅನುಭವವಾಗಲಿದೆ. ನಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡುತ್ತೇವೆ’ ಎಂದು ನೆದರ್ಲೆಂಡ್ಸ್ ಕೋಚ್ ರಾನ್ ಕುಕ್ ಹೇಳಿದ್ದಾರೆ.
ಬೆಂಗಳೂರಿನ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಇಲ್ಲಿ ಈಚೆಗೆ ನಡೆದ ನಾಲ್ಕು ವಿಶ್ವಕಪ್ ಪಂದ್ಯಗಳಲ್ಲಿಯೂ ಬ್ಯಾಟರ್‌ಗಳು ಮಿಂಚಿದ್ದಾರೆ.
ಈ ಪಂದ್ಯದಲ್ಲಿಯೂ ಬ್ಯಾಟರ್‌ಗಳು ಮಿಂಚುವ ಎಲ್ಲ ಸಾಧ್ಯತೆಗಳೂ ಇವೆ. ಮಳೆ ಸುರಿಯುವ ಸಾಧ್ಯತೆ ಕಡಿಮೆ ಇದೆ. ಟಾಸ್ ಗೆದ್ದ ತಂಡವು ಬ್ಯಾಟಿಂಗ್ ಮಾಡುವ ಸಾಧ್ಯತೆಯೇ ಹೆಚ್ಚಿದೆ.
ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಈ ಹಿಂದೆ ವಿಶ್ವಕಪ್ ಕ್ರಿಕೆಟ್‌ನಲ್ಲಿ ಎರಡು ಬಾರಿ ಮುಖಾಮುಖಿಯಾಗಿವೆ.
2003ರಲ್ಲಿ ಪಾರ್ಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತವು ನೆದರ್ಲೆಂಡ್ ತಂಡವನ್ನು 68 ರನ್‌ಗಳಿಂದ ಸೋಲಿಸಿತ್ತು. 2011ರಲ್ಲಿ ದೆಹಲಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಭಾರತವು 5 ವಿಕೆಟ್‌ಗಳಿಂದ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.