ಅಹಮದಾಬಾದ್: ಭಾರತದ 'ರನ್ ಮಷಿನ್' ಖ್ಯಾತಿಯ ವಿರಾಟ್ ಕೊಹ್ಲಿ ಈ ಬಾರಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡದ ವಿರುದ್ಧ 6 ವಿಕೆಟ್ ಅಂತರದ ಜಯ ಸಾಧಿಸಿದ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತು.
ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 240 ರನ್ ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಟ್ರಾವಿಸ್ ಹೆಡ್ ಶತಕ (137 ರನ್) ಮತ್ತು ಮಾರ್ನಸ್ ಲಾಬುಷೇನ್ ಅರ್ಧಶತಕದ (ಅಜೇಯ 58 ರನ್) ಬಲದಿಂದ ಇನ್ನೂ 7 ಓವರ್‌ಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತು.
ಟ್ರಾವಿಸ್ ಹೆಡ್ ಫೈನಲ್ ಪಂದ್ಯದ ಶ್ರೇಷ್ಠ ಆಟಗಾರ ಎನಿಸಿದರು. ಟೂರ್ನಿಯುದ್ದಕ್ಕೂ ರನ್ ಹೊಳೆ ಹರಿಸಿದ ಕೊಹ್ಲಿ, ಈ ವಿಶ್ವಕಪ್‌ನ ಶ್ರೇಷ್ಠ ಆಟಗಾರ ಪ್ರಶಸ್ತಿ ಮುಡಿಗೇರಿಸಿಕೊಂಡರು. 11 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ ಕೊಹ್ಲಿ 3 ಶತಕ, 6 ಅರ್ಧಶತಕ ಸಹಿತ 765 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿಗೆ ಭಾರತದವರೇ ಆದ ಮೊಹಮ್ಮದ್ ಶಮಿ, ಜಸ್‌ಪ್ರಿತ್ ಬೂಮ್ರಾ, ರೋಹಿತ್ ಶರ್ಮಾ, ಆಸ್ಟ್ರೇಲಿಯಾದ ಆ್ಯಡಂ ಜಂಪಾ, ಗ್ಲೆನ್ ಮ್ಯಾಕ್ಸ್‌ವೆಲ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, ನ್ಯೂಜಿಲೆಂಡ್‌ನ ರಚಿನ್ ರವಿಂದ್ರ ಮತ್ತು ಡೆರಿಲ್ ಮಿಚೆಲ್ ಪೈಪೋಟಿಯೊಡ್ಡಿದ್ದರು.
1992ರಿಂದ ಇಲ್ಲಿಯವರೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದವರು
1992ರಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಕ್ರೋವ್: 456 ರನ್
1996ರಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ: 221 ರನ್ ಹಾಗೂ 6 ವಿಕೆಟ್
1999ರಲ್ಲಿ ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ನೆರ್: 281 ರನ್ ಹಾಗೂ 17 ವಿಕೆಟ್
2003ರಲ್ಲಿ ಭಾರತದ ಸಚಿನ್ ತೆಂಡೂಲ್ಕರ್: 673 ರನ್ ಹಾಗೂ 2 ವಿಕೆಟ್
2007ರಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾ: 26 ವಿಕೆಟ್
2011ರಲ್ಲಿ ಭಾರತದ ಯುವರಾಜ್ ಸಿಂಗ್: 362 ರನ್ ಹಾಗೂ 15 ವಿಕೆಟ್
2015ರಲ್ಲಿ ಆಸ್ಟ್ರೇಲಿಯಾದ ಮಿಚೇಲ್ ಸ್ಟಾರ್ಕ್: 22 ವಿಕೆಟ್
2019ರಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್: 578 ರನ್ ಹಾಗೂ 2 ವಿಕೆಟ್
2023ರಲ್ಲಿ ಭಾರತದ ವಿರಾಟ್ ಕೊಹ್ಲಿ: 765 ರನ್ ಹಾಗೂ 1 ವಿಕೆಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.