ADVERTISEMENT

World Cup Final | ಮೂರಕ್ಕೇರಲಿಲ್ಲ ಭಾರತ; ಆರಕ್ಕೆ ಹಾರಿದ ಆಸ್ಟ್ರೇಲಿಯಾ

ಫೈನಲ್‌ನಲ್ಲಿ ಟ್ರಾವಿಸ್ ಹೆಡ್ ಅಮೋಘ ಶತಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2023, 15:58 IST
Last Updated 19 ನವೆಂಬರ್ 2023, 15:58 IST
<div class="paragraphs"><p>ಟ್ರೋಫಿಯೊಂದಿಗೆ ಆಸ್ಟ್ರೇಲಿಯಾ ಆಟಗಾರರ ಸಂಭ್ರಮ&nbsp;</p></div>

ಟ್ರೋಫಿಯೊಂದಿಗೆ ಆಸ್ಟ್ರೇಲಿಯಾ ಆಟಗಾರರ ಸಂಭ್ರಮ 

   

ರಾಯಿಟರ್ಸ್ ಚಿತ್ರ

ಅಹಮದಾಬಾದ್‌: ಏಕದಿನ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಆತಿಥೇಯ ಭಾರತದ ಎದುರು 6 ವಿಕೆಟ್‌ ಅಂತರದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ದಾಖಲೆಯ ಆರನೇ ಬಾರಿ ಚಾಂಪಿಯನ್‌ ಪಟ್ಟಕ್ಕೇರಿತು.‌ ಭಾರತ ತಂಡದ ಮೂರನೇ ಪ್ರಶಸ್ತಿ ಕನಸು ನುಚ್ಚುನೂರಾಯಿತು.

ADVERTISEMENT

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 240 ರನ್‌ ಗಳಿಸಿ ಆಲೌಟ್‌ ಆಯಿತು. ಟ್ರಾವಿಸ್‌ ಹೆಡ್‌ ಗಳಿಸಿದ ಅಮೋಘ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ಈ ಗುರಿಯನ್ನು ಇನ್ನೂ 7 ಓವರ್‌ಗಳು ಬಾಕಿ ಇರುವಂತೆಯೇ 4 ವಿಕೆಟ್‌ ಕಳೆದುಕೊಂಡು ತಲುಪಿತು.

ತಿಣುಕಾಡಿದ ಟೀಂ ಇಂಡಿಯಾ
ಮೊದಲು ಬ್ಯಾಟ್‌ ಮಾಡಿದ ಭಾರತ ಪರ ನಾಯಕ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್‌.ರಾಹುಲ್‌ ಹೊರತುಪಡಿಸಿ ಉಳಿದವರ ಬ್ಯಾಟ್‌ನಿಂದ ರನ್‌ ಬರಲಿಲ್ಲ.

ರೋಹಿತ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಶುಭಮನ್‌ ಗಿಲ್‌ (4) ಐದನೇ ಓವರ್‌ನಲ್ಲೇ ಔಟಾದರು. ಆದರೂ, ಬಿರುಸಿನ ಬ್ಯಾಟಿಂಗ್‌ ನಡೆಸಿದ ರೋಹಿತ್‌ ಕೇವಲ 31 ಎಸೆತಗಳಲ್ಲಿ 47 ರನ್‌ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾಗ ವಿಕೆಟ್‌ ಕೈಚೆಲ್ಲಿದರು.

ಕಳೆದೆರಡು ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಶ್ರೇಯಸ್‌ ಅಯ್ಯರ್‌ಗೆ (4) ಪ್ಯಾಟ್‌ ಕಮಿನ್ಸ್‌ ಪೆವಿಲಿಯನ್‌ ದಾರಿ ತೋರಿದರು. ತಂಡದ ಮೊತ್ತ 3 ವಿಕೆಟ್‌ಗೆ 81 ರನ್‌ ಆಗಿದ್ದಾ‌ಗ ಜೊತೆಯಾದ ಕೊಹ್ಲಿ ಮತ್ತು ರಾಹುಲ್‌, ನಾಲ್ಕನೇ ವಿಕೆಟ್‌ಗೆ 67 ರನ್‌ ಕೂಡಿಸಿದರು. ಉತ್ತಮವಾಗಿ ಬ್ಯಾಟ್‌ ಬೀಸುತ್ತಿದ್ದ ಕೊಹ್ಲಿಗೆ 29ನೇ ಓವರ್‌ನಲ್ಲಿ ಅದೃಷ್ಟ ಕೈಕೊಟ್ಟಿತು. ಪ್ಯಾಟ್‌ ಕಮಿನ್ಸ್‌ ಎಸೆದ ಈ ಓವರ್‌ನ ಮೂರನೇ ಎಸೆತನಲ್ಲಿ ಚೆಂಡು ಬ್ಯಾಟ್‌ಗೆ ತಾಗಿ, ವಿಕೆಟ್‌ಗೆ ಬಡಿಯಿತು. 63 ಎಸೆತಗಳಲ್ಲಿ 54 ರನ್‌ ಗಳಿಸಿದ್ದ ಕೊಹ್ಲಿ ಇನಿಂಗ್ಸ್‌ಗೆ ಇದರೊಂದಿಗೆ ತೆರೆ ಬಿದ್ದಿತು.

107 ಎಸೆತಗಳಲ್ಲಿ 66 ರನ್‌ ಗಳಿಸಿ ಇನಿಂಗ್ಸ್‌ ಬೆಳೆಸುವ ಹೊಣೆ ಹೊತ್ತಿದ್ದ ರಾಹುಲ್‌, ಸ್ಟಾರ್ಕ್‌ ಬೌಲಿಂಗ್‌ನಲ್ಲೇ ವಿಕೆಟ್‌ ಕೀಪರ್‌ ಜೋಶ್‌ ಇಂಗ್ಲಿಸ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ರವೀಂದ್ರ ಜಡೇಜ (9), ಸೂರ್ಯಕುಮಾರ್‌ ಯಾದವ್‌ (18) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನಿಂಗ್ಸ್‌ನ ಕೊನೇ ಎಸೆತದಲ್ಲಿ ರನೌಟ್‌ ಆದ ಕುಲದೀಪ್‌ ಯಾದವ್‌ (10), ಮೊಹಮ್ಮದ್‌ ಸಿರಾಜ್‌ ಜೊತೆಗೂಡಿ ತಂಡದ ಮೊತ್ತವನ್ನು 240ಕ್ಕೇರಿಸಿದರು.

ಟ್ರಾವಿಸ್–ಮಾರ್ನಸ್ ಜೊತೆಯಾಟ
ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಗಲಿಲ್ಲ. ವೇಗಿಗಳಾದ ಬೂಮ್ರಾ ಮತ್ತು ಮೊಹಮ್ಮದ್‌ ಶಮಿ ಆರಂಭಿಕ ಆಘಾತ ನೀಡಿದರು. ಹೀಗಾಗಿ ತಂಡದ ಮೊತ್ತ 47 ರನ್‌ ಆಗುವಷ್ಟರಲ್ಲಿ ಡೇವಿಡ್‌ ವಾರ್ನರ್‌ (7), ಮಿಚೇಲ್‌ ಮಾರ್ಷ್‌ (15) ಹಾಗೂ ಸ್ಟೀವ್‌ ಸ್ಮಿತ್‌ (4) ಔಟಾದರು.

ಈ ಹಂತದಲ್ಲಿ ಜೊತೆಯಾದ ಟ್ರಾವಿಸ್‌ ಹೆಡ್‌ ಮತ್ತು ಮಾರ್ನಸ್‌ ಲಾಬುಷೇನ್‌, ಭಾರತದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಲಾಬುಷೇನ್‌ ರಕ್ಷಣಾತ್ಮಕವಾಗಿ ಆಡಿದರೆ ಟ್ರಾವಿಸ್‌ ಎಂದಿನಂತೆ ಲೀಲಾಜಾಲವಾಗಿ ಬ್ಯಾಟ್‌ ಬೀಸಿದರು.

ಈ ಇಬ್ಬರು ನಾಲ್ಕನೇ ವಿಕೆಟ್‌ ಪಾಲುದಾರಿಕೆಯಲ್ಲಿ 192 ರನ್‌ ಗಳಿಸಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.

120 ಎಸೆತಗಳನ್ನು ಎದುರಿಸಿದ ಹೆಡ್‌, 15 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 137 ರನ್‌ ಚಚ್ಚಿ, ಗೆಲುವಿಗೆ ಎರಡು ರನ್ ಬೇಕಿದ್ದಾಗ ಔಟಾದರು. ಲಾಬುಷೇನ್‌ 110 ಎಸೆತಗಳಲ್ಲಿ 4 ಬೌಂಡರಿ ಸಹಿತ 58 ರನ್‌ ಗಳಿಸಿ ಅಜೇಯವಾಗಿ ಉಳಿದರು.

ಭಾರತ ತಂಡದ ಮೂರನೇ ಪ್ರಶಸ್ತಿ ಕನಸು ನುಚ್ಚುನೂರಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.