ADVERTISEMENT

ICC World Cup Final: ಸೋಲರಿಯದ ಭಾರತಕ್ಕೆ ಸೋತು ಪುಟಿದೆದ್ದ ಆಸ್ಟ್ರೇಲಿಯಾ ಸವಾಲು

ಅಭಿಲಾಷ್ ಎಸ್‌.ಡಿ.
Published 18 ನವೆಂಬರ್ 2023, 6:57 IST
Last Updated 18 ನವೆಂಬರ್ 2023, 6:57 IST
<div class="paragraphs"><p>ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಒಳಚಿತ್ರದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು</p></div>

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಒಳಚಿತ್ರದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು

   

ಪಿಟಿಐ ಚಿತ್ರಗಳು

ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಗಳು ಈ ಬಾರಿಯ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿವೆ.

ADVERTISEMENT

ಸತತ ಹತ್ತು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ, 3ನೇ ಬಾರಿ ವಿಶ್ವಕಪ್‌ ಎತ್ತಿ ಹಿಡಿಯುವ ಕನಸಿನಲ್ಲಿದೆ. ಆದರೆ, ಟೂರ್ನಿಯ ಮೊದಲೆರಡು ಪಂದ್ಯಗಳಲ್ಲೇ ಮುಗ್ಗರಿಸಿ, ನಂತರ ಮೈಕೊಡವಿ ಎದ್ದಿರುವ ಆಸ್ಟ್ರೇಲಿಯಾ ಆತಿಥೇಯರಿಗೆ ಚಳ್ಳೆ ಹಣ್ಣು ತಿನ್ನಿಸಿ ಆರನೇ ಸಲ ಟ್ರೋಫಿ ಮುಡಿಗೇರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಭಾರತ ತಂಡ ಈ ವರೆಗೆ ಮೂರು ಬಾರಿಯಷ್ಟೇ ಫೈನಲ್‌ನಲ್ಲಿ ಆಡಿದೆ. ಇಂಗ್ಲೆಂಡ್‌ನಲ್ಲಿ ನಡೆದ 1983ರ ವಿಶ್ವಕಪ್‌ನಲ್ಲಿ ಸಾಧಾರಣ ತಂಡವಾಗಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ, ಕಪಿಲ್‌ ದೇವ್‌ ನಾಯಕತ್ವದಲ್ಲಿ ಫೈನಲ್‌ಗೇರಿ ಅಚ್ಚರಿ ಮುಡಿಸಿತ್ತು. ಸುಲಭ ಜಯದ ಕನಸು ಕಂಡಿದ್ದ ಬಲಿಷ್ಠ ವೆಸ್ಟ್‌ ಇಂಡೀಸ್‌ ದಾಂಡಿಗರಿಗೆ ಪೆಟ್ಟು ನೀಡಿ ಕ್ರಿಕೆಟ್‌ ಜಗತ್ತೇ ಹುಬ್ಬೇರುವಂತೆ ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಆದರೆ, ಅದಾದ ನಂತರ ಮತ್ತೊಮ್ಮೆ ಫೈನಲ್‌ ಪ್ರವೇಶಿಸಲು ಭಾರತಕ್ಕೆ ಬರೋಬ್ಬರಿ 20 ವರ್ಷ ಬೇಕಾಯಿತು. 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೂರ್ನಿಯಲ್ಲಿ ಸೌರವ್‌ ಗಂಗೂಲಿ ನಾಯಕತ್ವದಲ್ಲಿ ಆಡಿದ್ದ ಭಾರತ ತಂಡ ಲೀಗ್‌ ಹಂತದಲ್ಲಿ ಆಡಿದ 9ರಲ್ಲಿ 8 ಪಂದ್ಯ ಗೆದ್ದು ಸೆಮಿಫೈನಲ್‌ ತಲುಪಿತ್ತು. ಬಲಿಷ್ಠ ತಂಡಗಳಿಗೆ ಶಾಕ್‌ ನೀಡಿ ನಾಕೌಟ್‌ ತಲುಪಿದ್ದ ಕೀನ್ಯಾ ವಿರುದ್ಧ ಗೆದ್ದು ಫೈನಲ್‌ಗೂ ಪ್ರವೇಶ ಪಡೆದಿತ್ತು. ಆದರೆ, ಈ ಬಾರಿ ಪ್ರಶಸ್ತಿ ದಕ್ಕಿರಲಿಲ್ಲ.

ಫೈನಲ್ ಪಂದ್ಯಕ್ಕೆ ಸಜ್ಜಾಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ

ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಸಿಸ್‌ ಎದುರು 125 ರನ್‌ ಅಂತರದ ಸೋಲು ಅನುಭವಿಸಿತ್ತು. ನಾಯಕ ರಿಕಿ ಪಾಂಟಿಂಗ್‌ (ಅಜೇಯ 140 ರನ್‌) ಹಾಗೂ ಡೆಮೀನ್‌ ಮಾರ್ಟಿನ್‌ (ಅಜೇಯ 88 ರನ್) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಕಾಂಗರೂ ಪಡೆ ನಿಗದಿತ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗೆ 359 ರನ್ ಗಳಿಸಿತ್ತು.

ಈ ಗುರಿ ಎದುರು ವೀರೇಂದ್ರ ಸೆಹ್ವಾಗ್‌ (82) ಹಾಗೂ ಈಗ ಟೀಂ ಇಂಡಿಯಾ ಕೋಚ್‌ ಆಗಿರುವ ರಾಹುಲ್ ದ್ರಾವಿಡ್‌ (47) ಅವರ ಬ್ಯಾಟ್‌ಗಳಷ್ಟೇ ಸದ್ದು ಮಾಡಿದ್ದವು. ದಿಗ್ಗಜ ಬ್ಯಾಟರ್ ಸಚಿನ್‌ ತೆಂಡೂಲ್ಕರ್‌ 4 ರನ್‌ ಗಳಿಸಿದರೆ, ನಾಯಕ ಗಂಗೂಲಿ ಹಾಗೂ ಯುವರಾಜ್ ಸಿಂಗ್‌ ಆಟ ತಲಾ 24 ರನ್‌ಗಳಿಗೆ ಕೊನೆಗೊಂಡಿತ್ತು. ಮೊಹಮ್ಮದ್ ಕೈಫ್ ಸೊನ್ನೆ ಸುತ್ತಿದ್ದರು. ಹೀಗಾಗಿ 39.2 ಓವರ್‌ಗಳಲ್ಲಿ 234 ರನ್‌ಗಳಿಸಿ ಆಲೌಟ್‌ ಆಗಿತ್ತು.

ಇದಾದ ಬಳಿಕ ಟೀಂ ಇಂಡಿಯಾ ಮತ್ತೆ ಫೈನಲ್‌ಗೇರಿದ್ದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ. ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಜಂಟಿ ಆತಿಥ್ಯದಲ್ಲಿ ನಡೆದ 2011ರ ಟೂರ್ನಿಯಲ್ಲಿ ಭಾರತ ಎರಡನೇ ಸಲ ಪ್ರಶಸ್ತಿ ಜಯಿಸಿತ್ತು.

ಮುಂಬೈನಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 274 ರನ್ ಗಳಿಸಿತ್ತು. ಅನುಭವಿ ಮಹೇಲ ಜಯವರ್ಧನೆ ಅಜೇಯ ಶತಕ (103) ಸಿಡಿಸಿದ್ದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಧೋನಿ (ಅಜೇಯ 91 ರನ್) ಮತ್ತು ಗೌತಮ್ ಗಂಭೀರ್‌ (97) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದಾಗಿ 6 ವಿಕೆಟ್‌ಗಳ ಜಯ ಸಾಧಿಸಿತ್ತು.

ಸೆಮಿಫೈನಲ್‌ ಗೆಲುವಿನ ರೂವಾರಿ ಮೊಹಮ್ಮದ್ ಶಮಿ

ವಿಶ್ವಕಪ್‌ ಫೈನಲ್‌ನಲ್ಲಿ ಶತಕ ಗಳಿಸಿದ ಆಟಗಾರನ ತಂಡ ಸೋಲು ಅನುಭವಿಸಿದ್ದು ಅದೇ ಮೊದಲು.

ಈ ಟೂರ್ನಿಯ ಬಳಿಕ 2015ರ‌ಲ್ಲಿ ಮತ್ತೆ ಧೋನಿ ನಾಯಕತ್ವದಲ್ಲಿ ಹಾಗೂ 2019ರಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಆಡಿದ ಭಾರತ ಸೆಮಿಫೈನಲ್‌ ಹಂತದಲ್ಲೇ ಮುಗ್ಗರಿಸಿತ್ತು.

ಭಾರತಕ್ಕೆ ನಾಲ್ಕನೇ ಫೈನಲ್‌
ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೇರಿರುವುದು ಇದು ನಾಲ್ಕನೇ ಬಾರಿ. ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಆಡುತ್ತಿರುವ ತಂಡ ಈ ಬಾರಿ ಕೋಟ್ಯಂತರ ಭಾರತೀಯರ ಮನದಲ್ಲಿ ಮೂರನೇ ಪ್ರಶಸ್ತಿಯ ಆಸೆ ಬಿತ್ತಿದೆ. ಲೀಗ್‌ ಹಂತದಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲೂ ಅಧಿಕಾರಯುತ ಜಯ ಸಾಧಿಸಿರುವುದು ಅದಕ್ಕೆ ಕಾರಣ.

ಮುಂಬೈ ಇಂಡಿಯನ್ಸ್‌ ತಂಡಕ್ಕೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) 5 ಬಾರಿ ಪ್ರಶಸ್ತಿ ಹಾಗೂ ಭಾರತಕ್ಕೆ 2 ಸಲ ಏಷ್ಯಾ ಕಪ್‌ ಗೆದ್ದು ಕೊಟ್ಟಿರುವ ರೋಹಿತ್‌, ವಿಶ್ವಕಪ್‌ನಲ್ಲಿಯೂ ಯಶಸ್ವಿಯಾಗಿ ತಂಡ ಮುನ್ನಡೆಸಿದ್ದಾರೆ.

ಅಹಮದಾಬಾದ್‌ನಲ್ಲಿ ನಾಳೆ (ನವೆಂಬರ್ 19) ನಡೆಯುವ ಫೈನಲ್‌ನಲ್ಲಿ ಗೆದ್ದು, ಭಾರತಕ್ಕೆ ಪ್ರಶಸ್ತಿ ತಂದುಕೊಡುವ ಗುರಿ ಅವರ ಮುಂದಿದೆ. ಅಷ್ಟೇ ಅಲ್ಲ, 2003ರ ಫೈನಲ್‌ನಲ್ಲಿ ಇದೇ ಆಸ್ಟ್ರೇಲಿಯಾ ನೀಡಿದ್ದ ಏಟಿಗೆ ತಿರುಗೇಟು ನೀಡುವ ಅವಕಾಶವೂ ಇದೆ.

ಟೂರ್ನಿಯಲ್ಲಿ ಹೆಚ್ಚು ರನ್‌ ಹಾಗೂ ಅಧಿಕ ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರರೇ ಅಗ್ರಸ್ಥಾನದಲ್ಲಿ ಇದ್ದಾರೆ. ಬ್ಯಾಟರ್‌ಗಳ ಪಟ್ಟಿಯನ್ನು ವಿರಾಟ್‌ ಕೊಹ್ಲಿ ಮುನ್ನಡೆಸುತ್ತಿದ್ದರೆ, ಬೌಲರ್‌ಗಳ ವಿಭಾಗದಲ್ಲಿ ಮೊಹಮ್ಮದ್‌ ಶಮಿ ಮುನ್ನಡೆಯಲ್ಲಿದ್ದಾರೆ.

ಸೆಮಿಫೈನಲ್‌ನಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ

ಕೊಹ್ಲಿ ಆಡಿರುವ 10 ಇನಿಂಗ್ಸ್‌ಗಳಲ್ಲಿ 3 ಶತಕ ಮತ್ತು 5 ಅರ್ಧಶತಕ ಸಹಿತ 711 ರನ್‌ ಗಳಿಸಿದ್ದಾರೆ. ಇದು ವಿಶ್ವಕಪ್‌ ಟೂರ್ನಿಯೊಂದರಲ್ಲಿ ಬ್ಯಾಟರ್‌ವೊಬ್ಬ ಗಳಿಸಿದ ದಾಖಲೆಯ ಮೊತ್ತವಾಗಿದೆ. ಬಿರುಸಿನ ಆರಂಭದ ಮೂಲಕ ಎದುರಾಳಿಗಳ ಯೋಜನೆಗಳನ್ನು ಆರಂಭದಲ್ಲೇ ತಲೆಕೆಳಗಾಗಿಸುತ್ತಿರುವ ನಾಯಕ ರೋಹಿತ್‌ ಶರ್ಮಾ (550), ಮಧ್ಯಮ ಕ್ರಮಾಂಕದ ಶಕ್ತಿ ಎನಿಸಿರುವ ಶ್ರೇಯಸ್‌ ಅಯ್ಯರ್‌ (526) ಮತ್ತು ಕೆ.ಎಲ್‌.ರಾಹುಲ್‌ (386) ಸಹ ಉತ್ತಮ ಲಯದಲ್ಲಿದ್ದಾರೆ.

ಯಾವುದೇ ಬ್ಯಾಟಿಂಗ್‌ ವಿಭಾಗವನ್ನು ದಿಕ್ಕೆಡಿಸಬಲ್ಲ ಶಮಿ, ಆಡಿದ ಆರೇ ಪಂದ್ಯಗಳಲ್ಲಿ ಮೂರು ಬಾರಿ 5 ವಿಕೆಟ್‌ ಗೊಂಚಲು ಸಾಧನೆಯೊಂದಿಗೆ 23 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ವಿಕೆಟ್‌ ಗಳಿಕೆ ಜೊತೆಗೆ ರನ್‌ ಬಿಟ್ಟುಕೊಡದೆ ಶಿಸ್ತಿನ ದಾಳಿ ಸಂಘಟಿಸುವ ಅನುಭವಿ ವೇಗಿ ಜಸ್‌ಪ್ರಿತ್‌ ಬೂಮ್ರ (18 ವಿಕೆಟ್‌) ಹಾಗೂ ಯುವ ವೇಗಿ ಮೊಹಮದ್ ಸಿರಾಜ್‌ (13 ವಿಕೆಟ್‌) ಶಮಿಗೆ ಉತ್ತಮ ನೆರವು ನೀಡುತ್ತಿದ್ದಾರೆ.

ಕುಲದೀಪ್‌ ಯಾದವ್‌ (15 ವಿಕೆಟ್‌) ಜೊತೆಗೆ ಸ್ಪಿನ್‌ ಮೋಡಿ ಮಾಡುತ್ತಿರುವ ರವೀಂದ್ರ ಜಡೇಜ (16 ವಿಕೆಟ್) ಎದುರಾಳಿಗಳಿಗೆ ಸವಾಲಾಗಬಲ್ಲರು.

ಆಸ್ಟ್ರೇಲಿಯಾಗೆ 6ನೇ ಪ್ರಶಸ್ತಿ ಮೇಲೆ ಕಣ್ಣು
ಏಕದಿನ ಕ್ರಿಕೆಟ್‌ನ ಅತ್ಯಂತ ಯಶಸ್ವಿ ತಂಡ ಎನಿಸಿರುವ ಆಸ್ಟ್ರೇಲಿಯಾ 8ನೇ ಬಾರಿ ವಿಶ್ವಕಪ್‌ ಫೈನಲ್‌ ಲಗ್ಗೆ ಇಟ್ಟಿದ್ದು, 6ನೇ ಸಲ ಟ್ರೋಫಿ ಎತ್ತಿ ಹಿಡಿಯುವ ಇರಾದೆಯಲ್ಲಿದೆ. ಈವರೆಗೆ ಆಡಿರುವ 7 ಫೈನಲ್‌ ಪಂದ್ಯಗಳಲ್ಲಿ ಐದರಲ್ಲಿ ಜಯದ ನಗೆ ಬೀರಿ ಚಾಂಪಿಯನ್‌ ಪಟ್ಟಕ್ಕೇರಿರುವ ಆಸಿಸ್‌ಗೆ, ಎರಡರಲ್ಲಷ್ಟೇ ಸೋಲು ಎದುರಾಗಿದೆ.

1975ರಲ್ಲಿ ಮೊದಲ ವಿಶ್ವಕಪ್‌ ಟೂರ್ನಿಯಲ್ಲೇ ಫೈನಲ್‌ಗೇರಿದ್ದ ಕಾಂಗರೂಗಳಿಗೆ ಪ್ರಶಸ್ತಿ ಸಿಕ್ಕಿರಲಿಲ್ಲ. ಬಲಿಷ್ಠ ವೆಸ್ಟ್‌ಇಂಡೀಸ್‌ ವಿರುದ್ಧ 17 ರನ್‌ ಅಂತರದ ಸೋಲುಂಡಿದ್ದ ಆಸ್ಟ್ರೇಲಿಯನ್ನರು, ಅದಾದ 12 ವರ್ಷಗಳ ನಂತರ (1987ರಲ್ಲಿ) ಮೊದಲ ಪ್ರಶಸ್ತಿ ಒಲಿಸಿಕೊಂಡಿದ್ದರು.

ಆಸ್ಟ್ರೇಲಿಯಾದ ಸ್ಪಿನ್‌ 'ಶಕ್ತಿ'  ಆ್ಯಡಂ ಜಂಪಾ

1992ರಲ್ಲಿ ನ್ಯೂಜಿಲೆಂಡ್‌ನೊಂದಿಗೆ ಜಂಟಿ ಆತಿಥ್ಯ ವಹಿಸಿದ್ದ ಆಸಿಸ್‌, ಸೆಮಿಫೈನಲ್‌ ಸಹ ತಲುಪಿರಲಿಲ್ಲ. 1996ರಲ್ಲಿ ಫೈನಲ್‌ಗೇರಿದರೂ ಶ್ರೀಲಂಕಾ ಎದುರು 7 ವಿಕೆಟ್‌ ಅಂತರದ ಸೋಲು ಎದುರಾಗಿತ್ತು. ನಂತರದ ಮೂರು (1999, 2003, 2000) ವಿಶ್ವಕಪ್‌ಗಳಲ್ಲಿ ಫೈನಲ್‌ಗೇರಿ ಹ್ಯಾಟ್ರಿಕ್‌ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಿಕೊಂಡಿತ್ತು.

2015ರಲ್ಲಿ ಮತ್ತೊಮ್ಮೆ ಫೈನಲ್‌ಗೇರಿ ಜಯದ ಸವಿಯುಂಡಿತ್ತು.

ಈ ಬಾರಿ ಲೀಗ್‌ ಹಂತದಲ್ಲಿ ಭಾರತ ವಿರುದ್ಧ ಎದುರಾರ 6 ವಿಕೆಟ್‌ಗಳ ಸೋಲನ್ನು ಗಮನದಲ್ಲಿರಿಸಿಯೇ ತಂತ್ರ ರೂಪಿಸುತ್ತಿರುವ ಪ್ಯಾಟ್‌ ಕಮಿನ್ಸ್‌ ಬಳಗ, ಆತಿಥೇಯರನ್ನು ತವರಿನಂಗಳದಲ್ಲಿ ಮಕಾಡೆ ಮಲಗಿಸಲು ಸಜ್ಜಾಗಿದೆ.

ಭಾರತದ ವಿರುದ್ಧ 2003ರ ಫೈನಲ್‌ನಲ್ಲಿ ಸಿಕ್ಕಿರುವ ಜಯ, 7 ಬಾರಿ ಫೈನಲ್‌ ಆಡಿದ ಅನುಭವ, ಹೆಚ್ಚು ಪ್ರಶಸ್ತಿ ಗೆದ್ದ ತಂಡ ಎಂಬ ಖ್ಯಾತಿ, ಕಮಿನ್ಸ್ ಪಡೆಯ ವಿಶ್ವಾಸವನ್ನು ಇಮ್ಮಡಿಗೊಳಿಸಬಹುದು.

ಈ ಸಲ ಆಡಿರುವ 10 ಪಂದ್ಯಗಳಲ್ಲಿ 528 ರನ್‌ ಗಳಿಸಿರುವ ಡೇವಿಡ್‌ ವಾರ್ನರ್‌, ಆಸ್ಟ್ರೇಲಿಯಾ ಪರ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌. ಅವರೊಂದಿಗೆ ಮಿಚೇಲ್‌ ಮಾರ್ಶ್‌ (426), ಮಾರ್ನಸ್‌ ಲಾಬುಶೇನ್‌ (304), ಸ್ಟೀವ್‌ ಸ್ಮಿತ್‌ (298), ಟ್ರಾವಿಸ್‌ ಹೆಡ್‌ (192) ಅವರನ್ನೊಳಗೊಂಡ ಬ್ಯಾಟಿಂಗ್ ಪಡೆ ಪ್ರಬಲವಾಗಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಸಮತೋಲನ ತಂದುಕೊಡಬಲ್ಲ ಗ್ಲೆನ್‌ ಮ್ಯಾಕ್ಸ್‌ವೆಲ್‌ ಇರುವುದು ಈ ತಂಡದ ಪಾಲಿಗೆ ಧನಾತ್ಮಕ ಅಂಶ.

ಈ ಬಾರಿ 22 ವಿಕೆಟ್‌ಗಳನ್ನು ಉರುಳಿಸಿರುವ ಆ್ಯಡಂ ಜಂಪಾ, ಮೊಹಮ್ಮದ್‌ ಶಮಿಯೊಂದಿಗೆ ವಿಕೆಟ್‌ ರೇಸ್‌ನಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಯಾವುದೇ ಬ್ಯಾಟಿಂಗ್‌ ವಿಭಾಗವನ್ನು ಕಂಗೆಡಿಸಬಲ್ಲ ತ್ರಿವಳಿ ವೇಗಿಗಳಾದ ಮಿಚೇಲ್‌ ಸ್ಟಾರ್ಕ್‌ (13 ವಿಕೆಟ್‌), ಜೋಶ್‌ ಹ್ಯಾಜಲ್‌ವುಡ್‌ (14 ವಿಕೆಟ್‌), ಪ್ಯಾಟ್‌ ಕಮಿನ್ಸ್‌ (13 ವಿಕೆಟ್‌) ಈ ತಂಡದ ಬೌಲಿಂಗ್‌ ಶಕ್ತಿಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್‌ ಗೆದ್ದ ಸಂಭ್ರಮದಲ್ಲಿ ಆಸಿಸ್‌ ಪಡೆ

ಭಾರತ ಫೈನಲ್‌ಗೇರಿದ್ದು ಹೀಗೆ
* 1ನೇ ಪಂದ್ಯ:
ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ ಜಯ
* 2ನೇ ಪಂದ್ಯ:
ಅಫ್ಗಾನಿಸ್ತಾನ ವಿರುದ್ಧ 8 ವಿಕೆಟ್‌ ಜಯ
* 3ನೇ ಪಂದ್ಯ: ಪಾಕಿಸ್ತಾನ ವಿರುದ್ಧ  7 ವಿಕೆಟ್‌ ಜಯ
* 4ನೇ ಪಂದ್ಯ:
ಬಾಂಗ್ಲಾದೇಶ ಎದುರು 7 ವಿಕೆಟ್‌ ಜಯ
* 5ನೇ ಪಂದ್ಯ:
ನ್ಯೂಜಿಲೆಂಡ್‌ ವಿರುದ್ಧ 4 ವಿಕೆಟ್‌ ಜಯ
* 6ನೇ ಪಂದ್ಯ:
ಇಂಗ್ಲೆಂಡ್‌ ವಿರುದ್ಧ 100 ರನ್‌ ಜಯ
* 7ನೇ ಪಂದ್ಯ: ಶ್ರೀಲಂಕಾ ವಿರುದ್ಧ 302 ರನ್‌ ಜಯ
* 8ನೇ ಪಂದ್ಯ: ದಕ್ಷಿಣ ಆಫ್ರಿಕಾ ಎದುರು 243 ರನ್ ಜಯ
* 9ನೇ ಪಂದ್ಯ: ನೆದರ್ಲೆಂಡ್ಸ್‌ ವಿರುದ್ಧ 160 ರನ್ ಜಯ
* ಸೆಮಿಫೈನಲ್‌:
ನ್ಯೂಜಿಲೆಂಡ್‌ ವಿರುದ್ಧ 70 ರನ್‌ ಜಯ

ಆಸ್ಟ್ರೇಲಿಯಾದ ಫೈನಲ್‌ ಹಾದಿ
* 1ನೇ ಪಂದ್ಯ:
ಭಾರತ ವಿರುದ್ಧ 6 ವಿಕೆಟ್‌ ಸೋಲು
* 2ನೇ ಪಂದ್ಯ:
ದಕ್ಷಿಣ ಆಫ್ರಿಕಾ ಎದುರು 134 ರನ್‌ ಸೋಲು
* 3ನೇ ಪಂದ್ಯ:
ಶ್ರೀಲಂಕಾ ವಿರುದ್ಧ 5 ವಿಕೆಟ್‌ ಜಯ
* 4ನೇ ಪಂದ್ಯ:
ಪಾಕಿಸ್ತಾನ ಎದುರು 62 ರನ್‌ ಜಯ
* 5ನೇ ಪಂದ್ಯ:
ನೆದರ್ಲೆಂಡ್ಸ್‌ ವಿರುದ್ಧ 309 ರನ್‌ ಜಯ
* 6ನೇ ಪಂದ್ಯ:
ನ್ಯೂಜಿಲೆಂಡ್‌ ಎದುರು 5 ರನ್‌ ಜಯ
* 7ನೇ ಪಂದ್ಯ:
ಇಂಗ್ಲೆಂಡ್‌ ವಿರುದ್ಧ 33 ರನ್‌ ಜಯ
* 8ನೇ ಪಂದ್ಯ:
ಅಫ್ಗಾನಿಸ್ತಾನ ವಿರುದ್ಧ 3 ವಿಕೆಟ್‌ ಸೋಲು
* 9ನೇ ಪಂದ್ಯ: 
ಬಾಂಗ್ಲಾದೇಶ ವಿರುದ್ಧ 8 ವಿಕೆಟ್‌ ಜಯ
* ಸೆಮಿಫೈನಲ್‌: ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ ಜಯ

* ಫೈನಲ್‌: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನವೆಂಬರ್ 19ರ ಮಧ್ಯಾಹ್ನ 2ಕ್ಕೆ ಆರಂಭವಾಗಲಿದೆ.

ಸುದರ್ಶನ್ ಪಟ್ನಾಯಕ್ ಅವರು ರೂಪಿಸಿದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟ್ರೋಫಿಯ ಮರಳು ಕಲಾಕೃತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.