ಬೆಂಗಳೂರು: ‘ವಿಕೆಟ್ ಮುಂದೆ ಬ್ಯಾಟ್ ಬೀಸುವುದು ಮಾತ್ರವಲ್ಲ, ವಿಕೆಟ್ ಹಿಂದೆ ಗ್ಲೌಸ್ ತೊಟ್ಟು ನಿಖರ ಡಿಆರ್‌ಎಸ್ ಸೂಚನೆ ನೀಡುವ ಮೂಲಕವೂ ಟೀಮ್ ಇಂಡಿಯಾದ ದೊಡ್ಡ ಶಕ್ತಿಯಾಗಿ ಕೆ.ಎಲ್.ರಾಹುಲ್ ಈ ಟೂರ್ನಿಯಲ್ಲಿ ಹೊರಹೊಮ್ಮಿದ್ದಾರೆ’ ಎಂದು ಹಿರಿಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಹೇಳಿದ್ದಾರೆ.
‘ರಾಹುಲ್ ಟೀಂ ಇಂಡಿಯಾದ ಕಾಯಂ ಕೀಪರ್ ಅಲ್ಲ. ಆದರೆ ಯಾರೊಬ್ಬರೂ ಅವರ ಕೀಪಿಂಗ್ ಕುರಿತು ಬೆರಳು ಮಾಡಿ ತೋರಿಸಲೂ ಅವಕಾಶವಿಲ್ಲದಂತೆ ಅಂಗಳದಲ್ಲಿ ತಮ್ಮ ಸಾಧನೆ ಮೆರೆದಿದ್ದಾರೆ. ಈ ಟೂರ್ನಿಯಲ್ಲಿ ಔಟ್‌ಗಾಗಿ ಅಂಪೈರ್‌ಗೆ ಮೊರೆ ಇಡುವ ತಂಡಕ್ಕೆ ತಮ್ಮ ನಿಖರ ಸಲಹೆಯ ಮೂಲಕ ಅನಗತ್ಯ ರೆಫರಲ್ ಅನ್ನು ರಾಹುಲ್ ತಪ್ಪಿಸಿದ್ದಾರೆ. ಇದು ನಿಜಕ್ಕೂ ತಂಡಕ್ಕೆ ಬೋನಸ್ ಆಗಿದೆ’ ಎಂದು 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಕನ್ನಡಿಗ ಆಟಗಾರ ಬಣ್ಣಿಸಿದ್ದಾರೆ.
‘ತಂಡದ ನಾಯಕರಾಗಿ ಕೀಪಿಂಗ್ ಹೊಣೆ ಹೊತ್ತಿದ್ದ ಎಂ.ಎಸ್.ಧೋನಿ ಅವರ ಲೆಕ್ಕಾಚಾರ ಡಿಆರ್‌ಎಸ್‌ನಲ್ಲಿ ಸಾಕಷ್ಟು ನಿಖರವಾಗಿರುತ್ತಿತ್ತು. ಚೆಂಡು ಕವರ್ ಅಥವಾ ಶಾರ್ಟ್ ಮಿಡ್‌ವಿಕೆಟ್‌ನಲ್ಲಿದ್ದರೆ ನಾಯಕ ರೋಹಿತ್ ಶರ್ಮಾ ಅವರಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ರಾಹುಲ್ ನೆರವು ಅತ್ಯಗತ್ಯ. ಇದು ತಂಡದ ದೃಢತೆಯನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ವಿಶ್ವನಾಥ್ ಹೇಳಿದ್ದಾರೆ.
ಟಿ20ಯ ನಶೆಯಲ್ಲಿ ನಿಧಾನಕ್ಕೆ ಮೆರೆಗೆ ಸರಿಯುತ್ತಿರುವ ಏಕದಿನ ಕ್ರಿಕೆಟ್‌ಗೆ ಭಾರತದ ವಿರಾಟ್ ಕೊಹ್ಲಿ ಅವರ 50 ಶತಕಗಳ ಸಾಧನೆ ಜೀವ ತುಂಬಿದೆ. 2 ವರ್ಷಕ್ಕೆ ಒಮ್ಮೆಯಾದರೂ ವಿವಿಧ ರಾಷ್ಟ್ರಗಳ ತಂಡಗಳ ನಡುವೆ ಪಂದ್ಯ ಆಯೋಜಿಸುವ ಮೂಲಕ 50 ಸೀಮಿತ ಓವರ್‌ಗಳ ಕ್ರಿಕೆಟ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸಬಹುದು ಎಂದು ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ಲಾ ರಾಷ್ಟ್ರಗಳು ಒಂದೆಡೆ ಸೇರಿ ಒಂದು ಟೂರ್ನಿ ಆಡುವುದನ್ನು ನೋಡುವುದಕ್ಕೆ ನಾಲ್ಕು ವರ್ಷ ದೀರ್ಘವಾಯಿತು. ಹಾಗೆಂದ ಮಾತ್ರಕ್ಕೆ ವಿಶ್ವಕಪ್ ಅನ್ನು ಎರಡು ವರ್ಷಕ್ಕೆ ಒಮ್ಮೆ ಆಡಿಸಬೇಕು ಎಂದೇನೂ ಅಲ್ಲ. ಆದರೆ ವಿಶ್ವಕಪ್ ಎಂಬುದನ್ನು ಹೊರತುಪಡಿಸಿ 2 ವರ್ಷಕ್ಕೊಮ್ಮೆ ಎಲ್ಲರೂ ಸೇರುವಂತಾಗಬೇಕು’ ಎಂದು ಆಶಿಸಿದ್ದಾರೆ.
2025ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವುದನ್ನು ವಿಶ್ವನಾಥ್ ನೆನಪಿಸಿಕೊಂಡಿದ್ದಾರೆ. 91 ಟೆಸ್ಟ್ ಕ್ರಿಕೆಟ್ ಆಡಿರುವ ವಿಶ್ವನಾಥ್ ಅವರು 14 ಶತಕ ಸಹಿತ ಒಟ್ಟು 6,080 ರನ್ ಕಲೆಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.