ದುಬೈ: ಶಾಂತಚಿತ್ತ ವ್ಯಕ್ತಿತ್ವವನ್ನು ಹೊಂದಿರುವ ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಲು ಸಮರ್ಥ ಕಪ್ತಾನ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಭಾರತ ಭರ್ಜರಿಯಾಗಿಯೇ ಅಭಿಯಾನ ಆರಂಭಿಸಿದೆ ಎಂದು ಎರಡು ಬಾರಿ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ಮಾಜಿ ನಾಯಕರೂ ಆಗಿರುವ ಪಾಂಟಿಂಗ್ ಹೇಳಿದ್ದಾರೆ.
ಮೊದಲ ಪಂದ್ಯದಲ್ಲಿ, ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಟೀಮ್ ಇಂಡಿಯಾ ಬಳಿಕ ಅಫ್ಗಾನಿಸ್ತಾನ ಮತ್ತು ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಅಧಿಕಾರಯುತ ಗೆಲುವುಗಳನ್ನು ದಾಖಲಿಸಿತ್ತು.
ರೋಹಿತ್ ಅವರ ನಾಯಕತ್ವದಿಂದಾಗಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಲು ನೆರವಾಗಲಿದೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್‌ರಂತಹ ಆಟಗಾರರು ಅಭಿಮಾನಿಗಳ ಭಾವನೆಗಳಿಗೂ ಒತ್ತುಕೊಡುತ್ತಾರೆ. ಇದರಿಂದಾಗಿ ನಾಯಕತ್ವದ ಒತ್ತಡವನ್ನು ಎದುರಿಸಬಹುದು. ಆದರೆ ರೋಹಿತ್ ಈ ಎಲ್ಲ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ ಎಂದು ಅವರು ಹೇಳಿದ್ದಾರೆ.
2021ರಲ್ಲಿ ವಿರಾಟ್ ಕೊಹ್ಲಿ ಅವರಿಂದ ನಾಯಕತ್ವ ಜವಾಬ್ದಾರಿಯನ್ನು ರೋಹಿತ್ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.