ಮಂಗಳವಾರ ರಾತ್ರಿ ಆಸ್ಟ್ರೇಲಿಯಾ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ದೇಹದ ತುಂಬ ಅಸಾಧ್ಯ ನೋವು ಕಾಡುತ್ತಿತ್ತು. ನಿಲ್ಲಲೂ ಆಗದ, ಓಡಲೂ ಆಗದೇ ನೆಲಕ್ಕೊರಗುವ ಧಾವಂತ ಅವರ ಶರೀರಕ್ಕಿತ್ತು.
ಆದರೆ ಇದಾವುದನ್ನೂ ಅವರು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಚುಯಿಂಗ್ ಗಮ್ ಅಗೆಯುತ್ತ ನೋವು ನುಂಗಿದರು. ಬೆನ್ನುನೋವಿನಲ್ಲೂ ರಿವರ್ಸ್ ಸ್ವೀಪ್, ಫ್ಲಿಕ್, ಕಟ್‌ಗಳ ಮೂಲಕ ಚೆಂಡನ್ನು ಬೌಂಡರಿಗೆರೆಯಾಚೆಗೆ ಅಟ್ಟಿದರು. ಒಂಟಿ ರನ್ ಪಡೆಯುವ ಅನಿವಾರ್ಯತೆ ಉಂಟಾದಗಲೆಲ್ಲ ನಡೆಯುತ್ತಲೇ ಕ್ರೀಸ್ ಮುಟ್ಟಿದರು. ಕಟ್ಟಕಡೆಗೆ ಸಿಕ್ಸರ್ ಮೂಲಕವೇ ಅಜೇಯ ದ್ವಿಶತಕ ಗಳಿಸಿದ ಅವರು ತಂಡವನ್ನೂ ಜಯದ ಗಡಿ ದಾಟಿಸಿದರು.
ಇಂತಹದೊಂದು ಅಪೂರ್ವ ಇನಿಂಗ್ಸ್‌ನಿಂದಾಗಿ ಮ್ಯಾಕ್ಸ್‌ವೆಲ್ ಅವರು ಕ್ರಿಕೆಟ್ ಪ್ರಿಯರ ಮನದಲ್ಲಿ ಬಹುಕಾಲ ನೆನಪಿನಲ್ಲಿ ಉಳಿಯಲಿದ್ದಾರೆ. ಎದುರಾಳಿಗಳೂ ಅವರ ದಿಟ್ಟ ಆಟಕ್ಕೆ ತಲೆದೂಗುವಂತಿತ್ತು ಅವರ ಆಟ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಮೊಟ್ಟಮೊದಲ ದ್ವಿಶತಕ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಅವರ ತವರಿನಂಗಳದಲ್ಲಿಯೇ ಗ್ಲೆನ್ 128 ಎಸೆತಗಳಲ್ಲಿ 201 ರನ್ ಗಳಿಸಿದ್ದು ವಿಶೇಷ. ಅದರಲ್ಲಿ 10 ಸಿಕ್ಸರ್ ಹಾಗೂ 21 ಬೌಂಡರಿ ಇದ್ದವು. ಅಂದು ತೆಂಡೂಲ್ಕರ್ ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆ ವಿಶ್ವದಾಖಲೆಯ ಸಾಧನೆ ಮಾಡಿದ್ದರು.
ಅಫ್ಗಾನಿಸ್ತಾನ ದಕ್ಷಿಣ ಆಫ್ರಿಕಾದಷ್ಟು ಬಲಾಢ್ಯವಾಗಲೀ, ಅನುಭವಿ ಆಟಗಾರರನ್ನೊಳಗೊಂಡ ತಂಡವಾಗಲಿ ಅಲ್ಲ ಎನ್ನುವುದೇನೋ ನಿಜ. ಆದರೆ, ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ವಿಶ್ವಕಪ್ ಟೂರ್ನಿಯ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಅಫ್ಗನ್ ಪಡೆಯು ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿನ ದವಡೆಗೆ ನೂಕಿತ್ತು.
ಅಫ್ಗನ್ ತಂಡವು ಒಡ್ಡಿದ 292 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾದ ಏಳು ಬ್ಯಾಟರ್‌ಗಳು ಪೆವಿಲಿಯನ್ ಸೇರಿದಾಗ ಮೊತ್ತ ಕೇವಲ 91 ರನ್‌ಗಳಾಗಿದ್ದವು. 19ನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಔಟಾದಾಗ ಅಫ್ಗನ್ ಅಭಿಮಾನಿಗಳ ವಲಯದಲ್ಲಿ ಹರ್ಷದ ಹೊನಲು ಹರಿದಿತ್ತು. ಆದರೆ ಕ್ರೀಸ್‌ಗೆ ಬಂದ ತಮ್ಮ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ‘ನೀವು ಸಾಥ್ ಕೊಡಿ, ನಾನು ಪಂದ್ಯ ಗೆಲ್ಲಿಸಿಕೊಡುತ್ತೇನೆ’ ಎಂದರು ಮ್ಯಾಕ್ಸಿ. ಗೆಳೆಯನ ಮೇಲೆ ಭರವಸೆ ಇಟ್ಟು ನಿಂತ ಪ್ಯಾಟ್ ಗೆಲುವಿನ ಜೊತೆಯಾಟವನ್ನು ಗಟ್ಟಿಗೊಳಿಸಿದರು. ಅವರು 68 ಎಸೆತ ಎದುರಿಸಿ 12 ರನ್ ಮಾತ್ರ ಗಳಿಸಿದರು. ಇಬ್ಬರೂ ಮುರಿಯದ ಎಂಟನೇ ವಿಕೆಟ್‌ಗೆ 170 ಎಸೆತಗಳಲ್ಲಿ 202 ರನ್ ಸೇರಿಸಿದರು.
ಆದರೆ ಈ ಹಾದಿ ಸುಗಮವಾಗಿರಲಿಲ್ಲ. ಈಚೆಗೆ ಗಾಲ್ಫ್ ಕಾರ್ಟ್‌ನಿಂದ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಮ್ಯಾಕ್ಸ್‌ವೆಲ್ ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಚೇತರಿಸಿಕೊಂಡ ಮೇಲೆ ಆಡಿದ ಪಂದ್ಯ ಇದಾಗಿತ್ತು. ಈ ಹಿಂದೆ ಐಪಿಎಲ್ ಸಂದರ್ಭದಲ್ಲಿ ಕಾಡಿದ್ದ ಬೆನ್ನುನೋವು ಕೂಡ ತನ್ನ ಇರುವನ್ನು ತೋರಿಸಿಕೊಡುತ್ತಲೇ ಇದೆ. ಅದು ವಾಂಖೆಡೆಯ ಇನಿಂಗ್ಸ್‌ನಲ್ಲಿ ಗ್ಲೆನ್ ಆಟಕ್ಕೆ ಪದೇ ಪದೇ ಸವಾಲೊಡ್ಡಿದ್ದು ಸುಳ್ಳಲ್ಲ.
ಆದರೆ ಈ ನೋವುಗಳನ್ನು ಬದಿಗಿಟ್ಟು, ಆಗಾಗ ಫಿಸಿಯೊ ಬಂದು ಕೊಡುತ್ತಿದ್ದ ಪ್ರಥಮ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತ ಆಡಿದ ರೀತಿ ಸ್ಫೂರ್ತಿದಾಯಕವಾಗಿತ್ತು. ಮ್ಯಾಕ್ಸ್‌ವೆಲ್ ನೋವು ತಡೆಯದೇ ಪೆವಿಲಿಯನ್‌ಗೆ ಮರಳಿ ವಿಶ್ರಾಂತಿ ತೆಗೆದುಕೊಳ್ಳಬಹುದಿತ್ತು. ಆದರೆ, ತಂಡದ ಜಯಕ್ಕಾಗಿ ಅವರು ತುಡಿದರು. ಎದ್ದು, ಬಿದ್ದು, ಕುಂಟುತ್ತ, ಏದುಸಿರು ಬಿಡುತ್ತಲೇ ಬೌಲರ್‌ಗಳಿಗೆ ಬೆವರಿಳಿಸಿದರು. ಕ್ರೀಸ್‌ನಲ್ಲಿ ಕಾಲಿನ ಚಲನೆಯನ್ನು ಹೆಚ್ಚು ಮಾಡದೇ ತಮ್ಮ ದೇಹದ ಸಮತೋಲನ ಕಾಪಾಡಿಕೊಂಡು ಅವರು ಹೊಡೆದ ಸಿಕ್ಸರ್‌ಗಳು ಮತ್ತು ಬೌಂಡರಿಗಳಿಗೆ ಫೀಲ್ಡರ್‌ಗಳು ಅವಾಕ್ಕಾದರು. ಕೀಲು, ಸ್ನಾಯುಗಳಲ್ಲಿ ನೋವಿದ್ದರೂ ಗ್ಲೆನ್ ಏಕಾಗ್ರತೆಗೆ ಮಾತ್ರ ಭಂಗವಾಗಲಿಲ್ಲ. ಅಫ್ಗನ್ ಬೌಲರ್‌ಗಳ ಪರಿಣಾಮಕಾರಿ ಸ್ವಿಂಗ್ ಮತ್ತು ಸ್ಪಿನ್ ಎಸೆತಗಳನ್ನು ಕರಾರುವಾಕ್ ಆಗಿ ಗುರುತಿಸಿದ ಗ್ಲೆನ್ ತಕ್ಕ ಪ್ರತಿಕ್ರಿಯೆ ನೀಡಿದರು. ‘ಪವರ್ ಹಿಟ್’ಗಳನ್ನು ಪ್ರಯೋಗಿಸುವಲ್ಲಿ ಅವರ ಕೈಗಳು ಯಾವ ಹಂತದಲ್ಲಿಯೂ ನಡುಗಲಿಲ್ಲ.
ಇನ್ನೊಂದು ಬದಿಯಲ್ಲಿದ್ದ ಪ್ಯಾಟ್ ತಮ್ಮ ಗೆಳೆಯನ ಸಾಹಸವನ್ನು ನೋಡಿ ಅಚ್ಚರಿಯ ಭಾವದೊಂದಿಗೆ ನಗುತ್ತ ಆಸ್ವಾದಿಸಿದರು. ಅವರ ಕಂಗಳಲ್ಲಿ ಗ್ಲೆನ್ ಆಟದ ಬಗ್ಗೆ ಮೆಚ್ಚುಗೆಯ ಮಿಂಚು ಹರಿಯುತ್ತಿತ್ತು. ಅದಕ್ಕಾಗಿಯೇ ವಿಜಯದ ಹೊಡೆತ ಹೊಡೆದ ಗ್ಲೆನ್ ಅವರನ್ನು ಬಿಗಿದಪ್ಪಿದ ಪ್ಯಾಟ್ ’ಶಹಬ್ಭಾಸ್’ ಎಂದರು.
ನೂರ್ ಅಹಮದ್ ಹಾಕಿದ ಇನಿಂಗ್ಸ್‌ನ 22ನೇ ಓವರ್‌ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕ್ಯಾಚ್ ಅನ್ನು ಮುಜೀಬ್ ಉರ್ ರೆಹಮಾನ್ ಅವರು ಕೈಚೆಲ್ಲದೇ ಹೋಗಿದ್ದರೆ ಕ್ರಿಕೆಟ್ ದಾಖಲೆ ಪುಸ್ತಕದಲ್ಲಿ ಆಸ್ಟ್ರೇಲಿಯಾದ ಹೀನಾಯ ಸೋಲು ಸೇರ್ಪಡೆ ಆಗುತ್ತಿತ್ತು. ಆದರೆ ಹಾಗಾಗಲಿಲ್ಲ. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 11ನೇ ದ್ವಿಶತಕ ದಾಖಲಾಯಿತು. ಅದೂ ಈ ಮಾದರಿಯಲ್ಲಿ ಅತಿ ಹೆಚ್ಚು ದ್ವಿಶತಕ (3) ದಾಖಲಿಸಿರುವ ರೋಹಿತ್ ಶರ್ಮಾ ಅವರ ತವರಿನಂಗಳದಲ್ಲಿ. ಆದರೆ ಗ್ಲೆನ್ ಬ್ಯಾಟಿಂಗ್ ಮಾತ್ರ ಕ್ರಿಕೆಟ್‌ಪ್ರೇಮಿಗಳ ಮನಗಳಲ್ಲಿ ದೀರ್ಘಕಾಲದವರೆಗೆ ಅಚ್ಚಳಿಯದೇ ಉಳಿಯುವುದು ಖಚಿತ.
ಅಂದ ಹಾಗೆ; ದಶಕಗಳ ಹಿಂದೆ ದವಡೆಗೆ ಪೆಟ್ಟುಬಿದ್ದರೂ ಬ್ಯಾಂಡೇಜ್ ಕಟ್ಟಿಕೊಂಡು ಬೌಲಿಂಗ್ ಮಾಡಿದ್ದ ಭಾರತದ ಸ್ಪಿನ್ನರ್ ಅನಿಲ್ ಕುಂಬ್ಳೆ, ಮೊಹಾಲಿಯಲ್ಲಿ ಇದೇ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ವಿಪರೀತ ಬೆನ್ನು ನೋವಿದ್ದರೂ ಅಮೋಘ ಬ್ಯಾಟಿಂಗ್ ಮಾಡಿದ್ದ ವಿವಿಎಸ್ ಲಕ್ಷ್ಮಣ್ ಮತ್ತು 2011ರಲ್ಲಿ ತಮ್ಮ ದೇಹದೊಳಗಿದ್ದ ಕ್ಯಾನ್ಸರ್ ಅನ್ನೂ ಲೆಕ್ಕಿಸದೇ ಭಾರತ ವಿಶ್ವಕಪ್ ಜಯಿಸಲು ಅಮೋಘ ಕಾಣಿಕೆ ನೀಡಿದ ಯುವರಾಜ್ ಸಿಂಗ್ ಅವರ ಆಟವನ್ನೂ ಗ್ಲೆನ್ ಇನಿಂಗ್ಸ್ ನೆನಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.