ADVERTISEMENT

ICC World Cup 2023: ಅಫ್ಗನ್‌ ಜಯ ಕಸಿದ ಮ್ಯಾಕ್ಸ್‌ವೆಲ್‌, ಸೆಮಿಫೈನಲ್‌ಗೆ ಆಸೀಸ್

ಪಿಟಿಐ
Published 7 ನವೆಂಬರ್ 2023, 17:42 IST
Last Updated 7 ನವೆಂಬರ್ 2023, 17:42 IST
<div class="paragraphs"><p>ದ್ವಿಶತಕ ಗಳಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಬ್ಯಾಟಿಂಗ್‌ ವೈಖರಿ </p></div>

ದ್ವಿಶತಕ ಗಳಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಬ್ಯಾಟಿಂಗ್‌ ವೈಖರಿ

   

–ಪಿಟಿಐ ಚಿತ್ರ

ಮುಂಬೈ: ಏಕದಿನ ಕ್ರಿಕೆಟ್ ವಿಶ್ವಕಪ್‌ನ ಇತಿಹಾಸದಲ್ಲಿ ಸ್ಮರಣೀಯ ಇನಿಂಗ್ಸ್‌ವೊಂದಕ್ಕೆ ವಾಂಖೆಡೆ ಕ್ರೀಡಾಂಗಣ ಮಂಗಳವಾರ ಸಾಕ್ಷಿಯಾಯಿತು. ನೋವು ಲೆಕ್ಕಿಸದೆ ಏಕಾಂಗಿ ಹೋರಾಟದ ಮೂಲಕ ಅಜೇಯ ದ್ವಿಶತಕ ಗಳಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರು ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲ್‌ಗೆ ಮುನ್ನಡೆಸಿದರು.

ADVERTISEMENT

ಕ್ರಿಕೆಟ್‌ ಪ್ರೇಮಿಗಳ ಮನಸ್ಸಿನಲ್ಲಿ ಬಹುಕಾಲದವರೆಗೆ ಉಳಿಯಬಲ್ಲ ಇನಿಂಗ್ಸ್‌ ಕಟ್ಟಿದ ಮ್ಯಾಕ್ಸ್‌ವೆಲ್‌ (ಔಟಾಗದೆ 201; 128 ಎ., 4X21, 6X10) ಅವರು ಅಫ್ಗನ್‌ ವಿರುದ್ಧ ಆಸ್ಟ್ರೇಲಿಯಾಕ್ಕೆ ಮೂರು ವಿಕೆಟ್‌ಗಳ ಜಯ ತಂದುಕೊಟ್ಟರು.

ಮೊದಲು ಬ್ಯಾಟ್‌ ಮಾಡಿದ ಅಫ್ಗನ್‌, ಇಬ್ರಾಹಿಂ ಜದ್ರಾನ್‌ (ಔಟಾಗದೆ 129; 143 ಎ., 4X8, 6X3) ಅವರ ಅಜೇಯ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 291 ರನ್‌ ಪೇರಿಸಿತು. ಪ್ಯಾಟ್‌ ಕಮಿನ್ಸ್‌ ಬಳಗ 46.5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 293 ರನ್‌ ಗಳಿಸಿ ಜಯ ಸಾಧಿಸಿತು.

ಈ ಜಯದೊಂದಿಗೆ ಎಂಟು ಪಂದ್ಯಗಳಿಂದ 12 ಪಾಯಿಂಟ್ಸ್‌ ಸಂಗ್ರಹಿಸಿದ ಆಸ್ಟ್ರೇಲಿಯಾ, ನಾಲ್ಕರಘಟ್ಟ ಪ್ರವೇಶಿಸಿತು. ಸೋಲು ಅನುಭವಿಸಿದ ಅಫ್ಗನ್‌ ತಂಡದ ಸೆಮಿ ಸಾಧ್ಯತೆ ಕ್ಷೀಣಿಸಿದೆ. 91 ರನ್‌ ಗಳಿಸುವಷ್ಟರಲ್ಲಿ ಏಳು ವಿಕೆಟ್‌ ಕಳೆದುಕೊಂಡು ಸೋಲಿನ ಹಾದಿ ಹಿಡಿದಿದ್ದ ತಂಡವನ್ನು ಮ್ಯಾಕ್ಸ್‌ವೆಲ್‌ ಅಮೋಘ ರೀತಿಯಲ್ಲಿ ದಡ ಸೇರಿಸಿದರು. ನಾಯಕ ಕಮಿನ್ಸ್‌ ಜತೆ ಮುರಿಯದ ಎಂಟನೇ ವಿಕೆಟ್‌ಗೆ 170 ಎಸೆತಗಳಲ್ಲಿ 202 ರನ್‌ ಸೇರಿಸಿದರು. ಇದರಲ್ಲಿ ಕಮಿನ್ಸ್‌ ಪಾಲು 12 ರನ್‌ಗಳು ಮಾತ್ರ! ಅದಕ್ಕಾಗಿ ಅವರು 68 ಎಸೆತಗಳನ್ನು ತೆಗೆದುಕೊಂಡರು.

ಸ್ನಾಯು ಸೆಳೆತಕ್ಕೆ ಒಳಗಾದ ಮ್ಯಾಕ್ಸ್‌ವೆಲ್‌ ರನ್‌ ತೆಗೆಯಲು ಕಷ್ಟಪಟ್ಟರು. ತಂಡದ ವೈದ್ಯರಿಂದ ಹಲವು ಸಲ ಚಿಕಿತ್ಸೆ ಪಡೆದುಕೊಂಡರು. ಆದರೂ ಛಲ ಬಿಡದೆ ಹೋರಾಡಿದರು. ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕವೇ ಇನಿಂಗ್ಸ್‌ ಬೆಳೆಸಿದರು. ಮುಜೀಬ್‌ ಉರ್‌ ರೆಹಮಾನ್‌ ಬೌಲ್‌ ಮಾಡಿದ 47ನೇ ಓವರ್‌ನ ಐದನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ದ್ವಿಶತಕ ಪೂರೈಸಿದರಲ್ಲದೆ, ತಂಡಕ್ಕೆ ಗೆಲುವು ತಂದುಕೊಟ್ಟರು.

33 ರನ್‌ ಗಳಿಸಿದ್ದ ವೇಳೆ ಮ್ಯಾಕ್ಸ್‌ವೆಲ್‌ಗೆ ಜೀವದಾನ ಲಭಿಸಿತ್ತು. ನೂರ್‌ ಅಹಮದ್‌ ಬೌಲಿಂಗ್‌ನಲ್ಲಿ ಮುಜೀಬ್‌ ಉರ್‌ ರೆಹಮಾನ್‌ ಅವರು ಕ್ಯಾಚ್‌ ಕೈಚೆಲ್ಲಿದರು. ಇದು ಅಫ್ಗನ್‌ಗೆ ಮುಳುವಾಗಿ ಪರಿಣಮಿಸಿತು.

ಆರಂಭಿಕ ಆಘಾತ: ಆಸ್ಟ್ರೇಲಿಯಾ ತಂಡದ ಆರಂಭ ಆಘಾತಕಾರಿಯಾಗಿತ್ತು. ನವೀನ್‌ ಉಲ್‌ ಹಕ್‌ ಅವರು ಎರಡನೇ ಓವರ್‌ನಲ್ಲಿ ಟ್ರ್ಯಾವಿಸ್‌ ಹೆಡ್‌ (0) ವಿಕೆಟ್‌ ಪಡೆದರು. ಮಿಚೆಲ್‌ ಮಾರ್ಷ್‌ (24; 11 ಎ.) ಸ್ಫೋಟಕ ಆರಂಭ ಪಡೆದರೂ, ನವೀನ್‌ಗೆ ವಿಕೆಟ್‌ ಒಪ್ಪಿಸಿದರು. 

ಅಜ್ಮತ್‌ಉಲ್ಲಾ ಒಮರ್‌ಝೈ ಅವರು 9ನೇ ಓವರ್‌ನ ಸತತ ಎರಡು ಎಸೆತಗಳಲ್ಲಿ ಡೇವಿಡ್‌ ವಾರ್ನರ್‌ (18; 29 ಎ) ಮತ್ತು ಜೋಶ್‌ ಇಂಗ್ಲಿಸ್‌ ಅವರನ್ನು ಔಟ್‌ ಮಾಡಿದರು. ವಾರ್ನರ್‌ ಬೌಲ್ಡ್‌ ಆದರೆ, ಇಂಗ್ಲಿಸ್‌, ವಿಕೆಟ್‌ಕೀಪರ್‌ಗೆ ಕ್ಯಾಚ್‌ ಕೊಟ್ಟರು. ಅಲ್ಪ ಸಮಯದ ಬಳಿಕ ಮಾರ್ನಸ್ ಲಾಬುಶೇನ್ (14; 28 ಎ) ರನೌಟ್‌ ಆದರು.

ಮಾರ್ಕಸ್‌ ಸ್ಟೊಯಿನಿಸ್ (6) ಮತ್ತು ಮಿಚೆಲ್‌ ಸ್ಟಾರ್ಕ್‌ (3) ಅವರು ರಶೀದ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದಾಗ ಆಸ್ಟ್ರೇಲಿಯಾ ತಂಡದ ಸ್ಕೋರ್‌  91ಕ್ಕೆ 7. ಆದರೆ, ಮ್ಯಾಕ್ಸ್‌ವೆಲ್‌ ಅವರು ಗೆಲುವನ್ನು ಅಫ್ಗನ್‌ ಕೈಯಿಂದ ಕಿತ್ತುಕೊಂಡರು.

ಜದ್ರಾನ್‌ ಶತಕ: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಫ್ಗಾನಿಸ್ತಾನ ತಂಡದ ಪರ 21 ವರ್ಷದ ಜದ್ರಾನ್‌ ಅವರು ಅಮೋಘ ಶತಕದ ಮೂಲಕ ಮಿಂಚಿದರು.

ಏಕದಿನ ವಿಶ್ವಕಪ್‌ನಲ್ಲಿ ಅಫ್ಗನ್‌ ಪರ ಶತಕ ಗಳಿಸಿದ ಮೊದಲ ಆಟಗಾರ ಎಂಬ ಗೌರವ ಅವರಿಗೆ ಒಲಿಯಿತು. 2015ರ ಟೂರ್ನಿಯಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಸಮೀವುಲ್ಲಾ ಶಿನ್ವರಿ ಅವರು 96 ರನ್‌ ಗಳಿಸಿದ್ದು ಇದುವರೆಗಿನ ಗರಿಷ್ಠ ಮೊತ್ತ ಆಗಿತ್ತು. ಅಫ್ಗನ್‌ ತಂಡ ರಹಮಾನುಲ್ಲಾ ಗುರ್ಬಾಜ್ (21; 25 ಎ) ಅವರನ್ನು ಬೇಗನೇ ಕಳೆದುಕೊಂಡಿತು. ಜೋಶ್‌ ಹ್ಯಾಜೆಲ್‌ವುಡ್‌ ಬೌಲಿಂಗ್‌ನಲ್ಲಿ ಮಿಚೆಲ್‌ ಸ್ಟಾರ್ಕ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು.

ಜದ್ರಾನ್‌ ಮತ್ತು ರಹಮತ್‌ ಶಾ (30; 44 ಎ.) ಎರಡನೇ ವಿಕೆಟ್‌ಗೆ 100 ಎಸೆತಗಳಲ್ಲಿ 83 ರನ್‌ ಸೇರಿಸಿ ಇನಿಂಗ್ಸ್‌ಗೆ ಬಲ ತುಂಬಿದರು. ಬಳಿಕ ಬಂದ ಹಷ್ಮತ್‌ಉಲ್ಲಾ ಶಹೀದಿ (26) ಮತ್ತು ಅಜ್ಮತ್‌ಉಲ್ಲಾ ಒಮರ್‌ಝೈ (22) ಅವರೂ ಜದ್ರಾನ್‌ಗೆ ತಕ್ಕ ಸಾಥ್‌ ನೀಡಿದರು.

ಆಸ್ಟ್ರೇಲಿಯಾದ ವೇಗ ಮತ್ತು ಸ್ಪಿನ್‌ ದಾಳಿಯನ್ನು ಛಲದಿಂದ ಎದುರಿಸಿದ ಜದ್ರಾನ್‌, ಏಕದಿನ ಕ್ರಿಕೆಟ್‌ನಲ್ಲಿ ಐದನೇ ಶತಕ ಗಳಿಸಿದರು. ಇದು ಅವರಿಗೆ 26ನೇ ಪಂದ್ಯ ಆಗಿತ್ತು.

ಕೊನೆಯಲ್ಲಿ ರಶೀದ್‌ ಖಾನ್‌ (ಔಟಾಗದೆ 35; 18) ರಟ್ಟೆಯರಳಿಸಿದ ಕಾರಣ ತಂಡದ ಮೊತ್ತ 300ರ ಸನಿಹ ತಲುಪಿತು. ರಶೀದ್‌ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ ಹೊಡೆದರು. ಅವರ ಅಬ್ಬರದಿಂದ ಕೊನೆಯ ಐದು ಓವರ್‌ಗಳಲ್ಲಿ 64 ರನ್‌ಗಳು ಹರಿದುಬಂದವು.

ಸಚಿನ್‌ ಮಾತು ಸ್ಫೂರ್ತಿ ತುಂಬಿತು: ‘ಸೋಮವಾರ ಸಚಿನ್‌ ತೆಂಡೂಲ್ಕರ್‌ ಜತೆ ಮಾತನಾಡಿದ್ದೆ. ಅವರು ತಮ್ಮ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡರು. ಅವರ ಸಲಹೆ ಮತ್ತು ಸ್ಫೂರ್ತಿಯುತ ಮಾತುಗಳು ನನ್ನಲ್ಲಿ ಆತ್ಮವಿಶ್ವಾಸ ತುಂಬಿದವು‘ ಎಂದು ಜದ್ರಾನ್‌ ಬಳಿಕ ಪ್ರತಿಕ್ರಿಯಿಸಿದರು.

ಸಂಕ್ಷಿಪ್ತ ಸ್ಕೋರ್‌: ಅಫ್ಗಾನಿಸ್ತಾನ 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 291 (ರಹಮಾನುಲ್ಲಾ ಗುರ್ಬಾಜ್ 21, ಇಬ್ರಹಿಂ ಜದ್ರಾನ್‌ ಔಟಾಗದೆ 129, ರಹಮತ್‌ ಶಾ 30, ರಶೀದ್ ಖಾನ್‌ ಔಟಾಗದೆ 35, ಜೋಶ್‌ ಹ್ಯಾಜೆಲ್‌ವುಡ್‌ 39ಕ್ಕೆ 2);

ಆಸ್ಟ್ರೇಲಿಯಾ: 46.5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 293 (ಡೇವಿಡ್‌ ವಾರ್ನರ್‌ 18, ಮಿಚೆಲ್‌ ಮಾರ್ಷ್‌ 24, ಗ್ಲೆನ್‌ ಮ್ಯಾಕ್‌ವೆಲ್‌ ಔಟಾಗದೆ 201, ಪ್ಯಾಟ್‌ ಕಮಿನ್ಸ್ ಔಟಾಗದೆ 12, ನವೀನ್‌ ಉಲ್‌ ಹಕ್‌ 47ಕ್ಕೆ 2, ಅಜ್ಮತ್‌ಉಲ್ಲಾ ಒಮರ್‌ಝೈ 52ಕ್ಕೆ 2, ರಶೀದ್‌ ಖಾನ್ 44ಕ್ಕೆ 2) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 3 ವಿಕೆಟ್‌ ಗೆಲುವು

ಪಂದ್ಯಶ್ರೇಷ್ಠ: ಗ್ಲೆನ್‌ ಮ್ಯಾಕ್ಸ್‌ವೆಲ್

ಮೂರು ತಂಡಗಳ ನಡುವೆ ಪೈಪೋಟಿ

ವಿಶ್ವಕಪ್ ಟೂರ್ನಿಯಲ್ಲಿ ಭಾರತ (16 ಅಂಕ), ದಕ್ಷಿಣ ಆಫ್ರಿಕಾ (12 ಅಂಕ) ಮತ್ತು ಆಸ್ಟ್ರೇಲಿಯಾ (12 ಅಂಕ) ತಂಡಗಳು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿವೆ. ಇನ್ನೊಂದು ಸ್ಥಾನಕ್ಕೆ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (ತಲಾ 8 ಅಂಕ) ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಕೊನೆಯ ಲೀಗ್‌ ಪಂದ್ಯಗಳಲ್ಲಿ ನ್ಯೂಜಿಲೆಂಡ್‌ ತಂಡವು ಶ್ರೀಲಂಕಾವನ್ನು (ನ.9), ಪಾಕಿಸ್ತಾನವು ಇಂಗ್ಲೆಂಡ್‌ ತಂಡವನ್ನು (ನ.11) ಮತ್ತು ಅಫ್ಗಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾವನ್ನು (ನ.10) ಎದುರಿಸಲಿವೆ.

ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತವು ನಾಲ್ಕನೇ ಸ್ಥಾನ ಪಡೆಯುವ ತಂಡವನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.