ADVERTISEMENT

ICC World Cup: ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್ ಹೊಸ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2023, 2:45 IST
Last Updated 9 ಅಕ್ಟೋಬರ್ 2023, 2:45 IST
<div class="paragraphs"><p>ಮಿಚೆಲ್ ಸ್ಟಾರ್ಕ್</p></div>

ಮಿಚೆಲ್ ಸ್ಟಾರ್ಕ್

   

ಬೆಂಗಳೂರು: ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರು ಐಸಿಸಿ ವಿಶ್ವಕಪ್‌ನಲ್ಲಿ ಅತಿವೇಗವಾಗಿ 50 ವಿಕೆಟ್‌ ಪಡೆದ ದಾಖಲೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮತ್ತು ಒಟ್ಟಾರೆ ಐದನೇ ಬೌಲರ್ ಆಗಿದ್ದಾರೆ.

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತದ ವಿರುದ್ಧ ಅವರು ಈ ಮೈಲಿಗಲ್ಲು ಸಾಧಿಸಿದ್ದಾರೆ.

ADVERTISEMENT

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 49.3 ಓವರ್‌ಗಳಲ್ಲಿ 199 ರನ್‌ ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆತಿಥೇಯ ಭಾರತ ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಜೊತೆಯಾಟದ ನೆರವಿನಿಂದ 41.2 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.

ಆದರೆ ಈ ಗುರಿ ಬೆನ್ನಟ್ಟಿದ ಆತಿಥೇಯ ಭಾರತ ಆರಂಭದಲ್ಲಿಯೇ ದೊಡ್ಡ ಆಘಾತ ಅನುಭವಿಸಿತು. ಎರಡು ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿತು. ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಇಬ್ಬರೂ ಖಾತೆ ತೆರೆಯದೇ ನಿರ್ಗಮಿಸಿದರು. ಮಿಚೆಲ್ ಸ್ಟಾರ್ಕ್ ಹಾಕಿದ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಕಿಶನ್ ಅವರು ಕ್ಯಾಮರಾನ್ ಗ್ರೀನ್‌ಗೆ ಕ್ಯಾಚಿತ್ತರು. ಜೋಷ್ ಹ್ಯಾಜಲ್‌ವುಡ್ ಹಾಕಿದ ಎರಡನೇ ಓವರ್‌ನಲ್ಲಿ ರೋಹಿತ್ ಅವರು ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಶ್ರೇಯಸ್ ಅಯ್ಯರ್, ಫೀಲ್ಡರ್ ಡೇವಿಡ್ ವಾರ್ನರ್‌ಗೆ ಸುಲಭ ಕ್ಯಾಚ್ ಕೊಟ್ಟು ಸೊನ್ನೆ ಸುತ್ತಿದರು.

2019ರ ವಿಶ್ವಕಪ್‌ ಟೂರ್ನಿಯಲ್ಲಿ 10 ಪಂದ್ಯಗಳನ್ನು ಆಡಿದ್ದ ಸ್ಟಾರ್ಕ್ 27 ವಿಕೆಟ್‌ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಖ್ಯಾತಿಗೆ ಪಾತ್ರರಾಗಿದ್ದರು. 2015ರಲ್ಲಿ ತವರಿನಲ್ಲಿ ನಡೆದಿದ್ದ ವಿಶ್ವಕಪ್‌ ಟೂರ್ನಿಯಲ್ಲಿ ಸ್ಟಾರ್ಕ್ 22 ವಿಕೆಟ್‌ ಪಡೆದಿದ್ದರು.

ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾಗೆ (39 ಪಂದ್ಯಗಳಲ್ಲಿ 71 ವಿಕೆಟ್), ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (40 ಪಂದ್ಯಗಳಲ್ಲಿ 68 ವಿಕೆಟ್), ಲಸಿತ್ ಮಾಲಿಂಗ (29 ಪಂದ್ಯಗಳಲ್ಲಿ 56 ವಿಕೆಟ್) ಮತ್ತು ಪಾಕಿಸ್ತಾನದ ವಾಸಿಂ ಅಕ್ರಂ 38 ಪಂದ್ಯಗಳಲ್ಲಿ 55 ವಿಕೆಟ್ ಗಳಿಸಿ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.