ಅಹಮದಾಬಾದ್: ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಗಳಿಸಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ನಂಬರ್ 10 ಜೆರ್ಸಿಯನ್ನು ಕಾಣಿಕೆಯಾಗಿ ನೀಡಿದ್ದಾರೆ.
ಸಚಿನ್ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಧರಿಸಿ ಆಡಿದ್ದ ಜೆರ್ಸಿ ಇದಾಗಿದೆ. 2012ರಲ್ಲಿ ಮೀರ್‌ಪುರದಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಆ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ವಿರುದ್ಧ ಆಡಿತ್ತು.
ಸಚಿನ್ ಏಕದಿನ ಮಾದರಿಯಲ್ಲಿ 49 ಶತಕ ಗಳಿಸಿದ್ದಾರೆ. ಅವರ ದಾಖಲೆಯನ್ನು ಕೊಹ್ಲಿ ಈಚೆಗೆ ಮುರಿದಿದ್ದರು.
‘ಇದೊಂದು ವಿಶೇಷ ಗಳಿಗೆಯಾಗಿದೆ. ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ವಿರಾಟ್ ಕೊಹ್ಲಿಗೆ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಆಡುವಾಗ ಧರಿಸಿದ್ದ ಜೆರ್ಸಿಯನ್ನು ನೀಡಿದ್ದಾರೆ’ ಎಂದು ಬಿಸಿಸಿಐ ಎಕ್ಸ್ ಖಾತೆಯಲ್ಲಿ ಹಾಕಿದೆ.
ಎಲ್ಲೆಲ್ಲೂ ನೀಲಿ....
ವಿಶ್ವಕಪ್ ಫೈನಲ್ ಪಂದ್ಯ ನಡೆದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೀಲಿ ಸಮುದ್ರ ಭೋರ್ಗರೆಯಿತು.
1.30 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ಗ್ಯಾಲರಿಗಳೆಲ್ಲವೂ ನೀಲಿಮಯವಾಗಿದ್ದವು. ಭಾರತ ತಂಡದ ಅಭಿಮಾನಿಗಳು ನೀಲಿ ಪೋಷಾಕುಗಳನ್ನು (ಆತಿಥೇಯ ಆಟಗಾರರ ಸಮವಸ್ತ್ರ) ಧರಿಸಿ ಬಂದಿದ್ದರು. ಅಷ್ಟೇ ಅಲ್ಲ. ಕ್ರೀಡಾಂಗಣಕ್ಕೆ ಬಂದು ಸೇರುವ ರಸ್ತೆಗಳಲ್ಲಿಯೂ ನೀಲಿ ಪೋಷಾಕುಗಳನ್ನು ತೊಟ್ಟ ಜನರು ಸಾಗರೋಪಾದಿಯಲ್ಲಿ ಸಾಗಿ ಬಂದರು. ಮೈದಾನದೊಳಗೆದ್ದಷ್ಠೇ ಸಂಖ್ಯೆಗಿಂತಲೂ ಹೆಚ್ಚು ಮಂದಿ ಹೊರಗೂ ಇದ್ದರು.
ಹಳದಿ ಪೋಷಾಕು ಧರಿಸಿದ ಆಸ್ಟ್ರೇಲಿಯಾ ಬೆಂಬಲಿಗರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.