ADVERTISEMENT

ICC World Cup | ನ್ಯೂಜಿಲೆಂಡ್‌ಗೆ ನಿರಾಸೆ; ಪಾಕಿಸ್ತಾನದ ಸೆಮಿಫೈನಲ್ ಕನಸು ಜೀವಂತ

ಮಹಮ್ಮದ್ ನೂಮಾನ್
Published 4 ನವೆಂಬರ್ 2023, 15:10 IST
Last Updated 4 ನವೆಂಬರ್ 2023, 15:10 IST
<div class="paragraphs"><p>ಫಖಾರ್ ಜಮಾನ್</p></div>

ಫಖಾರ್ ಜಮಾನ್

   

(ಪಿಟಿಐ ಚಿತ್ರ)

ಬೆಂಗಳೂರು: ಫಕಾರ್‌ ಜಮಾನ್‌ ಗಳಿಸಿದ ಅಜೇಯ ಶತಕದ ನೆರವಿನಿಂದ ‘ಮಾಡು–ಮಡಿ’ ಪಂದ್ಯದಲ್ಲಿ ನ್ಯೂಜಿ ಲೆಂಡ್‌ ತಂಡವನ್ನು ಮಣಿಸಿದ ಪಾಕಿಸ್ತಾನ ತಂಡ, ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿತು.

ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಮಳೆಯಿಂದ ತೊಂದರೆ ಗೊಳಗಾದ ಪಂದ್ಯವನ್ನು ಬಾಬರ್‌ ಅಜಂ ಬಳಗ ಡಕ್ವರ್ಥ್‌ ಲೂಯಿಸ್‌ ನಿಯಮದಂತೆ 21 ರನ್‌ಗಳಿಂದ ಗೆದ್ದುಕೊಂಡಿತು. ಸೋತರೂ ಕೇನ್‌ ವಿಲಿಯಮ್ಸನ್‌ ಪಡೆಯ ಸೆಮಿ ಕನಸು ಉಳಿದುಕೊಂಡಿದೆ.  

81 ಎಸೆತಗಳಲ್ಲಿ 8 ಬೌಂಡರಿ ಹಾಗೂ 11 ಸಿಕ್ಸರ್‌ಗಳ ನೆರವಿನಿಂದ 126 ರನ್‌ ಗಳಿಸಿದ ಫಕಾರ್‌ ಮತ್ತು ಅತೀ ಅಗತ್ಯದ ಸಮಯದಲ್ಲಿ ಲಯ ಕಂಡುಕೊಂಡ ಬಾಬರ್‌ (ಅಜೇಯ 66; 63 ಎ., 4X6, 6X2) ಅವರು ಪಾಕ್‌ ಗೆಲುವಿನ ರೂವಾರಿಗಳಾದರು.

ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌, ಟೂರ್ನಿಯಲ್ಲಿ ಮೂರನೇ ಶತಕ ಗಳಿಸಿದ ರಚಿನ್‌ ರವೀಂದ್ರ (108; 94 ಎ., 4X15, 6X1) ಮತ್ತು ನಾಯಕ ವಿಲಿಯಮ್ಸನ್‌ (95; 79 ಎ., 4X10, 6X2) ಅವರ ಸೊಗಸಾದ ಬ್ಯಾಟಿಂಗ್‌ ನೆರವಿನಿಂದ 6 ವಿಕೆಟ್‌ಗಳಿಗೆ 401 ರನ್‌ಗಳ ಭಾರಿ ಮೊತ್ತ ಪೇರಿಸಿತು. ಬೆಂಗಳೂರು ಮೂಲದ ರಚಿನ್‌, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಾವಾಡಿದ ಮೊದಲ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರೂ ಅದು ಗೆಲುವಿಗೆ ಸಾಕಾಗಲಿಲ್ಲ. 

ಕಠಿಣ ಸವಾಲಿಗೆ ಉತ್ತರ ನೀಡ ತೊಡಗಿದ ಪಾಕ್‌ ತಂಡ, ಅಬ್ದುಲ್ಲಾ ಶಫೀಕ್‌ (4) ಅವರನ್ನು ಬೇಗನೇ ಕಳೆದು ಕೊಂಡಿತು. ಆದರೆ ಫಕಾರ್‌ ಮತ್ತು ಬಾಬರ್‌ ದಿಟ್ಟವಾಗಿ ಹೋರಾಡಿದರು. ಮಳೆಯ ಆಟದ ನಡುವೆ ಫಕಾರ್‌ ಅವರು ಸಿಕ್ಸರ್‌ಗಳ ಮಳೆ ಸುರಿಸಿದರು.

ಬಾಬರ್‌ ಬಳಗ 21.3 ಓವರ್‌ಗಳಲ್ಲಿ 1 ವಿಕೆಟ್‌ಗೆ 160 ರನ್‌ ಗಳಿಸಿದ್ದಾಗ ಮಳೆ ಯಿಂದಾಗಿ ಆಟ ನಿಂತಿತು. ಒಂದೂವರೆ ಗಂಟೆಯ ಆಟ ನಷ್ಟವಾದ್ದರಿಂದ ಡಕ್ವರ್ಥ್‌ ಲೂಯಿಸ್‌ ನಿಯಮದಂತೆ ಗೆಲುವಿಗೆ 41 ಓವರ್‌ಗಳಲ್ಲಿ 342 ರನ್‌ಗಳ ಪರಿಷ್ಕೃತ ಗುರಿ ನೀಡಿ ಆಟ ಮುಂದುವರಿಸಲಾಯಿತು.

ಆದರೆ ಐದು ಓವರ್‌ಗಳ ಆಟ ನಡೆಯುವಷ್ಟರಲ್ಲಿ ಮತ್ತೆ ಮಳೆ ಬಂತು. ಈ ವೇಳೆ ಪಾಕ್‌ 25.3 ಓವರ್‌ಗಳಲ್ಲಿ 1 ವಿಕೆಟ್‌ಗೆ 200 ರನ್‌ ಗಳಿಸಿತ್ತು. ಅಂಪೈರ್‌ಗಳು ರಾತ್ರಿ 7.25ರ ವೇಳೆಗೆ ಪಂದ್ಯ ಮೊಟಕುಗೊಳಿಸಲು ನಿರ್ಧಾರ ತೆಗೆದುಕೊಂಡರು. ಈ ಹಂತದಲ್ಲಿ ಪಾಕ್, ಡಕ್ವರ್ಥ್‌ ಲೂಯಿಸ್‌ ನಿಯಮದಂತೆ 21 ರನ್‌ಗಳಿಂದ ಮುಂದಿತ್ತು.

ಈಶ್‌ ಸೋಧಿ ಬೌಲ್ ಮಾಡಿದ 25ನೇ ಓವರ್‌ನಲ್ಲಿ ಫಕಾರ್‌ ಮತ್ತು ಬಾಬರ್‌ ಮೂರು ಸಿಕ್ಸರ್‌ ಒಳಗೊಂಡಂತೆ 20 ರನ್‌ ಕಲೆಹಾಕಿದ್ದು ಕಿವೀಸ್‌ಗೆ ಮುಳುವಾಗಿ ಪರಿಣಮಿಸಿತು. 

ರಚಿನ್‌, ವಿಲಿಯಮ್ಸನ್ ಬ್ಯಾಟಿಂಗ್‌ ಸೊಬಗು: ಇದಕ್ಕೂ ಮುನ್ನ ನ್ಯೂಜಿಲೆಂಡ್‌ ತಂಡ ಭರ್ಜರಿ ಬ್ಯಾಟಿಂಗ್‌ನ ರಸದೌತಣ ಉಣಬಡಿಸಿತು. ರಚಿನ್‌ ಮತ್ತು ಡೆವೊನ್‌ ಕಾನ್ವೆ 10.5 ಓವರ್‌ಗಳಲ್ಲಿ 68 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು.  

ಕಾನ್ವೆ ಔಟಾದ ಬಳಿಕ ಬಂದ ವಿಲಿಯಮ್ಸನ್‌ ಅವರು ರಚಿನ್‌ಗೆ ತಕ್ಕ ಸಾಥ್‌ ನೀಡಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 142 ಎಸೆತಗಳಲ್ಲಿ 180 ರನ್‌ ಸೇರಿಸಿದರು. 51 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಚಿನ್‌, ಬಳಿಕ ಆಟದ ವೇಗ ಹೆಚ್ಚಿಸಿದರು. ಕ್ರೀಡಾಂಗಣದಲ್ಲಿ ನೆರೆದಿದ್ದ 25 ಸಾವಿರಕ್ಕೂ ಅಧಿಕ ಪ್ರೇಕ್ಷಕರನ್ನು ಆಕರ್ಷಕ ಡ್ರೈವ್‌ ಮತ್ತು ಪುಲ್‌ ಶಾಟ್‌ಗಳ ಮೂಲಕ ರಂಜಿಸಿದರು.

ಚಿನ್ನಸ್ವಾಮಿಯಲ್ಲಿ ಗರಿಷ್ಠ ಮೊತ್ತ
ನ್ಯೂಜಿಲೆಂಡ್‌ ಕಲೆಹಾಕಿದ 401 ರನ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಾಖಲಾದ ಗರಿಷ್ಠ ಮೊತ್ತ. 2013ರ ನವೆಂಬರ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳಿಗೆ 383 ರನ್‌ ಪೇರಿಸಿದ್ದು ಇದುವರೆಗಿನ ದೊಡ್ಡ ಮೊತ್ತ ಆಗಿತ್ತು. ಆ ಪಂದ್ಯದಲ್ಲಿ ರೋಹಿತ್‌ ಶರ್ಮಾ (209) ದ್ವಿಶತಕ ಗಳಿಸಿದ್ದರು.

ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದ ವಿಲಿಯಮ್ಸನ್‌ ಕೂಡಾ ಬೀಸಾಟವಾಡಿದ್ದರಿಂದ ಪಾಕ್‌ ಬೌಲಿಂಗ್‌ನ ದಿಕ್ಕುತಪ್ಪಿತು. ತಾವೆದುರಿಸಿದ 88ನೇ ಎಸೆತದಲ್ಲಿ ರಚಿನ್ ಶತಕ ಪೂರೈಸಿದರು. ಈ ವೇಳೆ ಗ್ಯಾಲರಿಯಿಂದ ರಚಿನ್‌... ರಚಿನ್‌... ಎಂಬ ಕೂಗು ಜೋರಾಗಿ ಕೇಳಿಬಂತು. 

ವಿಲಿಯಮ್ಸನ್‌ಗೆ ಶತಕ ಗಳಿಸುವ ಅದೃಷ್ಟ ಇರಲಿಲ್ಲ. ಇಫ್ತಿಕಾರ್‌ ಅಹಮದ್ ಬೌಲಿಂಗ್‌ನಲ್ಲಿ ಸಿಕ್ಸರ್‌ ಹೊಡೆದು ಶತಕ ಪೂರೈಸುವ ಪ್ರಯತ್ನದಲ್ಲಿ ಲಾಂಗ್ ಆಫ್‌ನಲ್ಲಿ ಜಮಾನ್‌ಗೆ ಕ್ಯಾಚ್‌ ಕೊಟ್ಟರು.

ಕೊನೆಯ ಓವರ್‌ಗಳಲ್ಲಿ ಮಾರ್ಕ್‌ ಚಾಪ್ಮನ್‌ (39; 29 ಎ., 4X7), ಗ್ಲೆನ್ ಫಿಲಿಪ್ಸ್ (41; 25 ಎ., 4X4, 6X2), ಮಿಚೆಲ್‌ ಸ್ಯಾಂಟ್ನರ್‌ (ಔಟಾಗದೆ 26; 17 ಎ) ಅವರು ಬೀಸಾಟವಾಡಿದ್ದರಿಂದ ತಂಡದ ಮೊತ್ತ 400ರ ಗಡಿ ದಾಟಿತು.

ಮೊಹಮ್ಮದ್ ವಸೀಂ (60ಕ್ಕೆ 3) ಮತ್ತು ಇಫ್ತಿಕಾರ್‌ (55ಕ್ಕೆ 1) ಹೊರತುಪಡಿಸಿ ಪಾಕ್‌ ತಂಡದ ಎಲ್ಲ ಬೌಲರ್‌ಗಳು ಓವರ್‌ವೊಂದಕ್ಕೆ ಸರಾಸರಿ 8ಕ್ಕಿಂತ ಹೆಚ್ಚು ರನ್‌ ಬಿಟ್ಟುಕೊಟ್ಟರು. ಶಹೀನ್‌ ಶಾ ಅಫ್ರೀದಿ ಹಾಗೂ ಹ್ಯಾರಿಸ್‌ ರವೂಫ್‌ ಅವರ 10 ಓವರ್‌ಗಳಲ್ಲಿ ಕ್ರಮವಾಗಿ 90 ಮತ್ತು 85 ರನ್‌ಗಳು ಸೋರಿಹೋದವು. 

ಸಂಕ್ಷಿಪ್ತ ಸ್ಕೋರ್

ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 401: (ಡೆವೊನ್‌ ಕಾನ್ವೆ 35, ರಚಿನ್‌ ರವೀಂದ್ರ 108, ಕೇನ್‌ ವಿಲಿಯಮ್ಸನ್‌ 95, ಡೆರಿಲ್‌ ಮಿಚೆಲ್‌ 29, ಮಾರ್ಕ್‌ ಚಾಪ್ಮನ್‌ 39, ಗ್ಲೆನ್‌ ಫಿಲಿಪ್ಸ್‌ 41, ಮಿಚೆಲ್‌ ಸ್ಯಾಂಟ್ನರ್‌ 26, ಮೊಹಮ್ಮದ್‌ ವಸೀಂ 60ಕ್ಕೆ 3, ಇಫ್ತಿಕಾರ್‌ ಅಹಮದ್‌ 55ಕ್ಕೆ 1)

ಪಾಕಿಸ್ತಾನ 25.3 ಓವರ್‌ಗಳಲ್ಲಿ 1 ವಿಕೆಟ್‌ಗೆ 200: (ಫಕಾರ್‌ ಜಮಾನ್‌ ಔಟಾಗದೆ 126, ಬಾಬರ್‌ ಅಜಂ ಔಟಾಗದೆ 66, ಟಿಮ್‌ ಸೌಥಿ 27ಕ್ಕೆ 1) 

ಫಲಿತಾಂಶ: ಡಕ್ವರ್ಥ್‌ ಲೂಯಿಸ್ ನಿಯಮದಂತೆ ಪಾಕಿಸ್ತಾನಕ್ಕೆ 21 ರನ್‌ ಗೆಲುವು

ಪಂದ್ಯಶ್ರೇಷ್ಠ: ಫಕಾರ್‌ ಜಮಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.