ಮುಂಬೈ: 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ರೋಹಿತ್ ಶರ್ಮಾ ವಿಫಲರಾಗಿದ್ದರು. ಆದರೆ 2023ರಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ರೋಹಿತ್, ತಂಡವನ್ನು ಫೈನಲ್‌ನತ್ತ ಮುನ್ನಡೆಸಿದ್ದಾರೆ.
2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಜಯಿಸಿತ್ತು. ಆದರೆ ರೋಹಿತ್ ತಂಡದಲ್ಲಿರಲಿಲ್ಲ.
ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ರೋಹಿತ್‌ಗೆ ತಮ್ಮ ಕನಸನ್ನು ನನಸಾಗಿಸಲು ಇನ್ನೊಂದೇ ಹೆಜ್ಜೆಯಷ್ಟೇ ಬಾಕಿ ಉಳಿದಿದೆ.
2011ರಲ್ಲಿ ತಂಡದಲ್ಲಿ ಸ್ಥಾನ ಸಿಗದಿದ್ದಾಗ ರೋಹಿತ್ ಬಹಿರಂಗವಾಗಿಯೇ ತಮ್ಮ ಬೇಸರವನ್ನು ತೋಡಿಕೊಂಡಿದ್ದರು.
'ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿರುವುದು ತುಂಬಾನೇ ಬೇಸರವನ್ನು ಉಂಟು ಮಾಡಿದೆ. ನಾನು ಇಲ್ಲಿಂದ ಮುಂದುವರಿಯಬೇಕು. ಆದರೆ ಪ್ರಾಮಾಣಿಕವಾಗಿ ಇದು ದೊಡ್ಡ ಹಿನ್ನಡೆಯಾಗಿದೆ. ನಿಮ್ಮ ಅಭಿಪ್ರಾಯವೇನು' ಎಂದು ರೋಹಿತ್ ಟ್ವೀಟ್ ಮಾಡಿದ್ದರು.
12 ವರ್ಷಗಳ ಹಿಂದೆ ರೋಹಿತ್ ಮಾಡಿರುವ ಟ್ವೀಟ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಆಡಿರುವ ಎಲ್ಲ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆಯಿಟ್ಟಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗೆದ್ದು ಮೂರನೇ ಸಲ ಟ್ರೋಫಿ ಗೆಲ್ಲಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.