ADVERTISEMENT

'20 ವರ್ಷಗಳ ಹಿಂದೆ...' ಅತ್ಯುತ್ತಮ ಫೀಲ್ಡರ್ ಘೋಷಣೆ ವೇಳೆ ಸಚಿನ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2023, 10:33 IST
Last Updated 3 ನವೆಂಬರ್ 2023, 10:33 IST
<div class="paragraphs"><p>ಚಿತ್ರ ಕೃಪೆ: ಬಿಸಿಸಿಐ</p></div>

ಚಿತ್ರ ಕೃಪೆ: ಬಿಸಿಸಿಐ

   

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ಏಳು ಗೆಲುವುಗಳನ್ನು ದಾಖಲಿಸಿರುವ ಟೀಮ್ ಇಂಡಿಯಾ ಅಜೇಯ ಓಟ ಮುಂದುವರಿಸಿದ್ದು, ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಪಂದ್ಯದ ಬಳಿಕ ತಂಡದ 'ಅತ್ಯುತ್ತಮ ಫೀಲ್ಡರ್' ಪ್ರಶಸ್ತಿಯನ್ನು ದಿಗ್ಗಜ ಸಚಿನ್ ತೆಂಡೂಲ್ಕರ್ ವಿನೂತನ ರೀತಿಯಲ್ಲಿ ಘೋಷಿಸಿದ್ದಾರೆ. ಈ ಸಂಬಂಧ ಬಿಸಿಸಿಐ ವಿಡಿಯೊ ಬಿಡುಗಡೆಗೊಳಿಸಿದೆ.

ADVERTISEMENT

ವಾಂಖೆಡೆ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 302 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತು. ಪಂದ್ಯದಲ್ಲಿ ಭಾರತೀಯ ಆಟಗಾರರನ್ನು ಶ್ಲಾಘಿಸಿದ ಫೀಲ್ಡಿಂಗ್ ಕೋಚ್, ಪ್ರಶಸ್ತಿಯನ್ನು ದಿಗ್ಗಜ ಆಟಗಾರ ಘೋಷಿಸಲಿದ್ದಾರೆ ಎಂದು ಹೇಳಿದರು.

ಈ ವೇಳೆ ಆಟಗಾರರ ಉತ್ಸಾಹ ಇಮ್ಮಡಿಗೊಂಡಿತು. ಬಳಿಕ ಟಿ.ವಿ. ಪರದೆಯಲ್ಲಿ ಕಾಣಿಸಿಕೊಂಡ ಸಚಿನ್, ಸ್ಫೂರ್ತಿದಾಯಕ ವಿಡಿಯೊ ಸಂದೇಶದೊಂದಿಗೆ ಅತ್ಯುತ್ತಮ ಪೀಲ್ಡರ್ ಪ್ರಶಸ್ತಿಯನ್ನು ಘೋಷಿಸಿದರು.

ಭಾರತ ತಂಡವನ್ನು ಅಭಿನಂದಿಸಿದ ಸಚಿನ್, ಈವರೆಗಿನ ತಂಡದ ಪ್ರದರ್ಶನವನ್ನು ತುಂಬಾ ಇಷ್ಟಪಟ್ಟಿದ್ದೇನೆ ಎಂದು ಹೇಳಿದರು.

ಅತ್ಯುತ್ತಮ ಫೀಲ್ಡರ್ ಪ್ರಶಸ್ತಿಯ ಮಹತ್ವವನ್ನು ನಾಯಕ ರೋಹಿತ್ ಶರ್ಮಾ ತಮಗೆ ವಿವರಿಸಿರುವುದಾಗಿ ಸಚಿನ್ ಹೇಳಿದರು. ಈ ವೇಳೆ 20 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ಏಕದಿನ ವಿಶ್ವಕಪ್‌ನಲ್ಲಿನ ನೆನಪುಗಳನ್ನು ಮೆಲುಕು ಹಾಕಿದರು.

ಪ್ರತಿ ಪಂದ್ಯಕ್ಕೂ ಮುನ್ನ ಚಾರ್ಟ್ ಸಿದ್ಧಪಡಿಸಲಾಗುತ್ತಿತ್ತು. ಅದರಲ್ಲಿ 'ಐ ಕ್ಯಾನ್, ವಿ ಕ್ಯಾನ್' ಎಂದು ಬರೆಯಲಾಗುತ್ತಿತ್ತು. ಪ್ರತಿಯೊಬ್ಬ ಆಟಗಾರನು ಅದಕ್ಕೆ ಸಹಿ ಮಾಡಬೇಕಿತ್ತು. ಆ ಮೂಲಕ ದೇಶ ಮತ್ತು ತಂಡಕ್ಕೆ ಶೇ 100ರಷ್ಟು ಬದ್ಧತೆಯನ್ನು ತೋರಿಸಲಾಗಿತ್ತು ಎಂದು ಸಚಿನ್ ಹೇಳಿದ್ದಾರೆ.

ಈಗಿನ ಭಾರತ ತಂಡವು ಫೀಲ್ಡಿಂಗ್ ಪ್ರಶಸ್ತಿ ನೀಡುವ ಮೂಲಕ ಅದನ್ನೇ ಪುನರಾವರ್ತಿಸಿದೆ. ಇದು ನಿಮ್ಮ ಸಹ ಆಟಗಾರರು, ತಂಡಕ್ಕಾಗಿ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ನಿಮ್ಮ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದ್ದಾರೆ.

ಅಂತಿಮವಾಗಿ ಶ್ರೇಯಸ್ ಅಯ್ಯರ್‌ ಅತ್ಯುತ್ತಮ ಫೀಲ್ಡರ್ ಎಂದು ಘೋಷಿಸಿದರು. ಈ ವೇಳೆ ಸಹ ಆಟಗಾರರೆಲ್ಲ ಸುತ್ತುವರಿದು ಅಯ್ಯರ್ ಅವರನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.