ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಫಲಿತಾಂಶ ದಾಖಲಾಗುವ ನಿಟ್ಟಿನಲ್ಲಿ ಬೇಕಾದ ರೀತಿಯಲ್ಲಿ ಪಿಚ್ ಬದಲಾಯಿಸಲಾಗುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿವೆ.
ಈ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, 'ಬಾಯಿ ಮುಚ್ಚಿ! ಅಸಂಬದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಿ' ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ 70 ರನ್ ಅಂತರದ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, 12 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆ ಇಟ್ಟಿದೆ.
ವಾಂಖೆಡೆ ಪಂದ್ಯಕ್ಕೂ ಕೆಲವೇ ಗಂಟೆಗಳ ಮುನ್ನ ಭಾರತದ ಟೀಮ್ ಮ್ಯಾನೇಜ್‌ಮೆಂಟ್, 'ನಿಧಾನಗತಿಯ ಪಿಚ್' ಬಯಸಿತ್ತು. ಪಿಚ್ ಭಾರತೀಯ ಸ್ಪಿನ್ನರ್‌ಗಳಿಗೆ ನೆರವಾಗುವ ನಿಟ್ಟಿನಲ್ಲಿ ತಾಜಾ ಪಿಚ್ ಬದಲು ಹಳೆಯ (ಬಳಸಿದ) ಪಿಚ್ ಅನ್ನೇ ನೀಡಲಾಗಿತ್ತು. ಆ ಮೂಲಕ ಪಿಚ್ ಬದಲಾಯಿಸಲಾಗಿತ್ತು ಎಂದು ವರದಿಯಾಗಿತ್ತು.
ಅವಿವೇಕಿಗಳು ಭಾರತದ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಪಿಚ್ ಎರಡೂ ತಂಡಗಳಿಗೂ ಸಮಾನವಾಗಿತ್ತು. ಎರಡೂ ತಂಡಗಳು ಅತ್ಯುತ್ತಮ ಕ್ರಿಕೆಟ್ ಅನ್ನೇ ಆಡಿವೆ. ಅಂತಿಮವಾಗಿ ಎದುರಾಳಿ ತಂಡಕ್ಕೂ ಉತ್ತಮವಾಗಿ ಆಡಿದ ಭಾರತ ತಂಡ ಗೆಲುವು ದಾಖಲಿಸಿತು ಎಂದು ಗವಾಸ್ಕರ್ ಹೇಳಿದ್ದಾರೆ.
ಫೈನಲ್ ಪಂದ್ಯ ನಡೆಯಲಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲೂ 'ಸ್ಲೋ ಪಿಚ್' ಸಿದ್ಧಪಡಿಸಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೂ ಉತ್ತರ ನೀಡಿರುವ ಗವಾಸ್ಕರ್, ದಯವಿಟ್ಟು, ಎರಡನೇ ಸೆಮಿಫೈನಲ್ ಇನ್ನೂ ಮುಗಿದಿಲ್ಲ. ಅಷ್ಟರೊಳಗೆ ಅಹಮದಾಬಾದ್ ಪಿಚ್ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.