ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ 2024–25ನೇ ಸಾಲಿನ ರಾಷ್ಟ್ರೀಯ ಗುತ್ತಿಗೆಯಿಂದ ಹೊರಗುಳಿದಿರುವ ಕೇನ್ ವಿಲಿಯಮ್ಸನ್, ನಿಗದಿತ ಓವರ್‌ಗಳ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.
ನ್ಯೂಜಿಲೆಂಡ್ ತಂಡವು ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ರೇಸ್‌ನಿಂದ ಗುಂಪು ಹಂತದಲ್ಲೇ ಹೊರಬಿದ್ದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
'ನ್ಯೂಜಿಲೆಂಡ್ ಕ್ರಿಕೆಟ್' ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, 'ಕ್ರಿಕೆಟ್‌ನ ಎಲ್ಲ ಮಾದರಿಯಲ್ಲಿ ತಂಡವನ್ನು ಪ್ರೋತ್ಸಾಹಿಸಲು ಮತ್ತು ಆ ನಿಟ್ಟಿನಲ್ಲಿ ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ' ಎಂದು ಮಿಲಿಯಮ್ಸನ್ ತಿಳಿಸಿದ್ದಾರೆ.
2022ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದ ಅವರು, 'ಕೇಂದ್ರೀಯ ಗುತ್ತಿಗೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ ಅವರು, ಮೂರೂ ಮಾದರಿಯಲ್ಲಿ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.
'ಕ್ರಿಕೆಟ್ ಹೊರತಾಗಿನ ನನ್ನ ಬದುಕು ಬದಲಾಗಿದೆ. ಕುಟುಂಬದವರೊಂದಿಗೆ ಸಮಯ ಕಳೆಯುವುದು, ಅವರೊಂದಿಗೆ ತವರಿನಲ್ಲಿ ಅಥವಾ ವಿದೇಶಗಳಲ್ಲಿ ಉತ್ತಮ ಕ್ಷಣಗಳನ್ನು ಸಂಭ್ರಮಿಸಿವುದು ತುಂಬಾ ಮುಖ್ಯವೆನಿಸುತ್ತದೆ' ಎಂದು ಹೇಳಿಕೊಂಡಿದ್ದಾರೆ.
100 ಟೆಸ್ಟ್, 165 ಏಕದಿನ ಹಾಗೂ 93 ಟಿ20 ಪಂದ್ಯಗಳಲ್ಲಿ ಆಡಿರುವ ವಿಲಿಯಮ್ಸನ್, ಮೂರೂ ಮಾದರಿಯಲ್ಲಿ ಕ್ರಮವಾಗಿ 40, 91 ಹಾಗೂ 75 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದಾರೆ.
ವಿಲಿಯಮ್ಸನ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡ 2019 ಏಕದಿನ ವಿಶ್ವಕಪ್, 2021ರ ಟಿ20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿತ್ತು. ಚೊಚ್ಚಲ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2015ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೇರಿದ ತಂಡದಲ್ಲೂ ವಿಲಿಯಮ್ಸನ್ ಆಡಿದ್ದರು.
ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಪ್ರದರ್ಶನ
ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯ 'ಸಿ' ಗುಂಪಿನಲ್ಲಿ ಆಡಿದ ನ್ಯೂಜಿಲೆಂಡ್, 4 ಪಂದ್ಯಗಳಲ್ಲಿ ಕೇವಲ 2ರಲ್ಲಷ್ಟೇ ಜಯ ಸಾಧಿಸಿತು. ಹೀಗಾಗಿ, 'ಸೂಪರ್ 8'ರ ಹಂತಕ್ಕೆ ಪ್ರವೇಶ ಪಡೆಯಲು ವಿಫಲವಾಯಿತು.
ಮೊದಲೆರಡು ಪಂದ್ಯಗಳಲ್ಲಿ ಅಫ್ಗಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸೋಲು ಅನುಭವಿಸಿದ್ದೇ ಈ ತಂಡಕ್ಕೆ ಹಿನ್ನಡೆಯಾಯಿತು. ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಯುಗಾಂಡ ಮತ್ತು ಪಾಪುವಾ ನ್ಯೂಗಿನಿ ಎದುರು ಗೆದ್ದರೂ, ಮುಂದಿನ ಹಂತಕ್ಕೇರಲು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.