ADVERTISEMENT

T20 World Cup 2024: ಕೆರೆಬಿಯನ್ ಅಂಗಳದಲ್ಲಿ ವಿರಾಟ್‌ ಅಲೆಯ ನಿರೀಕ್ಷೆ

ಸೂಪರ್ 8 ಇಂದಿನಿಂದ: ಭಾರತಕ್ಕೆ ಅಫ್ಗಾನಿಸ್ತಾನ ಸವಾಲು; ಕುಲದೀಪ್ ಯಾದವ್‌ಗೆ ಸ್ಥಾನ ಸಾಧ್ಯತೆ

ಪಿಟಿಐ
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
<div class="paragraphs"><p>ಬೀಚ್‌ ವಾಲಿಬಾಲ್‌ ಆಡಿದ ವಿರಾಟ್ ಕೊಹ್ಲಿ</p><p></p></div>

ಬೀಚ್‌ ವಾಲಿಬಾಲ್‌ ಆಡಿದ ವಿರಾಟ್ ಕೊಹ್ಲಿ

   

–ಪಿಟಿಐ ಚಿತ್ರ

ADVERTISEMENT

ಬ್ರಿಜ್‌ಟೌನ್, ಬಾರ್ಬಡೋಸ್: ವಿರಾಟ್ ಕೊಹ್ಲಿ ತಮ್ಮ ಲಯಕ್ಕೆ ಮರಳುವರೇ? ಸ್ಪಿನ್ನರ್ ಕುಲದೀಪ್ ಯಾದವ್ ಕಣಕ್ಕಿಳಿದರೆ ಮೋಡಿ ಮಾಡುವರೇ?

ಎಂಬ ಪ್ರಶ್ನೆಗಳೊಂದಿಗೆ ಭಾರತ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತದ ಅಭಿಯಾನವನ್ನು ಗುರುವಾರ ಆರಂಭಿಸಲಿದೆ. ಈ ಹಂತದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ಅಪಾರ ಛಲದ ಆಟಗಾರರಿರುವ ಅಫ್ಗಾನಿಸ್ತಾನ ತಂಡವನ್ನು ಎದುರಿಸಲಿದೆ.

ಎ ಗುಂಪಿನ ಪಂದ್ಯಗಳಲ್ಲಿ ವಿರಾಟ್ ಅವರು ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದರು. ಎರಡಂಕಿ ಮೊತ್ತ ಗಳಿಸಿರಲಿಲ್ಲ. 35 ವರ್ಷದ ‘ಚೇಸಿಂಗ್ ಮಾಸ್ಟರ್’ ಲಯಕ್ಕೆ ಮರಳಿದರೆ ತಂಡದ ಶಕ್ತಿ ಇಮ್ಮಡಿಸಲಿದೆ. ವೆಸ್ಟ್ ಇಂಡೀಸ್‌ನ ಕ್ರೀಡಾಂಗಣಗಳಲ್ಲಿ ನಡೆಯಲಿರುವ ಎಂಟರ ಘಟ್ಟದ ಪಂದ್ಯಗಳಲ್ಲಿ ಅವರು ಲಯಕ್ಕೆ ಮರಳುವ ಭರವಸೆ ಇದೆ. ಕಳೆದ 12 ತಿಂಗಳುಗಳಲ್ಲಿ  ಉತ್ತಮ ಸ್ಪಿನ್ನರ್ ಎಂದು ಸಾಬೀತುಪಡಿಸಿಕೊಂಡಿರುವ ಕುಲದೀಪ್ ಯಾದವ್ ಅವರಿಗೆ ಸ್ಥಾನ ನೀಡಲು ವೇಗದ ಬೌಲರ್‌ ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮೊಹಮ್ಮದ್ ಸಿರಾಜ್ ಅಥವಾ ಆರ್ಷದೀಪ್ ಸಿಂಗ್ ಅವರಲ್ಲಿ ಒಬ್ಬರು ಸ್ಥಾನ ಬಿಟ್ಟುಕೊಡಬೇಕಾಗಬಹುದು.

ಕಣಕ್ಕಿಳಿಯುವ 11ರ ಬಳಗದ ಸಂಯೋಜನೆಯನ್ನು ಬಹಳ ಜತನದಿಂದ ಮಾಡಲಾಗುತ್ತಿದೆ. ನಾಲ್ವರು ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜ ಅವರೆಲ್ಲರಿಗೂ ಸ್ಥಾನ ಲಭಿಸುವುದು ಬಹುತೇಕ ಖಚಿತವಾಗಿದೆ. ಇದರಿಂದಾಗಿ ಬ್ಯಾಟಿಂಗ್ ಬಲವು 8ನೇ ಕ್ರಮಾಂಕದವರೆಗೂ ವಿಸ್ತರಿಸಲಿದೆ.

ನ್ಯೂಯಾರ್ಕ್‌ನಲ್ಲಿ ನಡೆದಿದ್ದ ಪಂದ್ಯಗಳಲ್ಲಿ ರೋಹಿತ್ ಬಳಗದ ಈ ತಂತ್ರಗಾರಿಕೆ ಫಲಿಸಿತ್ತು. ಅಲ್ಲಿಯ ಪಿಚ್‌ಗಳು ಬೌಲರ್‌ಸ್ನೇಹಿಯಾಗಿದ್ದ ಕಾರಣಕ್ಕೆ ತಂಡ ಯಶಸ್ವಿಯಾಗಿತ್ತು. ಕೆರೆಬಿಯನ್ ದ್ವೀಪದ ತಾಣಗಳಲ್ಲಿ ಸ್ಪಿನ್ನರ್‌ಗಳು ಮಿಂಚುವ ಸಾಧ್ಯತೆ ಹೆಚ್ಚಿದೆ. 

ಭಾರತ ತಂಡದ ಕಳೆದೆರಡು ನೆಟ್ಸ್‌ ಪ್ರಾಕ್ಟಿಸ್ ಅವಧಿಗಳನ್ನು ನೋಡಿದಾಗ ಕುಲದೀಪ್ ಅವರನ್ನು ಆಡಿಸುವುದು ಖಚಿತವೆಂದೇ ಹೇಳಬಹುದು.

ಇನಿಂಗ್ಸ್‌ನ ಮಧ್ಯಮ ಮತ್ತು ಕೊನೆಯ ಹಂತದ ಓವರ್‌ಗಳಲ್ಲಿ ಸಿಕ್ಸರ್‌ಗಳನ್ನು ಸಿಡಿಸಲು ಶಿವಂ ದುಬೆ ಅವರಿಗೆ ಅವಕಾಶ ನೀಡಲಾಗಿದೆ.  ಐಪಿಎಲ್‌ನಲ್ಲಿ ಅವರು ಇಂತಹದೇ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಅವರಲ್ಲದೇ ಸೂರ್ಯಕುಮಾರ್ ಯಾದವ್ ಕೂಡ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಿದರೆ ಎದುರಾಳಿ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಬಹುದು.

ಎದುರಾಳಿ ಅಫ್ಗನ್ ಬಳಗವನ್ನು ಯಾವುದೇ ಹಂತದಲ್ಲಿಯೂ ಕಡೆಗಣಿಸುವಂತಿಲ್ಲ. ಅನುಭವಿ ಸ್ಪಿನ್ನರ್ ರಶೀದ್ ಖಾನ್ ನಾಯಕತ್ವದ ತಂಡವು ಗುಂಪು ಹಂತದಲ್ಲಿ ನ್ಯೂಜಿಲೆಂಡ್‌ನಂತಹ ಅನುಭವಿ ತಂಡಕ್ಕೆ ಸೋಲಿನ ಕಹಿ ಉಣಿಸಿತ್ತು. ಒಟ್ಟು ನಾಲ್ಕರಲ್ಲಿ ಮೂರು ಪಂದ್ಯಗಳನ್ನು ಗೆದ್ದು ಈ ಹಂತಕ್ಕೆ ಬಂದಿದೆ. ಸಾಂಘಿಕ ಹೋರಾಟ ಮಾಡುವ ಸಾಮರ್ಥ್ಯ ಈ ತಂಡಕ್ಕೆ ಇದೆ.  ಬ್ಯಾಟರ್ ಗುಲ್ಬದಿನ್ ನಬಿ, ಬೌಲರ್ ಫಜಲ್‌ಹಕ್ ಫರೂಕಿ, ನವೀನ್ ಉಲ್ ಹಕ್ ಹಾಗೂ ರೆಹಮಾನುಲ್ಲಾ ಗುರ್ಬಾಜ್ ಅವರು ತಮ್ಮ ಅಟದ ಲಯವನ್ನು ಈಗಿರುವಂತೆಯೇ ಮುಂದುವರಿಸಿದರೆ ಭಾರತ ತಂಡದ ಹಾದಿ ಕಠಿಣವಾಗುವುದರಲ್ಲಿ ಅನುಮಾನವೇ ಇಲ್ಲ.

ಅಭ್ಯಾಸ ನಿರತ ರೋಹಿತ್ ಶರ್ಮಾ  –ಪಿಟಿಐ ಚಿತ್ರ

ಬಲಾಬಲ

ಪಂದ್ಯ; 8

ಭಾರತ ಜಯ; 7

ಫಲಿತಾಂಶವಿಲ್ಲ; 1

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ಹಾರ್ದಿಕ್ ಪಾಂಡ್ಯ ಯಶಸ್ವಿ ಜೈಸ್ವಾಲ್ ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್ ರಿಷಭ್ ಪಂತ್ ಸಂಜು ಸ್ಯಾಮ್ಸನ್ ಶಿವಂ ದುಬೆ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಕುಲದೀಪ್ ಯಾದವ್ ಯಜುವೇಂದ್ರ ಚಾಹಲ್ ಆರ್ಷದೀಪ್ ಸಿಂಗ್ ಜಸ್‌ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್.

ಅಫ್ಗಾನಿಸ್ತಾನ: ರಶೀದ್ ಖಾನ್ (ನಾಯಕ) ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್‌ಕೀಪರ್) ಇಬ್ರಾಹಿಂ ಝದ್ರಾನ್ ಗುಲ್ಬದಿನ್ ನೈಬ್ ಅಜ್ಮತ್‌ವುಲ್ಲಾ ಒಮರ್‌ಝೈ ಮೊಹಮ್ಮದ್ ನಬಿ ನಜೀಬುಲ್ಲಾ ಝದ್ರಾನ್ ಕರೀಂ ಜನತ್ ನೂರ್ ಅಹಮದ್ ನವೀನ್ ಉಲ್ ಹಕ್ ಫಜಲ್‌ಹಕ್ ಫರೂಕಿ ಹಜ್ರತ್‌ಉಲ್ಲಾ ಝಝೈ ಫರೀದ್ ಅಹಮದ್ ಮಲಿಕ್ ಮೊಹಮ್ಮದ್ ಇಶಾಕ್ ನಾಂಗೆಲಿಯಾ ಖರೊಟೆ.

ಪಂದ್ಯ ಆರಂಭ: ರಾತ್ರಿ 8 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಡಿಡಿ ಸ್ಪೋರ್ಟ್ಸ್ ಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.