ಲಾಡೆರ್‌ಹಿಲ್: ವೇಗಿ ಶಹೀನ್ ಶಾ ಅಫ್ರಿದಿ, ಸ್ಪಿನ್ನರ್ ಇಮಾದ್ ವಾಸೀಂ ಅವರ ಅಮೋಘ ಬೌಲಿಂಗ್ ಹಾಗೂ ನಾಯಕ ಬಾಬರ್ ಆಜಂ (ಅಜೇಯ 32, 34ಎ) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಭಾನುವಾರ ಐರ್ಲೆಂಡ್ ಎದುರು ಮೂರು ವಿಕೆಟ್‌ಗಳ ಗೆಲುವು ದಾಖಲಿಸಿತು.
ಪಾಕಿಸ್ತಾನ 4 ಪಂದ್ಯಗಳಿಂದ 4 ಅಂಕ ಗಳಿಸಿ ಲೀಗ್ ಹಂತದ ಅಭಿಯಾನ ಪೂರ್ಣಗೊಳಿಸಿತು. ಭಾರತ ಮತ್ತು ಅಮೆರಿಕ ತಂಡಗಳು ಈಗಾಗಲೇ ಗುಂಪಿನಿಂದ ಸೂಪರ್ ಎಂಟರ ಹಂತ ಪ್ರವೇಶಿಸಿವೆ.
ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಫ್ರಿದಿ (22ಕ್ಕೆ3) ಮತ್ತು ವಾಸೀಂ (8ಕ್ಕೆ3) ಅವರ ಪರಿಣಾಮಕಾರಿ ದಾಳಿಯ ಮುಂದೆ ಐರ್ಲೆಂಡ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 106 ರನ್ ಗಳಿಸಿತು.
ಈ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಪಾಕ್ ತಂಡಕ್ಕೆ ಬ್ಯಾರಿ ಮೆಕಾರ್ಥಿ (15ಕ್ಕೆ3) ಹಾಗೂ ಕರ್ಟಿಸ್ ಕ್ಯಾಂಪರ್ (24ಕ್ಕೆ2) ಆಘಾತ ನೀಡಿದರು. ಆದರೆ ಬಾಬರ್ ಅವರ ಸಂಯಮದ ಆಟದಿಂದ 18.5 ಓವರ್‌ಗಳಲ್ಲಿ 111 ರನ್ ಗಳಿಸಿ ಜಯಭೇರಿ ಬಾರಿಸಿತು.
ಈ ಪಂದ್ಯದಲ್ಲೂ ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಆಟಗಾರರು ವಿಫಲರಾದರು. ಫಖರ್ ಜಮಾನ್ (5), ಉಸ್ಮಾನ್ ಖಾನ್ (2), ಶದಾಬ್ ಖಾನ್ (0), ಇಮಾದ್ ವಾಸೀಂ (4), ಅಬ್ಬಾಸ್ ಅಫ್ರಿದಿ (17) ಅವರು ನಿರಾಸೆ ಮೂಡಿಸಿದರು. ಒಂದು ಹಂತದಲ್ಲಿ 62 ರನ್‌ಗೆ 6 ವಿಕೆಟ್‌ಗೆ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಒಂದೆಡೆ ವಿಕೆಟ್‌ಗಳು ನಿಯಮಿತವಾಗಿ ಪತನವಾಗುತ್ತಿದ್ದರೆ ಬಾಬರ್ ಅವರು ದಿಟ್ಟತನದಿಂದ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಶಹೀನ್ ಅಫ್ರಿದಿ ಅವರು ಐದು ಎಸೆತಗಳಲ್ಲಿ 13 ರನ್ ಗಳಿಸಿ ಅಜೇಯರಾದರು. ಎರಡು ಸಿಕ್ಸರ್ ಸಹ ಬಾರಿಸಿದರು.
ಇದಕ್ಕೂ ಮುನ್ನ ಗರೆತ್ ಡೆಲನಿ (31; 19ಎ) ಅವರು ಕೊನೆಯ ಹಂತದಲ್ಲಿ ಮಿಂಚಿದ್ದರಿಂದ ಐರ್ಲೆಂಡ್ ತಂಡವು 100ರ ಗಡಿ ದಾಟಿತು. ಗರೆತ್ ಅವರು 3 ಸಿಕ್ಸರ್ ಬಾರಿಸಿದರು.
ಅಫ್ರಿದಿ ಹಾಕಿದ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಆ್ಯಂಡ್ರ್ಯೂ ಬಲ್ಬಿರ್ನಿ ಮತ್ತು ಲಾರ್ಕನ್ ಟಕ್ಕರ್ ವಿಕೆಟ್‌ಗಳನ್ನು ಪತನವಾದವು.
ಇನ್ನೊಂದೆಡೆಯಿಂದ ಆಮಿರ್ ಮತ್ತು ಹ್ಯಾರಿಸ್ ರವೂಫ್ ಕೂಡ ಉತ್ತಮ ಬೌಲಿಂಗ್ ಮಾಡಿದರು. ಇಮದ್ ವಾಸೀಂ ಅವರು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವಿಕೆಟ್ ಗಳಿಸಿ ಐರ್ಲೆಂಡ್ ತಂಡವು ಹೆಚ್ಚು ಮೊತ್ತ ಗಳಿಸದಂತೆ ನೋಡಿಕೊಂಡರು.
ಸಂಕ್ಷಿಪ್ತ ಸ್ಕೋರು: ಐರ್ಲೆಂಡ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 106 (ಗೆರೆತ್ ಡೆಲನಿ 31, ಮಾರ್ಕ್ ಅಡೇರ್ 15, ಜೋಶುವಾ ಲಿಟಲ್ ಔಟಾಗದೆ 22, ಶಹೀನ್ ಅಫ್ರಿದಿ 22ಕ್ಕೆ3, ಮೊಹಮ್ಮದ್ ಅಮಿರ್ 11ಕ್ಕೆ2, ಇಮದ್ ವಾಸೀಂ 8ಕ್ಕೆ3)
ಪಾಕಿಸ್ತಾನ: 18.5 ಓವರ್‌ಗಳಲ್ಲಿ 7 ವಿಕೆಟ್‌ಗೆ 111 (ಮೊಹಮದ್ ರಿಜ್ವಾನ್ 17, ಬಾಬರ್ ಆಜಂ ಔಟಾಗದೆ 32, ಶಹೀನ್ ಅಫ್ರಿದಿ ಔಟಾಗದೆ 13, ಬ್ಯಾರಿ ಮೆಕಾರ್ಥಿ 15ಕ್ಕೆ3, ಕರ್ಟಿಸ್ ಕ್ಯಾಂಪರ್ 24ಕ್ಕೆ2. ಪಂದ್ಯ ಶ್ರೇಷ್ಠ: ಶಹೀನ್ ಅಫ್ರಿದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.