ADVERTISEMENT

ಟಿ20 ವಿಶ್ವಕಪ್‌ನಲ್ಲಿ ದಾಖಲೆ; ಈ ಸಾಧನೆ ಮಾಡಿದ ಏಕೈಕ ಬೌಲರ್ ಬಾಂಗ್ಲಾದೇಶದ ಶಕೀಬ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2024, 10:15 IST
Last Updated 23 ಜೂನ್ 2024, 10:15 IST
<div class="paragraphs"><p>ಬಾಂಗ್ಲಾದೇಶ ತಂಡದ  ಶಕೀಬ್‌ ಅಲ್‌ ಹಸನ್‌</p></div>

ಬಾಂಗ್ಲಾದೇಶ ತಂಡದ ಶಕೀಬ್‌ ಅಲ್‌ ಹಸನ್‌

   

ಪಿಟಿಐ ಚಿತ್ರ

ನವದೆಹಲಿ: ಭಾರತದ ಎದುರು ಶನಿವಾರ ನಡೆದ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ ವಿಕೆಟ್‌ ಕಬಳಿಸಿದ ಬಾಂಗ್ಲಾದೇಶದ ಅನುಭವಿ ಆಟಗಾರ ಶಕೀಬ್‌ ಅಲ್‌ ಹಸನ್‌, ಟಿ20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ADVERTISEMENT

ಚುಟುಕು ವಿಶ್ವಕಪ್‌ನಲ್ಲಿ 42 ಪಂದ್ಯಗಳಲ್ಲಿ ಆಡಿರುವ ಶಕೀಬ್‌, 6.81ರ ದರದಲ್ಲಿ ರನ್‌ ಬಿಟ್ಟುಕೊಟ್ಟು 19.38ರ ಸರಾಸರಿಯಲ್ಲಿ ಬರೋಬ್ಬರಿ 50 ವಿಕೆಟ್‌ ಪಡೆದಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬೌಲರ್‌ ಎನಿಸಿಕೊಂಡಿದ್ದಾರೆ.

ಈ ಮಾದರಿಯ ವಿಶ್ವಕಪ್‌ನಲ್ಲಿ ಬೇರಾವ ಬೌಲರ್‌, ಶಕೀಬ್‌ರ ಈ ಸಾಧನೆಯ ಸನಿಹದಲ್ಲಿಲ್ಲ.

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್‌ ಅಫ್ರಿದಿ (34 ಪಂದ್ಯಗಳಿಂದ 39 ವಿಕೆಟ್‌), ಶ್ರೀಲಂಕಾದವರಾದ ಮಾಜಿ ವೇಗಿ ಲಸಿತ್‌ ಮಾಲಿಂಗ (34 ಪಂದ್ಯಗಳಿಂದ 39 ವಿಕೆಟ್‌) ಮತ್ತು ಸ್ಪಿನ್ನರ್‌ ವನಿಂದು ಹಸರಂಗ (19 ಪಂದ್ಯಗಳಿಂದ 37 ವಿಕೆಟ್‌) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

ಭಾರತ ಸೆಮಿಫೈನಲ್‌ನತ್ತ
ಬಾಂಗ್ಲಾದೇಶ ಎದುರು ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಹಾರ್ದಿಕ್‌ ಪಾಂಡ್ಯ (50 ರನ್‌) ಸಿಡಿಸಿದ ಅಮೋಘ ಅರ್ಧಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 196 ರನ್ ಗಳಿಸಿತು. ಗುರಿ ಬೆನ್ನತ್ತಿದ ಬಾಂಗ್ಲಾದೇಶ, 8 ವಿಕೆಟ್‌ಗೆ 146 ರನ್‌ ಗಳಿಸಲಷ್ಟೇ ಶಕ್ತವಾಗಿ 50 ರನ್‌ ಅಂತರದ ಸೋಲೊಪ್ಪಿಕೊಂಡಿತು.

ಇದರೊಂದಿಗೆ 'ಸೂಪರ್‌ 8' ಹಂತದ ಮೊದಲ ಗುಂಪಿನಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಸೆಮಿಫೈನಲ್‌ನತ್ತ ದಾಪುಗಾಲಿಟ್ಟಿದೆ. ಬಾಂಗ್ಲಾ ಪಡೆ, ಎರಡೂ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ.

ಭಾರತ ತನ್ನ ಮುಂದಿನ ಪಂದ್ಯದಲ್ಲಿ (ಜೂನ್‌ 24ರಂದು) ಆಸ್ಟ್ರೇಲಿಯಾ ಎದುರು ಹಾಗೂ ಬಾಂಗ್ಲಾದೇಶ ತಂಡ (ಜೂನ್‌ 25ರಂದು) ಅಫ್ಗಾನಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.