ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಬುಧವಾರ) ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.
ಈ ಪಂದ್ಯ ಭಾರತದ ನಾಯಕ ರೋಹಿತ್ ಶರ್ಮಾ ಅವರಿಗೆ ಅಗ್ನಿಪರೀಕ್ಷೆಯಾಗಿದೆ.2019ರ ಸೆಮಿಫೈನಲ್‌ನಲ್ಲಿ ಕಿವೀಸ್ ಬಳಗದ ಎದುರು ಸೋತಿದ್ದ ಭಾರತ ತಂಡವು ಪ್ರಶಸ್ತಿ ಗೆಲುವಿನ ಅವಕಾಶ ಕಳೆದುಕೊಂಡಿತ್ತು. ಈಗ ಆ ಸೋಲಿನ ಮುಯ್ಯಿ ತೀರಿಸಿಕೊಳ್ಳುವುದರ ಜೊತೆಗೆ 12 ವರ್ಷಗಳ ನಂತರ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಡುವ ಛಲ ಭಾರತ ತಂಡದಲ್ಲಿದೆ.
ಟೂರ್ನಿಯ ಲೀಗ್ ಸುತ್ತಿನಲ್ಲಿ ಎಲ್ಲ ಒಂಬತ್ತು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದೊಂದಿಗೆ ನಾಲ್ಕರ ಘಟ್ಟಕ್ಕೆ ಆತಿಥೇಯರು ಲಗ್ಗೆ ಹಾಕಿದ್ದಾರೆ. ಶಾಂತಸ್ವಭಾವದ ಮತ್ತು ತಂತ್ರಗಾರಿಕೆಯ ನಿಪುಣ ನಾಯಕ ಕೇನ್ ವಿಲಿಯಮ್ಸನ್ ಅವರ ಕಿವೀಸ್ ಬಳಗ ಭಾರತಕ್ಕೆ ಟಕ್ಕರ್ ಕೊಡಲು ಸಿದ್ಧವಾಗಿದೆ.
ರೋಹಿತ್ ಮತ್ತು ಗಿಲ್ ಅಮೋಘ ಆರಂಭ ನೀಡುತ್ತಿದ್ದಾರೆ. ವಿರಾಟ್, ಶ್ರೇಯಸ್ ಮತ್ತು ಕೆ. ಎಲ್. ರಾಹುಲ್ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದ್ದಾರೆ. ಬೌಲಿಂಗ್ ವಿಭಾಗವಂತೂ ಉತ್ತುಂಗ ಶಿಖರದಲ್ಲಿದೆ. ಬೂಮ್ರಾ, ಶಮಿ ಮತ್ತು ಸಿರಾಜ್ ಅವರ ಬಿರುಗಾಳಿಗೆ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಅವರ ಸ್ಪಿನ್ ಮೋಡಿ ಜೋಡಿಯಾಗಿದೆ. ಈ ಬೌಲಿಂಗ್ ಪಡೆಯೇ ಎದುರಾಳಿಗಳಿಗೆ ಇರುವ ಪ್ರಮುಖ ಸವಾಲು.
ಹೋದ ಸಲ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೂದಲೆಳೆ ಅಂತರದಲ್ಲಿ ಕಿವೀಸ್ ಬಳಗ ಸೋತಿತ್ತು. ತಂಡದಲ್ಲಿರುವ ಬೆಂಗಳೂರು ಮೂಲದ ರಚಿನ್ ರವೀಂದ್ರ ಈಗಾಗಲೇ ಮೂರು ಶತಕ ಹೊಡೆದು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಡೆರಿಲ್ ಮಿಚೆಲ್, ಡೆವೊನ್ ಕಾನ್ವೆ ಮತ್ತು ಗ್ಲೆನ್ ಫಿಲಿಪ್ಸ್ ಅವರು ದೊಡ್ಡ ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಮರ್ಥರು. ಬೌಲಿಂಗ್‌ನಲ್ಲಿ ಅನುಭವಿ ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್ ಮತ್ತು ಅಮೋಘ ಬೌಲಿಂಗ್ ಮಾಡುತ್ತಿರುವ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಅವರು ಭಾರತದ ಬಲಿಷ್ಠ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡಬಲ್ಲರು.
ವಾಂಖೆಡೆ ಪಿಚ್ ರನ್‌ಗಳಿಕೆಗೆ ಸಹಕಾರಿಯಾಗಿದೆ. ಮೊದಲು ಬ್ಯಾಟ್ ಮಾಡುವ ತಂಡಗಳು ಸರಾಸರಿ ರನ್ ಗಳಿಕೆ ಹೆಚ್ಚಿರುತ್ತದೆ. ಈ ಕ್ರೀಡಾಂಗಣದಲ್ಲಿ ಕಳೆದ 10 ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸರಾಸರಿ ಸ್ಕೋರ್ 318 ಆಗಿದೆ.
ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡಗಳು ಆರಂಭದ 20 ಓವರ್‌ಗಳಲ್ಲಿ ಸರಾಸರಿ 4 ರಿಂದ 5 ವಿಕೆಟ್ ಕಳೆದುಕೊಂಡಿವೆ. ಇದಕ್ಕೆ ಬಾಲ್ ಸ್ವಿಂಗ್ ಆಗುವುದು ಕಾರಣ ಎನ್ನುತ್ತಾರೆ ಕ್ರಿಕೆಟ್ ವಿಶ್ಲೇಷಕರು. ವಾಂಖೆಡೆ ಪಿಚ್ ಸ್ಪಿನ್ ಬೌಲರ್‌ಗಳಿಗಿಂತ ವೇಗಿಗಳಿಗೆ ಹೆಚ್ಚು ಅನುಕೂಲಕರವಾಗಿದೆ.
ಇಲ್ಲಿ ವೇಗಿಗಳು ಶೇ 83ರಷ್ಟು ವಿಕೆಟ್ ಪಡೆದರೆ, ಸ್ಪಿನ್ ಬೌಲರ್‌ಗಳು ಶೇ 17ರಷ್ಟು ವಿಕೆಟ್‌ಗಳನ್ನು ಪಡೆದಿದ್ದಾರೆ.
ಇಲ್ಲಿ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಮಳೆಯಾಗುವ ಸಾಧ್ಯತೆ ತೀರ ಕಡಿಮೆ ಎಂದು ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ. ರಾತ್ರಿಯ ತಾಪಮಾನ ಸುಮಾರು 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
ರೋಹಿತ್ ಶರ್ಮಾ
ಶುಭಮನ್ ಗಿಲ್
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಕೆ.ಎಲ್. ರಾಹುಲ್
ಸೂರ್ಯಕುಮಾರ್ ಯಾದವ್
ಡೆವೊನ್ ಕಾನ್ವೆ
ರಚಿನ್ ರವೀಂದ್ರ
ಕೇನ್ ವಿಲಿಯಮ್ಸನ್
ಡೆರಿಲ್ ಮಿಚೆಲ್
ಗ್ಲೆನ್ ಫಿಲಿಪ್ಸ್
ರವೀಂದ್ರ ಜಡೇಜ
ಕುಲದೀಪ್ ಯಾದವ್
ಮಿಚೆಲ್ ಸ್ಯಾಂಟನರ್
ಜಸ್‌ಪ್ರೀತ್ ಬೂಮ್ರಾ
ಮೊಹಮ್ಮದ್ ಶಮಿ
ಮೊಹಮ್ಮದ್ ಸಿರಾಜ್
ಟ್ರೆಂಟ್ ಬೌಲ್ಟ್
ಲಾಕಿ ಫರ್ಗ್ಯುಸನ್
ಟಿಮ್ ಸೌಥಿ
ಕೆ.ಎಲ್. ರಾಹುಲ್
ಟಾಮ್ ಲೆಥಮ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.