ADVERTISEMENT

ICC World Cup: ಸೆಮಿಯಲ್ಲಿ ಸ್ಥಿರ ಪ್ರದರ್ಶನ; ರಚಿನ್ ವಿಶ್ವಾಸ

ಪಿಟಿಐ
Published 12 ನವೆಂಬರ್ 2023, 14:50 IST
Last Updated 12 ನವೆಂಬರ್ 2023, 14:50 IST
ರಚಿನ್‌ ರವೀಂದ್ರ –ಎಎಫ್‌ಪಿ ಚಿತ್ರ
ರಚಿನ್‌ ರವೀಂದ್ರ –ಎಎಫ್‌ಪಿ ಚಿತ್ರ   

ನವದೆಹಲಿ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಭಾರತ ವಿರುದ್ಧದ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ನ ತಂಡವು ಅಧಿಕ ಒತ್ತಡದ ನಡುವೆಯೂ ಸ್ಥಿರ ಪ್ರದರ್ಶನ ನೀಡುವ ವಿಶ್ವಾಸವನ್ನು ಹೊಂದಿದೆ ಎಂದು ಕಿವೀಸ್‌ ತಂಡದ ಆರಂಭಿಕ ಬ್ಯಾಟರ್‌ ರಚಿನ್‌ ರವೀಂದ್ರ ಹೇಳಿದ್ದಾರೆ.

ಚೊಚ್ಚಲ ವಿಶ್ವಕಪ್‌ ಟೂರ್ನಿ ಆಡುತ್ತಿರುವ ಬೆಂಗಳೂರು ಮೂಲದ ರಚಿನ್ ಅವರು 9 ಪಂದ್ಯಗಳಲ್ಲಿ ಮೂರು ಶತಕ ಸೇರಿದಂತೆ 565 ರನ್‌ ಕಲೆಹಾಕಿ, ಟೂರ್ನಿಯಲ್ಲೇ ಮೂರನೇ ಅತ್ಯಧಿಕ ಸ್ಕೋರರ್‌ ಆಗಿದ್ದಾರೆ. ಭಾರತದ ವಿರಾಟ್‌ ಕೊಹ್ಲಿ (594), ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ (591) ಕ್ರಮವಾಗಿ ಮೊದಲ ಎರಡನೇ ಸ್ಥಾನದಲ್ಲಿದ್ದಾರೆ.

‘ನಾವು ಪ್ರತಿಯೊಂದು ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ ಎಂಬ ಅರಿವಿದೆ. ಪಂದ್ಯದಲ್ಲಿ ಸೋಲಬಹುದು ಅಥವಾ ಗೆಲ್ಲಬಹುದು. ಆದರೆ, ನಾವು ಹೇಗೆ ಆಡುತ್ತೇವೆ ಎಂಬುದು ಮುಖ್ಯವಾಗುತ್ತದೆ’ ಎಂದು 23 ವರ್ಷದ ರಚಿನ್‌ ಹೇಳಿದ್ದಾರೆ.

ADVERTISEMENT

 2015ರ ವಿಶ್ವಕಪ್ ಫೈನಲ್‌ನಲ್ಲಿ ಕಿವೀಸ್‌ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. 2019ರ ಟೂರ್ನಿಯ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಪರಾಭವಗೊಂಡಿತ್ತು.

‘ಕಳೆದ ನಾಲ್ಕೈದು ಟೂರ್ನಿಗಳಲ್ಲಿ ತಮ್ಮ ತಂಡವು ಉತ್ತಮ ಪ್ರದರ್ಶನ ನೀಡಿದೆ. ಈ ಟೂರ್ನಿಯಲ್ಲೂ ತಂಡ ಸ್ಥಿರ ಪ್ರದರ್ಶನ ನೀಡುತ್ತಿದೆ. ಭಾರತ ವಿರುದ್ಧದ ನಾಕೌಟ್‌ ಪಂದ್ಯಕ್ಕಾಗಿ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಟೂರ್ನಿಯ ವೇಳೆ ಬೆಂಗಳೂರಿಗೆ ಭೇಟಿ ನೀಡಿರುವುದು ಬಹಳ ವಿಶೇಷ ಅನುಭವ. ನಾನು ಬಾಲ್ಯದಲ್ಲಿ ಭೇಟಿ ನೀಡಿ, ಸಾಕಷ್ಟು ಸಮಯ ಅಲ್ಲಿ ಕಳೆದಿದ್ದೇನೆ’ ಎಂದು ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.