ಶಿ ಝೇಂಗ್ಲಿ ಚೀನಾದ ‘ಬಾವಲಿ ಹೆಣ್ಣು’ ಎಂದೇ ಪ್ರಸಿದ್ಧರಾದವರು. ದಶಕಗಳ ಕಾಲ ಕಾಡುಮೇಡುಗಳನ್ನು ಅಲೆದು, ಗುಹೆಗಹ್ವರಗಳಲ್ಲಿನ ಬಾವಲಿಗಳ ಬೆನ್ನು ಬಿದ್ದಿರುವ ಈ ಸಂಶೋಧಕಿ ಸಾರ್ಸ್–ಕೊರೊನಾ ವೈರಸ್‌ಗಳ ಜಗತ್ತನ್ನೇ ಜಾಲಾಡಿದ್ದಾರೆ. ಬಾವಲಿಗಳ ಬೆನ್ನು ಬಿದ್ದು ವೈರಸ್‌ಗಳ ಕುರಿತಂತೆ ಆಕೆ ನಡೆಸಿರುವ ಸಂಶೋಧನೆಗಳು, ವಿಶ್ವಕ್ಕೆ ಹೊಸ ಬೆಳಕಿಂಡಿಯನ್ನು ತೆರೆದಿವೆ. ಪ್ರಸಕ್ತ ಜಗತ್ತನ್ನು ಕಂಗೆಡಿಸಿರುವ ಕೊರೊನಾ ವೈರಾಣುಗಳ ಬಗೆಗೆ ಜಗತ್ತಿಗೆ ಹೆಚ್ಚಿನ ವಿಷಯ ತಿಳಿಯುವಲ್ಲಿಯೂ ಝೇಂಗ್ಲಿ ಅವರ ಸಾಧನೆಯಿದೆ. ಈ ಲೇಖನವು ಸುಧಾ ವಾರಪತ್ರಿಕೆಯ ಏಪ್ರಿಲ್ 16ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.
---
ಡಿಸೆಂಬರ್ 30, 2019ರ ಮುಸ್ಸಂಜೆ. ಇಡೀ ಜಗತ್ತು ಕಳೆದ ವರ್ಷವನ್ನು ಬೀಳ್ಕೊಟ್ಟು, ಹೊಸ ವರ್ಷದ ಬರುವಿಕೆಯನ್ನು ಸಂಭ್ರಮಿಸಲು ಇರುವ ಇನ್ನೊಂದೇ ದಿನವನ್ನು ಎದುರು ನೋಡುತ್ತಿತ್ತು. ಆದರೆ ಚೀನಾದ ವುಹಾನ್‌ನಲ್ಲಿರುವ ವಿಶ್ವಪ್ರಸಿದ್ಧ ‘ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ’ಯ ನಿರ್ದೇಶಕನ ಮುಖದಲ್ಲಿ ಮಾತ್ರ ಸಂಭ್ರಮದ ಲವಲೇಶವೂ ಇರಲಿಲ್ಲ. ಆ ಚೀನಿ ಕಣ್ಣುಗಳ ತುಂಬ ಆತಂಕದ ಛಾಯೆ ದಟ್ಟವಾಗಿತ್ತು. ಆತನೆದುರು, ವುಹಾನ್‌ನ ಆಸ್ಪತ್ರೆಗಳಿಂದ ಬಂದಿರುವ, ಇಬ್ಬರು ರೋಗಿಗಳ ಲಾಲಾರಸದ ಮಾದರಿಗಳಿದ್ದವು.
ಮತ್ತೆರಡು ನಿಮಿಷಗಳಲ್ಲಿ ಶೀ ಝೇಂಗ್ಲಿಯ ಮೊಬೈಲ್ ರಿಂಗಣಿಸಲಾರಂಭಿಸಿತ್ತು. ವಿಜ್ಞಾನ ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ಶಾಂಘೈಗೆ ಬಂದಿದ್ದ ಝೇಂಗ್ಲಿ ಇನ್ನೇನು ವೇದಿಕೆ ಏರಲು ಸಜ್ಜಾಗಿದ್ದಳು. ಬೇರೆ ಯಾರೇ ಕರೆ ಮಾಡಿದ್ದರೂ ಆ ಪರಿಸ್ಥಿತಿಯಲ್ಲಿ ರಿಸೀವ್ ಮಾಡುತ್ತಿರಲಿಲ್ಲವೇನೋ. ಆದರೆ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ನಿರ್ದೇಶಕರೇ ಫೋನ್ ಮಾಡಿರುವುದನ್ನು ನೋಡಿ, ಏನೋ ಗಂಭೀರ ವಿಷಯವೇ ಇರುತ್ತದೆ ಎಂದು ಫೋನ್ ರಿಸೀವ್ ಮಾಡಿ ಮಾತಿಗಿಳಿದಳು.
ವುಹಾನ್‌ನ ‘ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕೇಂದ್ರ’ (Wuhan Center for Disease Control)ವು, ಇಬ್ಬರು ನ್ಯೂಮೋನಿಯಾ ರೋಗಿಗಳ ಲಾಲಾರಸದಲ್ಲಿ ನೋವೆಲ್ ಕೊರೊನಾ ವೈರಸ್ ಅನ್ನು ಪತ್ತೆ ಹಚ್ಚಿದೆ. ನೀನು ಆ ಮಾದರಿಗಳನ್ನು ಇನ್ನೊಮ್ಮೆ ಪರೀಕ್ಷೆ ಮಾಡಬೇಕು ಎಂದು ಅವರ ಅಪೇಕ್ಷೆ. ಏನು ಮಾಡುವುದು?’
ಸಂಸ್ಥೆಯ ನಿರ್ದೇಶಕರು ರೋಗ ಲಕ್ಷಣಗಳು ಮತ್ತು ವೈರಸ್‌ಗೆ ಸಂಬಂಧಿಸಿದ ವಿವರಗಳನ್ನು ಹೇಳುತ್ತಿದ್ದಂತೆಯೇ ಝೇಂಗ್ಲಿ ಮುಖ ಬಿಳಿಚಿಕೊಳ್ಳಲಾರಂಭಿಸಿತು. ಮೈ ಕಂಪಿಸಲು ಶುರುವಾಯಿತು. ಮನಸ್ಸು ಹದಿನಾರು ವರ್ಷಗಳ ಹಿಂದೆ ಜಿಗಿದಿತ್ತು. ‘ನನ್ನ ಊಹೆ ನಿಜವಾದರೆ... ಮನುಷ್ಯಕುಲಕ್ಕೇ ಮತ್ತೊಂದು ಕಂಟಕ ಬಂದಿದೆ ಎಂದೇ ಅರ್ಥ’ ಎಂದು ಮನಸ್ಸಲ್ಲೇ ಅಂದುಕೊಂಡಳು. ವುಹಾನ್‌ನ ‘ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕೇಂದ್ರ’ದ ಮಾತು ನಿಜವಾದರೆ, 2003–04ರ ಸಮಯದಲ್ಲಿ ಕಾಣಿಸಿಕೊಂಡು ಎಂಟು ಸಾವಿರಕ್ಕೂ ಅಧಿಕ ಜನರನ್ನು ಬಾಧಿಸಿ, ಎಂಟುನೂರಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಿದ್ದ ಬಾವಲಿಜನ್ಯ ‘ಸಾರ್ಸ್’ (severe acute respiratory syndrome) ಕೊರೊನಾ ವೈರಸ್ ಕುಟುಂಬಕ್ಕೇ ಸೇರಿದ ವೈರಸ್ ಒಂದು ಮನುಷ್ಯನ ದೇಹವನ್ನು ಸದ್ದಿಲ್ಲದೇ ಸೇರಿಕೊಂಡಿದೆ!
‘ಬೇರೆಲ್ಲ ಕೆಲಸ ಬಿಟ್ಟು ಆ ರೋಗಿಗಳ ಲಾಲಾರಸದ ಮಾದರಿಯನ್ನು ಮೊದಲು ಪರೀಕ್ಷಿಸಬೇಕು’ – ಇಷ್ಟು ಮಾತ್ರ ಹೇಳಿದ ಝೇಂಗ್ಲಿ ಕರೆ ಕತ್ತರಿಸಿದ ಮರುಕ್ಷಣವೇ ಸಮ್ಮೇಳನದಿಂದ ಎದ್ದು ಹೊರಬಂದಳು. ಆ ಸಮಯದಲ್ಲಿ ಶಾಂಘೈನಿಂದ ವುಹಾನ್‌ಗೆ ಇದ್ದ ಮೊದಲ ರೈಲು ಏರಿ ವಾಪಸ್ ಬಂದಳು.
ರೈಲಿನಲ್ಲಿ ಕೂತಿದ್ದ ಝೇಂಗ್ಲಿ ಮನಸ್ಸು ಕಲ್ಲೆಸೆದ ಜೇನುಗೂಡೇ ಆಗಿತ್ತು. ಅದಕ್ಕೆ ಕಾರಣ ಹೊಸ ಬಗೆಯ ರೋಗಾಣು ಪತ್ತೆಯಾದ ಆತಂಕವಷ್ಟೇ ಆಗಿರಲಿಲ್ಲ. ಜಗತ್ತನ್ನೇ ಹೈರಾಣುಗೊಳಿಸಲಿರುವ ಈ ಮಹಾಮಾರಿಯ ಆಗಮನಕ್ಕೆ ನಾನೇ ಕಾರಣನಾದೆನೇ ಎಂಬ ಅಪರಾಧಿಪ್ರಜ್ಞೆಯೂ ಅವಳನ್ನು ಒಳಗೊಳಗೇ ಹಿಂಡಿ ಹಿಪ್ಪೆ ಮಾಡುತ್ತಿತ್ತು. ‘ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ’ಯಲ್ಲಿ ನಾವೇ ಎಲ್ಲೆಲ್ಲಿಂದಲೋ ತಂದು ಸಂಶೋಧನೆಗಾಗಿ ಸಂಗ್ರಹಿಸಿ ಇಟ್ಟಿರುವ ಬಾವಲಿಜನ್ಯ ವೈರಸ್‌ಗಳಲ್ಲಿಯೇ ಯಾವುದಾದರೂ ಒಂದು ಲೀಕ್ ಆಗಿ ಈ ಅನಾಹುತಕ್ಕೆ ಕಾರಣವಾಗಿರಬಹುದೇ ಎಂಬ ಆಲೋಚನೆ ಮನಸಲ್ಲಿ ಎದ್ದಿದ್ದೇ ವಾಯುವೇಗದಲ್ಲಿ ಓಡುತ್ತಿದ್ದ ರೈಲೂ ತೆವಳುತ್ತಿರುವ ಹಾಗೆ ಭಾಸವಾಯಿತು. ಎಷ್ಟು ಬೇಗ ವುಹಾನ್ ಸೇರುತ್ತೇನೋ ಎಂಬ ಚಡಪಡಿಕೆಯಲ್ಲಿ ಕೂತಲ್ಲಿ ಕೂಡಲಾಗದೆ ನಿಂತಲ್ಲಿ ನಿಲ್ಲಲಾಗದೆ ಒದ್ದಾಡಿದಳು. ಮನಸ್ಸು ಅಷ್ಟೇ ವೇಗದಲ್ಲಿ ಹಿಮ್ಮುಖವಾಗಿ ಚಲಿಸಲು ಶುರುವಾಗಿತ್ತು.
ಶೀ ಝೇಂಗ್ಲಿ ಹುಟ್ಟಿದ್ದು 1964ರಲ್ಲಿ. ಕ್ಸಿಕ್ಸಿಯಾ ಕೌಂಟಿಯ ಸಮೀಪದ ಹೆನಾನ್ ಎಂಬ ಊರಿನಲ್ಲಿ. 1987ರಲ್ಲಿ ವುಹಾನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಆಕೆ, 1990ರಲ್ಲಿ ‘ಚೀನಾ ವಿಜ್ಞಾನ ಅಕಾಡೆಮಿ’ಯ ‘ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ’ಯಲ್ಲಿ ಸ್ನಾತಕೋತ್ತರ ಪದವಿ ಪಡೆದಳು. 2000ರಲ್ಲಿ ಫ್ರಾನ್ಸ್‌ನ ಮೌಂಟ್ ಪೆಲಿಯರ್ ಯೂನಿವರ್ಸಿಟಿಯಲ್ಲಿ ಪಿ.ಎಚ್‌ಡಿ. ಮಾಡಿದಳು.
‘ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ’ ಅವಳಿಗೆ ಒಂದು ರೀತಿಯಲ್ಲಿ ಮನೆಯಿದ್ದಂತೆ. ಅಲ್ಲಿಯೇ ಪದವಿ ಪಡೆದು, ನಂತರದ ಆಕೆಯ ಸಂಶೋಧನೆಯ ಸುಮಾರು ಎರಡು ದಶಕಗಳಿಗೆ ಸುರಕ್ಷಿತ ಗೂಡು ಒದಗಿಸಿದ್ದು ಅದೇ ಸಂಸ್ಥೆ.
ಝೇಂಗ್ಲಿಯನ್ನು ಸಹೋದ್ಯೋಗಿಗಳು ಕರೆಯುವುದು ‘ಬಾವಲಿ ಹೆಣ್ಣು’ (Bat woman) ಎಂದೇ! ಅದಕ್ಕೆ ಕಾರಣವೂ ಇದೆ. ಬರೋಬ್ಬರಿ ಹದಿನಾರು ವರ್ಷಗಳ ಕಾಲ ಅವಳು ಬಾವಲಿಜನ್ಯ ವೈರಸ್‌ಗಳ ಪತ್ತೆಕಾರ್ಯ ಮತ್ತು ಅವುಗಳ ಮೇಲೆ ಸಂಶೋಧನೆ ನಡೆಸುತ್ತ ಕಳೆದಿದ್ದಾಳೆ.
‘ನನ್ನ ಸಂಶೋಧನೆಗಳ ಪ್ರಕಾರ ದಕ್ಷಿಣ ಚೀನಾದ ಗುವಾಂಗ್‌ಡಂಗ್, ಗುವಂಗ್‌ಕ್ಸಿ ಮತ್ತು ಯುನ್ನಾನ್ ಪ್ರದೇಶಗಳಲ್ಲಿನ ವಾತಾವರಣದಲ್ಲಿ ಬಾವಲಿಜನ್ಯ ಕೊರೊನಾ ವೈರಸ್‌ಗಳು ಮನುಷ್ಯದೇಹವನ್ನು ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಚೀನಾದ ಹೃದಯಭಾಗವಾದ ವುಹಾನ್‌ನಲ್ಲಿ ಇಂಥದ್ದೊಂದು ವೈರಸ್ ಕಾಣಿಸಿಕೊಂಡಿರುವುದು ನಿಜಕ್ಕೂ ಅಚ್ಚರಿಯೇ. ಹಾಗಾಗಿಯೇ ಅದು ನಮ್ಮ ಲ್ಯಾಬ್‌ನಿಂದಲೇ ತಪ್ಪಿಸಿಕೊಂಡ ವೈರಸ್ ಆಗಿರಬಹುದೇ ಎಂಬ ಚಿಂತೆ ನನ್ನನ್ನು ಕಾಡಲು ಶುರುವಾಗಿದ್ದು’ ಎಂದು ಅಂದು ತಮ್ಮ ಮನಸ್ಸಲ್ಲಿ ಕಾಡಿದ್ದ ಒಂದು ಆತಂಕವನ್ನು ಇತ್ತೀಚೆಗಿನ ಒಂದು ಸಂದರ್ಶನದಲ್ಲಿ ಝೇಂಗ್ಲಿ ಹಂಚಿಕೊಂಡಿದ್ದಾರೆ.
ಪೂರ್ವಸಿದ್ಧತೆಯ ಕೆಲಸಗಳು
ಝೇಂಗ್ಲಿ ಬಾವಲಿಜನ್ಯ ವೈರಸ್‌ಗಳ ಜಾಡು ಹಿಡಿದು ಚೀನಾದ ಕಾಡು ಮೇಡು ಅಲೆಯಲು ಶುರುಮಾಡಿದ್ದು 2004ರಲ್ಲಿ. ಚೀನಾ ‘ಸಾರ್ಸ್’ ವೈರಸ್‌ನ ಮಾರಣಾಂತಿಕ ತಪರಾಕಿ ತಿಂದ ನಂತರ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದನ್ನು ರಚಿಸಿ, ಅದಕ್ಕೆ ಝೇಂಗ್ಲಿ ನೇತೃತ್ವವನ್ನು ವಹಿಸಿ ಸಾರ್ಸ್ ವೈರಸ್ ಮೂಲವನ್ನು ಶೋಧಿಸುವ ಜವಾಬ್ದಾರಿಯನ್ನು ವಹಿಸಿತು.
ಝೇಂಗ್ಲಿ ತಂಡ ಈ ಶೋಧನೆಯ ಸಿದ್ಧತೆಯ ಹಂತದಲ್ಲಿ ಸಾರ್ಸ್ ವೈರಸ್‌ನ ಮೊದಮೊದಲ ಪ್ರಕರಣಗಳನ್ನು ಅಭ್ಯಸಿಸುತ್ತ ಹೋಯಿತು.
ಹಾಂಗ್‌ಕಾಂಗ್‌ನ ಒಂದು ವಿಜ್ಞಾನಿಗಳ ತಂಡ, ‘ಗುವಾಂಗ್‌ಡಂಗ್‌ನಲ್ಲಿ, ವನ್ಯಪ್ರಾಣಿಗಳ ಸಾಗಣೆಗಾರರಿಗೇ ಮೊದಲು ಸಾರ್ಸ್ ಕೊರೊನಾವೈರಸ್ ತಗುಲಿದ್ದು. ಅವರಿಗೆ ಅಲ್ಲಿನ ಪುನುಗುಬೆಕ್ಕು ಮತ್ತು ಮುಂಗುಸಿಗಳಿಂದ ಬಂದಿರಬಹುದು’ ಎಂದು ವರದಿಯಲ್ಲಿ ಹೇಳಿತ್ತು. ಆದರೆ ಪುನುಗುಬೆಕ್ಕು ಅಥವಾ ಮುಂಗುಸಿಗಳ ದೇಹದಲ್ಲಿ ಆ ವೈರಸ್‌ಗಳು ಸೇರಿದ್ದು ಹೇಗೆ ಎಂಬ ವಿಷಯ ಮಾತ್ರ ನಿಗೂಢವಾಗಿಯೇ ಉಳಿದಿತ್ತು.
ಝೇಂಗ್ಲಿ, ಪ್ರಾಣಿಜನ್ಯ ವೈರಸ್‌ಗಳು ಮನುಷ್ಯ ದೇಹವನ್ನು ಸೇರಿ ಮಾಡಿದ ಉಪದ್ವ್ಯಾಪಗಳ ಬಗ್ಗೆ ಇನ್ನಷ್ಟು ಹುಡುಕಾಟ ನಡೆಸಿದಾಗ ಹಿಂದೆ ನಡೆದ ಇನ್ನಷ್ಟು ಪ್ರಕರಣಗಳು ತಿಳಿದುಬಂದವು. 1994ರಲ್ಲಿ ಆಸ್ಟ್ರೇಲಿಯಾದಲ್ಲಿ ಹೆಂಡ್ರಾ ಎಂಬ ವೈರಸ್, ಕುದುರೆಯಿಂದ ಮನುಷ್ಯನ ದೇಹವನ್ನು ಹೊಕ್ಕು ವಿಪರೀತ ಪರಿಣಾಮ ಮಾಡಿತ್ತು. 1998ರಲ್ಲಿ ಮಲೇಷ್ಯಾದಲ್ಲಿ ಹಂದಿಗಳ ದೇಹದಿಂದ ಮನುಷ್ಯನ ದೇಹಕ್ಕೆ ಜಿಗಿದ ನಿಫಾ ವೈರಸ್, ಹಲವರನ್ನು ಬಲಿತೆಗೆದುಕೊಂಡಿತ್ತು. ಆ ಎರಡೂ ಪ್ರಕರಣಗಳಿಗೂ ಒಂದು ಸಾಮ್ಯತೆ ಇದ್ದಿದ್ದು ಝೇಂಗ್ಲಿ ಗಮನಕ್ಕೆ ಬಂತು. ಅದೇನೆಂದರೆ ಆ ಎರಡೂ ವೈರಸ್‌ಗಳೂ ಆ ಪ್ರಾಣಿಗಳ ದೇಹಕ್ಕೆ ಸೇರಿದ್ದು ಬಾವಲಿ ತಿಂದು ಬಿಟ್ಟ ಹಣ್ಣಿನ ಮೂಲಕ! ಅಂದರೆ ಕುದುರೆಯಾಗಲಿ, ಹಂದಿಯಾಗಲಿ ವೈರಸ್ ಮನುಷ್ಯದೇಹವನ್ನು ತಲುಪಲು ಆಯ್ದುಕೊಂಡ ದಾರಿಗಳಷ್ಟೇ. ಅವುಗಳ ಮೂಲ ಇರುವುದು ಬಾವಲಿಗಳಲ್ಲಿ ಎಂದು ಅರಿವಾಗಲು ಝೇಂಗ್ಲಿ ತಂಡಕ್ಕೆ ಹೆಚ್ಚಿನ ಸಮಯ ಬೇಕಾಗಲಿಲ್ಲ.
ಬಾವಲಿಗಳ ಜಾಡು ಹಿಡಿದು...
ಝೇಂಗ್ಲಿ ತಂಡ ಒಂದಿಷ್ಟು ಸಂಶೋಧನಾ ಸಲಕರಣೆಗಳ ಜೊತೆಗೆ ಬಾವಲಿಗಳ ಜಾತಕ ಜಾಲಾಡಲು ಹೊರಟೇಬಿಟ್ಟಿತು.
ಲ್ಯಾಬ್ ಬಿಟ್ಟು ಕಾಡಿನ ಜಾಡು ಹಿಡಿದಿದ್ದು ಮೊದಮೊದಲಿಗೆ ಮೋಜಿನ ಅನುಭವವನ್ನೇ ನೀಡಿತ್ತು. ಕಾಡು ಮೇಡು ಅಲೆಯುವುದು, ಗುಹೆ ಗಹ್ವರಗಳಲ್ಲಿ ಓಡಾಡುವುದು – ಇವೆಲ್ಲ ರಜೆಯ ಟ್ರೆಕ್ಕಿಂಗ್ ಕೊಡುವ ಖುಷಿಯನ್ನೇ ಅವಳಿಗೆ ನೀಡಿದ್ದವು. ಝೇಂಗ್ಲಿ ನೇತೃತ್ವದ ತಂಡ ಮೊದಲು ಹೋಗಿದ್ದು ಗುವಾಂಗ್‌ಕ್ಸಿಯ ರಾಜಧಾನಿ ನಾನ್ನಿಂಗ್ ಸಮೀಪದ ಕಾಡಿನಲ್ಲಿನ ಗುಹೆಗಳಿಗೆ. ಅಲ್ಲಿನ ಬಾವಲಿಗಳನ್ನು ಹಿಡಿದು ಅವುಗಳ ರಕ್ತ, ಮೂತ್ರಗಳ ಮಾದರಿಯನ್ನು ಸಂಗ್ರಹಿಸುವುದು ಅವರ ಈ ಸಾಹಸಯಾತ್ರೆಯ ಉದ್ದೇಶ. ಮೊದಲಿಗೆ ಸಾಕಷ್ಟು ಜನಪ್ರಿಯವಾಗಿರುವ, ಹೋಗಲು ಸುಲಭಸಾಧ್ಯವಾದ ಜಾಗಗಳಲ್ಲಿಯೇ ಅಲೆದಾಡಿದರು. ಹಾಗಾಗಿ ಅಕ್ಷರಶಃ ಪ್ರವಾಸದ ಖುಷಿಯೇ ಅವರಿಗೆ ಸಿಕ್ಕಿತ್ತು.
ಮೋಜು ತುಂಬ ಹೊತ್ತೇನೂ ಉಳಿಯಲಿಲ್ಲ. ಕೀಟಗಳನ್ನು ತಿನ್ನುವ ಲಾಳದ ಮೂಗಿನ ಬಾವಲಿಗಳು (Horseshoe Bats) ಹೇರಳವಾಗಿರುವುದು ಕಡಿದಾದ ಪ್ರದೇಶಗಳಲ್ಲಿನ ಉದ್ದಾನುಉದ್ದ ಗುಹೆಗಳಲ್ಲಿ. ಅಲ್ಲಿಗೆ ಸಾಗಲು ಸ್ಥಳೀಯರ ಮಾರ್ಗದರ್ಶನ ಬೇಕೇಬೇಕು. ಅವರ ಬಳಿ ದಾರಿ ಕೇಳಿಕೊಂಡು ಝೇಂಗ್ಲಿ ತಂಡ ತಾಸುಗಟ್ಟಲೆ ಕಡಿದಾದ ಗಹ್ವರಗಳಲ್ಲಿ, ಒಂದೆರಡು ಅಡಿಗಳಷ್ಟೇ ಅಗಲವಿದ್ದ ದಾರಿಗಳಲ್ಲಿ ತೆವಳಿಕೊಂಡು ಸಾಗಬೇಕಾಗುತ್ತಿತ್ತು. ಅಷ್ಟಾಗಿ ತುದಿಮುಟ್ಟಿದರೂ ಅವರನ್ನು ನೋಡಿ ಅಲ್ಲಿರುವ ಬಾವಲಿಗಳು ಹಾರಿಹೋಗಿಬಿಡುತ್ತಿದ್ದವು. ಇಷ್ಟೆಲ್ಲ ಕಷ್ಟಪಟ್ಟುಕೊಂಡು ಒಂದು ವಾರದ ಅವಧಿಯಲ್ಲಿ ಮೂವತ್ತು ಗುಹೆಗಳಲ್ಲಿ ಅಡ್ಡಾಡಿದ ಪ್ರಯಾಸದ ನಂತರ ಝೇಂಗ್ಲಿ ತಂಡಕ್ಕೆ ಸಿಕ್ಕಿದ್ದು ಬರೀ ಹತ್ತು ಹನ್ನೆರಡು ಬಾವಲಿಗಳು ಮಾತ್ರ. ಆದರೆ ತಮ್ಮ ಪಟ್ಟು ಬಿಟ್ಟುಕೊಡಲು ಮಾತ್ರ ಅವರು ಸಿದ್ಧರಿರಲಿಲ್ಲ. ತಾಳ್ಮೆಯಿಲ್ಲದಿದ್ದರೆ ಸಂಶೋಧನೆ ಸಾಧ್ಯವೇ?
ಕಾರ್ಯತಂತ್ರ ಹೀಗಿತ್ತು...
ಬಾವಲಿಗಳು ನಿಶಾಚರಿಗಳಲ್ಲವೇ? ಹಾಗಾಗಿ ಝೇಂಗ್ಲಿ ತಂಡ ಮುಸ್ಸಂಜೆಯ ಹೊತ್ತಿನಲ್ಲಿ ಒಂದು ಬಲೆಯೊಟ್ಟಿಗೆ ಬಾವಲಿಗುಹೆಯ ಬಾಗಿಲಲ್ಲಿ ಹಾಜರಾಗುತ್ತಿತ್ತು. ಗುಹೆಗೆ ಬಲೆಯನ್ನು ಕಟ್ಟಿ ಕಾಯುತ್ತಿತ್ತು. ರಾತ್ರಿಯಾಗುತ್ತಿದ್ದಂತೆಯೇ ಆಹಾರಕ್ಕಾಗಿ ಗುಹೆಯಿಂದ ಹೊರಬರುವ ಬಾವಲಿಗಳು ಬಲೆಯಲ್ಲಿ ಸಿಲುಕಿಕೊಳ್ಳುವುದನ್ನೇ ಕಾಯುತ್ತಿದ್ದರು. ಒಮ್ಮೆ ಬಲೆಯಲ್ಲಿ ಬಾವಲಿ ಸಿಕ್ಕಿಹಾಕಿಕೊಂಡಿದ್ದೇ ಸಂಶೋಧಕರು ಅದನ್ನು ಹಿಡಿದು ಅದರ ರಕ್ತ ಮತ್ತು ಜೊಲ್ಲಿನ ಮಾದರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ನಂತರ ಬಾವಲಿಯನ್ನು ಅಲ್ಲಿಯೇ ಬಿಟ್ಟು ಬಂದು ಒಂದು ಕೋಳಿನಿದ್ರೆ ಮಾಡಿ, ನಸುಕು ಹರಿಯುತ್ತಿದ್ದಂತೆ ಮತ್ತೆ ಗುಹೆಯ ಬಾಗಿಲಲ್ಲಿ ಹಾಜರಿರುತ್ತಿದ್ದರು. ರಾತ್ರಿಯಿಡೀ ಅಲ್ಲಿಯೇ ಇದ್ದ ಬಾವಲಿಯ ಮೂತ್ರ ಮತ್ತು ಹಿಕ್ಕೆಯ ಮಾದರಿಗಳನ್ನು ಸಂಗ್ರಹಿಸುವುದು ಬೆಳಗಿನ ಕೆಲಸ.
ಒಂದರ ಹಿಂದೆ ಒಂದು ಬಾವಲಿಗಳನ್ನು ಹಿಡಿದು ರಕ್ತ, ಜೊಲ್ಲು, ಮೂತ್ರ, ಹಿಕ್ಕೆಗಳ ಮಾದರಿಗಳನ್ನು ಸಂಗ್ರಹಿಸಿದರೂ ಕೊರೊನಾ ವೈರಸ್ ಪತ್ತೆಯಾಗುವ ಯಾವ ಸುಳಿವೂ ಕಾಣಿಸಲಿಲ್ಲ. ವಿಜ್ಞಾನಿಗಳ ತಂಡದಲ್ಲಿನ ಮೊದಮೊದಲ ಉತ್ಸಾಹ ನಿಧಾನಕ್ಕೆ, ಬೆಂಕಿಯಾರಿದ ಮೇಲೆ ಇಳಿಯುವ ಹಾಲಿನುಕ್ಕಿನಂತೆ ಕುಗ್ಗುತ್ತಾ ಹೋಯಿತು. ‘ಎಂಟು ತಿಂಗಳು ನಾವು ಪಟ್ಟ ಅಹರ್ನಿಶಿ ಪರಿಶ್ರಮವೆಲ್ಲ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಯಿತೇನೋ ಎಂಬ ನಿರಾಸೆ ನಮ್ಮನ್ನು ಕಾಡಲು ಶುರುವಾಗಿತ್ತು’ ಎಂದು ಝೇಂಗ್ಲಿ ಆಗಿನ ನಿರಾಶೆಯ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾಳೆ.
ಇನ್ನೆಷ್ಟು ದಿನ ಹೀಗೆ ಕಷ್ಟಪಟ್ಟರೂ ಅವರ ಶ್ರಮಕ್ಕೆ ಫಲ ಸಿಗುತ್ತದೆ ಎಂಬ ಭರವಸೆ ಇರಲಿಲ್ಲ. ಆದರೆ ಝೇಂಗ್ಲಿ ತನ್ನ ಪ್ರಯತ್ನವನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಲು ಸಿದ್ಧಳಿರಲಿಲ್ಲ. ‘ಒಂದೊಮ್ಮೆ ನಮ್ಮ ಯತ್ನಕ್ಕೆ ಯಶಸ್ಸು ಸಿಗದಿದ್ದರೂ ನಾವು ಮಹತ್ವವಾದದ್ದೇನೂ ಕಳೆದುಕೊಳ್ಳುವುದಿಲ್ಲ. ಆದರೆ ಒಂದೊಮ್ಮೆ ಯಶಸ್ಸು ಸಿಕ್ಕರೆ ಅದು ವೈದ್ಯಕೀಯ ಲೋಕದಲ್ಲಿ ದೊಡ್ಡ ಮೈಲಿಗಲ್ಲಾಗುತ್ತದೆ. ಹಾಗಾಗಿ ಫಲ ಸಿಗುತ್ತದೆಯೋ ಇಲ್ಲವೋ ಯೋಚಿಸುವುದು ಬೇಡ. ನಮ್ಮ ಪ್ರಯತ್ನವನ್ನು ಮುಂದುವರಿಸೋಣ’ ಎಂಬ ನಿರ್ಧಾರ ಮಾಡಿದಳು.
ದೂರದಾರಿಯಲ್ಲಿ ಸಣ್ಣ ತಿರುವು
ಝೇಂಗ್ಲಿ ಮಾಡಿದ ನಿರ್ಧಾರ ತಪ್ಪಾಗಿರಲಿಲ್ಲ. ಅವಳ ನಿರೀಕ್ಷೆ ಮೀರಿ ಅದು ಫಲಕೊಟ್ಟಿತು.
ರೋಗಕಾರಕ ಕೊರೊನಾ ವೈರಸ್ ಬಾವಲಿಗಳ ದೇಹದಲ್ಲಿರುತ್ತವೆ. ಯಾವುದೋ ಆಗಂತುಕ ವೈರಸ್, ನಮ್ಮ ದೇಹವನ್ನು ಅನಧಿಕೃತವಾಗಿ ಪ್ರವೇಶಿಸಿತೆಂದರೆ ಅದರ ವಿರುದ್ಧ ಹೋರಾಡುವ ಪ್ರತಿಕಾಯಗಳೂ ತಂತಾನೆಯೇ ದೇಹದೊಳಗೆ ಸೃಷ್ಟಿಯಾಗುತ್ತದೆ. ಆ ಪ್ರತಿಕಾಯಗಳು ಆಗಂತುಕ ವೈರಸ್ ವಿರುದ್ಧ ಹೊಡೆದಾಡಿ ಕೊಂದು ಹಾಕುತ್ತವೆ. ಆ ಯುದ್ಧದಲ್ಲಿ ಪ್ರತಿಕಾಯಗಳು ಸೋತುಹೋದರೆ ಅಥವಾ ದೇಹದೊಳಗೆ ಪ್ರವೇಶಿಸಿದ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಸೃಷ್ಟಿಮಾಡಲು ನಮ್ಮ ದೇಹವ್ಯವಸ್ಥೆಗೆ ಸಾಧ್ಯವಾಗದೇ ಹೋದರೆ ಆಗ ಆ ವೈರಸ್‌ಗಳೇ ಅಟ್ಟಹಾಸಗೈದು ಮಾರಣಾಂತಿಕವಾಗುತ್ತವೆ. ಸಾರ್ಸ್ ವಿಷಯದಲ್ಲಿ, ಈಗ ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ‘ಕೋವಿಡ್ 19’ ವಿಷಯದಲ್ಲಿ ಆಗಿರುವುದೂ ಅದೇ. ಆದರೆ ಸಾರ್ಸ್ ಬಾವಲಿಗಳಿಂದ ಬಂದಿದೆ ಅಂದರೆ ಆ ಬಾವಲಿಗಳ ದೇಹದಲ್ಲಿಯಾದರೂ ಅದರ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು ಸೃಷ್ಟಿಯಾಗಿರಬೇಕಲ್ಲವೇ? ಝೇಂಗ್ಲಿ ಮತ್ತವಳ ತಂಡ ಹುಡುಕುತ್ತಿದ್ದುದೂ ಹಾಗೆ ತನ್ನ ದೇಹಕ್ಕೆ ಬಂದ ಕೊರೊನಾ ವೈರಸ್ ವಿರುದ್ಧ ಹೋರಾಡಬಲ್ಲ ಸಶಸ್ತ್ರ ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿಕೊಂಡ ಬಾವಲಿಯನ್ನೇ. ಕೊನೆಗೂ ಅವರ ಹುಡುಕಾಟಕ್ಕೆ ಒಂದು ತಾತ್ಕಾಲಿಕ ಯಶಸ್ಸು ಸಿಕ್ಕಿತ್ತು.
ಲಾಳದ ಮೂಗಿನ ಬಾವಲಿಗಳು (Horseshoe Bat) ಪ್ರಭೇದಕ್ಕೆ ಸೇರಿದ ಮೂರು ಮಾದರಿಗಳಲ್ಲಿ ಸಾರ್ಸ್ ವೈರಸ್‌ನ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು (ಆ್ಯಂಡಿಬಾಡೀಸ್) ಪತ್ತೆಯಾದವು! ಈ ವರದಿ ಝೇಂಗ್ಲಿ ತಂಡದಲ್ಲಿಯಷ್ಟೇ ಅಲ್ಲ, ಸಾರ್ಸ್ ವೈರಸ್ ದಾಳಿಗೆ ಔಷಧ ಕಂಡುಹಿಡಿಯಲು ಶತಪ್ರಯತ್ನ ಮಾಡುತ್ತಿದ್ದ ವೈದ್ಯಕೀಯ ಲೋಕಕ್ಕೇ ಮಿಂಚಿನ ಸಂಚಾರ ಹುಟ್ಟಿಸುವ ಸಂಗತಿಯಾಗಿತ್ತು. ಕೊರೊನಾ ವೈರಸ್‌ಗಳು ಯಾವಾಗಲೂ ಬಾವಲಿಗಳ ದೇಹದಲ್ಲಿ ಇರುವುದಿಲ್ಲ. ಅವು ಒಂದಿಷ್ಟು ಸಮಯ ಮತ್ತು ನಿರ್ದಿಷ್ಟ ಕಾಲಮಾನದಲ್ಲಿ ಮಾತ್ರವೇ ಇರುತ್ತವೆ. ಆದರೆ ಆ ವೈರಸ್‌ಗಳ ವಿರುದ್ಧ ಹೋರಾಟಕ್ಕೆಂದು ರೂಪುಗೊಂಡ ಸಶಸ್ತ್ರ ಪ್ರತಿಕಾಯ ಪಡೆ ಮಾತ್ರ ಒಂದು ವಾರದಿಂದ ವರ್ಷಗಳ ಕಾಲ ಉಳಿದುಕೊಳ್ಳುತ್ತವೆ ಎಂದೂ ಅವರಿಗೆ ಗೊತ್ತಾಯಿತು. ಹೀಗಾಗಿಯೇ ಅವರು ಎಂಟು ತಿಂಗಳಿಂದ ನಡೆಸುತ್ತಿದ್ದ ಶೋಧನೆಗೆ ಫಲ ದೊರೆತಿರಲಿಲ್ಲ. ಆದರೆ ಇದು ಅವರ ಸಂಶೋಧನೆಯ ದಾರಿಯಲ್ಲಿನ ಅಂತಿಮ ಹಂತವೇನೂ ಆಗಿರಲಿಲ್ಲ. ಯಾಕೆಂದರೆ ಬಾವಲಿಗಳ ದೇಹದಲ್ಲಿರುವ ಪ್ರತಿಕಾಯ ಪಡೆ ಮನುಷ್ಯ ದೇಹದಲ್ಲಿಯೂ ಅಷ್ಟೇ ಸಮರ್ಥವಾಗಿ ಯುದ್ಧಕ್ಕೆ ನಿಲ್ಲುತ್ತವೆ; ಸಾರ್ಸ್ ವೈರಸ್ ವಿರುದ್ಧ ಹೋರಾಡಿ ಗೆಲ್ಲುತ್ತವೆ ಎಂಬ ಯಾವ ಗ್ಯಾರಂಟಿಯೂ ಇರಲಿಲ್ಲ. ಆದರೆ ಈಗ ಸಿಕ್ಕ ಪ್ರತಿಕಾಯಗಳು ಅವರ ದಾರಿಗೆ ಬಹುಮುಖ್ಯ ತಿರುವನ್ನಂತೂ ನೀಡಿದ್ದವು.
ಸಂಶೋಧನೆಯ ದಾರಿಯಲ್ಲಿ ಸಿಗುವ ಸಣ್ಣ ಸುಳಿವು ಕೂಡ ಶೋಧಕರಿಗೆ ಮನಸ್ಸಿನ ಚೈತನ್ಯವನ್ನು ಇಮ್ಮಡಿಗೊಳಿಸುವ ಇಂಧನವಾಗಿ ಪರಿಣಮಿಸುತ್ತದೆ. ಇಲ್ಲಿ ಆಗಿದ್ದೂ ಅದೇ. ಝೇಂಗ್ಲಿ ಮತ್ತವರ ತಂಡಕ್ಕೆ ಆ ಚಿಕ್ಕ ಗೆಲುವು ಸಾಕಾಗಿತ್ತು. ಮತ್ತೆ ಅದೇ ದಾರಿಯಲ್ಲಿ ಮುಂದುವರಿಯಲು ಉತ್ಸಾಹ ತುಂಬಿಕೊಂಡು ಸಿದ್ಧರಾದರು.
ವೈರಸ್‌ನ ಮೂಲದ ಕುರಿತ ಇನ್ನಷ್ಟು ಸುಳಿವಿಗಾಗಿ ಝೇಂಗ್ಲಿ ತಂಡ ಬಾವಲಿ ಗುಹೆಗಳನ್ನರಸಿಕೊಂಡು ಕಣಿವೆಗಳನ್ನೂ, ಗುಡ್ಡಗಳನ್ನೂ ಹತ್ತಿಳಿಯಲು ಶುರುಮಾಡಿತು. ಸುಮಾರು ಹತ್ತು ಹನ್ನೆರಡು ಪ್ರದೇಶಗಳಲ್ಲಿ ಸುತ್ತಾಡಿದ ನಂತರ ಅವರು ನಿಂತುಕೊಂಡಿದ್ದು ಯುನ್ನಾನ್‌ನ ರಾಜಧಾನಿ ಕುನ್‌ಮಿಂಗ್‌ನ ಹೊರವಲಯದ ಶಿಟೊಯು ಗುಹೆಯ ಎದುರಿನಲ್ಲಿ. ಈಗ ಅವರು ಮೊದಲಿನ ಹಾಗೆ ಒಂದೇಸಮನೆ ಗುಹೆಗಳನ್ನು ಹೊಕ್ಕು ಬಾವಲಿಗಳನ್ನು ಹಿಡಿದು ಮಾದರಿಗಳನ್ನು ಸಂಗ್ರಹಿಸಿ ಶೋಧನೆ ಮಾಡುವ ಹಾಗಿರಲಿಲ್ಲ. ಅಂಥ ಪ್ರಯತ್ನಗಳೆಲ್ಲ ಹಿಂದೆಯೇ ವ್ಯರ್ಥವಾಗಿದ್ದವು. ಅಲ್ಲದೇ ವರ್ಷವಿಡೀ ವೈರಸ್‌ಗಳು ಬಾವಲಿಗಳ ದೇಹಗಳಲ್ಲಿ ಇರುವುದಿಲ್ಲ ಎಂಬುದೂ ಅವರಿಗೆ ತಿಳಿದಿತ್ತು. ಹಾಗಾಗಿ ನಿರ್ದಿಷ್ಟ ಗುಹೆಯಲ್ಲಿನ ಬಾವಲಿಗಳನ್ನು ವರ್ಷದ ಬೇರೆ ಬೇರೆ ಕಾಲಗಳಲ್ಲಿ ಪರೀಕ್ಷೆಗೆ ಒಳಪಡಿಸಲು ತಂಡ ನಿರ್ಧರಿಸಿತು. ಆ ಮಾದರಿಯಲ್ಲಿ ಒಂದೆರಡಲ್ಲ, ಸತತ ಐದು ವರ್ಷಗಳ ಕಾಲ ವಿವಿಧ ಕಾಲಮಾನಗಳಲ್ಲಿ ಅಲ್ಲಿನ ಬಾವಲಿಗಳ ರಕ್ತ, ಜೊಲ್ಲು, ಹಿಕ್ಕೆ, ಮೂತ್ರಗಳ ಮಾದರಿಗಳನ್ನು ಸಂಗ್ರಹಿಸಿತು.
ಅವರ ಪ್ರಯತ್ನ ಹುಸಿಹೋಗಲಿಲ್ಲ. ನೂರಾರು ರೀತಿಯ ಬಾವಲಿಜನ್ಯ ಕೊರೊನಾ ವೈರಸ್‌ಗಳು ಅವರ ಪ್ರಯೋಗ ಶೀಶೆಗಳಲ್ಲಿ ಬಂಧಿಯಾದವು. ಜೀವವೈವಿಧ್ಯದ ಹೊಸ ಲೋಕವೇ ಅವರೆದುರು ತೆರೆದುಕೊಂಡಿತ್ತು. ಅವರು ಪತ್ತೆಹಚ್ಚಿದ ಬಹುತೇಕ ವೈರಸ್‌ಗಳು ನಿರುಪದ್ರವಿಗಳು. ಆದರೆ ಅವುಗಳಲ್ಲಿ ಹನ್ನೆರಡು ಬಗೆಯವು ಮಾತ್ರ ‘ಸಾರ್ಸ್’ ಗುಂಪಿಗೇ ಸೇರಿದ ಪ್ರಾಣಾಂತಿಕ ವೈರಸ್‌ಗಳಾಗಿದ್ದವು. ಸಾರ್ಸ್‌ಗೆ ನೀಡಲಾಗುವ ಲಸಿಕೆ, ಔಷಧಗಳಿಗೂ ಜಗ್ಗದೆ ಮನುಷ್ಯನ ಶ್ವಾಸಕೋಶವನನ್ನು ಚಿಂದಿ ಮಾಡಬಲ್ಲ ರಕ್ಕಸವೈರಸ್‌ಗಳೂ ಅದರಲ್ಲಿದ್ದವು!
ದೇಹಗಳೇ ಮಿಶ್ರಣಕುಂಡಗಳು!
ಶಿಟೊಯು ಗುಹೆ ಅಷ್ಟೇ ಅಲ್ಲದೆ, ಇನ್ನೂ ಹಲವು ಕಡೆಗಳಲ್ಲಿನ ಬಾವಲಿಗಳಲ್ಲಿರುವ ವೈರಸ್‌ಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿದ ಅನುಭವ ಝೇಂಗ್ಲಿಗಿದೆ. ಅವರ ಪ್ರಕಾರ, ಬೇರೆ ಬೇರೆ ಬಗೆಯ ವೈರಸ್‌ಗಳು ಒಂದು ಪ್ರಮಾಣದಲ್ಲಿ ಮಿಶ್ರಗೊಂಡರೆ ಅದರಿಂದ ಭಯಾನಕ ರೋಗಾಣುಗಳು ಹುಟ್ಟಿಕೊಳ್ಳುತ್ತವೆ. ಜೀವಿಗಳ ದೇಹವೇ ಅಂಥ ವೈರಸ್ ಮಿಶ್ರಣದ ಕುಂಡಗಳಾಗಬಹುದು. ಹಾಗೆಯೇ ಮತ್ಯಾವುದೋ ಪ್ರಮಾಣದ ಮಿಶ್ರಣದಿಂದ ಆ ವೈರಸ್‌ಗಳ ವಿರುದ್ಧ ಹೋರಾಡುವ ಪ್ರತಿಕಾಯಗಳೂ ಸೃಷ್ಟಿಯಾಗಬಹುದು.
ಆ ಸುಳಿವಿನ ಬೆನ್ನತ್ತಿದ ಝೇಂಗ್ಲಿ ತಂಡ ಶಿಟೊಯು ಗುಹೆಯ ಸಮೀಪದ ಹಳ್ಳಿಗಳನ್ನು ಪ್ರವೇಶಿಸಿತು. ಶಿಟೊಯು ಗುಹೆಯ ಸಮೀಪದ ಹಳ್ಳಿಗಳಿಗೆ ಹೊಂದಿಕೊಂಡ ಹಾಗೆ ಇರುವ ಸೊಂಪಾದ ಗುಡ್ಡಗಳು ತಮ್ಮಲ್ಲಿನ ಗುಲಾಬಿ, ಕಿತ್ತಳೆ, ವಾಲ್‌ನಟ್ ಮತ್ತು ಹಾಥರ್ನ್ ಹಣ್ಣುಗಳಿಗಾಗಿ ಜನಪ್ರಿಯ. 2015ರಲ್ಲಿ ಝೇಂಗ್ಲಿ ತಂಡ ಆ ಪ್ರದೇಶದ ನಾಲ್ಕು ಹಳ್ಳಿಗಳಲ್ಲಿ ಅಡ್ಡಾಡಿ 200 ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿತು. ಆ 200 ಜನರಲ್ಲಿ ಮೂವರ ರಕ್ತಮಾದರಿಗಳಲ್ಲಿ ಸಾರ್ಸ್ ವಿರುದ್ಧ ಹೋರಾಡುವ ಪ್ರತಿಕಾಯಗಳು ಪತ್ತೆಯಾದವು! ಸಾಮಾನ್ಯವಾಗಿ ಸಾರ್ಸ್ ವೈರಸ್ ದೇಹವನ್ನು ಹೊಕ್ಕಾಗ ಅದರ ವಿರುದ್ಧ ಹೋರಾಡಲು ಪ್ರತಿಕಾಯಗಳು ಸೃಷ್ಟಿಯಾಗುತ್ತವೆ. ಇಲ್ಲವೇ ಇನ್ಯಾವುದೋ ಪ್ರಾಣಿಗಳ ದೇಹದಲ್ಲಿನ ಪ್ರತಿಕಾಯಗಳು ಇವರ ದೇಹವನ್ನು ಪ್ರವೇಶಿಸಿರುತ್ತವೆ. ಆದರೆ ಅವೆರಡೂ ಸಾಧ್ಯತೆಗಳೂ ಅಲ್ಲಿರಲಿಲ್ಲ. ಆ ವ್ಯಕ್ತಿಗಳಲ್ಲಿ ಯಾವತ್ತಿಗೂ ಸಾರ್ಸ್ ಅಥವಾ ನ್ಯುಮೋನಿಯಾ ಲಕ್ಷಣಗಳು ಕಾಣಿಸಿಕೊಂಡಿರಲೇ ಇಲ್ಲ. ಹಾಗೂ ಅವರು ಬಾವಲಿಗಳ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯೂ ಇರಲಿಲ್ಲ.
ಇದಕ್ಕೂ ಮೂರು ವರ್ಷಗಳ ಹಿಂದೆ ಝೇಂಗ್ಲಿ ತಂಡಕ್ಕೆ ಯುನ್ನಾನ್ ಸಮೀಪದ ಮೊಜಿಯಾಂಗ್ ಕೌಂಟಿಯಿಂದ ಬುಲಾವ್ ಬಂದಿತ್ತು. ಅಲ್ಲಿ ಆರು ಮಕ್ಕಳು ನ್ಯುಮೋನಿಯಾವನ್ನು ಹೋಲುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರು. ಆ ಕಾಯಿಲೆ ಜಾಡು ಹಿಡಿದು ಝೇಂಗ್ಲಿ ತಂಡ ಹೊರಟಿದ್ದೂ ಆ ಊರಿನ ಸಮೀಪದ ಬಾವಲಿ ಗುಹೆಗೇ. ಅಲ್ಲಿನ ಬಾವಲಿಗಳ ದೇಹದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷಿಸಿದಾಗ ಆರು ಬಗೆಯ ಬಾವಲಿಗಳ ದೇಹದಲ್ಲಿ ಬೇರೆ ಬೇರೆ ಬಗೆಯ ಕೊರೊನಾ ವೈರಸ್‌ಗಳ ಸಮೂಹವೇ ಪತ್ತೆಯಾಗಿತ್ತು. ಹಲವು ಬಾವಲಿಗಳ ದೇಹದಲ್ಲಿ ಬೇರೆ ಬೇರೆ ಬಗೆಯ ವೈರಸ್‌ಗಳು ಸೇರಿಕೊಂಡು ಬಾವಲಿ ದೇಹವನ್ನೇ ಕಾರ್ಖಾನೆಯನ್ನಾಗಿಸಿಕೊಂಡು ಹೊಸ ರೀತಿಯ ವೈರಸ್‌ಗಳನ್ನು ಹುಟ್ಟುಹಾಕುವುದರಲ್ಲಿ ಮಗ್ನವಾಗಿದ್ದವು.
ತಪ್ಪು ನಮ್ಮದೇ...
ಕಾಡಿನಲ್ಲಿರುವ ಆ ವೈರಸ್‌ಗಳು ಈಗ ಪದೇಪದೇ ಮನುಷ್ಯನ ದೇಹವನ್ನು ಹೊಕ್ಕು ಪ್ರಳಯಾಂತಕವಾಗುತ್ತಿರುವುದಕ್ಕೆ ಮುಖ್ಯ ಕಾರಣಗಳು ಏನು? ತಮ್ಮ ಹದಿನಾರು ವರ್ಷಗಳ ಸಂಶೋಧನೆ ಮತ್ತು ಸಾಮಾಜಿಕ ಬದಲಾವಣೆಗಳ ಅವಲೋಕನದ ಆಧಾರದ ಮೇಲೆ ಝೇಂಗ್ಲಿ ಹೇಳುವುದು – ಇದಕ್ಕೆಲ್ಲ ಮನುಷ್ಯನೇ ಕಾರಣ.
‘ವಿಪರೀತವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ಅದರ ಪರಿಣಾಮವಾಗಿ ನಡೆಯುತ್ತಿರುವ ಅರಣ್ಯಪ್ರದೇಶಗಳ ಒತ್ತುವರಿ, ಅನಿರೀಕ್ಷಿತ ಮತ್ತು ಅನುಚಿತವಾಗಿ ಭೂಪ್ರದೇಶಗಳಲ್ಲಿ ಆಗುತ್ತಿರುವ ಬದಲಾವಣೆ, ಲೈವ್‌ಸ್ಟಾಕ್ ಎಂಬ ಅಂತರರಾಷ್ಟ್ರೀಯ ಮಾರುಕಟ್ಟೆಯ ವಹಿವಾಟುಗಳು, ದೇಶದ ಒಳಗೆ ಮತ್ತು ಜಾಗತಿಕವಾಗಿ ತ್ವರಿತಗತಿಯಲ್ಲಿ ಏರುತ್ತಿರುವ ಪ್ರಯಾಣಗಳು – ಈ ಎಲ್ಲವೂ ಪ್ರಕೃತಿಯ ಬಹುಸೂಕ್ಷ್ಮ ವಲಯಗಳ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತಿವೆ. ಅದರ ಪರಿಣಾಮವಾಗಿಯೇ ಹೊಸ ಹೊಸ ಸಾಂಕ್ರಾಮಿಕ ರೋಗಾಣುಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಅವರು ವಿವರಿಸುತ್ತಾರೆ. ಈಗೊಂದು ವರ್ಷದ ಹಿಂದೆ ಝೇಂಗ್ಲಿ ಮತ್ತವಳ ತಂಡ ಕೊರೊನಾ ವೈರಸ್‌ಗಳ ಮತ್ತು ಅವುಗಳ ಅಪಾಯಗಳ ಕುರಿತು ಒಂದು ವಿಶ್ಲೇಷಣಾತ್ಮಕ ಲೇಖನವನ್ನು ಪ್ರಕಟಿಸಿದ್ದರು. ಅದರಲ್ಲಿ ಅವರು ‘ಬಾವಲಿಜನ್ಯ ಕೊರೊನಾ ವೈರಸ್‌ಗಳು ಮುಂದೆಯೂ ಮನುಷ್ಯನ ದೇಹದಲ್ಲಿ ಪ್ರತ್ಯಕ್ಷವಾಗಿ ಅನಾಹುತ ಉಂಟುಮಾಡುವ ಅಪಾಯವಿದೆ’ ಎಂಬ ಎಚ್ಚರಿಕೆಯನ್ನೂ ನೀಡಿದ್ದರು!
ಡಿಸೆಂಬರ್ 30ರಂದು ವುಹಾನ್‌ಗೆ ಬಂದಿಳಿದ ಝೇಂಗ್ಲಿ ಮೊದಲು ತನ್ನ ತಂಡದ ಜೊತೆಗೆ ಸಭೆ ಸೇರಿದಳು. ಎಲ್ಲರ ಮನಸಲ್ಲೂ ಆತಂಕ ಮನೆಮಾಡಿತ್ತು. ಆದರೆ ಆತಂಕ ಯಾವ ದಾರಿಯನ್ನೂ ತೋರುವುದಿಲ್ಲ ಎಂದು ಝೇಂಗ್ಲಿಗೆ ಚೆನ್ನಾಗಿಯೇ ತಿಳಿದಿತ್ತು. ತಾವೀಗ ಮನುಷ್ಯಕುಲವನ್ನು ಭೀಕರವಾಗಿ ಬೇಟೆಯಾಡಲು ಸನ್ನದ್ಧವಾಗಿ ನಿಂತಿರುವ ಮೃತ್ಯುಸ್ವಪ್ನದೊಂದಿಗೆ ಹೋರಾಡಲು ಹೊರಟಿದ್ದೇವೆ ಎಂಬ ಅರಿವು ಮೂಡಿತ್ತು. ತನ್ನ ತಂಡದವರಲ್ಲಿ ಧೈರ್ಯ ತುಂಬಿ ಹೊಸ ರೀತಿಯ ವೈರಸ್‌ಗಳನ್ನು ಪರೀಕ್ಷೆ ಮಾಡಲು ನಿರ್ಧರಿಸಿದಳು. ಆರಂಭಿಕ ಹಂತದ ಪರೀಕ್ಷೆ ಅವಳ ಮನಸಿನಲ್ಲಿನ ಅನುಮಾನದ ಬೆಂಕಿಗೆ ತುಪ್ಪ ಸುರಿಯುವ ಹಾಗೆಯೇ ಇತ್ತು. ಹೊಸದಾಗಿ ಪತ್ತೆಯಾದ ವೈರಸ್‌ಗಳ ಸಾಮಾನ್ಯ ಲಕ್ಷಣಗಳು, ಝೇಂಗ್ಲಿ ತಂಡ ಶಿಟೊಯು ಗುಹೆಗಳಿಂದ ತಂದು ಸಂಗ್ರಹಿಸಿಟ್ಟಿದ್ದ ಅಪಾಯಕಾರಿ ಕೊರೊನಾ ವೈರಸ್‌ಗಳಿಗೂ ಸಾಮ್ಯತೆ ಇತ್ತು! ಈಗಲೂ ಝೇಂಗ್ಲಿ ಧೃತಿಗೆಡಲಿಲ್ಲ.
ತನ್ನ ತಂಡದವರಿಗೆ ವೈರಸ್ ಪರೀಕ್ಷೆಯನ್ನು ಪುನರಾವರ್ತಿಸುವಂತೆ ಸೂಚನೆ ನೀಡಿದಳು. ಜೊತೆಗೆ ಮತ್ತೊಂದು ಲ್ಯಾಬೊರೇಟರಿಗೂ ವೈರಸ್‌ಗಳ ಸ್ಯಾಂಪಲ್ ಕಳಿಸಿ ಅವುಗಳ ಪೂರ್ತಿ ಜೀನ್ಸ್ ಪರೀಕ್ಷೆ ಮಾಡುವಂತೆ ಸೂಚಿಸಿದಳು. ಇಷ್ಟಾದರೂ ಅವಳ ಮನಸ್ಸಿನ ಆತಂಕ ಶಮನವಾಗಿರಲಿಲ್ಲ. ತನ್ನ ಸ್ವಂತ ಲ್ಯಾಬೊರೇಟರಿಯಲ್ಲಿನ ಹಳೆಯ ಕಡತಗಳನ್ನು ತೆಗೆದು ಪರೀಕ್ಷಿಸತೊಡಗಿದಳು. ಯಾವುದಾದರೂ ಸಂಶೋಧನಾ ಸಲಕರಣೆ, ರಾಸಾಯನಿಕಗಳು ದುರುಪಯೋಗವಾದ ಬಗ್ಗೆ, ಪ್ರಯೋಗದ ತ್ಯಾಜ್ಯಗಳ ವಿಲೇವಾರಿಯಲ್ಲಿ ಅಪರಾತಪರಾ ಆದ ಬಗ್ಗೆ ಉಲ್ಲೇಖಗಳಿವೆಯೇ ಎಂದು ತಿಳಿದುಕೊಳ್ಳುವುದೇ ಅವಳ ಉದ್ದೇಶವಾಗಿತ್ತು.
‘ಅವು ಅತ್ಯಂತ ಉದ್ವಿಗ್ನ ದಿನಗಳು. ವಾರಗಳ ಕಾಲ ಕಣ್ಣೆವೆ ಮುಚ್ಚುವುದೂ ನನಗೆ ಸಾಧ್ಯವಾಗುತ್ತಿರಲಿಲ್ಲ. ಮನಸ್ಸು ನಿರಂತರವಾಗಿ ಚಡಪಡಿಸುತ್ತಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು. ಝೇಂಗ್ಲಿ ತುಸು ಸಮಾಧಾನದ ಉಸಿರು ಬಿಟ್ಟಿದ್ದು ವೈರಸ್‌ಗಳ ಪರೀಕ್ಷೆಗಳ ವರದಿ ಬಂದಾಗಲೇ. ‘ಆ ವೈರಸ್‌ಗಳು ಈಗಾಗಲೇ ಲ್ಯಾಬೊರೇಟರಿಯಲ್ಲಿ ಸಂಗ್ರಹಿಸಿದ್ದ ಯಾವ ವೈರಸ್‌ಗಳಿಗೂ ಹೊಂದಾಣಿಕೆ ಆಗುವುದಿಲ್ಲ’ ಎಂದು ವರದಿ ಬಂದಿತ್ತು. ಅಂದರೆ ಇದು ತಮ್ಮ ಲ್ಯಾಬೊರೇಟರಿಯಿಂದ ಸೋರಿಕೆಯಾಗಿದ್ದಲ್ಲ ಎಂಬ ಸಂಗತಿಯೇ ಅವಳ ಮನಸ್ಸಿನ ಬೇಗುದಿಯನ್ನು ಎಷ್ಟೋ ಶಮನ ಮಾಡಿತ್ತು.
ಅಷ್ಟರಲ್ಲಾಗಲೇ ಒಂದೇ ರೀತಿಯ ರೋಗಲಕ್ಷಣಗಳಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗಲಾರಂಭಿಸಿದ್ದರು. ಅವರ ರಕ್ತದ ಮಾದರಿ, ಪಾಲಿಮೆರೀಸ್ ಚೈನ್ ರಿಯಾಕ್ಷನ್ ಅನಾಲಿಸಿಸ್, ಜೀನ್ಸ್‌ಗಳ ಅಧ್ಯಯನ, ಪ್ರತಿಕಾಯಗಳ ಪರೀಕ್ಷೆ ಎಲ್ಲವನ್ನೂ ಮಾಡಿದ ವುಹಾನ್ ವಿಜ್ಞಾನಿಗಳ ತಂಡ, ಜನವರಿ 7ರಂದು ‘ಹೊಸ ಬಗೆಯ ಮಾರಣಾಂತಿಕ ವೈರಸ್ ಕಾಣಿಸಿಕೊಂಡಿದೆ’ ಎಂದು ಘೋಷಣೆ ಮಾಡಿ ‘ಸಾರ್ಸ್–ಕೊವ್–2’ (SARS-CoV-2) ಎಂದು ಕರೆದರು. ಅಲ್ಲಿಂದ ಮುಂದೆ ನಡೆದಿದ್ದು ನಮಗೆಲ್ಲ ಗೊತ್ತೇ ಇದೆ. ಕೊರೊನಾ ಮಾರಿ ನಮ್ಮ ಮನೆಬಾಗಿಲಲ್ಲಿಯೂ ಕಾಯುತ್ತ ಕೂತಿದೆ.
ಫೆ. 24ರಂದು ವನ್ಯಪ್ರಾಣಿಗಳ ಸಾಗಣೆಯ ಮೇಲೆ ಚೀನಾ ನಿಷೇಧ ಹೇರಿದೆ. ಇದರಿಂದ ಸುಮಾರು 57.24 ಲಕ್ಷ ಕೋಟಿ ರೂಪಾಯಿಗಳ ಅಂತರರಾಷ್ಟ್ರೀಯ ವಹಿವಾಟಿಗೆ ಕಡಿವಾಣ ಬಿದ್ದಂತಾಗಿದೆ. ಸುಮಾರು 1.4 ಕೋಟಿ ಜನರು ಕೆಲಸವನ್ನು ಕಳೆದುಕೊಂಡಿದ್ದಾರೆ. ಈ ಕ್ರಮ ವೈರಸ್ ಹರಡುವಿಕೆಯನ್ನು ತಡೆಯಲು ಮುಖ್ಯ ಪಾತ್ರವಹಿಸುತ್ತದೆಯೇ?
‘ವನ್ಯಪ್ರಾಣಿಗಳ ಮಾರಾಟ ಎನ್ನುವುದು ಸಮಸ್ಯೆಯ ಒಂದು ಭಾಗವಷ್ಟೇ. ಆ ಚಟುವಟಿಕೆಗಳು ಸ್ಥಗಿತ ಆದ ತಕ್ಷಣ ವೈರಸ್‌ಗಳಿಂದ ನಾವು ಸುರಕ್ಷಿತವಾಗಿಬಿಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ’ ಎನ್ನುತ್ತಾರೆ ಝೇಂಗ್ಲಿ. ತಮ್ಮ ಮಾತಿಗವರು ನಿದರ್ಶನವನ್ನೂ ಕೊಡುತ್ತಾರೆ. 2016ರ ಅಂತ್ಯದಲ್ಲಿ ಗುವಾಂಗ್‌ಡೊಂಗ್‌ನ ಕ್ವಿಂಗ್ ಯುವಾಂಗ್‌ನ ನಾಲ್ಕು ಫಾರ್ಮುಗಳಲ್ಲಿ ಹಂದಿಗಳಲ್ಲಿ ತೀವ್ರವಾದ ಭೇದಿ ಮತ್ತು ವಾಂತಿ ಕಾಣಿಸಿಕೊಂಡಿತು. ಆ ಪ್ರದೇಶ ಸಾರ್ಸ್ ವೈರಸ್ ಮೊದಲು ಕಾಣಿಸಿಕೊಂಡ ಜಾಗದಿಂದ 60 ಕಿಲೋಮೀಟರ್ ದೂರದಲ್ಲಿತ್ತು. ಅತಿಯಾದ ವಾಂತಿ ಮತ್ತು ಭೇದಿಯಿಂದ ಸುಮಾರು 25000 ಹಂದಿಗಳು ಸತ್ತವು. ಸ್ಥಳೀಯ ಪಶುವೈದ್ಯರಿಗೆ ಆ ಕಾಯಿಲೆಯ ಮೂಲ ಕಂಡುಹಿಡಿಯಲಾಗಲಿಲ್ಲ. ಶೀ ಝೇಂಗ್ಲಿ ಅವರಿಗೆ ಕರೆ ಹೋಯಿತು. ಝೇಂಗ್ಲಿ ಹೋಗಿ ಆ ಸ್ವೈನ್ ಅಕ್ಯೂಟ್ ಡಯೇರಿಯ ಸಿಂಡ್ರೋಮ್ (SADS) ವೈರಸ್‌ಗಳ ಪರೀಕ್ಷೆ ನಡೆಸಿದಾಗ, ಸಮೀಪದಲ್ಲಿನ ಬಾವಲಿ ಗುಹೆಯಲ್ಲಿ ದೊರಕಿದ ಕೊರೊನಾ ವೈರಸ್‌ಗಳಿಗೆ ಇರುವ ಸಾಮ್ಯತೆ ಬೆಳಕಿಗೆ ಬಂತು.
ಅದು ಮೊದಲೇನಲ್ಲ...
ಜಗತ್ತಿನಲ್ಲಿ ಬಾವಲಿಜನ್ಯ ವೈರಸ್‌ಗಳು ಮನುಷ್ಯದೇಹವನ್ನು ಸೇರಿ ಅನಾಹುತ ಮಾಡಿರುವುದು ಅದೇ ಮೊದಲ ಸಲವೇನಲ್ಲ. ಕಳೆದ 26 ವರ್ಷಗಳಲ್ಲಿ ಇಂಥ ಆರು ವೈರಸ್‌ಗಳು ಪ್ರತ್ಯಕ್ಷವಾಗಿ ಮನುಕುಲಕ್ಕೆ ಕಂಟಕ ತಂದೊಡ್ಡುವ ಮಾರಕ ಸೂಚನೆ ನೀಡಿದ್ದವು. 1994ರಲ್ಲಿ ಕಾಣಿಸಿಕೊಂಡಿದ್ದ ಹೆಂಡ್ರಾ ವೈರಸ್, 1998ರಲ್ಲಿ ಸುದ್ದಿಯಾಗಿದ್ದ ನಿಫಾ ವೈರಸ್, 2002ರಲ್ಲಿ ಅಷ್ಟಾಗಿ ಸುದ್ದಿಯಾಗದೆಯೇ ಕಾಣಿಸಿಕೊಂಡು ಮರೆಯಾಗಿದ್ದ ಮೆರ್ಸ್ (Middle East respiratory syndrome) ವೈರಸ್, 2012ರಲ್ಲಿ ವಿಶ್ವದ ಕೆಲಭಾಗಗಳನ್ನು ಕಂಗೆಡಿಸಿದ್ದ ಎಬೋಲಾ – ಈ ಎಲ್ಲವೂ ಬಾವಲಿಜನ್ಯ ವೈರಸ್‌ಗಳೇ.
ಹಾಗಾದರೆ ಬಾವಲಿಗಳು ಮನುಕುಲಕ್ಕೆ ಕಂಟಕವೇ? ಖಂಡಿತ ಅಲ್ಲ ಎನ್ನುತ್ತಾರೆ ಝೇಂಗ್ಲಿ. ‘ಬಾವಲಿಯಾಗಲಿ, ಇನ್ಯಾವುದೇ ಜೀವಿಗಳಾಗಲಿ ಅವಷ್ಟಕ್ಕೆ ಅವು ಅಪಾಯಕಾರಿಯೂ ಅಲ್ಲ, ಸಮಸ್ಯೆಯ ಮೂಲವೂ ಅಲ್ಲ. ಹಾಗೆ ನೋಡಿದರೆ ಬಾವಲಿಗಳು ನಮ್ಮ ಜೀವಸರಪಣಿಗೆ ಅತ್ಯಗತ್ಯ ಜೀವಿಗಳು. ಜೀವವೈವಿಧ್ಯವನ್ನು ಅವು ಪೋಷಿಸುತ್ತವೆ. ಕೀಟಗಳನ್ನು ತಿಂದು, ವಿವಿಧ ಬಗೆಯ ಸಸ್ಯಗಳಿಗೆ ಪರಾಗಸ್ಪರ್ಶ ಮಾಡಿ ನಮ್ಮ ಪರಿಸರವ್ಯವಸ್ಥೆ ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತವೆ. ಸಮಸ್ಯೆ ಉಂಟಾಗುವುದು ನಾವು ಅವುಗಳ ಬದುಕಿನಲ್ಲಿ, ಜೀವನಕ್ರಮದಲ್ಲಿ ಹಸ್ತಕ್ಷೇಪ ಮಾಡಿದಾಗ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಝೇಂಗ್ಲಿ.
ಮುಂದಿರುವುದು ಮಹಾವಿಪತ್ತು
ಪ್ರಕೃತಿಯ ಜೀವಸರಪಳಿಯನ್ನು ಅನೈತಿಕವಾಗಿ ಕತ್ತರಿಸಿದರೆ ಏನಾಗುತ್ತದೆ ಎಂಬುದಕ್ಕೆ ಕೊರೊನಾ ವೈರಸ್ ಕಣ್ಣೆದುರಿನ ನಿದರ್ಶನವಾಗಿ ಕಾಡುತ್ತಿದೆ. ಪ್ರಪಂಚದಾದ್ಯಂತ ಹಲವು ಲಕ್ಷ ಜನರನ್ನು ವ್ಯಾಪಿಸಿ, ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಕಣ್ಣಿಗೆ ಕಾಣದ ಈ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು ಇಡೀ ಜಗತ್ತಿನ ಬಹುತೇಕ ದೇಶಗಳು ಸ್ತಬ್ಧಗೊಳ್ಳುವಂತೆ ಮಾಡಿವೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ವೈದ್ಯಕೀಯ ಲೋಕ ಈ ವೈರಸ್ ವಿರುದ್ಧ ಹೋರಾಡಿ ಗೆಲ್ಲಬಲ್ಲ ಪ್ರತಿಕಾಯ ಪಡೆಯನ್ನು ಕಂಡುಹಿಡಿಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂದಲ್ಲಾ ನಾಳೆ ಅದರಲ್ಲಿ ಯಶಸ್ವಿಯೂ ಆಗಬಹುದು. ಆದರೆ ನಿಸರ್ಗದ ಮಾನವಸ್ತ್ರಕ್ಕೆ ಕೈ ಹಾಕಿದ ಮಾನವನ ಅಪರಾಧಕ್ಕೆ ದಂಡನೆ ಇಲ್ಲಿಗೇ ಮುಗಿಯುತ್ತದೆಯೇ?
‘ಪ್ರಸಕ್ತ ವಿಪತ್ತು ಮುಂಬರುವ ವಿಪತ್ತಿನ ಸಣ್ಣ ಎಚ್ಚರಿಕೆಯ ಗಂಟೆಯಷ್ಟೆ’ ಎನ್ನುತ್ತಾರೆ ಝೇಂಗ್ಲಿ. ಚೀನಾದಲ್ಲಿ ಈಗ ಕೊವಿಡ್–19 ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಅಲ್ಲಿನ ದೇಶವಾಸಿಗಳ ಎದೆಯಲ್ಲಿ ನಿರಾಳತೆಯ ಉಸಿರು ಸರಾಗವಾಗಿ ಆಡಲು ಶುರುವಾಗಿದೆ. ಆದರೆ ಝೇಂಗ್ಲಿ ಅವರ ಅನುಭವಿ ಕಣ್ಣುಗಳಿಗೆ ಭವಿಷ್ಯದ ಸರಣಿ ಮಹಾವಿಪತ್ತುಗಳು ಕಾಣಿಸುತ್ತಿವೆ.
ಝೇಂಗ್ಲಿ ಅವರಿಗೀಗ 56 ವರ್ಷ ವಯಸ್ಸು. ಕಳೆದ ಹದಿನಾರು ವರ್ಷಗಳಿಂದ ನಿರಂತರವಾಗಿ ವೈರಸ್ ಶೋಧದಲ್ಲಿ ತೊಡಗಿಕೊಂಡಿರುವ ಚೀನಾದ ಈ ‘ಬಾವಲಿ ಹೆಣ್ಣು’ ಈಗ ಮುಖ್ಯವಾಹಿನಿಯಿಂದ ನಿವೃತ್ತರಾಗುವ ನಿರ್ಧಾರ ಮಾಡಿದ್ದಾರೆ. ಆದರೆ ವಿಜ್ಞಾನಿಗಳಿಗೆ ನಿವೃತ್ತಿಯ ಮಾತೆಲ್ಲಿಯದು? ‘ಸಂಶೋಧನೆಯ ಕೆಲಸ ಖಂಡಿತ ಮುಂದುವರಿಯುತ್ತದೆ’ ಎಂದವರು ದೃಢವಾಗಿ ನುಡಿಯುತ್ತಾರೆ. ಸಂಶೋಧನಾ ತಂಡಗಳ ಮಾರ್ಗದರ್ಶಿಯಾಗಿ ಝೇಂಗ್ಲಿ ಮುಂದೆಯೂ ವೈರಸ್‌ಲೋಕದ ಜೊತೆಗೆ ಒಡನಾಟ ಮುಂದುವರಿಸಲಿದ್ದಾರೆ. ಯಾಕೆಂದರೆ ತಾವು ಇಷ್ಟು ವರ್ಷಗಳ ಪರಿಶ್ರಮದಲ್ಲಿ ಕಂಡುಹಿಡಿದಿದ್ದು ಸಮುದ್ರದೊಳಗೆ ಮುಳುಗಿರುವ ಹಿಮಪರ್ವತದ ತುದಿಯನ್ನಷ್ಟೇ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅವರ ಪ್ರಕಾರ, ಇನ್ನೂ ಪತ್ತೆಯಾಗದ ಕನಿಷ್ಠ 5000 ಬಗೆಯ ಬಾವಲಿಜನ್ಯ ವೈರಸ್‌ಗಳು ಜಗತ್ತಿನಾದ್ಯಂತ ಇವೆ! ಆ ನಿಟ್ಟಿನಲ್ಲಿ ಎಲ್ಲ ಕಡೆಯ ಬಾವಲಿಜನ್ಯ ವೈರಸ್‌ಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ಮತ್ತು ಅಧ್ಯಯನ ಮಾಡುವ ಯೋಜನೆಯೊಂದನ್ನೂ ಝೇಂಗ್ಲಿ ರೂಪಿಸುತ್ತಿದ್ದಾರೆ.
‘ಬಾವಲಿಜನ್ಯ ಕೊರೊನಾ ವೈರಸ್‌ಗಳು ಮುಂದೆಯೂ ಸಾಕಷ್ಟು ಸಲ ಪ್ರತ್ಯಕ್ಷವಾಗಲಿವೆ’ ಎಂದು ಹೇಳುವ ಝೇಂಗ್ಲಿ ತಮ್ಮ ಮಾತಿನ ಕೊನೆಗೆ ತಣ್ಣಗಿನ ಸಾಲೊಂದನ್ನು ಸೇರಿಸುತ್ತಾರೆ. ‘ಅವುಗಳು ನಮ್ಮನ್ನು ಪತ್ತೆಹಚ್ಚುವ ಮೊದಲು ನಾವು ಅವುಗಳನ್ನು ಪತ್ತೆಹಚ್ಚಬೇಕಾಗಿದೆ’.
(ಆಧಾರ: ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಮತ್ತು ವಿಕಿಪಿಡಿಯಾ,ಪ್ರತಿಕ್ರಿಯಿಸಿ– feedback@sudha.co.in)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.