ನಾಗರಿಕತೆಯ ತೊಟ್ಟಿಲುಗಳಲ್ಲೊಂದಾದ ಮಧ್ಯಪ್ರಾಚ್ಯ ಈಗ ಸಾವುನೋವಿನ ಕೊಳ್ಳ. ಅಲ್ಲಿ ನಿತ್ಯವೂ ಮದ್ದುಗುಂಡುಗಳ ರುದ್ರನರ್ತನ. ಇರಾಕ್ ಮೇಲೆ ಅಮೆರಿಕ ಸೇನಾ ಕಾರ್ಯಚರಣೆ, ಇರಾಕ್ ಪ್ರತಿ ದಾಳಿ – ಇದೆಲ್ಲದರ ನಂತರ ಸಿರಿಯಾದಲ್ಲೀಗ ಸೂತಕದ ಮನೆಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನಗಳು ನಡೆದಿವೆ. ಐಸಿಸ್‌ನ ಬೀಜಗಳಿನ್ನೂ ಎಲ್ಲೋ ಉಳಿದಿರಬಹುದು ಎನ್ನುವ ಆತಂಕವನ್ನು ಉಸಿರಾಡುತ್ತಲೇ ಹೊಸ ಬೆಳಕಿಗೆ ಸಿರಿಯಾ ಹಂಬಲಿಸುತ್ತಿದೆ. ಐಸಿಸ್ ಉಗ್ರರ ವಿಧ್ವಂಸಕ ಕೃತ್ಯದ ಅವಶೇಷಗಳನ್ನು ಗುರುತಿಸುವುದಕ್ಕಾಗಿ ಇಂಗ್ಲಿಷ್‌ನ ಪ್ರಮುಖ ವಾರಪತ್ರಿಕೆ ‘ದಿ ವೀಕ್’ ತನ್ನ ಪ್ರತಿನಿಧಿಗಳನ್ನು ಸಿರಿಯಾಗೆ ಕಳಿಸಿತ್ತು. ಅಲ್ಲಿನ ವಾಸ್ತವದ ಚಿತ್ರವನ್ನು ಹಿರಿಯ ಫೋಟೊ ಜರ್ನಲಿಸ್ಟ್ ಭಾನುಪ್ರಕಾಶ ಚಂದ್ರ ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ತಮ್ಮ ಕಣ್ಣೋಟದ ವಿವರವನ್ನು ಅವರು ‘ಸುಧಾ’ ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.
ಕುರುಕ್ಷೇತ್ರದ ಸ್ಮಶಾನದಲ್ಲಿ ಯಕ್ಷಿಣಿಯರು ಯುದ್ಧದ ಭೀಕರತೆಯನ್ನು ಚರ್ಚಿಸುವ ಕಥೆ ಕೇಳಿದ್ದೇವೆ. ಮಹಾಭಾರತದ ಆ ಸನ್ನಿವೇಶವೇ ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರಂ’ ನಾಟಕದ ಕಥಾವಸ್ತು.
ಯುದ್ಧೋತ್ತರ ರಣಭೂಮಿಯಲ್ಲಿ ರಾಶಿ ರಾಶಿ ಹೆಣಗಳ ನಡುವೆ ಅಜ್ಜಿಯೊಬ್ಬಳು ತನ್ನ ಮಗನನ್ನು, ಹೆಣ್ಣೊಬ್ಬಳು ತನ್ನ ಗಂಡನನ್ನು ಹುಡುಕುತ್ತಿದ್ದಾರೆ. ಅರಸನಾಸೆಯೇ ವಿನಾಶದ ಮೂಲ ಎಂದವರು ಮಾತುಕತೆ ನಡೆಸಿದ್ದಾರೆ. ಹೆಣಗಳನ್ನು ದಾಟಿ ಸಾಗುತ್ತಾ ತಮ್ಮವರಿಗಾಗಿ ತಡಕಾಡುತ್ತಿದ್ದಾರೆ. ಮನುಷ್ಯನ ಯುದ್ಧದ ಹಪಹಪಿಯನ್ನು ಯಕ್ಷಿಣಿಯರು ಹೀಯಾಳಿಸುತ್ತಿದ್ದಾರೆ. ಇದು ಕಥೆಯಾದರೆ, ದಶಕಗಳ ಕಾಲ ಯುದ್ಧದ ಮದ್ದುಗುಂಡಿನ ಮೊರೆತದಲ್ಲೇ ಮುಳುಗಿದ ಐಸಿಸ್ ಆಕ್ರಮಿತ ಸಿರಿಯಾದಲ್ಲಿ ಈಗಷ್ಟೇ ಶಾಂತಿ ನೆಲೆಸುತ್ತಿದೆ. ಆದರೂ ಆಂತರಿಕ ಕಲಹವೇನೂ ಕಡಿಮೆಯಾಗಿಲ್ಲ. ಮುಂಗಾರು ಮಳೆಯಲ್ಲಿ ಬರುವ ಮಿಂಚು–ಸಿಡಿಲಿನಂತೆ ಯಾವ ಕ್ಷಣದಲ್ಲಾದರೂ ಬಾಂಬು–ಗುಂಡುಗಳು ಭೋರ್ಗರೆಯಬಹುದು. ಅಂತಹ ಭಯಾನಕ ಸ್ಥಳವನ್ನು ಭಾರತೀಯ ಪತ್ರಕರ್ತರು ಇದೇ ಮೊದಲು ಖುದ್ದು ವೀಕ್ಷಿಸಿ ಬರೆದಿದ್ದಾರೆ.
ಕುರುಕ್ಷೇತ್ರ ಯುದ್ಧ ಒಂದು ಯುಗಕ್ಕೆ ಅಂತ್ಯ ಹೇಳಿ; ಹೊಸ ಯುಗಕ್ಕೆ ನಾಂದಿ ಹಾಡುತ್ತದೆ. ನಿತ್ಯವೂ ಕಲಹದ ಕರಾಳ ನೆರಳಲ್ಲಿಯೇ ನರಳುವ ದಕ್ಷಿಣ ಪ್ರಾಚ್ಯದ ಸಿರಿಯಾ ಐಸಿಸ್ ಉಗ್ರರ ಕ್ರೌರ್ಯದ ಅಟ್ಟಹಾಸಕ್ಕೆ ಅಂತ್ಯ ಹಾಡಿದ್ದರೂ ಶಾಂತಿಯ ದಿನಗಳು ಇನ್ನೂ ಅಲ್ಲಿ ಕನಸಿನ ಬಾಬತ್ತಾಗಿಯೇ ಉಳಿದಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಹಿಂಸಾಚಾರಕ್ಕೆ ತುತ್ತಾಗಿರುವ ನೆಲ ಎಂದರೆ ಅದು ಸಿರಿಯಾ. ಮೆಸಪಟೋಮಿಯಾ ನಾಗರಿಕತೆಗೆ ಒಡಲು ನೀಡಿದ ಯೂಪ್ರಟಿಸ್ ಮತ್ತು ಟೈಗ್ರಿಸ್ ನದಿ ಬಯಲಿನ ತಪ್ಪಲು, ಈಗ ರಕ್ತದ ಮಡುವಿನಲ್ಲಿ ಹೆಪ್ಪುಗಟ್ಟಿದೆ.
ಐಸಿಸ್ ಉಗ್ರರ ವಿಧ್ವಂಸಕ ಕೃತ್ಯದ ಅವಶೇಷಗಳನ್ನು ಗುರುತಿಸುವುದಕ್ಕಾಗಿ ಇಂಗ್ಲಿಷ್‌ನ ಪ್ರಮುಖ ವಾರಪತ್ರಿಕೆ ‘ದಿ ವೀಕ್’ ತನ್ನ ಪ್ರತಿನಿಧಿಗಳನ್ನು ಸಿರಿಯಾಗೆ ಕಳಿಸಿತ್ತು. ಈ ತಂಡದಲ್ಲಿದ್ದ ಹಿರಿಯ ಫೋಟೊ ಜರ್ನಲಿಸ್ಟ್ ಭಾನುಪ್ರಕಾಶ ಚಂದ್ರ ತಮ್ಮ ಕಣ್ಣೋಟದ ವಿವರವನ್ನು ‘ಸುಧಾ’ ಪ್ರತಿನಿಧಿಯೊಂದಿಗೆ ಹಂಚಿಕೊಂಡರು. ಇಲ್ಲಿಂದಾಚೆಗೆ ಅವರೇ ಮಾತನಾಡುತ್ತಾರೆ...
ಸಿರಿಯಾ ಪಯಣದ ಕಥನ
ಈ ನಮ್ಮ ಕೆಲಸಕ್ಕೆ ಆರು ತಿಂಗಳ ಹಿಂದೆಯೇ ನೀಲನಕ್ಷೆ ತಯಾರಾಗಿತ್ತು. ಕಾಲ ಕೂಡಿಬರುವುದು ಮಾತ್ರ ತಡವಾಯಿತು. ಸಿರಿಯಾ ಅತ್ಯಂತ ಸಂಕೀರ್ಣ ದೇಶ. ನಾವು ಭೇಟಿ ನೀಡಿದ, ಐಸಿಸ್ ಪ್ರಾಬಲ್ಯ ಸಾಧಿಸಿದ ಪ್ರದೇಶ ಭೌಗೋಳಿಕವಾಗಿ ಸಿರಿಯಾಕ್ಕೆ ಒಳಪಟ್ಟಿದೆ. ಆದರೆ, ಅದನ್ನು ಈಗ ಖುರ್ದ್ ಜನಾಂಗ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಒಂದು ವರ್ಷದ ಹಿಂದೆ ಐಸಿಸ್ ಉಗ್ರರ ವಶದಲ್ಲಿ ಆ ಭೂಪ್ರದೇಶವಿತ್ತು. ಸಿರಿಯಾ ಅಧ್ಯಕ್ಷ ಬಷರ್ ಅಸಾದ್ ಆಡಳಿತ ಹಾಗೂ ಖುರ್ದ್‌ಗಳ ನಡುವೆ ಶೀತಲ ಸಮರ ಇದೆ. ಅವರಿಬ್ಬರನ್ನೂ ಸೇರಿದಂತೆ ಇಡೀ ಜಗತ್ತಿಗೆ ರಕ್ಕಸರೂಪಿಯಾಗಿ ಕಾಡಿದ್ದ ಐಸಿಸ್ ಈಗ ಮೊದಲಿನಂತೆ ಪ್ರಬಲವಾಗಿ ಉಳಿದಿಲ್ಲ. ಖುರ್ದರು ತಮ್ಮನ್ನು ತಾವು ಸಿರಿಯನ್ ಎಂದು ಭಾವಿಸುತ್ತಾರೆ. ಬುಡಕಟ್ಟು ಹಿನ್ನೆಲೆಯ ಅವರು ರಾಜಕೀಯವಾಗಿ ಸ್ವಾಯತ್ತತೆಯನ್ನು ಬಯಸುತ್ತಾರೆ. ಟರ್ಕರಿಗೂ ಖುರ್ದ್‌ರಿಗೂ ಪರಸ್ಪರ ಆಂತರಿಕ ವಿರೋಧವೂ ಇದೆ. ಯಾವ ಗುಂಪು ಯಾವ ಹೊತ್ತಿನಲ್ಲಾದರೂ ದಾಳಿ ಮಾಡಬಹುದು. ಗುಂಡಿನ ಗುರುತು ಇಲ್ಲದ ಒಂದೇ ಒಂದು ಮನೆ ಅಥವಾ ಕಟ್ಟಡದ ಗೋಡೆಯೂ ನನಗೆ ಅಲ್ಲಿ ಕಾಣಲೇ ಇಲ್ಲ.
ಇಸ್ಲಾಮಿಕ್ ಸ್ಟೇಟ್‌ನ ಸಾಮ್ರಾಜ್ಯಶಾಹಿ ರಕ್ತಪಿಪಾಸುಗಳು ಅಲ್ಲಿ ನಾಶವಾಗಿದ್ದಾರೆ. ಆದರೂ ಯಾವ ಕ್ಷಣದಲ್ಲಾದರೂ ಮತ್ತೆ ಅವರ ಪಾತಕ ಸಿದ್ಧಾಂತ ತಲೆ ಎತ್ತಬಹುದು. ಸದ್ಯ ಅವರು ಸೃಷ್ಟಿಸಿರುವ ನರಕ ಮಾತ್ರ ಈಗಲೂ ನರಳಾಡುತ್ತಿದೆ. ಐಸಿಸ್ ಉಗ್ರರ ಪತ್ನಿಯರು ವಿಧವೆಯರಾಗಿದ್ದಾರೆ, ಮಕ್ಕಳು ಅನಾಥರಾಗಿದ್ದಾರೆ. ಯುದ್ಧದಲ್ಲಿ ಶರಣಾದ ಆಯುಧವಿಲ್ಲದ ಐಸಿಸ್ ಉಗ್ರರು ಸೆರೆವಾಸದಲ್ಲಿದ್ದಾರೆ. ಸೆರೆಯಾದ ನಿರಾಶ್ರಿತರ ಸೆಲ್‌ಗಳಂತೂ ನರಕದ ಪ್ರತಿರೂಪಗಳಂತೆ ಇವೆ. ಅಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಇನ್ನೂರು ಜನರಿಗೆ ಒಂದು ಶೌಚಾಲಯ. ಸಮರ್ಪಕ ನೀರೂ ಇಲ್ಲ. ಮಳೆ ಬಂದರಂತೂ ಕೊಚ್ಚೆಯಲ್ಲಿ ಮುಳುಗಿ ಎದ್ದಂತೆ ಬಿಡಾರಗಳು ಕಾಣಿಸುತ್ತವೆ. ಬಹುತೇಕ ಕೈದಿಗಳು ರೋಗಪೀಡಿತರಂತೆ ಕಾಣಿಸುತ್ತಾರೆ.
ಬಾಗೌಸ್‌ನಲ್ಲಿ 2019ರಲ್ಲಿ ಐಸಿಸ್ ಉಗ್ರರ ವಿರುದ್ಧ ಖುರ್ದರು ನಡೆಸಿದ ಹೋರಾಟದಲ್ಲಿ ಶಸ್ತ್ರಾಸ್ತ್ರ ಖಾಲಿಯಾಗಿ ಉಗ್ರರು ಶರಣಾಗಿದ್ದರು. ಆ ಸಂದರ್ಭದಲ್ಲಿ ಒಟ್ಟು 11 ಸಾವಿರ ಮಂದಿಯನ್ನು ಖುರ್ದರು ವಶಕ್ಕೆ ತೆಗೆದುಕೊಂಡರು. ಬೇರೆ ಬೇರೆ ಹೋರಾಟ ಹತ್ಯೆಗಳನ್ನೂ ನಾನು ನೋಡಿದ್ದೇನೆ. ದೇಹವೇ ಛಿದ್ರ ಆಗಿ ಮಾಂಸ ದಿಕ್ಕಾಪಾಲಾದ ದೇಹವನ್ನೂ ಕಂಡಿದ್ದೇನೆ. ಅದೆಲ್ಲಕ್ಕಿಂತ ಇಲ್ಲಿನ ಸೆರೆಯಾಳುಗಳ ಜೀವನ ಅಮಾನುಷವಾಗಿ ನನಗೆ ಕಾಣಿಸಿತು. ಅಲ್ ಹೋಲ್ ಮತ್ತು ಅಲ್ ರೋಜ್ ಎಂಬ ಎರಡು ಸೆರೆಯಾಳುಗಳ ಪುನರ್ವಸತಿ ಶಿಬಿರಗಳನ್ನು ಖುದ್ದು ನೋಡಿದಾಗ ನನ್ನಲ್ಲಿ ಇದೇ ಭಾವನೆ ಮೂಡಿತು. ಅನೇಕ ಪುಟ್ಟ ಪುಟ್ಟ ಸೆರೆಮನೆಗಳನ್ನು ದೊಡ್ಡ ರಕ್ಷಣಾ ಗೋಡೆಯ ಒಳಗೆ ನಿರ್ಮಿಸಿದ್ದಾರೆ.
ನರಕ ಮಾರ್ಗ ಸೂಚಕಿಯರು
ಖುರ್ದ್ ಬುಡಕಟ್ಟು ಜನಾಂಗ ಇಸ್ಲಾಂ ಪಾಲಿಸಿದರೂ ಬುರ್ಖಾ ಧರಿಸುವುದಿಲ್ಲ. ಸೈನ್ಯದಲ್ಲಿ ಸೆಣಸಾಡಲು ಹಿಂದೇಟು ಹಾಕುವುದಿಲ್ಲ. ಅಲ್ಲಿನ ಮಹಿಳೆಯರಿಗೆ ಐಸಿಸ್ ಉಗ್ರರನ್ನು ಕೊಲ್ಲುವುದು ಹೆಮ್ಮೆಯ ಸಂಗತಿ. ಅವರ ನಂಬಿಕೆಯ ಪ್ರಕಾರ ಯುದ್ಧದಲ್ಲಿ ಪುರುಷನೊಬ್ಬ ಮಹಿಳೆಯಿಂದ ಹತ್ಯೆಯಾದರೆ ಆತನಿಗೆ ಸ್ವರ್ಗದಲ್ಲಿ ಸ್ಥಾನವಿಲ್ಲ. ಐಸಿಸ್ ಉಗ್ರರನ್ನು ನರಕಕ್ಕೆ ಕಳುಹಿಸುವುದು ಅವರಿಗೆ ಸಾಹಸ. ಮಿಷನ್ ಗನ್ ಹಿಡಿದ ಯುವತಿಯೊಬ್ಬಳು ತಾನು ಐದು ಜನರನ್ನು ನರಕಕ್ಕೆ ಕಳಿಸಿದ್ದೇನೆ ಎಂದು ಬೀಗಿದಳು.
ಭಾರತಕ್ಕೆ ಬರುವ ತವಕದಲ್ಲಿ...
ಆಕೆ ಅಮಾನಿ ಫಾತಿಮಾ, ಮುಂಬೈ ಮೂಲದವಳು. ಆರು ವರ್ಷಗಳ ಹಿಂದೆ ಆಕೆಯ ಗಂಡ ಇಸ್ತಾಂಬುಲ್‌ಗೆ ಕರೆದುಕೊಂಡು ಬಂದಿದ್ದನಂತೆ. ಅಲ್ಲಿಂದ ಊರೂರು ಅಲೆದರು. ಹೋಟೆಲ್‌ಗಳೇ ತಂಗುದಾಣಗಳಾದವು. ಫಾತಿಮಾಳ ಗಂಡ ಸ್ನೇಹಿತರೆಂದು ದಿನವಿಡೀ ಹೊರಹೋದರೆ, ಅವಳು ಮಾತ್ರ ರೂಮಿನಲ್ಲಿಯೇ ಇರುತ್ತಿದ್ದಳು. ಈ ನಿಶ್ಚಿತ ನೆಲೆಯಿಲ್ಲದ ಸಂಸಾರದಲ್ಲೇ ಎರಡು ಹೆಣ್ಣುಮಕ್ಕಳು ಜನಿಸಿವೆ. ನಂತರ ಅವರು ಬಾಗೌಸ್‌ಗೆ ಬಂದು ತಂಗಿದರು. 2019ರ ಕಲಹದಲ್ಲಿ ಫಾತಿಮಾಳ ಗಂಡ ಕೊನೆಯುಸಿರೆಳೆದ. ಐಸಿಸ್ ಸಂಪೂರ್ಣ ಸೋಲನ್ನು ಒಪ್ಪಿಕೊಂಡಿದ್ದೂ ಬಾಗೌಸ್‌ನಲ್ಲೇ.
ಫಾತಿಮಾ ಈಗ ವಿಧವೆ. ಮೂರು ಮಕ್ಕಳನ್ನು ತನ್ನ ಮಡಿಲಲ್ಲಿ ಹಾಕಿಕೊಂಡಿದ್ದಾಳೆ. ‘ಹೇಗಾದರೂ ಸರಿ ನಿಮ್ಮ ಜೊತೆ ನನ್ನನ್ನು ಮುಂಬೈಗೆ ಕರೆದುಕೊಂಡು ಹೋಗಿ’ ಎಂದು ಚಿಕ್ಕ ಮಗುವಿನಂತೆ ಆಕೆ ಅಳುವಾಗ ನಾವು ನಿರುತ್ತರರಾಗಿದ್ದೆವು. ಇದು ಒಬ್ಬ ಫಾತಿಮಾಳ ಕಥೆಯಲ್ಲ. ಮತ್ತೊಬ್ಬ ಭಾರತೀಯ ಮಹಿಳೆಯೂ ಅವಳ ಸಂಪರ್ಕದಲ್ಲಿ ಇದ್ದಳಂತೆ. ‘ಈಗ ಆಕೆ ಎಲ್ಲಿದ್ದಾಳೋ ನಾಕಾಣೆ’ ಎಂದಳು. ಜಗತ್ತಿನ ನಲವತ್ತಕ್ಕೂ ಹೆಚ್ಚು ದೇಶಗಳ ಜನ ಅಲ್ಲಿ ಸೆರೆಯಾಗಿದ್ದಾರೆ.
ಅಲ್ಲಿದ್ದವರೆಲ್ಲ ಅಂತರ್ಜಾಲದಲ್ಲಿ ಐಸಿಸ್ ಉಗ್ರರು ಹೆಣೆದ ಜಾಲದ ಬಲೆಯಲ್ಲಿ ಸಿಲುಕಿದವರು. ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತ ಮೆಚ್ಚಿ ಬಂದವರೂ ಇದ್ದಾರೆ. ಅವರಲ್ಲಿ ಕೆಲವರಿಗೆ ಅಲ್ಲಿಗೆ ಬರಲು ಇಷ್ಟ ಇಲ್ಲದಿರಬಹುದು, ಆದರೆ ಅವರು ಗಂಡಂದಿರ ಜೊತೆಗೂಡಿ ಅಲ್ಲಿಗೆ ಬಂದಿದ್ದಾರೆ. ಫಾತಿಮಾಗೆ ತನ್ನ ತವರಿಗೆ ಹಿಂದಿರುಗುವ ಆಸೆಯಿದೆ. ಬಹುತೇಕರಿಗೆ ಆ ಬಯಕೆ ಇಲ್ಲದೆ ಇರಬಹುದು. ಆ ಶಿಬಿರದಲ್ಲಿ ರಷ್ಯಾದವರು ಹೆಚ್ಚು ಜನರಿದ್ದಾರೆ. ನಾವು ಪಾಕಿಸ್ತಾನಿಯೊಬ್ಬನನ್ನು ಮಾತನಾಡಿಸಿದೆವು.
ಈಗಲೂ ಬಹುತೇಕರಲ್ಲಿ ‘ಐಸಿಸ್ ಚಿರಾಯು!’ ಎನ್ನುವ ಕನಸೇ ಇದೆ. ತಮ್ಮ ಮಕ್ಕಳಿಗೆ ಶಿಕ್ಷಣವಿಲ್ಲ. ಒಳ್ಳೆಯ ಭವಿಷ್ಯ ಇಲ್ಲ ಎಂಬ ವಾಸ್ತವದಲ್ಲೂ ಕೆಲ ತಾಯಂದಿರು ಮಕ್ಕಳಿಗೆ ಐಸಿಸ್ ಹಿರಿಮೆಯನ್ನು ಹೇಳುತ್ತಾರೆ. ಆ ಶಿಬಿರದಲ್ಲಿ ತೋರುಬೆರಳು ತೋರಿಸುವುದನ್ನು ನೋಡಿದ್ದೇನೆ. ಸಾಮಾನ್ಯವಾಗಿ ಅದನ್ನು ನಾವು ಎಚ್ಚರಿಕೆ ಎಂದು ಭಾವಿಸುತ್ತೇವೆ. ಆದರೆ, ಅವರು ‘ಐಸಿಸ್ ಚಿರಾಯು’ ಎನ್ನುವ ಅರ್ಥದಲ್ಲಿ ಆ ಚಿಹ್ನೆಯನ್ನು ತೋರಿಸುತ್ತಾರೆ ಎಂದು ನಂತರ ಗೊತ್ತಾಯಿತು.
ಕೊನೆಯವರೆಗೂ ಆತಂಕ
ಸಿರಿಯಾಗೆ ಹೋಗಿ ಬರುವುದು ಸುಲಭವಲ್ಲ. ಸುಮಾರು 25 ಅನುಮತಿಗಳನ್ನು ಪಡೆಯಬೇಕು. ‘ಆನ್ ಅರೈವಲ್‌ವೀಸಾ ಇದೆ, ಬನ್ನಿ’ ಎಂದು ಹೇಳುತ್ತಾರೆ. ಆದರೆ ಭಾರತೀಯರಿಗೆ ಈ ಸೌಲಭ್ಯ ಲಾಗೂ ಆಗುವುದಿಲ್ಲ. ಅಲ್ಲಿಗೆ ಹೋಗಬೇಕು ಎಂದರೆ ಇರಾಕಿ ಖುರ್ದಿಷಿಯೊಬ್ಬರ ಪ್ರಾಯೋಜಕತ್ವ ಬೇಕೇಬೇಕು. ಹಾಗಿದ್ದರೆ ಮಾತ್ರ ಹಳೆಯ ಐಸಿಸ್ ಸಾಮ್ರಾಜ್ಯದ ಒಳಹೋಗಲು ಸಾಧ್ಯ. ನಾವು ಅಲ್ಲಿಗೆ ಹೋಗಿ ಬಂದಿದ್ದೇವೆ ಎನ್ನುವುದನ್ನು ಗುರುತಿಸುವ ಯಾವ ಕುರುಹೂ ಉಳಿದಿಲ್ಲ. ನಮ್ಮ ಪಾಸ್‌ಪೋರ್ಟ್ ಮೇಲೆ ಒಂದು ಮುದ್ರೆಯನ್ನೂ ಹಾಕಿಲ್ಲ. ನಮ್ಮ ಪ್ರೆಸ್ ಗುರುತಿನ ಚೀಟಿಯೇ ಅಲ್ಲೂ ಗುರುತಿನ ಪತ್ರವಾಯಿತು. ಒಂದು ರೀತಿಯಲ್ಲಿ ಅಧಿಕೃತ ನುಸುಳುಕೋರರಂತೆ ಹೋಗಿಬಂದಿದ್ದೇವೆ. ನಾವು ಹೋದ ದಿನ ಶುಕ್ರವಾರ. ಅಂದಲ್ಲಿ ಸಾರ್ವತ್ರಿಕ ರಜೆ. ನಮ್ಮ ಆಹ್ವಾನದ ಪ್ರಾಯೋಜಕತ್ವ ವಹಿಸಿದವರು ರಜೆಯ ಕಾರಣಕ್ಕೆ ಇನ್ನೆಲ್ಲೋ ಹೋಗಿದ್ದರು. ನಾವು ವಿಮಾನ ನಿಲ್ದಾಣದಲ್ಲಿ ಅವರಿಗಾಗಿ ಐದು ಗಂಟೆ ಕಾಯುತ್ತಾ ಕುಳಿತಿದ್ದೆವು.
ಸಿರಿಯಾದಲ್ಲಿ ಏನಾದರೂ ಘಟಿಸಬಹುದು ಎನ್ನುವ ಆತಂಕ ಮರಳಿ ಬರುವ ತನಕ ಇದ್ದೇ ಇತ್ತು. ನಮ್ಮ ಟ್ಯಾಕ್ಸಿ ಚಾಲಕ ಇರಬಹುದು, ಇಲ್ಲವೇ ನಮಗೆ ಸಿಕ್ಕ ಭಾಷಾಂತರ ಸಹಾಯಕ ಇರಬಹುದು, ಅವರೇ ಏನಾದರೂ ತೊಂದರೆ ಉಂಟುಮಾಡುವ ಸಾಧ್ಯತೆಗಳಿದ್ದವು. ಯಾವ ಹೊತ್ತಿನಲ್ಲಾದರೂ ಬಾಂಬ್ ಬೀಳಬಹುದಿತ್ತು, ಗುಂಡಿನ ದಾಳಿ ಆಗಬಹುದಿತ್ತು. ಆದರೆ ನಮಗೆ ಸಿಕ್ಕವರು ತುಂಬ ಸಹಾಯ ಮಾಡಿದರು. ಅವರ ಬಳಿ ನಮ್ಮ ರಕ್ಷಣೆಗಾಗಿ ಅಸ್ತ್ರಗಳೂ ಇದ್ದವು. ನಮ್ಮನ್ನು ಸುರಕ್ಷಿತ ಮಾರ್ಗದಲ್ಲಿ ಕರೆದುಕೊಂಡು ಹೋಗಿ ಬೀಳ್ಕೊಟ್ಟರು. ಆಹಾರದ ವಿಷಯದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದೆವು. ನಮ್ಮ ಆಹಾರಪದ್ಧತಿ ಅಲ್ಲಿಲ್ಲ. ನಾನು ಮಾಂಸಾಹಾರವನ್ನೂ ಸೇವಿಸುವುದರಿಂದ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡೆ. ನನ್ನ ಜೊತೆ ಬಂದಿದ್ದ ‘ವೀಕ್’ನ ಚೆನ್ನೈ ವಿಶೇಷ ಪ್ರತಿನಿಧಿ ಲಕ್ಷ್ಮೀ ಸುಬ್ರಹ್ಮಣ್ಯ ಶುದ್ಧ ಸಸ್ಯಾಹಾರಿ. ಅವರು ಮಾಮೂನಿಯ ಎಂಬ ಅಲ್ಲಿನ ಸಿಹಿ ಪದಾರ್ಥವನ್ನೇ ನಿತ್ಯವೂ ಸೇವಿಸಿದರು. ಕೇಸರಿಬಾತನ್ನು ಹೆಚ್ಚು ನೀರು ಹಾಕಿ ಮಾಡಿದರೆ ಹೇಗೆ ಕಾಣುತ್ತೋ ಹಾಗೆ ಮಾಮೂನಿಯ ಕಾಣಿಸುತ್ತದೆ.
ಸವಾಲುಗಳ ಹಾದಿಯಲ್ಲಿ...
ರಾಮ್ ಪಾಟೀಲ್ ಅವರ ಜೊತೆ ಇರಾಕ್ ಯುದ್ಧಭೂಮಿಗೆ ಈ ಹಿಂದೆ ಹೋಗಿದ್ದಿದೆ. ಥಾಯ್ಲೆಂಡ್‌ನಲ್ಲಿ ಫುಟ್‌ಬಾಲ್ ಆಟಗಾರರು ಅಪಾಯದಲ್ಲಿ ಸಿಲುಕಿದ ಘಟನೆಯನ್ನು ದಾಖಲಿಸಿದ ನೆನಪು. ಶ್ರೀಲಂಕಾದಲ್ಲಿ ಐಸಿಸ್ ಉಗ್ರರು ನಡೆಸಿದ ಬಾಂಬ್ ಸ್ಫೋಟದ ಫೋಟೊ ವರದಿ ಮಾಡಿದ್ದೆ. ಇದೆಲ್ಲ ಏಕೆ ಎಂದರೆ, ಜಗತ್ತಿನ ಬೇರೆ ಫೋಟೊ ಜರ್ನಲಿಸ್ಟ್ ಅಂತೆಯೇ ನಾವೂ ಏನೆಲ್ಲವನ್ನೂ ಮಾಡಬಲ್ಲೆವು ಎಂದು ತೋರಿಸಲು. ಯೂರೋಪ್ ಮತ್ತು ಅಮೆರಿಕದ ಕೆಲವು ಪತ್ರಕರ್ತರು ತಮ್ಮ ಜೀವನವನ್ನೇ ಒತ್ತೆ ಇಟ್ಟು ಕೆಲಸ ಮಾಡುತ್ತಾರೆ. ಅಂತಹ ಫೋಟೊ ಜರ್ನಲಿಸಂ ಕೊಡುವ ಥ್ರಿಲ್ ಬೇರೇಯದೇ ರೀತಿಯದ್ದು. ಎಂತಹ ಕ್ಲಿಷ್ಟಕರ ಸನ್ನಿವೇಶವನ್ನು ವರದಿ ಮಾಡಲು ಹೇಳಿದರೂ ನಾನು ಸಿದ್ಧ. ಪತ್ರಿಕೋದ್ಯಮದ ನಿಜವಾದ ಸವಾಲು ಇರುವ ಸನ್ನಿವೇಶಗಳನ್ನು ತಪ್ಪಿಸಿಕೊಳ್ಳುವುದು ನನ್ನ ವೃತ್ತಿಪರತೆಗೆ ಒಗ್ಗುವಂತಹದ್ದಲ್ಲ.
ಯಾಜಿದಿಗಳು ಅನುಭವಿಸಿದ ಕಷ್ಟ
ಐಎಸ್ ಉಗ್ರರು ಸಾವಿರಾರು ಯಾಜಿದಿ ಹೆಣ್ಣುಮಕ್ಕಳನ್ನು ಅಪಹರಿಸಿದ್ದರು. ಮುಸ್ಲಿಮರೂ ಅಲ್ಲ, ಕ್ರೈಸ್ತರೂ ಅಲ್ಲದ ಯಾಜಿದಿಗಳದು ಪ್ರತ್ಯೇಕ ಜನಾಂಗ. ಅವರ ನಂಬಿಕೆಗಳೂ ಬೇರೆ ರೀತಿಯದ್ದು. ಐಎಸ್ ಉಗ್ರರಿಂದ ನಿರಂತರ ಲೈಂಗಿಕ ಶೋಷಣೆ ಅನುಭವಿಸಿದ ಯಾಜಿದಿ ಮಹಿಳೆಯರು ಇಂದಿಗೂ ಇಲ್ಲಿನ ಕೆಲ ಶಿಬಿರಗಳಲ್ಲಿದ್ದಾರೆ. ಐಸಿಎಸ್ ಉಗ್ರರು ಇಂಥ ಮಹಿಳೆಯರನ್ನು ಬಹಿರಂಗ ಹರಾಜು ಹಾಕುತ್ತಿದ್ದುದೂ ಉಂಟು.
ಸದ್ದಿಲ್ಲದೆ ಕಾರ್ಯಸಾಧನೆ
ಸಿರಿಯಾದ ನಮ್ಮ ಪ್ರಯಾಣ ಒಟ್ಟು ಎಂಟು ದಿನಗಳದ್ದು. ಅಲ್ಲಿ ನಾವು ಆರು ದಿನ ಸುತ್ತಾಟದ ಯೋಜನೆ ರೂಪಿಸಿದ್ದೆವು. ಸಮಯ ತುಂಬ ಕಡಿಮೆಯಿತ್ತು. ನಾವು ಎಲ್ಲೂ ನಮ್ಮನ್ನು ಗುರ್ತಿಸಿಕೊಳ್ಳಬಾರದು ಎಂದು ಯೊಚಿಸಿದ್ದೆವು. ಯಾರಿಗೂ ಟಾರ್ಗೆಟ್ ಆಗದಂತೆ ಸೂಕ್ಷ್ಮವಾಗಿ ನಮ್ಮ ಕಾರ್ಯಸಾಧನೆ ಮಾಡಿಕೊಂಡು ಬರಬೇಕಿತ್ತು. ಐಸಿಸ್ ಈ ಹಿಂದೆ ಅಮೆರಿಕದ ಅನೇಕ ಪತ್ರಕರ್ತರನ್ನು ಹತ್ಯೆ ಮಾಡಿದ್ದು ಗೊತ್ತಿತ್ತು. ನನಗೆ ತಿಳಿದಂತೆ ಐಸಿಸ್ ನೇರವಾಗಿ ಯಾರನ್ನೂ ಅಪಹರಿಸುವುದಿಲ್ಲ. ಅಲ್ಲಿ ಹಣಕ್ಕಾಗಿ ಅಪಹರಿಸುವ ಮಾಫಿಯಾ ಇದೆ. ಅದು ಜನಸಾಮಾನ್ಯರಂತೆಯೇ ಇರುತ್ತದೆ. ಐಸಿಸ್ ಹೇಳಿದ ಜನಾಂಗದ ಪ್ರತಿನಿಧಿಗಳನ್ನು ಅಪಹರಿಸಿ ಅವರಿಂದ ಹಣ ಪಡೆಯುತ್ತದೆ. ಆ ಅಪಹೃತರನ್ನು ಒತ್ತೆ ಇಟ್ಟುಕೊಂಡು ನಂತರ ಐಸಿಸ್ ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತದೆ.
ಚಿತ್ರಗಳು: ದಿ ವೀಕ್ ಕೃಪೆ (Photography: Bhanuprakash Chandra, All images are subject toCopyright. Image courtesy: The Week magazine)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.