ಕರ್ನಾಟಕದ ಹೂವಿನ ಹಡಗಲಿಯಲ್ಲಿ ಹುಟ್ಟಿ, ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಡಾ. ಸಿ.ಆರ್. ರಾವ್ ಅವರಿಗೆ ಸೆ. 10ಕ್ಕೆ ನೂರು ವರ್ಷ ತುಂಬುತ್ತಿದೆ. ಗಣಿತ ಮತ್ತು ಸಂಖ್ಯಾಶಾಸ್ತ್ರ ವಿಜ್ಞಾನದಲ್ಲಿ ಅಸಾಧಾರಣ ಸಾಧನೆ ಸಲ್ಲಿಸಿರುವ ಈ ಭಾರತೀಯನ ಸಾಧನೆಯ ಕುರಿತು ಅಮೆರಿಕದಲ್ಲಿ ಕಳೆದೊಂದು ವರ್ಷದಿಂದ ಕಾರ್ಯಕ್ರಮಗಳು ನಡೆಯುತ್ತಿವೆ. ನಮಗೆ ಮಾತ್ರ ಹಿತ್ತಲ ಗಿಡದ ಅರಿವೇ ಇಲ್ಲ. 'ಸುಧಾ' ವಾರಪತ್ರಿಕೆಯ ಸೆ.17ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ಬರಹವು ಅಪರೂಪದ ಸಾಧಕನ ಬದುಕು-ಸಾಧನೆಯನ್ನುಪರಿಚಯಿಸುತ್ತದೆ.
---
1940ರ ಜೂನ್. ಎರಡನೇ ವಿಶ್ವ ಮಹಾಯುದ್ಧದ ವಿನಾಶದ ತೀವ್ರತೆ ಎಲ್ಲೆಡೆ ಹಬ್ಬುತ್ತಿದ್ದ ಕಾಲ. ಅದೇ ಸಮಯಕ್ಕೆ ಉತ್ತರ ಆಫ್ರಿಕಾದ ಸೇನಾಪಡೆಯ ಸಮೀಕ್ಷಾ ಘಟಕಕ್ಕೆ ಗಣಿತಜ್ಞನೊಬ್ಬ ಬೇಕು ಎಂದು ಪತ್ರಿಕೆಯೊಂದರಲ್ಲಿ ಪ್ರಕಟಣೆಯನ್ನು ನೋಡಿ, ಕೆಲವು ದಿನಗಳ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದ ಹತ್ತೊಂಬತ್ತರ ಹರಯದ ಯುವಕನೊಬ್ಬ ಅರ್ಜಿ ಸಲ್ಲಿಸಿದ. ಗಣಿತ ವಿಷಯದ ಪದವಿ ಪ್ರಮಾಣಪತ್ರ ಹಿಡಿದುಕೊಂಡು ದಕ್ಷಿಣದ ವಿಶಾಖಪಟ್ಟಣಂನಿಂದ 500 ಮೈಲಿ ದೂರದ ಕಲಕತ್ತೆಗೆ ಸಂದರ್ಶನಕ್ಕಾಗಿ ಬಂದ. ಇಂಟರ್ವ್ಯೂನಲ್ಲಿ ಚೆನ್ನಾಗಿ ಮಾಡಿದ್ದರೂ, ಕಿರಿಯ ವಯಸ್ಸಿನ ಕಾರಣಕ್ಕೆ ಕೆಲಸಕ್ಕೆ ಆಯ್ಕೆಯಾಗಲಿಲ್ಲ.
ಆ ಯುವಕ ತನ್ನ ನಿರಾಶೆಯನ್ನು ತಾನುಳಿದುಕೊಂಡಿದ್ದ ಹೋಟೆಲ್‌ನಲ್ಲಿ ಪರಿಚಯವಾದ ವ್ಯಕ್ತಿಯ ಜೊತೆ ಹಂಚಿಕೊಂಡ. ಆ ವ್ಯಕ್ತಿಯ ಸಲಹೆಯ ಮೇರೆಗೆ ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿ, ಅಲ್ಲಿನ ಸ್ಟಾಟಿಸ್ಟಿಕ್ಸ್ ವಿಭಾಗದಲ್ಲಿ ಒಂದು ವರ್ಷ ಅವಧಿಯ ತರಬೇತಿಗೆ ಅರ್ಜಿ ಸಲ್ಲಿಸಿದ. ಈ ಮಧ್ಯೆ ಸಿವಿಲ್ ಸರ್ವಿಸ್ ಹುದ್ದೆ ಬಯಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ. ಆಗಲೂ 8 ತಿಂಗಳು ವಯಸ್ಸು ಕಡಿಮೆ ಎಂಬ ಕಾರಣಕ್ಕೆ ಅರ್ಜಿ ತಿರಸ್ಕೃತಗೊಂಡಿತು. ಅದಾಗಿ ಎರಡು ವಾರಗಳ ನಂತರ ‘ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್’ (ಐಎಸ್‌ಐ) ಮುಖ್ಯಸ್ಥ ಪಿ.ಸಿ. ಮಹಲ್ನೋಬಿಸ್‌ರ ಸಹಿ ಇರುವ, ‘ಜನವರಿ 1ರಂದು ತರಬೇತಿಗೆ ಸೇರಿಕೊಳ್ಳಬೇಕು’ ಎಂಬ ಆದೇಶ ಕೈಸೇರಿತು. ಗಣಿತದಲ್ಲಿ ಹೆಚ್ಚಿನ ಆಸಕ್ತಿ ಇದ್ದರೂ ಸದ್ಯಕ್ಕೆ ಸ್ವಾಟಿಸ್ಟಿಕ್ಸ್ ಅಧ್ಯಯನ ಮಾಡಿದರಾಯಿತು ಎಂದು ನಿರ್ಧರಿಸಿ ತರಬೇತಿಗೆ ಹಾಜರಾದ ಆ ಯುವಕ ಮುಂದಿನ ವರ್ಷಗಳಲ್ಲಿ ಇಡೀ ವಿಶ್ವವೇ ಬೆರಗಾಗುವಂತೆ ಸ್ವಾಟಿಸ್ಟಿಕ್ಸ್ ವಿಷಯದ ಅನೇಕ ಸಿದ್ಧಾಂತ–ನಿಯಮಗಳನ್ನು ರೂಪಿಸಿದ; ದೇಶ ನಡೆಸುವ ನಾಯಕರಿಗೆ, ಯೋಜನೆ ರೂಪಿಸುವ ತಜ್ಞರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಿ ವಿಶ್ವ ಮಟ್ಟದ ಗೌರವ ಮುಡಿಗೇರಿಸಿಕೊಂಡ. ಆ ಸಾಧಕನ ಹೆಸರು ಡಾ. ಸಿ.ಆರ್. ರಾವ್ – ಕಾಲ್ಯಂಪುಡಿ ರಾಧಾಕೃಷ್ಣ ರಾವ್.
ಮಿನುಗಿದ ಮೊಳಕೆಯ ಸಿರಿ
ಗಣಿತ ಲೋಕದ ಪಾಲಿಗೆ ಡಾ. ರಾವ್ ಎಂದೇ ಖ್ಯಾತರಾದ ರಾಧಾಕೃಷ್ಣ ರಾವ್ ಅವರು ಹುಟ್ಟಿದ್ದು ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿದ್ದು, ಈಗ ಕರ್ನಾಟಕದಲ್ಲಿರುವ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ. ಹತ್ತು ಮಕ್ಕಳ ದೊಡ್ಡ ಕುಟುಂಬದಲ್ಲಿ 1920ರ ಸೆಪ್ಟೆಂಬರ್ 10ರಂದು ನಾಯ್ಡು ಮತ್ತು ಲಕ್ಷ್ಮೀಕಾಂತಮ್ಮ ದಂಪತಿಯ ಎಂಟನೇ ಮಗನಾಗಿ ಜನಿಸಿದ ರಾವ್ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಆಂಧ್ರಪ್ರದೇಶದ ಗುಡೂರು, ನಂದಿಗ್ರಾಮ, ನುಜವಿಡ್‌ಗಳಲ್ಲಿ. ಸಿಐಡಿ ಇನ್‌ಸ್ಟೆಕ್ಟರ್ ಹುದ್ದೆಯಲ್ಲಿದ್ದ ನಾಯ್ಡು ಅವರು ಸೇವೆಯಿಂದ ನಿವೃತ್ತರಾದ ಬಳಿಕ ವಿಶಾಖಪಟ್ಟಣಂನಲ್ಲಿ ನೆಲೆಸಿದರು, ರಾವ್‌ರ ಹೈಸ್ಕೂಲು ಮತ್ತು ಕಾಲೇಜು ಶಿಕ್ಷಣ ಅಲ್ಲಿಯೇ ನಡೆದವು.
ಬಾಲ್ಯದಲ್ಲೇ ಗಣಿತದಲ್ಲಿ ಭಾರೀ ಚುರುಕಾಗಿದ್ದ ರಾವ್, ತಮ್ಮ ಐದನೆಯ ವಯಸ್ಸಿಗೆಲ್ಲಾ ಅಂದಿನ ಕಾಲದ ಹಣಲೆಕ್ಕಾಚಾರದ ಘಟಕಗಳಾದ ‘ಆಣೆ’, ‘ದುಮಡಿ’ ಮತ್ತು ‘ಕಾಣಿ’ಗಳ ಲೆಕ್ಕಗಳನ್ನು ಕ್ಷಣಮಾತ್ರದಲ್ಲಿ ಬಿಡಿಸುತ್ತಿದ್ದರು. ಮಗನ ಪ್ರತಿಭೆಯನ್ನು ಗುರುತಿಸಿದ್ದ ತಂದೆ, ಭಾಸ್ಕರಾಚಾರ್ಯನ ‘ಲೀಲಾವತಿ’ ಪುಸ್ತಕ ನೀಡಿ ಸಮಸ್ಯೆಗಳನ್ನು ಬಿಡಿಸಲು ಹೇಳುತ್ತಿದ್ದರು. ಸಮಯ ದೊರೆತಾಗಲೆಲ್ಲ ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸಲು ಉತ್ತೇಜಿಸುತ್ತಿದ್ದರು. ಮಗನನ್ನು ಬೆಳಗಿನ ಜಾವ ನಾಲ್ಕಕ್ಕೇ ಎಬ್ಬಿಸಿ ಓದಲು ಎಣ್ಣೆ ದೀಪವನ್ನು ಹಚ್ಚಿಡುತ್ತಿದ್ದ ತಾಯಿ, ಮಗ ಬೃಹತ್ ಸಾಧನೆ ಮಾಡುತ್ತಾನೆ ಎನ್ನುತ್ತಿದ್ದರು. ಅದು ಸುಳ್ಳಾಗಲಿಲ್ಲ.
ಹದಿನೇಳನೆ ವಯಸ್ಸಿಗೆ ಬಿ.ಎ. ಆನರ್ಸ್ ಪದವಿ ಪಡೆದ ರಾವ್, ಗಣಿತ ಸಂಶೋಧಕನಾಗಬೇಕೆಂಬ ಮಹದಾಸೆ ಹೊಂದಿದ್ದರು. ಸ್ನಾತಕೋತ್ತರ ಪದವಿಗೆ ಅರ್ಜಿ ಹಾಕಿ ಸ್ಕಾಲರ್‌ಶಿಪ್‌ಗಾಗಿ ಕಾದರು. ಎರಡೂ ಸಿಗದಿದ್ದಾಗ ಆರ್ಮಿಯ ಕೆಲಸ ಹುಡುಕಿ ಕಲಕತ್ತೆಗೆ ಹೋದರು. ಆದರೆ, ಅವಕಾಶ ದೊರೆತದ್ದು ‘ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್’ನಲ್ಲಿ. ಅಲ್ಲಿಂದ ಮುಂದೆ ಹಿಂದಿರುಗಿ ನೋಡದ ಅವರು, ತಾವು ನಡೆದ ಹಾದಿಯನ್ನು ಗಣಿತ–ಸಂಖ್ಯಾ ವಿಜ್ಞಾನದ ಹೆದ್ದಾರಿಯನ್ನಾಗಿಸಿ ಸ್ಟಾಟಿಸ್ಟಿಕ್ಸ್ ಕ್ಷೇತ್ರದ ಹಲವು ಪ್ರಥಮಗಳನ್ನು ಸಾಧಿಸಿ ತೋರಿಸಿದರು. ಕಲ್ಕತ್ತಾದಲ್ಲಿ ಸುದೀರ್ಘ ನಲವತ್ತು ವರ್ಷಗಳವರೆಗೆ ಸೇವೆ ಸಲ್ಲಿಸಿದರು.
ಸಾಧನೆಯ ಶಿಖರವೇರಿದ ಪ್ರತಿಭೆ
ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯುತ್ತಲೇ ಕಲಕತ್ತಾ ವಿವಿಯಿಂದ 1943ರಲ್ಲಿ ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ಬಂಗಾರದ ಪದಕದೊಂದಿಗೆ ಪ್ರಥಮ ರ‍್ಯಾಂಕ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಅಂದು ಪಡೆದ ಅಂಕಗಳ ದಾಖಲೆಯನ್ನು ಈ ದಿನದವರೆಗೂ ಯಾರೂ ಸರಿಗಟ್ಟಿಲ್ಲ. ಕೇಂಬ್ರಿಡ್ಜ್ ವಿ.ವಿ.ಯ ಭೌತತಜ್ಞ ಮಹಲ್ನೋಬಿಸ್ ಸ್ಥಾಪಿಸಿದ ‘ಐಎಸ್‌ಐ’ನಲ್ಲಿ ತರಬೇತಿಗೆ ಸೇರಿಕೊಂಡರು. ನಂತರದ ದಿನಗಳಲ್ಲಿ ಸಂಶೋಧನಾ ವಿದ್ಯಾರ್ಥಿ, ಸ್ಟಾಟಿಸ್ಟಿಕ್ಸ್ ವಿಭಾಗದ ಅಧೀಕ್ಷಕ, ಪ್ರಾಧ್ಯಾಪಕ ಮತ್ತು ಸಂಶೋಧನೆ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಮಹಲ್ನೋಬಿಸ್‌ರ ಸಾವಿನ ನಂತರ ‘ಐಎಸ್‌ಐ’ನ ನಿರ್ದೇಶಕರಾಗಿ, ‘ಜವಹರಲಾಲ್ ನೆಹರು ಪ್ರಾಧ್ಯಾಪಕ ಹುದ್ದೆ’ಯ ಗೌರವ ಮತ್ತು ರಾಷ್ಟ್ರೀಯ ಪ್ರಾಧ್ಯಾಪಕ ಗೌರವಕ್ಕೆ ಪಾತ್ರರಾದರು. ತಮ್ಮ 60ನೇ ವಯಸ್ಸಿನಲ್ಲಿ ನಿವೃತ್ತರಾದರು.
‘ಐಎಸ್‌ಐ’ನಲ್ಲಿದ್ದಾಗ 1946ರಲ್ಲಿ ಕೇಂಬ್ರಿಡ್ಜ್ ವಿ.ವಿ.ಯ ಆಹ್ವಾನದ ಮೇರೆಗೆ ಅಲ್ಲಿನ ಮಾನವಿಕ ವಿಜ್ಞಾನ ಮತ್ತು ಪುರಾತತ್ವ ವಿಜ್ಞಾನ ಮ್ಯೂಸಿಯಂನ ಯೋಜನೆಯೊಂದರಲ್ಲಿ ಭಾಗಿಯಾದರು. ಮಹಲ್ನೋಬಿಸ್‌ರ ವಿಧಾನವನ್ನು ಅನುಸರಿಸಿ ಕೆಲಸ ಮಾಡಿ, ಆಧುನಿಕ ಸ್ಟಾಟಿಸ್ಟಿಕ್ಸ್‌ನ ದಾತಾರನೆಂದು ಖ್ಯಾತರಾಗಿದ್ದ ಸರ್ ಆರ್.ಎ. ಫಿಶರ್ ಮಾರ್ಗದರ್ಶದಲ್ಲಿ 1948ರಲ್ಲಿ ಪಿಎಚ್.ಡಿ. ಪಡೆದರು. ವಿಶೇಷವೆಂದರೆ ಫಿಶರ್ ಮಾರ್ಗದರ್ಶನಲ್ಲಿ ಪಿಎಚ್.ಡಿ. ಪದವಿ ಪಡೆದ ಏಕೈಕ ವಿದ್ಯಾರ್ಥಿ ನಮ್ಮ ರಾವ್.
ಗಣಿತ ಮತ್ತು ಸ್ಟಾಟಿಸ್ಟಿಕ್ಸ್ ಕ್ಷೇತ್ರಕ್ಕೆ ರಾವ್ ಅವರು ನೀಡಿದ ಕೊಡುಗೆಯನ್ನು ಗಮನಿಸಿದ ಕೇಂಬ್ರಿಡ್ಜ್ ವಿ.ವಿ. 1965ರಲ್ಲಿ ‘ಡಾಕ್ಟರ್ ಆಫ್ ಸೈನ್ಸ್’ ಪದವಿಯನ್ನು ನೀಡಿ ಗೌರವಿಸಿತು. 1953ರಿಂದ 1979ರವರೆಗೆ ಅಮೆರಿಕದ ಓಹಿಯೋ, ಜಾನ್ ಹಾಪ್‌ಕಿನ್ಸ್, ಇಂಡಿಯಾನಾ, ಸ್ಟಾನ್‌ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ದುಡಿದರು. ‘ಐಎಸ್‌ಐ’ನಿಂದ ನಿವೃತ್ತರಾದ ನಂತರ, ಅಮೆರಿಕದ ಪಿಟ್ಸ್‌ಬರ್ಗ್ ಯೂನಿವರ್ಸಿಟಿಯಲ್ಲಿ 25 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ತಮ್ಮ 85ನೇ ವಯಸ್ಸಿನಲ್ಲಿ ನಿವೃತ್ತರಾದರು. ಇಷ್ಟೆಲ್ಲಾ ಸಾಧಿಸಿದ ರಾವ್ ಅವರು, ‘ಗಣಿತ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ಅವಕಾಶ ಸಿಗದೇ ಇದ್ದುದರಿಂದ ಆಕಸ್ಮಿಕವಾಗಿ ಸ್ಟಾಟಿಸ್ಟಿಕ್ಸ್ ಕ್ಷೇತ್ರಕ್ಕೆ ಬಂದೆ’ ಎಂದು ತಮ್ಮ ಜೀವನ ಕಥನದಲ್ಲಿ ಹೇಳಿಕೊಂಡಿದ್ದಾರೆ.
ಉನ್ನತ ಕೊಡುಗೆ
ಅಂಕಿ–ಅಂಶ ವಿಜ್ಞಾನದಲ್ಲಿ 70 ವರ್ಷಗಳ ರಚನಾತ್ಮಕ ಕೆಲಸ ಮಾಡಿದ ರಾವ್ ಅವರು, ಮಾನವ ಜೀವನದ ಮೇಲೆ ಪರಿಣಾಮ ಬೀರುವ ಹಲವು ಕ್ಷೇತ್ರಗಳಿಗೆ ತಮ್ಮ ಸಂಶೋಧನೆಗಳಿಂದ ನೆರವಾಗಿದ್ದಾರೆ. ಆರ್ಥಿಕ ಯೋಜನೆ, ಹವಾಮಾನ ಮುನ್ಸೂಚನೆ, ರೋಗ ಪತ್ತೆ ವಿಧಾನ, ಗುಪ್ತಚರ ವಿಮಾನಗಳ ಚಲನವಲನ, ತ್ವರಿತವಾಗಿ ಏರುತ್ತಿರುವ ಜನಸಂಖ್ಯೆ, ಹಬ್ಬುತ್ತಿರುವ ರೋಗಗಳು, ಏರುಪೇರಾಗುತ್ತಿರುವ ಹವಾಮಾನ, ಬೆಳೆಯ ಇಳುವರಿ ವ್ಯತ್ಯಾಸ, ಹಣದುಬ್ಬರ, ಬಡತನ, ಅರೋಗ್ಯ, ಉದ್ಯೋಗ, ಶಿಕ್ಷಣ, ಅಗತ್ಯ ವಸ್ತುಗಳ ಬೇಡಿಕೆ, ಸರಬರಾಜು, ಅಂತರಿಕ್ಷ ನೌಕೆಗಳ ಉಡಾವಣೆ ಮತ್ತು ಚಲನವಲನಗಳ ಮೇಲೆ ನಿಗಾದಂಥ ಬಹುಮುಖ್ಯ ವಿಷಯಗಳಿಗೆ ಅವರ ಸಂಶೋಧನೆಗಳು ಸಮಾಧಾನ ಮತ್ತು ಪರಿಹಾರ ಕಲ್ಪಿಸುತ್ತವೆ.
ಈಗ ಇಡೀ ಜಗತ್ತನ್ನು ತಲ್ಲಣಿಸಿ ಹಾಕಿರುವ ಕೊರೊನಾ ಪಿಡುಗಿನ ನಿಯಂತ್ರಣ, ರೋಗಿಗಳ ಸಂಖ್ಯೆ, ಸಾವಿನ ಏರಿಕೆ, ಚಿಕಿತ್ಸಾ ವ್ಯವಸ್ಥೆ, ಔಷಧಿಯ ಲಭ್ಯತೆ, ಹಣಕಾಸಿನ ನೆರವು ಮುಂತಾದ ಹಲವು ವಿಷಯಗಳ ವಸ್ತುನಿಷ್ಠ ಲೆಕ್ಕಾಚಾರಕ್ಕೆ ಸ್ಟಾಟಿಸ್ಟಿಕ್ಸ್‌ನ ಬಳಕೆ ಹೆಚ್ಚಾಗಿ ನಡೆಯುತ್ತಿದೆ. ರಾವ್ ಅವರು ಹೇಳುವ ಪ್ರಕಾರ, 2026ರ ವೇಳೆಗೆ ಸಾಮಾನ್ಯ ಜೀವನದಲ್ಲಿ ಸ್ಟಾಟಿಸ್ಟಿಕ್ಸ್‌ನ ಬಳಕೆ ಶೇಕಡಾ 36ರಷ್ಟು ಹೆಚ್ಚಲಿದೆ.
‘ಕ್ರಾಮರ್ರಾ–ವ್ ಇನ್ ಈಕ್ವಾಲಿಟಿ’, ‘ರಾವ್–ಬ್ಲ್ಯಾಕ್‌ವೆಲೈಜೇಶನ್’, ‘ಫಿಶರ್–ರಾವ್‌ಥೇರಂ’, ‘ರಾವ್‌ಡಿಸ್ಟೆನ್ಸ್’, ‘ರಾವ್ ಆರ್ಥೋಗೊನಲ್ ಅರೇಸ್’, ‘ಮಲ್ಟಿವೇರಿಯೇಟ್ ಅನಾಲಿಸಿಸ್ ಆಫ್ ವೇರಿಯೆನ್ಸ್’ – ಹೀಗೆ ಹಲವಾರು ಅತ್ಯುಪಯುಕ್ತ ಸಂಖ್ಯಾ ವಿಜ್ಞಾನದ ಸಲಕರಣೆಗಳನ್ನು ನೀಡಿರುವ ರಾವ್ ಅವರ ಅನೇಕ ಸಂಶೋಧನಾ ಪ್ರಬಂಧಗಳು ಭಾರತದ ವಿವಿಗಳಲ್ಲಿ ಗಣಿತ–ಸ್ಟಾಟಿಸ್ಟಿಕ್ಸ್‌ನ ಸಿಲಬಸ್‌ಗಳಾಗಿವೆ. ಇಂಜಿನಿಯರಿಂಗ್, ಎಕನೋಮಿಟ್ರಿಕ್ಸ್, ಬಯೊಮೆಟ್ರಿಕ್ಸ್, ಸ್ಟಾಟಿಸ್ಟಿಕ್ಸ್‌ನ ಪಠ್ಯಪುಸ್ತಕಗಳಲ್ಲಿ ಅವರ ಹೆಸರಿಲ್ಲದ ಪಾಠವೇ ಇಲ್ಲ. ವಿಶ್ವದ ಸ್ಟಾಟಿಸ್ಟಿಕಲ್ ನಕ್ಷೆಯಲ್ಲಿ ಭಾರತ ಕೇಂದ್ರ ಸ್ಥಾನದಲ್ಲಿರಬೇಕೆಂದು ನಿರ್ಧರಿಸಿ ಹಲವು ತರಬೇತಿ ಮತ್ತು ಸಂಶೋಧನಾ ಕೋರ್ಸ್‌ಗಳನ್ನು ರೂಪಿಸಿದ ರಾವ್ ಅವರು, ವಿಶ್ವಸಂಸ್ಥೆಯ ಸ್ಟಾಟಿಸ್ಟಿಕ್ಸ್ ವಿಭಾಗದ ಅಧ್ಯಕ್ಷರಾಗಿದ್ದಾಗ ಏಷ್ಯಾದ ದೇಶಗಳಿಗೆಂದೇ ಪ್ರತ್ಯೇಕ ಸ್ಟಾಟಿಸ್ಟಿಕ್ಸ್ ಸಂಸ್ಥೆಯ ಅವಶ್ಯಕತೆಯನ್ನು ಪ್ರತಿಪಾದಿಸಿದ್ದರು ಹಾಗೂ ಟೋಕಿಯೊದಲ್ಲಿ ‘ಏಶಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್’ ಸ್ಥಾಪಿಸಿದರು. ಹೈಸೆನ್‌ಬರ್ಗ್‌ನ ‘ಅನ್‌ಸರ್ಟೀನಿಟಿ’ ತತ್ವವನ್ನು ಸುಲಭವಾಗಿ ಗ್ರಹಿಸಲು ರಾವ್–ಕ್ರಾಮರ್ ನಿಯಮವನ್ನು ಅನ್ವಯಿಸಬೇಕು ಎಂಬ ಭೌತ ವಿಜ್ಞಾನಿಗಳ ಅಭಿಪ್ರಾಯ ರಾವ್ ಅವರ ಸಂಶೋಧನೆಗೆ ಸಿಕ್ಕ ಬಹು ದೊಡ್ಡ ಗೌರವ.
ಎಣೆ ಇಲ್ಲದ ಸಾಧನೆ, ಅಸಾಧಾರಣ ಮನ್ನಣೆ
ರಾವ್ ಅವರ ಸಂಶೋಧನಾ ಜೀವನ ಮತ್ತು ಕೊಡುಗೆಗಳನ್ನು ಆಯಾ ಕಾಲಕ್ಕೆ ಗುರುತಿಸಿರುವ ಸರ್ಕಾರಗಳು, ದೇಶಗಳು, ಸಂಸ್ಥೆಗಳು ಅವರಿಗೆ ಸಲ್ಲಲೇಬೇಕಾದ ಗೌರವ ಮನ್ನಣೆಗಳನ್ನು ನೀಡಿವೆ. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಪದ್ಮಭೂಷಣ, ಮೇಘನಾದ ಸಹಾ ಮೆಡಲ್, ಮಹಲ್ನೋಬಿಸ್ ಶತಮಾನೋತ್ಸವ ಮೆಡಲ್, ಪದ್ಮವಿಭೂಷಣ, ನ್ಯಾಶನಲ್ ಸೈನ್ಸ್ ಅಕಾಡೆಮಿಯ ಶ್ರೀನಿವಾಸ ರಾಮಾನುಜನ್ ಮೆಡಲ್, ವಿಜ್ಞಾನಿಗಳಿಗೆ ನೀಡುವ ಭಾರತ ಸರ್ಕಾರದ ಅತ್ಯುನ್ನತ ಗೌರವ ‘ಇಂಡಿಯಾ ಸೈನ್ಸ್’ ಬಹುಮಾನ, ಜೆ.ಸಿ. ಬೋಸ್ ಗೋಲ್ಡ್‌ಮೆಡಲ್ – ಹೀಗೆ ಭಾರತ ಸರ್ಕಾರದ, ಸಂಸ್ಥೆಗಳ ಹತ್ತು ಹಲವು ಉನ್ನತ ಗೌರವ ಪ್ರಶಸ್ತಿಗಳು ಅವರಿಗೆ ಸಂದಿವೆ.
ಅಮೆರಿಕ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ನ್ಯಾಷನಲ್ ಮೆಡಲ್ ಆಫ್ ಸೈನ್ಸ್’, ಬ್ರಿಟನ್‌ನ ರಾಯಲ್ ಸ್ಟಾಟಿಸ್ಟಿಕಲ್ ಸೊಸೈಟಿಯ ಗೈ ಸಿಲ್ವರ್ ಮೆಡಲ್ ಗೌರವಗಳೂ ಅವರ ಮುಡಿಗೇರಿವೆ. ಹದಿನೆಂಟು ದೇಶಗಳ 33 ಡಾಕ್ಟರೇಟ್‌ಗಳು, ಹಲವು ದೇಶಗಳ ಸ್ಟಾಟಿಸ್ಟಿಕಲ್ ಅಕಾಡೆಮಿಗಳ ಗೌರವ ಸದಸ್ಯತ್ವ ಸಂದಿವೆ.
ಅವರು ಬರೆದ 30ಕ್ಕೂ ಹೆಚ್ಚು ಪುಸ್ತಕಗಳು, ಪ್ರಕಟಿಸಿದ 450ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳು, ದೇಶಾದ್ಯಂತ ಅವರು ಸ್ಥಾಪಿಸಿದ ಸಂಶೋಧನಾ ಕೇಂದ್ರಗಳು ಅವರ ಹಿರಿಮೆಯನ್ನು ಸದಾ ಸಾರುತ್ತವೆ. ರಾವ್ ‘ಐಎಸ್‌ಐ’ ಸೇರಿದಾಗ ಸ್ಟಾಟಿಸ್ಟಿಕ್ಸ್ ಅನ್ನು ನಮ್ಮ ವಿಶ್ವವಿದ್ಯಾಲಯಗಳು ಸ್ವತಂತ್ರ ವಿಷಯವಾಗಿ ಪರಿಗಣಿಸುತ್ತಿರಲಿಲ್ಲ. ಅವರು ಎತ್ತರಕ್ಕೇರುತ್ತಿದ್ದಂತೆ ಎಲ್ಲವೂ ಬದಲಾಯಿತು. ಈಗ ಗಣಿತ ಬೋಧಿಸುವ ದೇಶದ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಸ್ಟಾಟಿಸ್ಟಿಕ್ಸ್ ವಿಷಯದ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಭಾರತ ಸರ್ಕಾರ ರಾವ್ ಅವರ ಹೆಸರಿನಲ್ಲಿ ಉನ್ನತ ಪ್ರಶಸ್ತಿ ಸ್ಥಾಪಿಸಿದೆ. ಸ್ಟಾಟಿಸ್ಟಿಕ್ಸ್ ಅಧ್ಯಯನಕ್ಕಾಗಿ ‘ಸಾಂಖ್ಯ’ ಎಂಬ ಮ್ಯೂಸಿಯಂನ್ನು ಹೈದ್ರಾಬಾದ್‌ನಲ್ಲಿ ಸ್ಥಾಪಿಸುವ ಉದ್ದೇಶ ಹೊಂದಿರುವ ರಾವ್ ಅವರು, ಅದಕ್ಕಾಗಿ ಈಗಲೂ ಶ್ರಮಿಸುತ್ತಿದ್ದಾರೆ.
ತೋಟಗಾರಿಕೆ, ಫೋಟೋಗ್ರಫಿ, ಅಡುಗೆ, ಭಾರತೀಯ ನೃತ್ಯ ಪ್ರಕಾರಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ರಾವ್ ಅವರು ತಮ್ಮ ಯೌವನದ ದಿನಗಳಲ್ಲಿ ಉತ್ತಮ ಫುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್ ಆಟಗಾರರಾಗಿದ್ದರು. ಗಣಿತ ಮತ್ತು ವಿಜ್ಞಾನದ ಒಲಿಂಪಿಯಾಡ್‌ಗಳಂತೆ ಸ್ಟಾಟಿಸ್ಟಿಕ್ಸ್ ವಿಷಯಕ್ಕೂ ಒಲಿಂಪಿಯಾಡ್ ಪ್ರಾರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
1970ರಲ್ಲಿ ದೆಹಲಿ ‘ಐಎಸ್‌ಐ’ಗೆ ಬಂದಾಗ, ದೆಹಲಿಯಲ್ಲಿ ಕೂಚಿಪುಡಿ ನೃತ್ಯ ಹೇಳಿಕೊಡುವ ಒಂದೇ ಒಂದು ಶಾಲೆ ಇಲ್ಲದ್ದನ್ನು ಗಮನಿಸಿ, ತಾವೇ ಕೂಚಿಪುಡಿ ನೃತ್ಯ ಅಕಾಡೆಮಿಯನ್ನು ಪ್ರಾರಂಭಿಸಿ ಉತ್ತೇಜನ ನೀಡಿದ್ದರು. ಜವಾಹರಲಾಲ್ ನೆಹರು ಭಟ್ನಾಗರ್ ಪ್ರಶಸ್ತಿ ನೀಡಿ ಗೌರವಿಸಿದಾಗ, ‘ವೈಯಕ್ತಿಕ ಸಾಧನೆಯ ಸಂತೋಷಕ್ಕಿಂತ ನಮ್ಮ ಸೇನೆಗಳ ಕ್ಷೇಮ ಮುಖ್ಯ’ ಎಂದು ಹೇಳಿ ಪ್ರಶಸ್ತಿಯ ಹಣವನ್ನು ಭಾರತೀಯ ಸೇನೆಗೆ ನೀಡಿದ್ದರು. ನಿಮಗೆ ಅತ್ಯಂತ್ತ ತೃಪ್ತಿ ನೀಡಿದ ನಿಮ್ಮ ಸಾಧನೆ ಯಾವುದು ಎನ್ನುವ ಪ್ರಶ್ನೆಯೊಂದಕ್ಕೆ, ‘ಸ್ಟಾಟಿಸ್ಟಿಕ್ಸ್‌ನಲ್ಲಿ ನನ್ನ ವಿದ್ಯಾರ್ಥಿಗಳು ಮಾಡುತ್ತಿರುವ ಕೆಲಸ’ ಎನ್ನುವ ಉತ್ತರ ಅವರ ವ್ಯಕ್ತಿತ್ವಕ್ಕೆ ತಕ್ಕಂತಿದೆ.
ಈ ವರ್ಷದ ಸೆಪ್ಟೆಂಬರ್ 10ಕ್ಕೆ ರಾವ್ ಅವರಿಗೆ 100 ವರ್ಷ ತುಂಬುತ್ತಿದೆ. ಅಮೆರಿಕದಲ್ಲಿ ಕಳೆದ ಒಂದು ವರ್ಷದಿಂದ ರಾವ್ ಅವರ ಜನ್ಮಶತಮಾನೋತ್ಸವ ಆಚರಣೆ ನಡೆಯುತ್ತಿದೆ. ನಾವು ಮಾತ್ರ ಅವರು ನಮಗೆ ಗೊತ್ತೇ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದೇವೆ. ಇಲ್ಲಿನ ಯಾವ ಸರ್ಕಾರಿ ಸಂಸ್ಥೆಯಾಗಲಿ, ‘ಐಎಸ್‌ಐ’ಗಳಾಗಲಿ, ವಿಶ್ವವಿದ್ಯಾಲಯಗಳಾಗಲಿ ಒಂದೇ ಒಂದು ಕಾರ್ಯಕ್ರಮ ಆಯೋಜಿಸಿಲ್ಲ. ‘ರಾವ್ ಅವರಿಗೆ ನೂರು ತುಂಬುತ್ತಿದೆಯಲ್ಲ, ಏನಾದರೂ ಮಾಡುತ್ತಿದ್ದೀರಾ?’ ಎಂದು ದೆಹಲಿ, ಬೆಂಗಳೂರು, ಹೈದ್ರಾಬಾದ್ ‘ಐಎಸ್‌ಐ’ಗಳ ಪ್ರೊಫೆಸರ್‌ಗಳನ್ನು ಕೇಳಿದ್ದಕ್ಕೆ ದೊರೆತ ಉತ್ತರ: ‘ಅಂತ ಯಾವ ಕಾರ್ಯಕ್ರಮವೂ ನಮ್ಮಲ್ಲಿಲ್ಲವಲ್ಲ’. ‘ಓ, ಅಭಿ ಜಿಂದಾ ಹೈ ಕ್ಯಾ?’ ಎಂದು ನನ್ನನ್ನೇ ಪ್ರಶ್ನಿಸಿದರು. ಇದು ನಮ್ಮವರು ರಾವ್ ಅವರ ಸಾಧನೆಗೆ ತೋರಿಸುತ್ತಿರುವ ಮರ್ಯಾದೆ! ಅಪವಾದವೆಂಬಂತೆ, ನಮ್ಮ ‘ಮಣಿಪಾಲ ಉನ್ನತ ಶಿಕ್ಷಣ ಅಧ್ಯಯನ ಅಕಾಡೆಮಿ’ ರಾವ್ ಅವರ ಕುರಿತು ಇದೇ ಡಿಸೆಂಬರ್‌ನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿದೆ.
ಇಂಗ್ಲೆಂಡ್, ಅಮೆರಿಕ ಮತ್ತು ಭಾರತದ ಪೌರತ್ವ ಹೊಂದಿರುವ ರಾವ್ ತಮ್ಮ ವಿಶ್ರಾಂತ ಜೀವನವನ್ನು ಅಮೆರಿಕದ ಫ್ಲಾರಿಡಾದಲ್ಲಿ ಕಳೆಯುತ್ತಿದ್ದಾರೆ. ನೂರು ವಸಂತಗಳನ್ನು ಕಂಡ ಮಾಗಿದ ಜೀವ ಈಗಲೂ ಸ್ಟಾಟಿಸ್ಟಿಕ್ಸ್ ವಿಷಯದ ಸಂಶೋಧನೆಗೆ, ಅಧ್ಯಯನ ಸಂಸ್ಥೆಗಳ ಅಭಿವೃದ್ಧಿಗೆ ತುಡಿಯುತ್ತಲೇ ಇದೆ.
ಹೂವಿನ ಹಡಗಲಿಯಲ್ಲಿ ಹುಟ್ಟಿ ಇಡೀ ವಿಶ್ವಕ್ಕೆ ಕಂಪು ಬೀರಿದ ಕೀರ್ತಿ ರಾವ್‌ಗೆ ಸಲ್ಲುತ್ತದೆ. ರಾವ್ ಅವರ ಪತ್ನಿ ಭಾರ್ಗವಿ ಮನಃಶಾಸ್ತ್ರ ಮತ್ತು ಇತಿಹಾಸ ವಿಷಯಗಳಲ್ಲಿ ಪಿಎಚ್.ಡಿ. ಪಡೆದಿದ್ದಾರೆ. ಕೆಲವು ವರ್ಷಗಳ ಕಾಲ ಜಾಧವಪುರ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದ್ದಾರೆ. ಮಗಳು ಅಶ್ವಿನಿ ಭರತನಾಟ್ಯ ಪ್ರವೀಣೆಯಾಗಿದ್ದು ಪೋಷಕಾಂಶ ವಿಜ್ಞಾನದಲ್ಲಿ ಪಿಎಚ್.ಡಿ. ಪಡೆದಿದ್ದಾರೆ. ‘ನಾಟ್ಯ’ ಎಂಬ ನೃತ್ಯ ತರಬೇತಿ ಶಾಲೆಯನ್ನೂ ನಡೆಸುತ್ತಿದ್ದಾರೆ. ಮಗ ವೀರೇಂದ್ರ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದ್ದು, ಅಮೆರಿಕದಲ್ಲಿ ನೆಲೆಸಿ ಸ್ವಂತ ಕಂಪ್ಯೂಟರ್ ಉದ್ಯಮ ನಡೆಸುತ್ತಿದ್ದಾರೆ.
‘ವೈಯಕ್ತಿಕ ಸಾಧನೆಯ ಸಂತೋಷಕ್ಕಿಂತ ನಮ್ಮ ಸೇನೆಗಳ ಕ್ಷೇಮ ಮುಖ್ಯ. ನಾನು ಈ ಜವಾಹರಲಾಲ್ ನೆಹರು ಭಟ್ನಾಗರ್ ಪ್ರಶಸ್ತಿಯ ಹಣವನ್ನು ಭಾರತೀಯ ಸೇನೆಗೆ ನೀಡುವೆ' ಎನ್ನುತ್ತಾರೆಡಾ. ಸಿ.ಆರ್. ರಾವ್.
ಪ್ರತಿಕ್ರಿಯಿಸಿ: feedback@sudha.co.in
(ಪ್ರಚಲಿತ ಸಂಗತಿಗಳ ಮಾಹಿತಿ, ವಿಶ್ಲೇಷಣೆ, ಸದಭಿರುಚಿಯ ನುಡಿಚಿತ್ರ, ಧಾರಾವಾಹಿ, ಕಥೆಗಳಿಗಾಗಿ ಪ್ರತಿವಾರ ಸುಧಾ ಓದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.