ADVERTISEMENT

ಅಂತರ್ಜಾಲ ವಿಳಾಸದ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 19:30 IST
Last Updated 28 ನವೆಂಬರ್ 2017, 19:30 IST
ಅಂತರ್ಜಾಲ ವಿಳಾಸದ ಆಯ್ಕೆ
ಅಂತರ್ಜಾಲ ವಿಳಾಸದ ಆಯ್ಕೆ   

ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಹೊಸ ಉದ್ಯಮ ಆರಂಭಿಸುವಾಗ ಅದಕ್ಕೆ ಸಂಬಂಧಿಸಿ ಒಂದು ವೆಬ್‌ಸೈಟ್‌ (ಅಂತರ್ಜಾಲ ತಾಣ) ರೂಪಿಸುವುದು ಉದ್ಯಮದ ವಿಸ್ತರಣೆಯ ದೃಷ್ಟಿಯಿಂದ ಒಳ್ಳೆಯದು. ಈ ತಾಣವನ್ನು ಬಳಸಿಕೊಂಡು ಇಂಟರ್‌ನೆಟ್‌ ಮೂಲಕ ಉದ್ಯಮವನ್ನು ಬಹುಬೇಗ ಜನರಿಗೆ ತಲುಪಿಸಬಹುದು.

ನವೋದ್ಯಮಕ್ಕೆ ಚಿಮ್ಮು ಹಲಗೆಯಾಗಬಲ್ಲ ವೆಬ್‌ಸೈಟ್‌ ಅನ್ನು ರೂಪಿಸುವುದು ಎಷ್ಟು ಮುಖ್ಯವೋ, ಅದಕ್ಕೂ ಮೊದಲು ಅದರ ‘ವಿಳಾಸ’ ಅಥವಾ ‘ಡೊಮೇನ್‌ ನೇಮ್‌’ ಆಯ್ಕೆ ಮಾಡುವುದು ಕೂಡ ಅಷ್ಟೇ ಮುಖ್ಯ. ಸಾಗರದಂತಿರುವ ಇಂಟರ್‌ನೆಟ್‌ ಲೋಕದಲ್ಲಿ ಹೊಸ ಉದ್ಯಮವನ್ನು ಜನ ಗುರುತಿಸುವಂತೆ ಮಾಡಬೇಕಾದರೆ ಯೋಗ್ಯವಾದ ವೆಬ್‌ ವಿಳಾಸವನ್ನು ಆಯ್ಕೆ ಮಾಡಬೇಕು. ಹೊಸ ಉದ್ಯಮದ ಬಗ್ಗೆ, ಅದರ ಉತ್ಪನ್ನಗಳು ಮತ್ತು ನೀಡುವ ಸೇವೆಗಳ ಬಗ್ಗೆ ಇಂಟರ್‌ನೆಟ್‌ ಬಳಕೆದಾರರಿಗೆ ಹುಡುಕಾಡಲು ಈ ವಿಳಾಸ ನೆರವಾಗುತ್ತದೆ.

ವೆಬ್‌ ವಿಳಾಸವನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಕೆಲವು ಸಂಗತಿಗಳನ್ನು ಇಂಟರ್‌ನೆಟ್‌ ಭದ್ರತೆ ಮತ್ತು ಡೊಮೇನ್‌ ಹೆಸರುಗಳ ಕ್ಷೇತ್ರಗಳ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಅಮೆರಿಕದ ಪ್ರತಿಷ್ಠಿತ ಸಂಸ್ಥೆ ‘ವೆರಿಸೈನ್‌’ (www.verisign.com) ಪಟ್ಟಿ ಮಾಡಿದೆ.

ADVERTISEMENT

ಡೊಮೇನ್‌ಗಳ ಆಯ್ಕೆ: ಇಂಟರ್‌ನೆಟ್‌ ಜಗತ್ತಿನಲ್ಲಿ ಹಲವು ಡೊಮೇನ್‌ಗಳು ಲಭ್ಯವಿವೆ. ಡಾಟ್‌ ಕಾಮ್‌ (.com), ಡಾಟ್‌ ನೆಟ್‌ (.net) ಡಾಟ್ ನೇಮ್‌ (.name), ಡಾಟ್‌ ಸಿಸಿ (.cc), ಡಾಟ್‌ ಟಿವಿ (.tv) ಇತ್ಯಾದಿ.

ಒಂದು ವೆಬ್‌ಸೈಟ್‌ ವಿಳಾಸದಲ್ಲಿ (xxxxxx.com/net ಇತ್ಯಾದಿ) ಚುಕ್ಕಿ (ಡಾಟ್‌ .) ಚಿಹ್ನೆಯ ಎಡಬದಿಯಷ್ಟೇ ಮಹತ್ವ ಬಲಬದಿಗೂ ಇದೆ. ಹೀಗಾಗಿ, ಡೊಮೇನ್‌ಗಳನ್ನು ಆಯ್ಕೆ ಮಾಡುವಾಗಲೂ ಉದ್ಯಮಿಗಳು ಎರಡೆರಡು ಬಾರಿ ಯೋಚಿಸಬೇಕು.

ಈಗಲೂ ಮುಂಚೂಣಿಯಲ್ಲಿ: 32 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಡಾಟ್‌ ಕಾಮ್‌ ಡೊಮೇನ್‌ ಈಗಲೂ ಜಗತ್ತಿನ ಅತ್ಯಂತ ಹೆಚ್ಚು ಜನಪ್ರಿಯ ಡೊಮೇನ್‌ಗಳಲ್ಲಿ ಒಂದು. ‌ಯಾವುದೇ ಉದ್ಯಮದ ವೈಶಿಷ್ಟ್ಯವನ್ನು ಆನ್‌ಲೈನ್‌ನಲ್ಲಿ ಗುರುತಿಸಿಕೊಳ್ಳಲು ಈ ಡೊಮೇನ್‌ ಹೆಚ್ಚು ಸಹಾಯ ಮಾಡುತ್ತದೆ. ಜಾಗತಿಕ ಮಟ್ಟದ ಇಂಟರ್‌ನೆಟ್‌ನಲ್ಲಿ ಹೆಚ್ಚು ವಿಶ್ವಾಸಾರ್ಹತೆಯನ್ನೂ ಇದು ಉಳಿಸಿಕೊಂಡಿದೆ. ಹೀಗಾಗಿ, ವೆಬ್‌ ವಿಳಾಸದ ಹುಡುಕಾಟದ ಸಂದರ್ಭದಲ್ಲಿ ಡಾಟ್‌ ಕಾಮ್‌ ಡೊಮೇನ್‌ ಅನ್ನು ನಿರ್ಲಕ್ಷಿಸುವಂತಿಲ್ಲ.

ಆಕರ್ಷಕವಾಗಿರಲಿ: ವೆಬ್‌ ವಿಳಾಸ ಹೆಚ್ಚು ಆಕರ್ಷಕವಾಗಿದ್ದಷ್ಟು ಒಳ್ಳೆಯದು. ಕಡಿಮೆ ಅವಧಿಯಲ್ಲಿ ಇಂಟರ್‌ನೆಟ್‌ ಬಳಕೆದಾರರ ಚಿತ್ತವನ್ನು ಹಿಡಿದಿಡುವುದು ಅತ್ಯಂತ ಮುಖ್ಯ. ಸೃಜನಶೀಲ ಮತ್ತು ಸುಲಭವಾಗಿ ನೆನಪಿಡಬಹುದಾದಂತಹ ವೆಬ್‌ ವಿಳಾಸಗಳು ಜನರನ್ನು ಬೇಗ ಸೆಳೆಯುತ್ತವೆ.

ಕೆಲವು ಪ್ರಮುಖ ಅಕ್ಷರಗಳು (ಕೀ ವರ್ಡ್‌), ಘೋಷವಾಕ್ಯ, ಉದ್ಯಮದ ಉತ್ಪನ್ನಗಳು ಅಥವಾ ಸೇವೆಗಳ ಹೆಸರುಗಳು ಅಥವಾ ಉದ್ಯಮವನ್ನು ವಿವರಿಸುವ ವಿಶಿಷ್ಟ ಪದಗಳನ್ನು ವೆಬ್‌ ವಿಳಾಸದಲ್ಲಿ ಬಳಸಬಹುದು.

ವೆರಿಸೈನ್‌ ನಡೆಸಿರುವ ಅಧ್ಯಯನದ ಪ್ರಕಾರ, ಬಳಕೆದಾರರು ಶೋಧತಾಣಗಳಲ್ಲಿ ಹುಡುಕಲು ಬಳಸಿರುವ ಕೀವರ್ಡ್‌ಗಳ ಪೈಕಿ ಕನಿಷ್ಠ ಒಂದು ಕೀ ವರ್ಡ್‌ ಹೊಂದಿರುವ ವೆಬ್‌ ವಿಳಾಸಗಳಿಗೆ ಅವರು ಭೇಟಿ ನೀಡುವ ಸಾಧ್ಯತೆ ಎರಡು ಪಟ್ಟು ಹೆಚ್ಚಿರುತ್ತದೆ.

ಸಂಕ್ಷಿಪ್ತವಾಗಿರಬೇಕೆಂದಿಲ್ಲ: ಪ್ರಸ್ತುತ, ಡಾಟ್‌ ಕಾಮ್‌ ವೆಬ್‌ ವಿಳಾಸಗಳಲ್ಲಿರುವ ಸರಾಸರಿ ಅಕ್ಷರಗಳ ಸಂಖ್ಯೆ 13. ಹೀಗಾಗಿ, ನಾವು ಆಯ್ಕೆ ಮಾಡುವ ವೆಬ್‌ವಿಳಾಸಗಳಲ್ಲಿ ಕಡಿಮೆ ಅಕ್ಷರಗಳಿರಬೇಕೆಂದಿಲ್ಲ.

ಒಂದೇ ವಿಳಾಸಕ್ಕೆ ಜೋತು ಬೀಳುವುದು ಬೇಡ: ಒಂದು ವೆಬ್‌ ವಿಳಾಸವನ್ನು ಆಯ್ಕೆ ಮಾಡಿ ಸುಮ್ಮನಿರುವುದು ಬೇಡ. ಡಾಟ್‌ ಕಾಮ್‌ ಡೊಮೇನ್‌ನಲ್ಲಿ ಒಂದು ವಿಳಾಸ ಆಯ್ಕೆ ಮಾಡಿಕೊಂಡಿದ್ದರೆ, ಡಾಟ್‌ ನೆಟ್‌ನಂತಹ ಬೇರೆ ಡೊಮೇನ್‌ಗಳಲ್ಲೂ ವೆಬ್‌ ವಿಳಾಸ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯ ನಿರ್ಧಾರವಾದೀತು. ಈ ವಿಳಾಸಗಳನ್ನು ಬೇರೆ ಬೇರೆ ಮಾರ್ಕೆಟಿಂಗ್‌ ಉದ್ದೇಶಗಳಿಗೆ ಬಳಸಬಹುದು ಅಥವಾ ಮೊದಲು ಆಯ್ಕೆ ಮಾಡಿದ್ದ ಡಾಟ್‌ ಕಾಮ್‌ ಡೊಮೇನಿನ ವೆಬ್‌ ವಿಳಾಸಕ್ಕೆ ಇಂಟರ್‌ನೆಟ್ ಟ್ರಾಫಿಕ್‌ ಬರುವಂತೆ ಮಾಡಲೂ ಇವುಗಳನ್ನು ಬಳಸಬಹುದು.

ಇದಲ್ಲದೇ, ಬೇರೆ ಬೇರೆ ಡೊಮೇನ್‌ಗಳಲ್ಲಿ ವೆಬ್‌ ವಿಳಾಸವನ್ನು ನೋಂದಣಿ ಮಾಡಿಕೊಳ್ಳುವುದರಿಂದ ಕಂಪೆನಿಯ ಬ್ರ್ಯಾಂಡ್‌ಗಳನ್ನು ಆನ್‌ಲೈನ್‌ನಲ್ಲಿ ಪ್ರಚುರಪಡಿಸುವುದರ ಮೇಲೆ ನಿಯಂತ್ರಣ ಇಡುವುದಕ್ಕೆ ಸಾಧ್ಯವಾಗಬಹುದು. ಜೊತೆಗೆ ಪ್ರತಿಸ್ಪರ್ಧಿ ಕಂಪೆನಿಗಳು ನಮ್ಮ ಉದ್ಯಮದ ಹೆಸರಿನಲ್ಲಿ ಬೇರೆ ಡೊಮೇನ್‌ಗಳಲ್ಲಿ ವೆಬ್‌ವಿಳಾಸ ನೋಂದಣಿ ಮಾಡುವುದನ್ನು ತಪ್ಪಿಸಬಹುದು.

ನೋಂದಣಿ ಮಾಡಿ: ವೆಬ್‌ ವಿಳಾಸವನ್ನು ಆಯ್ಕೆ ಮಾಡಿದ ಮೇಲೆ ತಕ್ಷಣ ಅವುಗಳನ್ನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ತಡವಾದಷ್ಟು ವಿಳಾಸಗಳು ನಮ್ಮ ಕೈತಪ್ಪುವ ಸಾಧ್ಯತೆ ಇರುತ್ತದೆ. ವೆಬ್‌ ವಿಳಾಸ ನೋಂದಣಿ ಮಾಡುವ ಹಲವು ಸಂಸ್ಥೆಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.