ADVERTISEMENT

ಇಮೇಲ್‌ ಸ್ವೀಕರಿಸಿದವರ ಮಾಹಿತಿ ಗುಟ್ಟಾಗಿರಿಸಲು...

ದಯಾನಂದ ಎಚ್‌.ಎಚ್‌.
Published 30 ಆಗಸ್ಟ್ 2017, 19:30 IST
Last Updated 30 ಆಗಸ್ಟ್ 2017, 19:30 IST
ಇಮೇಲ್‌ ಸ್ವೀಕರಿಸಿದವರ ಮಾಹಿತಿ ಗುಟ್ಟಾಗಿರಿಸಲು...
ಇಮೇಲ್‌ ಸ್ವೀಕರಿಸಿದವರ ಮಾಹಿತಿ ಗುಟ್ಟಾಗಿರಿಸಲು...   

ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್‌ ಹೇಳಿದ ಬಳಿಕ ಖಾಸಗಿ ವಿಚಾರಗಳ ಬಗ್ಗೆ ಚರ್ಚೆ ಹೆಚ್ಚಾಗುತ್ತಿದೆ. ಅದರಲ್ಲೂ ತಂತ್ರಾಂಶದ ಜತೆಗೆ ಅಂಟಿಕೊಂಡಿರುವ ಖಾಸಗಿತನದ ಬಗ್ಗೆ ಚರ್ಚೆಗಳು ಜೋರಾಗಿವೆ. ಒಂದು ಖಾಸಗಿ ಇಮೇಲ್‌ ಅನ್ನು ಹಲವರಿಗೆ ಕಳಿಸುವ ಸಂದರ್ಭದಲ್ಲಿ ಆ ಮೇಲ್‌ ಅನ್ನು ಉಳಿದ ಯಾರೊಂದಿಗೆಲ್ಲಾ ಹಂಚಿಕೊಳ್ಳಲಾಗಿದೆ ಎಂಬುದೂ ಖಾಸಗಿ ವಿಚಾರವೇ.

ಒಂದೇ ಇಮೇಲ್‌ ಅನ್ನು ಒಬ್ಬರಿಗಿಂತ ಹೆಚ್ಚು ಮಂದಿಗೆ ಕಳಿಸುವ ಸಂದರ್ಭದಲ್ಲಿ ಆ ಇಮೇಲ್‌ ಅನ್ನು ಯಾರು ಯಾರಿಗೆಲ್ಲಾ ಕಳಿಸಲಾಗಿದೆ ಎಂಬುದನ್ನು ಗುಟ್ಟಾಗಿಡುವ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಹೀಗೆ ಇಮೇಲ್‌ ಸ್ವೀಕರಿಸಿದವರ ಹೆಸರನ್ನು ಗುಟ್ಟಾಗಿಡುವ (Undisclosed recipients) ವಿಧಾನದ ಬಗ್ಗೆ ಈ ವಾರ ತಿಳಿಯೋಣ.

ಮೊದಲಿಗೆ ನೀವು ಯಾರಿಗೆಲ್ಲಾ ಇಮೇಲ್‌ ಕಳಿಸಬೇಕು ಎಂಬುದನ್ನು ಪಟ್ಟಿ ಮಾಡಿಕೊಳ್ಳಿ. ಇಮೇಲ್‌ ಅಕೌಂಟ್ ಗೆ ಸೈನ್‌ ಇನ್‌ ಆದ ಬಳಿಕ ಕಂಪೋಸ್‌ ಮೇಲೆ ಕ್ಲಿಕ್‌ ಮಾಡಿ. ಇಲ್ಲಿ to ಇರುವಲ್ಲಿ ಏನನ್ನೂ ಟೈಪ್‌ ಮಾಡಬೇಡಿ. Bcc ಕ್ಲಿಕ್‌ ಮಾಡಿ ಇಲ್ಲಿ ನೀವು ಯಾರಿಗೆಲ್ಲಾ ಇಮೇಲ್‌ ಕಳಿಸಬೇಕೋ ಅವರ ಇಮೇಲ್‌ ಐಡಿ ಟೈಪ್‌ ಮಾಡುತ್ತಾ ಹೋಗಿ. ಕೊನೆಗೆ ಮೇಲ್‌ ಬಾಡಿಯಲ್ಲಿ ವಿವರ ಬರೆದು, ಸಬ್ಜೆಕ್ಟ್‌ ನೀಡಿ send ಒತ್ತಿ.

ADVERTISEMENT

ಈಗ ನೀವು ಕಳಿಸಿದ ಇಮೇಲ್‌ ಸ್ವೀಕರಿಸಿದವರಿಗೆ ಉಳಿದ ಯಾರಿಗೆಲ್ಲಾ ಆ ಮೇಲ್‌ ಹೋಗಿದೆ ಎಂಬುದು ಗೊತ್ತಾಗುವುದಿಲ್ಲ. ಸ್ವೀಕರಿಸಿದವರ ಮೇಲ್ ಡೀಟೇಲ್ಸ್‌ ನಲ್ಲಿ to ಎಂಬ ಕಡೆ undisclosed-recipients ಎಂದು ಕಾಣಿಸಿಕೊಳ್ಳುತ್ತದೆ. ನೀವು ಕಳಿಸಿದ ಇಮೇಲ್‌ ಎಲ್ಲರಿಗೂ ಹೋಗಿರುತ್ತದೆ. ಆದರೆ, ಮೇಲ್‌ ಸ್ವೀಕರಿಸಿದವರಿಗೆ ತಮ್ಮನ್ನು ಬಿಟ್ಟು ಬೇರೆ ಯಾರಿಗೆ ಈ ಮೇಲ್‌ ಕಳಿಸಲಾಗಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುವುದಿಲ್ಲ.

ತೀರಾ ಖಾಸಗಿಯಾದ ಇಮೇಲ್‌ ಕಳಿಸುವಾಗ ಮಾತ್ರ ಈ ವಿಧಾನ ಬಳಸಬಹುದು. ಕಚೇರಿ ಕೆಲಸ ಹಾಗೂ ತಂಡದ ಕೆಲಸದ ಮಾಹಿತಿಯನ್ನು ಮೇಲ್‌ ಮೂಲಕ ಹಂಚಿಕೊಳ್ಳಬೇಕಾದ ಸಂದರ್ಭದಲ್ಲಿ ಈ ವಿಧಾನ ಅನಗತ್ಯ. ಕಚೇರಿ ಕೆಲಸಗಳಲ್ಲಿ ಇಮೇಲ್‌ ಅನ್ನು ಯಾರಿಗೆಲ್ಲಾ ಕಳಿಸಲಾಗಿದೆ ಎಂಬ ಮಾಹಿತಿ ಮೇಲ್‌ ಸ್ವೀಕರಿಸಿದ ಎಲ್ಲರಿಗೂ ತಿಳಿಯುವುದು ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.