ADVERTISEMENT

ಟರ್ಮಿನೇಟರ್ ಮಾದರಿ ರೊಬೊ

ಈರಪ್ಪ ಹಳಕಟ್ಟಿ
Published 15 ಅಕ್ಟೋಬರ್ 2013, 19:30 IST
Last Updated 15 ಅಕ್ಟೋಬರ್ 2013, 19:30 IST
ಟರ್ಮಿನೇಟರ್ ಮಾದರಿ ರೊಬೊ
ಟರ್ಮಿನೇಟರ್ ಮಾದರಿ ರೊಬೊ   

ಹಾಲಿವುಡ್ ಸಿನಿಮಾ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದ, ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಗವರ್ನರ್ ಆಗಿದ್ದ ಅರ್ನಾಲ್ಡ್ ಸ್ಕವರ್ನಜರ್ ನಟಿಸಿರುವ ಟರ್ಮಿನೇಟರ್ ಚಿತ್ರ ಸರಣಿ ಯಾರಿಗೆ ತಾನೆ ಗೊತ್ತಿಲ್ಲ. ಮಾನವ ಮತ್ತು ಯಂತ್ರಮಾನವನ ನಡುವೆ ನಡೆಯುವ ಶೀತಲ ಸಮರದ ಕಥಾನಕ ವುಳ್ಳ ಈ ಚಿತ್ರಗಳಲ್ಲಿ ಚಿತ್ರವಿಚಿತ್ರ ರೊಬೊಟ್‌ ನಡೆಸುವ ಸಾಹಸಗಳು ರೋಮಾಂಚಕ.

ಇದೀಗ ಇದೇ ಮಾದರಿಯ ರೊಬೊಗಳನ್ನು ಸಿದ್ಧಪಡಿಸಲು ಮುಂದಾಗಿರುವ ‘ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಎಂಐಟಿ) ತಂತ್ರಜ್ಞರು, ಗಾಳಿಯಲ್ಲಿ ಹಾರುವ, ಪರಸ್ಪರ ಮೇಲೆರಗಿ ಸೆಣಸುವ ಮತ್ತು ಅಂದುಕೊಂಡ ರೂಪವನ್ನು ಸ್ವಯಂಚಾಲಿತವಾಗಿ ಬದಲಿಸಿಕೊಳ್ಳುವ ಟರ್ಮಿನೇಟರ್ ಮಾದರಿಯ ದೊಡ್ಡ ಆಕಾರದ ರೊಬೊಗಳನ್ನು ಅಭಿವೃದ್ಧಿ ಪಡಿಸಿರುವುದಾಗಿ ಹೇಳಿದ್ದಾರೆ.

ಸುಧಾರಿತ ಮಾದರಿಯ ಈ ರೊಬೊಗಳನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಸೇತುವೆಗಳು ಅಥವಾ ಕಟ್ಟಡಗಳ ರಿಪೇರಿ ಕಾರ್ಯ ನಡೆಸಲು, ವಿವಿಧ ಪೀಠೋಪಕರಣಗಳನ್ನು ಹಾಗೂ ಭಾರಿ ತೂಕದ ವಸ್ತುಗಳನ್ನು ಜೋಡಿಸಲು ಬಳಸಿ ಕೊಳ್ಳಬಹುದಾಗಿದೆ ಎಂದು ವಿವರಿಸಿದ್ದಾರೆ ಎಂಐಟಿ ತಂತ್ರಜ್ಞರು.

ಈ ರೊಬೊಗಳು ಪರಸ್ಪರ ಒಂದರ ಮೇಲೊಂದು ಹತ್ತುತ್ತವೆ. ಗಾಳಿಯಲ್ಲಿ ಹಾರುತ್ತವೆ. ಮೈದಾನದ ತುಂಬ ಉರುಳಾಡುತ್ತವೆ. ಅಷ್ಟೇ ಅಲ್ಲದೇ, ಲೋಹದ ಮೇಲ್ಮೈವುಳ್ಳ ಕಂಬಗಳನ್ನು ತಲೆಕೆಳಗಾಗಿ ಕೂಡ ಏರುತ್ತವೆ ಎನ್ನುತ್ತದೆ ಈ ವಿಶೇಷ ಯಂತ್ರಮಾನವರನ್ನು ಸೃಷ್ಟಿಸಿದ ತಂಡ.

ಟರ್ಮಿನೇಟರ್ ಮಾದರಿಯ ಈ ರೊಬೊಗಳ ಒಳಗೆ ನಿಯಂತ್ರಕ ಚಕ್ರವನ್ನು (flywheel) ಜೋಡಿಸಲಾಗಿದ್ದು, ಈ ಚಕ್ರವು ನಿಮಿಷಕ್ಕೆ 20 ಸಾವಿರ ಆವರ್ತಗಳ ವೇಗದಿಂದ ಚಲಿಸುತ್ತದೆ. ಇದಕ್ಕೆ ತಡೆಯುಂಟಾದಾಗ ಅದು ಘನ ಆಕಾರದಲ್ಲಿ ಕೋನೀಯ ಆವೇಗ ಪಡೆಯುತ್ತದೆ.
ಈ ರೊಬೊಗಳ ಮೇಲ್ಮೈ  ಆಯಸ್ಕಾಂತದಿಂದ ರಚಿಸಲಾಗಿದ್ದು, ಅದರಿಂದಾಗಿ ಇವು ಪರಸ್ಪರ ಆಕರ್ಷಣಗೆ ಒಳಗಾಗುತ್ತವೆ.

‘ಈ ವಿಶಿಷ್ಟ ಯಂತ್ರಮಾನವರ ಮಾದರಿಯನ್ನು (ಮಾಡ್ಯುಲರ್ ರೊಬೊಟಿಕ್ಸ್) ತಯಾರಿಸಲು ತಂತ್ರಜ್ಞರ ತಂಡವು ಬಹಳ ದೀರ್ಘ ಕಾಲ ಸಂಶೋಧನೆ ನಡೆಸಿದೆ’ ಎನ್ನುತ್ತಾರೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಹಾಗೂ ಎಂಐಟಿಯ ಕಂಪ್ಯೂಟರ್ ಸೈನ್ಸ್  ಮತ್ತು  ಆರ್ಟಿ ಫಿಷಲ್ ಇಂಟೆಲಿಜೆನ್ಸ್ ಲ್ಯಾಬೊರೇಟರಿ (ಸಿಎಸ್ಎಐಎಲ್) ನಿರ್ದೇಶಕರಾದ ಡೇನಿಯಲ್ ರುಸ್.

‘ನಮಗೆ ಸೃಜನಶೀಲವಾದ ಒಳನೋಟವೊಂದರ ಅಗತ್ಯವಿದೆ. ಇದನ್ನು ಯಾರಾದರೂ ಭಾವೋದ್ರಿಕ್ತ ರಾಗಿ ಕೊನೆಗಾಣಿಸಲು ಬಂದರೆ ಅದನ್ನು ನಾವು ವಿರೋಧಿಸುತ್ತೇವೆ ಸಹ’ ಎನ್ನುತ್ತಾರೆ ರುಸ್.

ಯಾವುದೇ ಮಾಡ್ಯುಲರ್ ರೊಬೊ ವ್ಯವಸ್ಥೆಯಲ್ಲಿ ಮಾಡ್ಯೂಲ್‌ಗಳನ್ನು ಚಿಕ್ಕದಾಗಿಸುವ ಭರವಸೆ ಇರುತ್ತದೆ. ಇಂತಹ ಸಂಶೋಧನೆಗಳ ಅಂತಿಮ ಉದ್ದೇಶವು ಟರ್ಮಿನೆಟರ್-2 ಸಿನಿಮಾದಲ್ಲಿ ಕಂಡು ಬರುವ ಹಿಂಡು ಹಿಂಡಾಗಿ ಸಂಚರಿಸುವ ‘ಉಕ್ಕಿನ ದ್ರವ’ ಸ್ವರೂಪಿ ರೊಬೊಗಳನ್ನು ಸೃಷ್ಟಿಸುವುದಾಗಿದೆ.

ಈಗಾಗಲೇ ಎಂಐಟಿಯ ತಂತ್ರಜ್ಞರು ಘನಾಕಾರದ 100 ರೊಬೊಟ್‌ಗಳ ಸೇನೆಯೊಂದನ್ನು ಸಿದ್ಧಪ­ಡಿಸಿದ್ದು, ಈ  ತಂಡದ ಪ್ರತಿ ರೊಬೊವನ್ನು ಯಾವುದೇ ದಿಕ್ಕಿನತ್ತ ಚಲಿಸಲು ಅನುಕೂಲ ವಾಗುವಂತೆ ವಿನ್ಯಾಸಗೊಳಿಸಲಾಗಿದೆ. ‘ಯಾದೃಚ್ಛಿಕವಾಗಿ ಪರಸ್ಪರ ಗುರ್ತಿಸುವ, ಒಂದುಗೂಡುವ ಮತ್ತು ಅಗತ್ಯಕ್ಕೆ ತಕ್ಕಂತೆ ಕುರ್ಚಿ ಅಥವಾ ಎಣಿ ಇಲ್ಲವೇ ಟೆಬಲ್ ಆಗಿ ರೂಪಾಂತರ ಹೊಂದುವ ನೂರಾರು ಘನಾಕೃತಿಯ ರೊಬೊಟ್‌ಗಳು ನಮಗೆ ಬೇಕಿದೆ’ ಎನ್ನುತ್ತಾರೆ ಸಿಎಸ್‌ಐಎಎಲ್‌ನ ಸಂಶೋಧಕ ಹಾಗೂ ಮೊದಲ ಬಾರಿಗೆ ಮಾಡ್ಯುಲರ್ ರೊಬೊಗಳ ಹೊಸ ವಿನ್ಯಾಸದ ಪ್ರಸ್ತಾವನೆಯನ್ನು ಮಂಡಿಸಿದ  ವಿಜ್ಞಾನಿ ಜಾನ್ ರೊಮ್ಯಾನಿಷಿನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.