ಎಲ್ಲಾ ಕಾಲದಲ್ಲೂ, ಎಲ್ಲಾ ವಯಸ್ಸಿನವರ ಆಸಕ್ತಿಯನ್ನು ಕೆರಳಿಸುವ ಖಗೋಳೀಯ ವಿದ್ಯಮಾನವೆಂದರೆ ಚಿತ್ತಾಕರ್ಷಕವಾದ, ರಮಣೀಯವಾದ ಗ್ರಹಣ. ಸೂರ್ಯ ಹಾಗೂ ಚಂದ್ರಗ್ರಹಣಗಳು ಸರಿಸಾಟಿಯಿಲ್ಲದ ಸೌಂದರ್ಯದಿಂದ ಆಕರ್ಷಿಸುತ್ತವೆ. ಬಹಳಷ್ಟು ಜನರು ಗ್ರಹಣಗಳ ಬಗ್ಗೆ `ದುರದೃಷ್ಟಕರ' ಎಂಬ ತಪ್ಪುಗ್ರಹಿಕೆ ಹೊಂದಿದ್ದಾರೆ.
ಖಗೋಳಶಾಸ್ತ್ರದ ಪ್ರಕಾರ ಗ್ರಹಣಗಳ ಭವ್ಯತೆಯನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಗ್ರಹಣ ಕಾಲದಲ್ಲಿ ಖಗೋಳ ತಜ್ಞರು, ಹವ್ಯಾಸಿಗಳು, ಆಕಾಶ ವೀಕ್ಷಕರು ಇಂತಹ ಅಚ್ಚರಿಗೊಳಿಸುವ ವಿದ್ಯಮಾನಕ್ಕೆ ಕಾರಣವಾಗುವ ಸೂರ್ಯ, ಚಂದ್ರರ ಖಗೋಳೀಯ ಪರಿಕಲ್ಪನೆ ಗ್ರಹಿಸುತ್ತಾರೆ.
ಇದೇ ಏ. 25ರ ಪೂರ್ಣಿಮೆಯಂದು ಸಂಭವಿಸಲಿರುವ ಪಾರ್ಶ್ವ ಚಂದ್ರಗ್ರಹಣ ದೇಶದ ಎಲ್ಲಾ ಭಾಗಗಳಿಂದಲೂ ವೀಕ್ಷಿಸುವ ಸದವಕಾಶ ನೀಡಿದೆ. ಚಂದ್ರನು ಭೂಮಿಯ ನೆರಳಿನ ಭಾಗವನ್ನು ಪ್ರವೇಶಿಸಿದಾಗ ಚಂದ್ರಗ್ರಹಣವಾಗುತ್ತದೆ. ಚಂದ್ರ ನಿಜವಾಗಲೂ ಕತ್ತಲಲ್ಲಿರುವುದರಿಂದ ಆ ಸಮಯದಲ್ಲಿ ಆಗಸದಲ್ಲಿ ಚಂದ್ರನಿದ್ದಾಗ, ನಾವು ಚಂದ್ರಗ್ರಹಣವನ್ನು ಎಲ್ಲಿಂದಲಾದರೂ ನೋಡಬಹುದು. ಚಂದ್ರಗ್ರಹಣ, ಸೂರ್ಯಗ್ರಹಣಕ್ಕಿಂತ ಕಡಿಮೆ ಸಂಭವಿಸುತ್ತವೆ. ಗ್ರಹಣ ಕಾಲದಲ್ಲಿ ಭೂಮಿಯ ನೆರಳು ಚಂದ್ರನ ಕುಳಿಗಳ ಅಂಚನ್ನು ದಾಟಿ ಹೋಗುವ ದೃಶ್ಯ ನಿಜಕ್ಕೂ ರೋಮಾಂಚನಕಾರಿ.
ಏ. 25ರಂದು ಪಾರ್ಶ್ವ ಚಂದ್ರಗ್ರಹಣವು ಆಸ್ಟ್ರೇಲಿಯಾ, ಏಷ್ಯಾ(ಈಶಾನ್ಯ ಭಾಗ ಹೊರತು) ಆಫ್ರಿಕಾ ಯೂರೋಪ್, ಅಂಟಾರ್ಕ್ಟಿಕ್ (ದಕ್ಷಿಣ ಧ್ರುವ) ಭಾಗಗಳಿಗೆ ಕಾಣಿಸಲಿದೆ. ಚಂದ್ರನು, ಅಸ್ತಂಗತನಾಗುವ ಸಮಯದಲ್ಲಿ ಪೂರ್ಣ ಛಾಯಾಭಾಗಕ್ಕೆ ಪ್ರವೇಶಿಸುವುದನ್ನು ಕಾಣುವ ಸ್ಥಳಗಳು ಆಸ್ಟ್ರೇಲಿಯಾದ ಪೂರ್ವ ಭಾಗಗಳು, ಫಿಲಿಪೈನ್ಸ್ ಸಮುದ್ರ, ಜಪಾನ್ ಮತ್ತು ಕೊರಿಯ.
ಚಂದ್ರ ಪೂರ್ಣ ಛಾಯಾ ಭಾಗವನ್ನು ಬಿಡುವ ಹಂತವು ಚಂದ್ರೋದಯ ಸಮಯದಲ್ಲಿ ಕಾಣಿಸುವ ಪ್ರದೇಶಗಳೆಂದರೆ ದಕ್ಷಿಣ ಅಟ್ಲಾಂಟಿಕ್ ಸಾಗರದ ಕೆಲಭಾಗಗಳು, ಪೂರ್ವ ಬ್ರೆಜಿಲ್‌ನ ಕೆಲವು ಭಾಗಗಳು, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಯುನೈಟೆಡ್ ಕಿಂಗ್‌ಡಮ್. ಭಾರತದಲ್ಲಿ ಗ್ರಹಣ ಏ. 26ರ ಮುಂಜಾವಿನಲ್ಲಿ ಕೊನೆಗೊಳ್ಳುತ್ತದೆ.
ಚಂದ್ರಗ್ರಹಣ ಪಾರ್ಶ್ವ ಅಥವಾ ಪೂರ್ಣಗ್ರಹಣವೇ ಆಗಿರಲಿ ಸೂರ್ಯ, ಭೂಮಿ ಹಾಗೂ ಚಂದ್ರ ಒಂದೇ ಗೆರೆಯಲ್ಲಿದ್ದಾಗ ಸಂಭವಿಸುತ್ತದೆ. ಸಾಮಾನ್ಯವಾಗಿ ಚಂದ್ರಗ್ರಹಣ, ಸೂರ್ಯಗ್ರಹಣಕ್ಕಿಂತ 15 ದಿನ ಮೊದಲು ಅಥವಾ 15 ದಿನ ನಂತರ ಸಂಭವಿಸುತ್ತವೆ. ಈ ಬಾರಿ ಏ. 25ರಂದು ಚಂದ್ರಗ್ರಹಣವಾದರೆ, ಮೇ 9-10ರಂದು ಸೂರ್ಯಗ್ರಹಣ ಸಂಭವಿಸಲಿದೆ. ಆದರೆ, ಈ ಸೂರ್ಯಗ್ರಹಣ ಭಾರತದಲ್ಲಿ ಕಾಣಿಸದು. ಸೂರ್ಯ ಮುಂದುವರಿದ ಬೆಳಕಿನ ಮೂಲವಾದ್ದರಿಂದ, ಭೂಮಿಯ ನೆರಳು ಎರಡ ವಿಭಾಗಗಳಲ್ಲಿರುತ್ತವೆ. ಮಧ್ಯದ ಕಪ್ಪಾದ ಪೂರ್ಣ ಛಾಯಾಭಾಗ (Umbra). ಅಲ್ಲಿ ಸೂರ್ಯನು ಪೂರ್ತಿ ಮಂಕಾಗಿರುತ್ತಾನೆ ಮತ್ತು ಹೊರಗಿನ ಅರ್ಧ ಛಾಯಾಭಾಗಗಳು (Pen Umbral Regiens). ಅಲ್ಲಿ ಸೂರ್ಯನು ಸ್ವಲ್ಪ ಮಂಕಾಗಿರುತ್ತಾನೆ.
ಚಂದ್ರಗ್ರಹಣ ಸಮಯದಲ್ಲಿ, ಚಂದ್ರನು ಮೊದಲು ಅರ್ಧ ಛಾಯಾ ಭಾಗವನ್ನು ಹಾದು ಹೋಗಲು ಒಂದು ಗಂಟೆ ಅವಧಿ ತೆಗೆದುಕೊಂಡು ಪೂರ್ವದೆಡೆಗೆ ಚಲಿಸುತ್ತಾ ತನ್ನ ಇಡೀ ವ್ಯಾಸದೊಡನೆ ಪೂರ್ಣ ಛಾಯಾಭಾಗದ ಪಶ್ಚಿಮದ ತುದಿ ತಲುಪುತ್ತಾನೆ. ಅರ್ಧ ಛಾಯಾ ಭಾಗದಲ್ಲಿ ಹುಣ್ಣಿಮೆ ಚಂದಿರನ ಬೆಳಕು ಸ್ವಲ್ಪ ಮಂದವಾಗಿರುತ್ತದೆ. ಚಂದ್ರಗ್ರಹಣವು ಚಂದ್ರನು ಕ್ಷಿತಿಜದಿಂದ ಮೇಲೆ ಇದ್ದು, ಭೂಮಿಯ ಇಡೀ ಗೋಳದಲ್ಲಿ ಕಾಣಿಸುವುದರಿಂದ, ಸಂಕುಚಿತ ಪಥದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ.
ಮೇಲಿನ ಪಟ್ಟಿ ಪ್ರಕಾರ ಪಾರ್ಶ್ವ ಚಂದ್ರಗ್ರಹಣ ಏ. 25ರ ರಾತ್ರಿ 11.32ರ ಹೊತ್ತಿಗೆ ಆರಂಭವಾಗಿ ಏ. 26ರ ಬೆಳಗಿನ ಜಾವ 3.43ಕ್ಕೆ ಅಂತ್ಯಗೊಳ್ಳುತ್ತದೆ. ಚಂದ್ರನು ಪೂರ್ಣ ಛಾಯಾಭಾಗಕ್ಕೆ ಏ. 26ರ ಬೆಳಗಿನ ಜಾವ 1.22ರ ಹೊತ್ತಿಗೆ ಪ್ರವೇಶಿಸಿ 1.53ರ ಹೊತ್ತಿಗೆ ಹೊರ ಬರುತ್ತಾನೆ. ಗ್ರಹಣದ ಉತ್ತುಂಗದ ಕಾಲ ಬೆಳಗಿನ ಜಾವ 1.38 ಗ್ರಹಣದ ಕಾಂತಿಯಾನತೆ 0.020 ಇರುತ್ತದೆ.
ಪೂರ್ಣ ಛಾಯಾಭಾಗದ ಮೊದಲ ಸಂಪರ್ಕವಾದಾಗ ಚಂದ್ರನು ಪೂರ್ವದ ಹೆಚ್ಚು ಭಾಗವು ಪೂರ್ಣ ಛಾಯಾಭಾಗದ ಆಳಕ್ಕೆ ಹೆಚ್ಚೆಚ್ಚು ಹೋಗುತ್ತಿರುವಂತೆ ಹೆಚ್ಚು ಕಪ್ಪಾದ ಗುರುತನ್ನುಂಟು ಮಾಡುತ್ತದೆ. ಆರಂಭದಲ್ಲಿ ಚಂದ್ರನ ಕಪ್ಪು ಭಾಗದ ಹೊರತಾಗಿ ಬೇರೇನೂ ಕಾಣಸಿಗುವುದಿಲ್ಲ. ಆದರೆ ಗ್ರಹಣಕ್ಕೆ ಒಳಗಾದ ಭಾಗವು ಹೆಚ್ಚುತ್ತಾ ಹೋದಂತೆ ಕೆಲವು ಬಣ್ಣಗಳು ಸ್ಫುಟವಾಗುತ್ತವೆ. ಪೂರ್ಣ ಛಾಯಾಭಾಗದ ವಕ್ರವಾದ ತುದಿಯು ತಿಳಿನೀಲಿ ಅಂಚನ್ನು ತೋರಿಸುತ್ತದೆ.
ಸೂರ್ಯನ ಬೆಳಕಿನ ವಕ್ರೀಭವನವು ಅದರಲ್ಲೂ ರೋಹಿತದ ಕೆಂಪು ಬಣ್ಣದ ತುದಿಯ ಹತ್ತಿರ ಭೂಮಿಯ ವಾತಾವರಣದ ಮೂಲಕ ಹಾದುಹೋಗುವುದೆಂದರೆ ಪೂರ್ಣ ಛಾಯಾಭಾಗವು ಪೂರ್ತಿ ಕಪ್ಪಾಗಿಲ್ಲ ಎಂದರ್ಥ, ಹಾಗಾಗಿ, ಚಂದ್ರನು, ಸಾಮಾನ್ಯವಾಗಿ ನೋಟಕ್ಕೆ ಮಾಯವಾಗುವುದಿಲ್ಲ. ಬದಲು ಅದು ಮಂಕಾಗಿ ಆಗಾಗ್ಗೆ ಕೆಂಪು ಬಣ್ಣವನ್ನು ಹೊಂದುತ್ತದೆ. ಹಾಗೆಯೇ ಅದು ಪೂರ್ಣ ಛಾಯಾಭಾಗದಲ್ಲಿ ಮುಂದುವರಿದಂತೆ ಹೆಚ್ಚು ಮಂದವಾಗುತ್ತಾ ಹೋಗುತ್ತದೆ, ಎರಡು ಚಂದ್ರಗ್ರಹಣಗಳು ಯಾವಾಗಲೂ ಒಂದೇ ರೀತಿಯದಾಗಿರುವುದಿಲ್ಲ. ಸೂರ್ಯಗ್ರಹಣ ಅದರಲ್ಲೂ ಪೂರ್ಣ ಸೂರ್ಯಗ್ರಹಣದಲ್ಲಿ ಪೂರ್ಣತೆಯು ಬೇಗನೆ ಸಂಭವಿಸುವುದರಿಂದ, ವೀಕ್ಷಿಸಲು ಹೆಚ್ಚು ಆಕರ್ಷಕವಾಗಿರುತ್ತದೆ.
ಗ್ರಹಣ ವೀಕ್ಷಣೆ-ಛಾಯಾಗ್ರಹಣ
ಸೂರ್ಯಗ್ರಹಣದಂತೆ ಚಂದ್ರಗ್ರಹಣ ನಮ್ಮ ಕಣ್ಣಿಗೆ ಯಾವ ಅಪಾಯವನ್ನೂ ಉಂಟುಮಾಡುವುದಿಲ್ಲ. ಬರೀ ಕಣ್ಣಿಗೆ, ದೂರದರ್ಶಕದ ಮೂಲಕ ಹಾಗೂ ದುರ್ಭೀನು ಮೂಲಕ ಸುರಕ್ಷಿತವಾಗಿಯೇ ವೀಕ್ಷಿಸಬಹುದು. ಸಾಮಾನ್ಯವಾಗಿ ಚಂದ್ರನ ಛಾಯಾಗ್ರಹಣಕ್ಕೆ ಉಪಯೋಗಿಸುವ ಸಾಧನಗಳನ್ನೇ ಚಂದ್ರಗ್ರಹಣದ ಛಾಯಾಗ್ರಹಣಕ್ಕೂ ಉಪಯೋಗಿಸಬಹುದು. ಛಾಯಾಗ್ರಹಣ ಉತ್ತಮವಾಗಿರಬೇಕೆಂದರೆ ಅಧಿಕ ಪೃಥಕ್ಕರಣದ ಎಸ್.ಎಲ್.ಆರ್ ಡಿಜಿಟಲ್ ಕ್ಯಾಮೆರಾಗಳನ್ನು ಬಳಸಬೇಕು.
ಚಂದ್ರಗ್ರಹಣ ವೀಕ್ಷಣೆಗೆ ಕಣ್ಣುಗಳ ಸುರಕ್ಷತೆ ಕಾಯ್ದುಕೊಳ್ಳಬೇಕು ಎನ್ನುವುದೇನೂ ಇರುವುದಿಲ್ಲ. ದೂರದರ್ಶಕದಲ್ಲಿ ಹುಣ್ಣಿಮೆ ಚಂದ್ರ ಕಣ್ಣು ಕುಕ್ಕುವಂತಿದ್ದರೂ ಕಣ್ಣುಗಳಿಗೆ ಅಪಾಯವನ್ನುಂಟು ಮಾಡುವುದಿಲ್ಲ. ಆದ್ದರಿಂದ ಈ ವರ್ಷ ಕಾಣಿಸಲಿರುವ ಒಂದೇ ಒಂದು ಚಂದ್ರಗ್ರಹಣವನ್ನು ವೀಕ್ಷಿಸಿ ಆನಂದಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.