ಗಗನನೌಕೆಯೊಂದು ಸೂರ್ಯಕೇಂದ್ರಿತ ಕಂಸದ ಮೇಲೆ ಪಯಣಿಸುವಾಗ ಅದರ ಮೇಲೆ ಸೂರ್ಯ ಹಾಗೂ ಇತರ ಗ್ರಹಗಳ ಪ್ರಭಾವ ಏನು ಎಂಬುದರ ಅಧ್ಯಯನ ‘ಮ್ಯಾಮ್’ನಿಂದ ಸಾಧ್ಯವಾಗಿದೆ. ಕೋಟ್ಯಂತರ ಕಿಲೋಮೀಟರ್ ದೂರದ ಮಂಗಳ ಗ್ರಹದ ಕಕ್ಷೆಗೆ ನೌಕೆಯನ್ನು ಸೇರಿಸುವ ನಮ್ಮ ಲೆಕ್ಕಾಚಾರದ ಸಾಮರ್ಥ್ಯವೂ ಇದರಿಂದ ಸಾಬೀತಾಗಿದೆ. ಅಲ್ಲದೇ ನಮ್ಮ ಡೀಪ್ ಸ್ಪೇಸ್ ನೆಟ್‌ವರ್ಕ್ ಬಳಸಿಕೊಂಡು ದೂರಾಂತರಿಕ್ಷದಲ್ಲಿರುವ ನೌಕೆ ಇರುವ ಜಾಗವನ್ನು ನಿಖರವಾಗಿ ತಿಳಿಯಬಹುದೆಂಬುದು ಖಾತ್ರಿಯಾಗಿದೆ.
ಭಾರತದ ಮಂಗಳನೌಕೆ (ಮಾಮ್– ಮಾರ್ಸ್ ಆರ್ಬಿಟರ್ ಮಿಷನ್) ಮೊತ್ತ ಮೊದಲ ಯತ್ನದಲ್ಲೇ ಮಂಗಳ ಕಕ್ಷೆಯನ್ನು ಎರಡು ವಾರಗಳ ಹಿಂದೆ ಯಶಸ್ವಿಯಾಗಿ ತಲುಪಿ ಈಗ ನಿರುಮ್ಮಳವಾಗಿ ಆ ಗ್ರಹವನ್ನು ಗಿರಕಿ ಹೊಡೆಯುತ್ತಿದೆ. ಅದು ಹೀಗೆ ಕೆಂದೂಳಿನ ಕಾಯವನ್ನು ಸುತ್ತು ಹೊಡೆಯುತ್ತಿರುವುದು ಸರಿಸುಮಾರು 22.5 ಕೋಟಿ ಕಿ.ಮೀ.ಗಳಷ್ಟು ದೂರದಲ್ಲಿ ಎಂಬುದೇ ನಮ್ಮ ತಲೆಯನ್ನು ಗಿರ್ರೆನ್ನಿಸುತ್ತದೆ. ಕುತೂಹಲ, ಅಚ್ಚರಿ, ಬೆರಗು, ಪ್ರತಿಷ್ಠೆಗಳೆಲ್ಲಾ ಅಡಕಗೊಂಡ ಸಾಹಸ ಯಾನ ಇದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಭಾರತದ ನೌಕೆಯೊಂದು ಇಷ್ಟು ದೂರದ ಯಾನ ಕೈಗೊಂಡಿದ್ದು ಇದೇ ಮೊದಲು. ಈ ಹಿಂದೆ ಚಂದ್ರಯಾನದ ವೇಳೆ ನಮ್ಮ ನೌಕೆ ತಲುಪಿದ್ದ 4 ಲಕ್ಷ ಕಿ.ಮೀ. ಅಂತರವೇ ಬಾಹ್ಯಾಕಾಶದಲ್ಲಿ ಇದುವರೆಗಿನ ನಮ್ಮ ಗರಿಷ್ಠ ದೂರದ ಯಾನವಾಗಿತ್ತು. ಈಗ ಅದಕ್ಕೂ 500 ಪಟ್ಟು ಹೆಚ್ಚು ದೂರದ ನಿಗದಿತ ಕಕ್ಷೆಯನ್ನು ಮುಟ್ಟುವ ಗುರಿ ಇತ್ತು. ನಿಖರ ಲೆಕ್ಕಾಚಾರ, ತಾಂತ್ರಿಕ ಕೌಶಲ್ಯ, ಖಗೋಳದ ಬಗೆಗಿನ ನಮ್ಮ ಜ್ಞಾನ ಇವೆಲ್ಲವುಗಳನ್ನು ಒರೆಗೆ ಹಚ್ಚುವ ಸಂದರ್ಭವೂ ಇದಾಗಿತ್ತು.
ಗಗನನೌಕೆಯೊಂದು ಸೂರ್ಯಕೇಂದ್ರಿತ ಕಂಸದ ಮೇಲೆ ಪಯಣಿಸುವಾಗ ಅದರ ಮೇಲೆ ಸೂರ್ಯ ಹಾಗೂ ಇತರ ಗ್ರಹಗಳ ಪ್ರಭಾವ ಏನು ಎಂಬುದರ ಅಧ್ಯಯನ ಇದರಿಂದ ಸಾಧ್ಯವಾಗಿದೆ. ಕೋಟ್ಯಂತರ ಕಿಲೋಮೀಟರ್ ದೂರದ ಮಂಗಳ ಗ್ರಹದ ಕಕ್ಷೆಗೆ ನೌಕೆಯನ್ನು ಸೇರಿಸುವ ನಮ್ಮ ಲೆಕ್ಕಾಚಾರದ ಸಾಮರ್ಥ್ಯವೂ ಇದರಿಂದ ಸಾಬೀತಾಗಿದೆ. ಅಲ್ಲದೇ ನಮ್ಮ ಡೀಪ್ ಸ್ಪೇಸ್ ನೆಟ್‌ವರ್ಕ್ ಬಳಸಿಕೊಂಡು ದೂರಾಂತರಿಕ್ಷದಲ್ಲಿರುವ ನೌಕೆ ಇರುವ ಜಾಗವನ್ನು ನಿಖರವಾಗಿ ತಿಳಿಯಬಹುದೆಂಬುದು ಖಾತ್ರಿಯಾಗಿದೆ. ಈ ಹಿಂದೆ ಚಂದ್ರನ ಅಂಗಳದವರೆಗೆ ನಾವು ರೇಡಿಯೊ ಸಂಕೇತಗಳನ್ನು ಯಶಸ್ವಿಯಾಗಿ ಕಳುಹಿಸಿದ್ದೆವು. ಆದರೆ ಈಗ ಅಂಗಾರಕನವರೆಗೆ ರೇಡಿಯೊ ಸಂಕೇತ ರವಾನಿಸುವುದಕ್ಕಾಗಿ ನಮ್ಮ ಡಿಎಸ್‌ಎನ್ ಅನ್ನು ಮೇಲ್ದರ್ಜೆಗೇರಿಸಲಾಗಿತ್ತು. ಆದರೆ ಅದು ಹೇಗೆ ಕೆಲಸ ಮಾಡುತ್ತದೋ, ಏನೋ ಎಂಬ ಅನುಮಾನ ಇದ್ದೇ ಇತ್ತು. ಈಗ ನಮ್ಮ ಡಿಎಸ್‌ಎನ್ ನ ಕಾರ್ಯದಕ್ಷತೆ ಬಗ್ಗೆ ಸ್ಪಷ್ಟಕಲ್ಪನೆ ಮೂಡಿ ವಿಶ್ವಾಸ ಅಧಿಕವಾಗಿದೆ.
ಇಸ್ರೊ ಈಗೇನು ಮಾಡುತ್ತಿದೆ?ಮಂಗಳಯಾನಕ್ಕಾಗಿ ಲಿಕ್ವಿಡ್ ಅಪೊಜಿ ಮೋಟಾರ್ (ಲ್ಯಾಮ್) ಎಂಜಿನ್ ತಯಾರಿಸಿದ್ದ ಇಸ್ರೊ ಈಗ ಕ್ರಯೋಜನಿಕ್ ಹಾಗೂ ಸೆಮಿ ಕ್ರಯೋಜನಿಕ್ ಎಂಜಿನ್ ತಯಾರಿಕೆಯಲ್ಲಿ ನಿರತವಾಗಿದೆ. ಸೆಮಿ ಕ್ರಯೋಜನಿಕ್ ಎಂಜಿನ್ 2017ರ ವೇಳೆಗೆ ಬಾಹ್ಯಾಕಾಶ ಯಾನದಲ್ಲಿ ಬಳಕೆಯಾಗುವ ನಿರೀಕ್ಷೆ ಇದೆ. ದ್ರವ ಜಲಜನಕದ ಬದಲಿಗೆ ಸೀಮೆಎಣ್ಣೆ ಬಳಸಿಕೊಂಡು ಕಾರ್ಯನಿರ್ವಹಿಸುವ ಇದು ಕ್ರಯೋಜನಿಕ್ ಎಂಜಿನ್‌ಗಿಂತ ಹತ್ತು ಪಟ್ಟು ಹೆಚ್ಚು ದಕ್ಷವಾದದ್ದು! ಇವುಗಳ ನೂಕುಬಲ ಅಪಾರ. ಮಾನವ ಸಹಿತ ಬಾಹ್ಯಾಕಾಶ ಯಾನಗಳಲ್ಲಿ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆತರುವುದರಲ್ಲಿ ಈ ಮಾದರಿಯ ಎಂಜಿನ್ ಹೆಚ್ಚು ವಿಶ್ವಾಸಾರ್ಹ ಎನ್ನಲಾಗಿದೆ. |
ನೌಕೆಯಲ್ಲಿ ಹಲವು ಹಂತಗಳ ಸ್ವಯಂಚಾಲನಾ ತಾಂತ್ರಿಕತೆಯನ್ನು ಅಳವಡಿಸಲಾಗಿತ್ತು. ಬಹುತೇಕ ಇವೆಲ್ಲವೂ ಈ ಯಾನದಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು ಎಲ್ಲವೂ ಸಮರ್ಪಕವಾಗಿರುವುದು ದೃಢಪಟ್ಟಿದೆ. ಇದೇ ಸ್ವಯಂಚಾಲನಾ ತಂತ್ರಜ್ಞಾನವನ್ನು ಭವಿಷ್ಯದ ಸಂವಹನದಲ್ಲಿ ಮತ್ತು ದೂರಸಂವೇದಿ ಉಪಗ್ರಹಗಳಲ್ಲಿ ಅಳವಡಿಸಲು ಇದು ಪ್ರೇರಣೆ ಆಗಬಹುದು. ಉಪಗ್ರಹವೊಂದನ್ನು ಉಡಾಯಿಸಿದಾಗ ಯಾವ್ಯಾವ ಸಂಗತಿಗಳನ್ನು ಭೂಮಿಯ ಮೇಲಿನಿಂದ ನಿಯಂತ್ರಿಸಲಾಗುತ್ತಿತ್ತೋ ಅವೆಲ್ಲವನ್ನೂ ಈಗ ನೌಕೆಯ ನಿಯಂತ್ರಣಕ್ಕೆ ಒಳಪಡಿಸಬಹುದಾಗಿದೆ. ಮುಂದಿನ ಖಗೋಳ ಸಾಹಸ ಯಾನಗಳಿಗೆ ಇದರಿಂದ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.
ನೌಕೆಯೊಂದನ್ನು ದೂರದ ಆಕಾಶಕಾಯದ ಕಕ್ಷೆಗೆ ಸೇರಿಸುವಾಗ ಎಷ್ಟೇ ನಿಖರವಾಗಿ ಲೆಕ್ಕಾಚಾರ ಹಾಕಿದ್ದರೂ ಯಾವ ಕ್ಷಣ ಏನಾಗುತ್ತದೆಂದು ಹೇಳಲಾಗದು. ದೂರದ ಬಾಹ್ಯಾಕಾಶದಲ್ಲಿ ಹಲವಾರು ರೀತಿಯ ಅಜ್ಞಾತ ಸೆಳೆತಗಳು ಇರುವುದು ಇದಕ್ಕೆ ಕಾರಣ. ಈ ಯಾವುದೇ ಸೆಳೆತದಿಂದಾಗಿ ನೌಕೆಯ ಪಥದಲ್ಲಿ ಮೈಕ್ರೋಡಿಗ್ರಿಯಷ್ಟು ವ್ಯತ್ಯಾಸವಾದರೂ ನೌಕೆಯ ಅಂತರ 600 ಕಿಲೋ ಮೀಟರ್‌ಗಳಷ್ಟು ವ್ಯತ್ಯಾಸವಾಗಿ ಅದು ದಿಕ್ಕುತಪ್ಪುವ ಆಂತಕ ಇತ್ತು. ಇನ್ನು ನೌಕೆಯ ವೇಗವನ್ನು ಸೆಕೆಂಡಿಗೆ 22.5 ಕಿಲೋಮೀಟರ್‌ನಿಂದ ಸೆಕೆಂಡಿಗೆ 4.5 ಕಿ.ಮೀ.ಗೆ ತಗ್ಗಿಸುವಾಗ ಅದರ ವೇಗವು ಸೆಕೆಂಡಿಗೆ 100 ಮೀಟರ್‌ನಷ್ಟು ಹೆಚ್ಚಾದರೂ ಯಾನ ವಿಫಲವಾಗುವ ಸಂಭವವಿತ್ತು.
ಅಚ್ಚರಿಗಳು... *ಮಂಗಳಯಾನ ಯೋಜನೆಗಾಗಿ ಮಾಡಿದ ವೆಚ್ಚ ₨ 450 ಕೋಟಿ. ಇದು ಮುಂಬೈನಲ್ಲಿ ಇತ್ತೀಚೆಗೆ ನಿರ್ಮಾಣಗೊಂಡ ಎಂಟು ಪಥಗಳ ರಸ್ತೆಗಾಗಿ ಮಾಡಲಾಗಿರುವ ₨ 2500 ಕೋಟಿಗೆ ಹೋಲಿಸಿದತೆ ಅತ್ಯಂತ ಕಡಿಮೆಯೇ. *ಹಾಲಿವುಡ್ ಚಿತ್ರ `ಗ್ರ್ಯಾವಿಟಿ'ಯ ನಿರ್ಮಾಣಕ್ಕೆ ಮಾಡಿರುವ ವೆಚ್ಚ ₨ 610 ಕೋಟಿಗಿಂತಲೂ ಇದು ಕಡಿಮೆ. *ಯೋಜನೆಯ ವೆಚ್ಚವು ಅಮೆರಿಕದ ನಾಸಾವು ‘ಮೇವನ್ ಯಾನ’ಕ್ಕಾಗಿ ಮಾಡಿರುವ ವೆಚ್ಚದ ಹತ್ತನೇ ಒಂದು ಭಾಗ ಮಾತ್ರ. *ಭಾರತದ 120 ಕೋಟಿ ಜನಸಂಖ್ಯೆಗೆ ಲೆಕ್ಕಹಾಕಿದರೆ ಪ್ರತಿಯೊಬ್ಬ ವ್ಯಕ್ತಿ ಈ ಯೋಜನೆಗೆ ನೀಡಿರುವ ಕಾಣಿಕೆ ತಲಾ 4 ರೂಪಾಯಿ ಆಗುತ್ತದೆ. *ಮಂಗಳನಲ್ಲಿ ಜೀವಪೋಷಕ ಕುರುಹುಗಳಿಗಾಗಿ ತಡಕಾಡಲಿರುವ ನೌಕೆಯ ತೂಕ ಕೇವಲ 1350 ಕೆ.ಜಿ. ಇದು ನಮ್ಮ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ನ ತೂಕಕ್ಕಿಂತ ಕಡಿಮೆ. *ನಾಸಾ ಮೇವನ್ ಸಿದ್ಧಗೊಳಿಸಲು 5 ವರ್ಷ ಅವಧಿ ತೆಗೆದುಕೊಂಡರೆ ಇಸ್ರೊ ಮಂಗಳಯಾನ ನೌಕೆ ಸಿದ್ಧಗೊಳಿಸಲು ತೆಗೆದುಕೊಂಡ ಅವಧಿ 15 ತಿಂಗಳುಗಳು ಮಾತ್ರ. *ಇಸ್ರೊದ 44 ವರ್ಷಗಳ ಇತಿಹಾಸದಲ್ಲಿ ಭೂಮಿಯ ಗುರುತ್ವ ಪ್ರಭಾವದಾಚೆಗಿನ ಗ್ರಹವೊಂದರತ್ತ ಹಾರಿದ ಮೊದಲ ಯಾನ ಇದಾಗಿದೆ. *ನೌಕೆಯಲ್ಲಿರುವ ಲಿಮನ್ ಆಲ್ಫಾ ಫೋಟೊಮೀಟರ್ ಡ್ಯೂಟೀರಿಯಮ್ ಹಾಗೂ ಜಲಜನಕದ ಕಣಗಳ ಅನುಪಾತವನ್ನು ಲೆಕ್ಕ ಹಾಕಲಿದೆ. ಇದರಿಂದ ಆ ಗ್ರಹದಿಂದ ನೀರು ಹೇಗೆ ಆವಿಯಾಯಿತು ಎಂಬುದನ್ನು ತಿಳಿದುಕೊಳ್ಳುವುದು ಸಾಧ್ಯವಾಗಲಿದೆ. |
ಇದೇ ವೇಳೆ, ಮಂಗಳನ ಸನಿಹದಲ್ಲಿರುವ ‘ಸೈಡಿಂಗ್ ಸ್ಪ್ರಿಂಗ್’ ಎಂಬ ಧೂಮಕೇತುವು ಅ.19ರಂದು ಮಂಗಳನ ಕಕ್ಷೆಯನ್ನು ಹಾದು ಹೋಗಲಿದೆ. ಅಂದು ಈ ಧೂಮಕೇತುವಿನ ಬಾಲದ ಭಾಗವು ಮಂಗಳನ ವಾತಾವರಣವನ್ನು ಸ್ಪರ್ಶಿಸಲಿದೆ. ಈ ಸಂದರ್ಭವನ್ನು ಬಳಸಿಕೊಂಡು ‘ಮಾಮ್’ ನೆರವಿನಿಂದ ಬಳಸಿಕೊಂಡು ಧೂಮಕೇತುವಿನ ಬಗ್ಗೆ ಅಧ್ಯಯನ ನಡೆಸಬಹುದಾಗಿದೆ. ಜತೆಗೆ ಧೂಮಕೇತುವು ‘ಮಾಮ್’ ಮೇಲೆ ಏನಾದರೂ ಪರಿಣಾಮ ಬೀರಲಿದೆಯೇ ಎಂಬುದಕ್ಕೂ ಉತ್ತರ ಸಿಗಲಿದೆ.
ಈ ನೌಕೆಯಲ್ಲಿ ಬಳಸಿದ ತಂತ್ರಜ್ಞಾನವು ಸದ್ಯದಲ್ಲೇ ನಮ್ಮ ಹವಾಮಾನ ಪರಿಸ್ಥಿತಿ ಬಗ್ಗೆ ವಿಶ್ವಾಸಾರ್ಹ ಮುನ್ಸೂಚನೆ ಒದಗಿಸಲು ನೆರವಾಗಬಹುದು. ಎಳೆಯರಲ್ಲಿ ಶುದ್ಧ ವಿಜ್ಞಾನದ ಬಗೆಗಿನ ಒಲವನ್ನು ಹೆಚ್ಚಿಸಲು ಸಹಕಾರಿಯಾಗಬಹುದು. ಜತೆಗೆ, ನಮ್ಮ ದೂರಗಾಮಿ ಕ್ಷಿಪಣಿ ತಂತ್ರಜ್ಞಾನದ ಆವಿಷ್ಕಾರಕ್ಕೆ ಇದು ಪ್ರೇರಣೆಯಾಗಬಹುದು ಎಂದೂ ಹೇಳಲಾಗುತ್ತಿದೆ.
ಹೊರಗುತ್ತಿಗೆ ಲಾಭ
ಇನ್ನು ಈ ಯಾನದ ಯಶಸ್ಸು ಆರ್ಥಿಕತೆಯ ದೃಷ್ಟಿಯಿಂದಲೂ ನಮಗೆ ಕೆಲವು ಅವಕಾಶಗಳನ್ನು ಸೃಷ್ಟಿಸಬಹುದು. ಅಮೆರಿಕದ ‘ನಾಸಾ’ ಸೇರಿದಂತೆ ಜಗತ್ತಿನ ಹಲವಾರು ಅಂತರಿಕ್ಷ ಕೇಂದ್ರಗಳನ್ನು ಹಲವಾರು ಕೆಲಸಗಳನ್ನು ಹೊರಗುತ್ತಿಗೆ ನೋಡಲು ಈಗ ಎದುರು ನೋಡುತ್ತಿವೆ. ಇಂತಹ ಸಂದರ್ಭದಲ್ಲಿ ಭಾರತದ ಇಸ್ರೊವು ಮೊದಲ ಯತ್ನದಲ್ಲೇ ಈ ಯಾನದಲ್ಲಿ ಯಶಸ್ಸು ಕಂಡಿದ್ದು ಅದರ ಸೇವೆಗೆ ಬೇಡಿಕೆಯನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಇದರಿಂದಾಗಿ ಭಾರತದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.
ಏಷ್ಯಾಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಚೀನಾ, ಜಪಾನ್ ಮತ್ತು ಭಾರತಗಳ ನಡುವೆ ಎಂದಿನಿಂದಲೂ ಬಾಹ್ಯಾಕಾಶ ರಂಗದಲ್ಲಿ ತುರುಸಿನ ಪೈಪೋಟಿ ಇದ್ದೇ ಇದೆ. ಆದರೆ ನಮಗಿಂತ ಮುಂಚೆಯೇ ಮಂಗಳಯಾನಕ್ಕೆ ಮುಂದಾಗಿದ್ದ ಚೀನಾ, ಜಪಾನ್‌ಗಳು ಅದರಲ್ಲಿ ವಿಫಲವಾಗಿ ಭಾರತ ಯಶಸ್ಸಿನ ನಗೆ ಬೀರಿರುವುದು ನಮ್ಮ ಪ್ರಾದೇಶಿಕ ಹಿರಿಮೆಯನ್ನು ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.