ADVERTISEMENT

ಮೊಬೈಲ್‌ ಮಾರುವ ಮುನ್ನ

​ಪ್ರಜಾವಾಣಿ ವಾರ್ತೆ
Published 15 ಮೇ 2018, 19:30 IST
Last Updated 15 ಮೇ 2018, 19:30 IST
ಮೊಬೈಲ್‌ ಮಾರುವ ಮುನ್ನ
ಮೊಬೈಲ್‌ ಮಾರುವ ಮುನ್ನ   

ಕೆಲವರು ತಮ್ಮ ಹಳೆಯ ಮೊಬೈಲ್‌ ಮಾರಾಟ ಮಾಡಿ, ಅದರಿಂದ ಬಂದ ಹಣಕ್ಕೆ ಇನ್ನಷ್ಟು ಸೇರಿಸಿ ಹೊಸ ಮೊಬೈಲ್ ಖರೀದಿಸುತ್ತಾರೆ. ಕೆಲ ಮೊಬೈಲ್‌ ತಯಾರಿಕಾ ಕಂಪನಿಗಳು ಈ ರೀತಿಯ ವಿನಿಮಯಕ್ಕೆ ಆಕರ್ಷಕ ಕೊಡುಗೆಗಳನ್ನೂ ನೀಡುತ್ತವೆ.

ಕಾರಣ ಯಾವುದೇ ಇರಲಿ, ಇನ್ನೊಬ್ಬರಿಗೆ ಅಥವಾ ಇನ್ನೊಂದು ಕಂಪನಿಗೆ ನಿಮ್ಮ ಮೊಬೈಲ್‌ ಮಾರಾಟ ಮಾಡುವ ಮುನ್ನ ನಿಮ್ಮ ವೈಯಕ್ತಿಕ ಮಾಹಿತಿ ಅದರಲ್ಲಿ ಉಳಿದುಕೊಳ್ಳದಂತೆ ಎಚ್ಚರವಹಿಸುವುದು ಅಗತ್ಯ. ಅದಕ್ಕಾಗಿ ಅನುಸರಿಸಬೇಕಾದ ಕೆಲವು ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.

ಬ್ಯಾಕ್‌ಅಪ್‌ ಇಟ್ಟುಕೊಳ್ಳುವುದು

ADVERTISEMENT

ಏನೇ ಮಾಡುವ ಮೊದಲು ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲ ಮಾಹಿತಿಯನ್ನು ಬ್ಯಾಕ್‌ಅಪ್‌  ಇಟ್ಟುಕೊಳ್ಳಿ. ಇದರಿಂದ ನಿಮ್ಮ ಅಮೂಲ್ಯ ಫೋಟೊಗಳು, ಸಂಪರ್ಕ ಸಂಖ್ಯೆಗಳು, ಅಪ್ಲಿಕೇಷನ್‌ಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಮತ್ತೆ ಬ್ಯಾಕ್‌ಅಪ್‌ನಿಂದ ಪಡೆದುಕೊಳ್ಳಬಹುದು.

ಐಫೋನ್‌ ಬಳಕೆದಾರರು: ನೀವು ‘ಐಕ್ಲೌಡ್‌’ಗೆ ಸೈನ್‌ಇನ್‌ ಆಗಿದ್ದರೆ, ತನ್ನಷ್ಟಕ್ಕೆ ತಾನೇ ಎಲ್ಲ ಮಾಹಿತಿಯನ್ನು ಬ್ಯಾಕ್‌ಅಪ್‌ ಮಾಡುವ ವ್ಯವಸ್ಥೆ ಇರುತ್ತದೆ. ಈ ಬಗ್ಗೆ ನೀವು ಸೆಟ್ಟಿಂಗ್ಸ್‌ಗೆ ಹೋಗಿ, ನಿಮ್ಮ ಹೆಸರು ನಮೂದಿಸಿ. ನಂತರ ಅದರಲ್ಲಿರುವ ಐಕ್ಲೌಡ್‌ ಆಯ್ಕೆಯ ಐಕ್ಲೌಡ್‌ ಬ್ಯಾಕ್‌ಅಪ್‌ ಆನ್‌ ಇದೆಯೇ ಎಂಬುದನ್ನು ಪರೀಕ್ಷಿಸಿ. ಇಲ್ಲದಿದ್ದರೆ ಆನ್‌ ಮಾಡಿ.

ಐಕ್ಲೌಡ್‌ ಸಂಗ್ರಹ ಸಾಮರ್ಥ್ಯ ಕಡಿಮೆ ಇದ್ದು, ಎಲ್ಲ ಮಾಹಿತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯುತ್ತದೆ. ಆದ್ದರಿಂದ, ನಿಮ್ಮ ಕಂಪ್ಯೂಟರ್‌ನಲ್ಲಿರುವ ಐಟ್ಯೂನ್ಸ್‌ನಲ್ಲಿ ಬ್ಯಾಕ್‌ಅಪ್‌ ಮಾಡುವುದು ಒಳ್ಳೆಯದು.

ಇದನ್ನು ಮಾಡಲು ನಿಮ್ಮ ಕಂಪ್ಯೂಟರ್ ಅಥವಾ ಮ್ಯಾಕ್‌ಗೆ ನಿಮ್ಮ ಐಫೋನ್‌ ಸಂಪರ್ಕ ನೀಡಿ. ಅದರಲ್ಲಿರುವ ‘ಐಟ್ಯೂನ್ಸ್‌’ ಆಯ್ಕೆ ಮಾಡಿ. ಟೂಲ್‌ಬಾರ್‌ನ ಎಡಭಾಗದಲ್ಲಿ ಇರುವ ‘ಐಫೋನ್‌’ ಎಂಬ ಆಯ್ಕೆ ಕ್ಲಿಕ್ ಮಾಡಿ. ಅದರಲ್ಲಿ ‘ಬ್ಯಾಕ್‌ಅಪ್‌ ನೌ’ ಆಯ್ಕೆ ಕ್ಲಿಕ್‌ ಮಾಡಿ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲ ನಿಮಿಷ ಹಿಡಿಯುತ್ತದೆ. ಆದರೆ ನಿಮ್ಮ ಎಲ್ಲ ಮಾಹಿತಿಯೂ ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರುತ್ತದೆ. ನೀವು ಹೊಸ ಮೊಬೈಲ್‌ ತೆಗೆದುಕೊಂಡ ಮೇಲೆ, ಕಂಪ್ಯೂಟರ್‌ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಐಟ್ಯೂನ್ಸ್‌ನಿಂದ ಪುನಃ ಪಡೆದುಕೊಳ್ಳಬಹುದು.

ಆಂಡ್ರಾಯ್ಡ್‌ ಬಳಕೆದಾರರು: ನಿಮ್ಮ  ಕಾಂಟ್ಯಾಕ್ಟ್ಸ್‌, ಕ್ಯಾಲೆಂಡರ್ ಮತ್ತು ಇಂತಹುದೇ ಇತರ ಮಾಹಿತಿಗಳು ನಿಮ್ಮ ಗೂಗಲ್‌ ಖಾತೆಯಲ್ಲಿ ಹೊಂದಿಕೊಂಡಿರುತ್ತವೆ (ಸಿಂಕ್). ಹೀಗಾಗಿ ನೀವು ಆ್ಯಪ್‌ ಮಾಹಿತಿ, ಕರೆ ವಿವರ, ಸಾಧನದ ಸೆಟ್ಟಿಂಗ್ಸ್‌, ಫೋಟೊಗಳು, ಟೆಕ್ಸ್ಟ್‌ ಸಂದೇಶಗಳು ಮುಂತಾದವನ್ನು ತನ್ನಷ್ಟಕ್ಕೆ ತಾನೇ ಬ್ಯಾಕ್‌ಅಪ್‌ ಆಗುವಂತೆ ಮಾಡಬಹುದು. ಇದಕ್ಕಾಗಿ ಸೆಟ್ಟಿಂಗ್ಸ್‌ಗೆ ಹೋಗಿ, ಅದರಲ್ಲಿರುವ ಸಿಸ್ಟಂ ಆಯ್ಕೆ ಮಾಡಿ. ಅದರಲ್ಲಿ ಬ್ಯಾಕ್‌ಅಪ್‌ ಕ್ಲಿಕ್‌ ಮಾಡಿ.

ಇನ್ನು, ಕೆಲವು ಆ್ಯಪ್‌ಗಳಿಗೆ ಪ್ರತ್ಯೇಕವಾಗಿ ಹೋಗಿ ಅವುಗಳನ್ನು ಪ್ರತ್ಯೇಕ
ವಾಗಿಯೇ ಬ್ಯಾಕ್‌ಅಪ್‌ ಮಾಡಬೇಕು. ಇವುಗಳ ಬ್ಯಾಕ್‌ಅಪ್‌ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುಬಹುದು.

ಇಷ್ಟೆಲ್ಲ ಮಾಡಿದ ಮೇಲೂ ಎಲ್ಲ ಮಾಹಿತಿ ಬ್ಯಾಕ್‌ಅಪ್‌ ಆಗಿರುವ ಬಗ್ಗೆ ನಿಮಗೆ ಅನುಮಾನಗಳಿದ್ದರೆ, ಹಳೆಯ ಫೋನ್‌ ಮಾರಾಟ ಮಾಡುವ ಮುನ್ನ ಹೊಸ ಫೋನ್‌ ಖರೀದಿಸಿ. ಆಗ ನಿಮಗೆ ಹೆಚ್ಚಿನ ಸಮಸ್ಯೆ ಆಗಲಾರದು.

ನಿಮ್ಮ ಮೊಬೈಲ್‌ನಿಂದ ಪ್ರತಿಯೊಂದು ಮಾಹಿತಿಯನ್ನೂ ಅಳಿಸುವ ಮುನ್ನ ನೀವು ಎಲ್ಲ ಖಾತೆಗಳಿಂದ ‘ಡಿರಿಜಿಸ್ಟರ್‌’ ಆಗಿ. ಇದರಿಂದ ನಿಮ್ಮ ಫೋನ್‌ ಪಡೆಯುವವರು, ಅದನ್ನು ಆ್ಯಕ್ಟಿವೇಟ್‌ ಮಾಡಿದಾಗ ಯಾವುದೇ ಸಮಸ್ಯೆಗಳನ್ನು ಎದುರಿಸಲಾರರು. ಅಲ್ಲದೆ, ನೀವು ಸಹ ಅದನ್ನು ಟ್ರ್ಯಾಕ್‌ ಮಾಡಲು ಸಾಧ್ಯವಾಗದು.

ಡಿರಿಜಿಸ್ಟರ್‌ ಮಾಡುವುದು ಹೇಗೆ?

ಐಫೋನ್‌ ಬಳಕೆದಾರರು: ಮೊದಲು ‘ಸೆಟ್ಟಿಂಗ್ಸ್‌’ ಆಯ್ಕೆಗೆ ಹೋಗಿ. ಅದರಲ್ಲಿ ನಿಮ್ಮ ಹೆಸರು ನೀಡಿ. ಅದರಲ್ಲಿ ‘ಸೈನ್‌ ಔಟ್‌’ ಆಯ್ಕೆ ಕ್ಲಿಕ್ ಮಾಡಿ. ಇದು ನಿಮ್ಮ ಖಾತೆಯಿಂದ ಆ ಸಾಧನವನ್ನು ತೆಗೆದುಹಾಕುತ್ತದೆ. ಹೊಸ ಬಳಕೆದಾರ ತನ್ನ ಹೆಸರಿನಲ್ಲಿ ಆ ಮೊಬೈಲ್ ಬಳಸಬಹುದು. ನಿಮ್ಮ ಬಳಿ ಆ್ಯಪಲ್ ವಾಚ್‌ ಇದ್ದರೆ ಮೊಬೈಲ್‌ ಜತೆಗಿನ ಅದರ ಸಂಪರ್ಕವನ್ನು ತೆಗೆದುಹಾಕಬೇಕು. ನೀವು ಐಫೋನ್‌ ಬಿಟ್ಟು ಬೇರೆ ಫೋನ್‌ ಖರೀದಿಸುವುದಾದರೆ ‘ಐಮೆಸೇಜ್‌’ ಆಯ್ಕೆಯನ್ನೂ ಡಿರಿಜಿಸ್ಟರ್‌ ಮಾಡಬೇಕು.

ಆಂಡ್ರಾಯ್ಡ್‌ ಬಳಕೆದಾರರು: ಸೆಟ್ಟಿಂಗ್ಸ್‌ಗೆ ಹೋಗಿ, ಅದರಲ್ಲಿರುವ ‘ಯೂಸರ್ಸ್‌ ಆ್ಯಂಡ್ ಅಕೌಂಟ್ಸ್‌’ ಆಯ್ಕೆ ಕ್ಲಿಕ್ ಮಾಡಿ. ಅದರಲ್ಲಿರುವ ‘ಗೂಗಲ್ ಅಕೌಂಟ್‌’ ಕ್ಲಿಕ್ ಮಾಡಿ ನಂತರ ‘ರಿಮೂವ್ ಅಕೌಂಟ್‌’ ಆಯ್ಕೆ ಒತ್ತಿ.

ನಿಮ್ಮದು ಸ್ಯಾಮ್ಸಂಗ್‌ ಮೊಬೈಲ್ ಆಗಿದ್ದರೆ, ಸೆಟ್ಟಿಂಗ್ಸ್‌ಗೆ ಹೋಗಿ, ಅಕೌಂಟ್ಸ್ ಕ್ಲಿಕ್ ಮಾಡಿ. ಅದರಲ್ಲಿರುವ ಸ್ಯಾಮ್ಸಂಗ್ ಅಕೌಂಟ್‌ ಆಯ್ಕೆಯಲ್ಲಿರುವ ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿ, ‘ರಿಮೂವ್ ಅಕೌಂಟ್’ ಆಯ್ಕೆ ಒತ್ತಿ. ಈ ಆಯ್ಕೆ ವಿವಿಧ ಮೊಬೈಲ್‌ಗಳಲ್ಲಿ ಬೇರೆ ರೀತಿಯಲ್ಲಿ ಇರಬಹುದು.

ಮಾರಾಟಕ್ಕೆ ಸಿದ್ಧವಾದ ನಂತರ

ಮಾರಾಟ ಮಾಡಲು ಉದ್ದೇಶಿಸಿರುವ ಫೋನ್‌ ಸಿದ್ಧವಾದ ನಂತರ ಅದರಲ್ಲಿರುವ ಸಿಮ್‌ ಕಾರ್ಡ್‌ ಮತ್ತು ಮೆಮೊರಿ ಕಾರ್ಡ್‌ ತೆಗೆದು ಇಟ್ಟುಕೊಳ್ಳಿ.

ನಿಮ್ಮ ಫೋನ್‌ ಅನ್ನು ಮೃದುವಾದ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ. ಅದರ ಮೇಲಿರುವ ಕಲೆ, ಬೆರಳಚ್ಚಿನ ಗುರುತು ಮುಂತಾದವನ್ನು ಒರೆಸಿರಿ. ನಂತರ ಬಿಳಿ ಬಣ್ಣದ ಹಿನ್ನೆಲೆಯಲ್ಲಿ, ಚೆನ್ನಾಗಿ ಬೆಳಕಿರುವ ಕಡೆ ಫೋನ್‌ನ ಉತ್ತಮ ಚಿತ್ರಗಳನ್ನು ಸೆರೆ ಹಿಡಿಯಿರಿ. ನಂತರ ಅದನ್ನು ಸಂಬಂಧಿಸಿದ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ.

ಮೊಬೈಲ್‌ ಜತೆ ಅದರ ಜತೆಗೆ ಬಂದ ಚಾರ್ಜರ್‌, ಇಯರ್‌ಫೋನ್‌, ಬಿಲ್‌, ಬಾಕ್ಸ್‌ಗಳೆಲ್ಲ ಇದ್ದರೆ ಸ್ವಲ್ಪ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುತ್ತವೆ. 

**

ಮಾಹಿತಿ ಅಳಿಸುವುದು

ಮೊಬೈಲ್‌ನಲ್ಲಿದ್ದ ಎಲ್ಲ ಮಾಹಿತಿಯನ್ನೂ ಇನ್ನೊಂದೆಡೆ ಸಂಗ್ರಹಿಸಿರುವುದು ಖಚಿತವಾದ ನಂತರ, ಈಗ ಅದರಲ್ಲಿರುವ ಎಲ್ಲ ಮಾಹಿತಿ ಅಳಿಸಿಹಾಕಿ. ಇದರಿಂದ ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನೂ ಹೊಸ ಬಳಕೆದಾರ ಪಡೆಯಲು ಆಗುವುದಿಲ್ಲ.

ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಿಂದ ಯಾವುದೇ ಫೈಲ್ ಡಿಲೀಟ್ ಮಾಡಿದರೂ ಅದು ಪೂರ್ತಿ ಅಳಿಸಿ ಹೋಗಿರುವುದಿಲ್ಲ. ಇರುವ ಸಂಗ್ರಹ ಸಾಮರ್ಥ್ಯಕ್ಕೆ ಇಂತಿಷ್ಟು ಜಾಗ ದೊರೆಯಿತು (ಫ್ರೀ ಸ್ಪೇಸ್‌) ಎಂದು ಸೂಚನೆ ದೊರೆಯುತ್ತದೆ ಅಷ್ಟೆ. ಡಿಲೀಟ್ ಮಾಡಿರುವ ಫೈಲ್‌ಗಳನ್ನು ಸುಲಭವಾಗಿ ಪಡೆಯುವ ಸಾಫ್ಟ್‌ವೇರ್‌ಗಳಿಂದ ನಿಮ್ಮ ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆ ಇರುತ್ತದೆ.

ಈ ಕಾರಣದಿಂದ ನಿಮ್ಮ ಮೊಬೈಲ್‌ ಅನ್ನು ಎನ್‌ಕ್ರಿಪ್ಟ್‌ (ಗೂಢಲಿಪಿ) ಮಾಡುವುದು ಅತ್ಯವಶ್ಯ.

ಐಫೋನ್‌ ಬಳಕೆದಾರರು: ಐಫೋನ್‌ ಮೊಬೈಲ್‌ಗಳಲ್ಲಿ ತಾನೇತಾನಾಗಿ ಎನ್‌ಕ್ರಿಪ್ಶನ್‌ ಆಗುವ ಪ್ರಕ್ರಿಯೆ ನಡೆಯುತ್ತದೆ. ನಿಮ್ಮ ಐಫೋನ್‌ನ ‘ಸೆಟ್ಟಿಂಗ್ಸ್‌’ ಆಯ್ಕೆಗೆ ಹೋಗಿ, ‘ಜನರಲ್‌’ ಆಯ್ಕೆ ಕ್ಲಿಕ್ ಮಾಡಿ. ಅಲ್ಲಿರುವ ‘ರೀಸೆಟ್‌’ ಮತ್ತು ‘ಎರೇಸ್‌ ಆಲ್‌ ಕಂಟೆಂಟ್ ಆ್ಯಂಡ್ ಸೆಟ್ಟಿಂಗ್ಸ್‌’ ಕ್ಲಿಕ್‌ ಮಾಡಿ. ಈ ಪ್ರಕ್ರಿಯೆ ಮುಗಿದ ನಂತರ ನಿಮ್ಮ ಮೊಬೈಲ್‌ ಸ್ಕ್ರೀನ್‌ನಲ್ಲಿ ‘ವೆಲ್‌ಕಮ್‌’ ಎಂಬುದು ಕಾಣುತ್ತದೆ. ಈಗ ನಿಮ್ಮ ಮೊಬೈಲ್‌ ಹೊಸದರಂತಾಗಿದೆ ಎಂದು ಅರ್ಥ.

ಆಂಡ್ರಾಯ್ಡ್‌ ಬಳಕೆದಾರರು: ಸೆಟ್ಟಿಂಗ್ಸ್‌ನಲ್ಲಿ ಇರುವ ‘ಸೆಕ್ಯುರಿಟಿ’ ಆಯ್ಕೆ ಕ್ಲಿಕ್‌ ಮಾಡಿ. ಅದರಲ್ಲಿ ‘ಎನ್‌ಕ್ರಿಪ್ಶನ್‌’ ಆಯ್ಕೆ ಇದೆಯೇ ನೋಡಿ. ಅದರಲ್ಲೇನಾದರೂ ನಿಮ್ಮ ಫೋನ್‌ ಎನ್‌ಕ್ರಿಪ್ಟ್‌ ಆಗಿದೆ ಎಂದಿದ್ದಲ್ಲಿ ಸರಿ. ಇಲ್ಲದಿದ್ದರೆ ‘ಎನ್‌ಕ್ರಿಪ್ಟ್‌ ಫೋನ್‌’ ಆಯ್ಕೆ ಕ್ಲಿಕ್‌ ಮಾಡಿ.

ಎನ್‌ಕ್ರಿಪ್ಶನ್‌ ಪ್ರಕ್ರಿಯೆ ಹಲವು ಗಂಟೆಗಳವರೆಗೆ ನಡೆಯುತ್ತದೆ. ಒಮ್ಮೆ ಈ ಪ್ರಕ್ರಿಯೆ ಮುಗಿದರೆ ಫೋನ್‌ನಲ್ಲಿರುವ ಎಲ್ಲ ಮಾಹಿತಿಯನ್ನು ಅಳಿಸಿಹಾಕಬಹುದು. ಸೆಟ್ಟಿಂಗ್ಸ್‌ನಲ್ಲಿರುವ ‘ಸಿಸ್ಟಂ’ ಆಯ್ಕೆ ಮಾಡಿ. ಅದರಲ್ಲಿನ ‘ರೀಸೆಟ್‌ ಆಪ್ಶನ್ಸ್‌’ ಒತ್ತಿ. ನಂತರ ‘ಎರೇಸ್‌ ಆಲ್‌ ಡೇಟಾ’ (ಫ್ಯಾಕ್ಟರಿ ರೀಸೆಟ್‌) ಕ್ಲಿಕ್ ಮಾಡಿ.

ನಿಮ್ಮ ಆ್ಯಂಡ್ರಾಯ್ಡ್‌ ಫೋನ್‌ ಹಳೆಯ ಮಾದರಿಯದ್ದಾಗಿದ್ದರೆ ಅದರಲ್ಲಿ ಎನ್‌ಕ್ರಿಪ್ಶನ್‌ ಆಯ್ಕೆ ಇರುವುದಿಲ್ಲ. ಆಗ ನೀವು ಫ್ಯಾಕ್ಟರಿ ರೀಸೆಟ್‌ ಮಾತ್ರ ಮಾಡಬೇಕಾಗುತ್ತದೆ. ಇದರ ನಂತರ ನೀವು ‘ಐಶೆಡ್ಡರ್ 5’ ಆ್ಯಪ್‌ ಬಳಸಿ ಇನ್ನೊಮ್ಮೆ ಫ್ಯಾಕ್ಟರಿ ರೀಸೆಟ್‌ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.