ಸ್ಮಾರ್ಟ್ ಫೋನುಗಳು ದಿನದಿಂದ ದಿನಕ್ಕೆ ಹೆಚ್ಚು ಸ್ಮಾರ್ಟ್ ಆಗುತ್ತಾ ಹೊರಟಿವೆ. ಆದರೆ ಅವುಗಳ ಬ್ಯಾಟರಿ ವಿಚಾರಕ್ಕೆ ಬಂದಾಗ ನಿರಾಸೆ ಇದ್ದದ್ದೇ. ಇಂತಹ ಅಸಮಾಧಾನಕ್ಕೆ ಶೀಘ್ರವೇ ಉತ್ತರ ದೊರಕಲಿದೆ. ಹೆಚ್ಚು ಸಮರ್ಥವಾದ ಹಾಗೂ ಚಾರ್ಜಿಂಗ್ ಸಮಸ್ಯೆಗಳನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಬ್ಯಾಟರಿಗಳು ಇನ್ನು ಕೆಲವೇ ದಿನಗಳಲ್ಲಿ ನಮ್ಮ ಕೈ ಸೇರಲಿವೆ ಎನ್ನುವ ಮುನ್ಸೂಚನೆ ನೀಡಿದ್ದಾರೆ ತಂತ್ರಜ್ಞರು...
ಕಳೆದೊಂದು ದಶಕದಿಂದೀಚೆಗೆ ನಮ್ಮ ಕೈಯಲ್ಲಿನ ಸ್ಮಾರ್ಟ್‌ಫೋನುಗಳು ಹೆಚ್ಚು ಪ್ರಖರವೂ, ಅಷ್ಟೇ ಸಪೂರವೂ ಆಗಿಬಿಟ್ಟಿವೆ. ಅಷ್ಟೇ ಅಲ್ಲದೇ, ಹೆಚ್ಚು ವೇಗವಾಗಿಯೂ, ಸಮರ್ಥವಾಗಿಯೂ ಕೆಲಸ ಮಾಡುವಷ್ಟು ಅಭಿವೃದ್ಧಿ ಹೊಂದಿವೆ. ದಿನದಿಂದ ದಿನಕ್ಕೆ ಫೋನುಗಳು ಹೆಚ್ಚು ಹೆಚ್ಚು ಸ್ಮಾರ್ಟ್ ಆಗುತ್ತಾ ಹೊರಟಿರುವುದೇನೊ ನಿಜ. ಆದರೆ ಅವುಗಳ ಬ್ಯಾಟರಿ ಮಾತ್ರ ಈ ವೇಗಕ್ಕೆ, ಪ್ರಖರತೆಗೆ ಹೊಂದಿಕೊಳ್ಳಲಾಗದೇ ಸೊರಗುತ್ತಿವೆ. ಇದೀಗ ಫೋನುಗಳಿಗೆ ತಕ್ಕಂತೆ ಅವುಗಳ ಬ್ಯಾಟರಿ ಸಾಮರ್ಥ್ಯವನ್ನೂ ಹೆಚ್ಚಿಸುವ ಮತ್ತು ಬ್ಯಾಟರಿಗಳನ್ನು ಇನ್ನಷ್ಟು, ಮತ್ತಷ್ಟು ಸ್ಮಾರ್ಟ್ ಆಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ತಂತ್ರಜ್ಞರು.
ಈ ದಿನಗಳಲ್ಲಿ ಸ್ಮಾರ್ಟ್‌ಫೋನುಗಳು ಬಹುತೇಕ ಲ್ಯಾಪ್‌ಟಾಪ್ ಮಾದರಿಯಲ್ಲಿಯೇ ಕೆಲಸ ಮಾಡುತ್ತಿವೆ. ಕಚೇರಿ ಕೆಲಸವೇ ಇರಲಿ, ಕೌಟುಂಬಿಕ ಅಥವಾ ಸಾಮಾಜಿಕ ಚಟುವಟಿಕೆಗಳೇ ಆಗಲಿ, ಮನರಂಜನೆ, ಮಾಹಿತಿ, ಮೋಜು... ಸಂದರ್ಭ ಯಾವುದೇ ಇದ್ದರೂ ಸರಿ, ಎಲ್ಲದಕ್ಕೂ ಸ್ಮಾರ್ಟ್‌ಫೋನ್ ಸೇವೆಯನ್ನೇ ನೆಚ್ಚಿಕೊಂಡವರ ಪಟ್ಟಿ ದೊಡ್ಡದಿದೆ. ಅಂತೆಯೇ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಫೋನುಗಳೂ ಹೊಸ ದಿಕ್ಕುಗಳತ್ತ ಹೆಜ್ಜೆ ಇಡುತ್ತ ಸಾಗಿವೆ. ಹೈ ಡೆಫಿನಿಷನ್ ಸ್ಕ್ರೀನ್, ವೃತ್ತಿಪರ ಕ್ಯಾಮೆರಾ ತಂತ್ರಜ್ಞಾನ ಇರುವ ಈ ಫೋನುಗಳು ದಿನವಿಡಿ ಬಿಡುವಿಲ್ಲದೇ ದುಡಿಯುತ್ತಿವೆ. ಇ-ಮೇಲ್, ಎಸ್‌ಎಂಎಸ್ ಸೇವೆ, ಫೇಸ್‌ಬುಕ್, ಟ್ವಿಟ್ಟರ್, ವಾಟ್ಸ್‌ಅಪ್‌ಗಳಂತಹ ಸಾಮಾಜಿಕ ಜಾಲತಾಣಗಳ ಬಳಕೆಯೂ ಸೇರಿದಂತೆ ರಾಶಿ ರಾಶಿ ಕೆಲಸ ಮಾಡುತ್ತಿವೆ. ಲ್ಯಾಪ್‌ಟಾಪ್ ದಿನದ ಕೆಲ ಗಂಟೆಗಳಾದರೂ ವಿಶ್ರಾಂತಿ ಪಡೆಯಬಹುದು. ಸ್ಮಾರ್ಟ್‌ಫೋನುಗಳಿಗೆ ಅಲ್ಪ ಪ್ರಮಾಣದಲ್ಲೂ ಬಿಡುವು ಸಿಗುತ್ತಿಲ್ಲ. ದಿನದ ೨೪ ಗಂಟೆಗಳ ಕಾಲವೂ ಅವು ಕಾರ್ಯ ನಿರ್ವಹಿಸಲೇಗಬೇಕಾದ ಅನಿವಾರ್ಯತೆಯ ಪರಿಸ್ಥಿತಿಗೆ ಸಿಲುಕಿವೆ. ಇದೆಲ್ಲದ ಭಾರ ಬೀಳುತ್ತಿರುವುದು ಬ್ಯಾಟರಿ ಮೇಲೆ!
ಹಾಗಾದರೆ ಈ ಎಲ್ಲಾ ಕೆಲಸಗಳನ್ನು ನಿಭಾಯಿಸಬಲ್ಲ ಸಾಮರ್ಥ್ಯವನ್ನು ಬ್ಯಾಟರಿಗಳಲ್ಲಿ ತುಂಬುವುದು ಹೇಗೆ? ಎನ್ನುವುದು ಇದೀಗ ಮೊಬೈಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞರನ್ನು ಕಾಡುತ್ತಿದೆ. ಅದರು ಅವರ ಪಾಲಿಗೆ ಸದ್ಯದ ದೊಡ್ಡ ಸವಾಲೂ ಆಗಿದೆ.
ಬ್ಯಾಟರಿ ಖಾಲಿಯಾಗುವುದೇಕೆ?
ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೊದಲು ಎದುರಾಗುತ್ತಿರುವ ಸವಾಲೆಂದರೆ ಬ್ಯಾಟರಿ ಅತೀ ವೇಗದಲ್ಲಿ ಖಾಲಿ ಆಗುವುದಾದರೂ ಏಕೆ ಎನ್ನುವುದು. ಬ್ಯಾಟರಿ ಸಾಮರ್ಥ್ಯವನ್ನು ಅತೀ ಬೇಗ ತಗ್ಗಿಸಲು ಕಾರಣವಾಗುವ ಅಂಶಗಳ ಮೇಲೆ ಮೊದಲು ಗಮನ ಹರಿಸಬೇಕಾಗುತ್ತದೆ.
ಬ್ಯಾಟರಿ ಚಾರ್ಜ್ ಮಾಡುವ ವಿಧಾನಕ್ಕೂ ಹಾಗೂ ಬ್ಯಾಟರಿ ಬಾಳಿಕೆಗೂ ಸಂಬಂಧವಿದೆ. ಅಂದರೆ ಅತೀ ವೇಗವಾಗಿ ಚಾರ್ಜ್ ಆಗುವ ಬ್ಯಾಟರಿಯ ಶಕ್ತಿಯೂ ಅಷ್ಟೇ ವೇಗವಾಗಿ ಖಾಲಿಯಾಗಿ ಹೋಗುತ್ತದೆ. ಜೊತೆಗೆ ಮೊಬೈಲ್‌ನಲ್ಲಿರುವ ಅಪ್ಲಿಕೇಶನ್‌ಗಳಿಗೂ ಹಾಗೂ ಅವು ಬ್ಯಾಟರಿಯನ್ನು ಬಳಸಿಕೊಳ್ಳುವ ಪ್ರಮಾಣಕ್ಕೂ, ಬ್ಯಾಟರಿ ಬಾಳಿಕೆಗೂ ಸಂಬಂಧವಿದೆ. ಅಂದರೆ ಎಷ್ಟು ಸ್ಮಾರ್ಟ್ ಆದ ಅಪ್ಲಿಕೇಶನ್‌ಗಳನ್ನು ಬಳಸುತ್ತೇವೆಯೊ ಅಷ್ಟು ವೇಗವಾಗಿ ಬ್ಯಾಟರಿ ಮುಗಿಯುವ ಸಾಧ್ಯತೆ ಇರುತ್ತದೆ. ಜತೆಗೆ ಮೊಬೈಲ್ ಗಾತ್ರ, ಅದರ ಕಾರ್ಯ ನಿರ್ವಹಣೆ, ಸಾಮರ್ಥ್ಯವೂ ಬ್ಯಾಟರಿಯ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತದೆ. ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಬ್ಯಾಟರಿ ಸಾಮರ್ಥ್ಯವನ್ನು ಬೇಗ ಕುಗ್ಗಿಸುವ ಅಂಶಗಳನ್ನು ನಿಯಂತ್ರಿಸುವುದು, ಜತೆಗೆ ಬ್ಯಾಟರಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನೆಗಳು ಸಾಗಿವೆ.
ಒಂದೆಡೆ ಬ್ಯಾಟರಿಯನ್ನು ಕಡಿಮೆ ಪ್ರಮಾಣದಲ್ಲಿ ಬಳಸಿಕೊಂಡು ಕಾರ್ಯನಿರ್ವಹಿಸುವ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿದೆ. ಇನ್ನೊಂದೆಡೆ ಪಾಸಿಟಿವ್ ಎಲೆಕ್ಟ್ರೋಡ್ಸ್‌ಗಳನ್ನು ವಿವಿಧ ಸ್ಥರಗಳಲ್ಲಿ ಚಾರ್ಜ್ ಮಾಡಿ, ಅವುಗಳ ನ್ಯಾನೊ ಪಾರ್ಟಿಕಲ್‌ಗಳನ್ನು ಅಧ್ಯಯನ ಮಾಡಿ, ಎಲೆಕ್ಟ್ರೋಡ್ಸ್‌ಗಳನ್ನು ಬದಲಾಯಿಸುವ ಮೂಲಕ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸಬಹುದೇ ಎಂಬ ಬಗ್ಗೆಯೂ ಅಧ್ಯಯನಗಳು ಸಾಗಿವೆ.
ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನುಗಳಿಗೆ ಪೂರಕವಾದ ಬ್ಯಾಟರಿಗಳು ನಮ್ಮ ಕೈಸೇರಲಿವೆ ಎಂಬ ಬಗ್ಗೆ ಭರವಸೆ ತುಂಬುವ ಅಧ್ಯಯನಗಳು ನಡೆದಿರುವುದಂತೂ ನಿಜ. ಬ್ಯಾಟರಿ ಖಾಲಿಯಾಗಿಹೋಗುವುದೆಂಬ ಭಯದಲ್ಲಿ ಸ್ಮಾರ್ಟ್‌ಫೋನುಗಳ ಜಾಣ್ಮೆಯನ್ನು ಬಲು ಜಿಪುಣತನದಿಂದ ಬಳಸಬೇಕಾದ ಈ ಕಾಲ, ಕೆಲವೇ ದಿನಗಳಲ್ಲಿ ಬದಲಾಗಲಿದೆ. ಮತ್ತು ನಿಮ್ಮ ಫೋನುಗಳನ್ನು ನೀವು ಬ್ಯಾಟರಿ ಖಾಲಿಯಾಗುವ ಭಯವಿಲ್ಲದೇ ಬಳಸುವ ಕಾಲ ಸನ್ನಿಹಿತವಾಗಿದೆ.
ಬ್ಯಾಟರಿ ಉಳಿಸಲು ಹೀಗೆ ಮಾಡಿ...
ಬ್ಯಾಟರಿ ಉಳಿಸುವ ನಿಟ್ಟಿನಲ್ಲಿ ಬಳಕೆದಾರರ ಪ್ರಯತ್ನವೂ ಸಹ ಮುಖ್ಯ. ಇಲ್ಲಿವೆ ಕೆಲವು ಕಿವಿಮಾತು:
ನಿಮಗೆ ಅಗತ್ಯವಿಲ್ಲದ ಸಮಯದಲ್ಲಿ ಜಿಪಿಎಸ್ ಮತ್ತು ಬ್ಲೂಟೂತ್ ಟರ್ನ್ ಆಫ್ ಮಾಡಿ.
ವಿಡಿಯೊ ನೋಡುವಾಗ ಬ್ರೈಟ್ ನೆಸ್ ಆಟೊ ಮೋಡ್‌ನಲ್ಲಿ ಇರಲಿ
ಸಿಗ್ನಲ್ ಸಿಗದ ಸ್ಥಳಗಳಲ್ಲಿ ನಿಮ್ಮ ಸೆಲ್ಯುಲರ್ ಸೇವೆಗಳನ್ನು ಆಫ್ ಮಾಡಿಕೊಳ್ಳಿ ಅಥವಾ ಫ್ಲೈಟ್‌ಮೋಡ್‌ನಲ್ಲಿ ಇಟ್ಟುಕೊಳ್ಳಿ. ಇದರಿಂದ ಸಿಗ್ನಲ್ ಹುಡುಕಾಟದಿಂದ ಬ್ಯಾಟರಿ ಶಕ್ತಿ ಇಳಿದುಹೋಗುವುದನ್ನು ತಪ್ಪಿಸಬಹುದು.
ಡೇಟಾ ಸೇವೆಗಳನ್ನು ಅಗತ್ಯವಿದ್ದಾಗ ಮಾತ್ರ ಬಳಸಿರಿ.
ಇಂಟರ್‌ನೆಟ್ ಬಳಸುವಾಗ ಅಟೊ ಸಿಂಕ್ ಡಿಸೇಬಲ್ ಮಾಡಿರಿ.
ಬಳಸದೇ ಇರುವ ಅಥವಾ ಅಗತ್ಯವಿಲ್ಲದ ಅಪ್ಲಿಕೇಶನ್‌ಗಳನ್ನು ಟಾಸ್ಕ್ ಮ್ಯಾನೇಜರ್ ಸಹಾಯದಿಂದ ಕ್ಲೋಸ್ ಮಾಡಿರಿ.
ಫೋನಿನೊಂದಿಗೆ ಬಂದಿರುವ ಕಂಪೆನಿಯ ಚಾರ್ಜರನ್ನೇ ಬಳಸಿರಿ. ಬೇರೆ ಚಾರ್ಜರ್‌ಗಳಿಂದ ಚಾರ್ಜ್ ಮಾಡುವುದರಿಂದಲೂ ಬ್ಯಾಟರಿ ಸಾಮರ್ಥ್ಯ ಕುಗ್ಗುವ ಸಾಧ್ಯತೆ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.