ಈ ತಂತ್ರಜ್ಞಾನ ಯುಗದಲ್ಲಿ, ವೈಯಕ್ತಿಕ ಮಾಹಿತಿ ಸಹ ಮಾರುಕಟ್ಟೆ ಸರಕಾಗಿಬಿಟ್ಟಿದೆ. ನಮ್ಮ ದಿನಚರಿ, ಬೇಕು ಬೇಡಗಳನ್ನು ಅರಿತುಕೊಳ್ಳಲು ಕಂಪೆನಿಗಳು ತುದಿಗಾಲಲ್ಲಿ ನಿಂತಿರುತ್ತವೆ. ಈವರೆಗೂ ಬ್ರೌಸಿಂಗ್, ಸಾಮಾಜಿಕ ಜಾಲತಾಣ ಬಳಕೆಯಿಂದ ಇಂತಹ ಮಾಹಿತಿಗಳು ಸುಲಭವಾಗಿ ಬೇರೆಯವರ ಕೈಸೇರುತ್ತಿದ್ದವು. ಇದೀಗ ನಾವು ಬಳಸುವ ಅಪ್ಲಿಕೇಷನ್‌ಗಳ (ಆ್ಯಪ್) ಮೂಲಕವೂ ವೈಯಕ್ತಿಕ ಮಾಹಿತಿ ಕಳವು ನಡೆಯುತ್ತಿದೆ ಎಂಬುದನ್ನು ಅಧ್ಯಯನವೊಂದು ದೃಢಪಡಿಸಿದೆ.
ದೇಹದ ಆರೋಗ್ಯದ ಮೇಲ್ವಿಚಾರಣೆ ಗೆಂದು ಬಳಸುವ ಆ್ಯಪ್‌ಗಳು ನಮ್ಮ ವೈಯಕ್ತಿಕ ಮಾಹಿತಿಯನ್ನು ಬೇರೆಯವ ರಿಗೆ ನೀಡುತ್ತಿವೆ. ಇದರಿಂದ ಬಳಕೆ ದಾರರು ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ಲಂಡನ್‌ನ ಇಂಪೀರಿಯಲ್ ಕಾಲೇಜ್ ಸಂಶೋಧಕ ಕಿಟ್ Huckvale.
ಬ್ರಿಟಿಷ್ ನ್ಯಾಷನಲ್ ಹೆಲ್ತ್ ಸಿಸ್ಟಂನಲ್ಲಿ (ಎನ್‌ಎಚ್ಎಸ್) ವೈದ್ಯಕೀಯವಾಗಿ ದೃಢಪಡಿಸಿರುವ ಬಹುತೇಕ ಆ್ಯಪ್‌ಗಳಲ್ಲಿ ಮಾಹಿತಿ ರಕ್ಷಣೆ ನಿಯಮಗಳನ್ನು ಅನುಸರಿಸಿಲ್ಲವಂತೆ. ಎನ್‌ಎಚ್‌ಎಸ್ ಹೆಲ್ತ್ ಆ್ಯಪ್ಸ್ ಲೈಬ್ರರಿಯಲ್ಲಿ ಪಟ್ಟಿಮಾಡಿರುವ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಇರುವ 79 ಅಪ್ಲಿಕೇಷನ್‌ಗಳನ್ನು ಪರೀಕ್ಷೆಗೆ ಒಳಪಡಿಸಿ ಈ ಮಾಹಿತಿ ನೀಡಿದ್ದಾರೆ.
ತೂಕ ಇಳಿಸಿಕೊಳ್ಳುವುದು, ಧೂಮಪಾನ ಮತ್ತು ಮದ್ಯಪಾನ ತಪ್ಪಿಸಲು ಇನ್ನೂ ಹಲವು ರೀತಿಯ ಆರೋಗ್ಯಕ್ಕೆ ಸಂಬಂದಿಸಿದ ಆ್ಯಪ್‌ಗಳಲ್ಲಿ ವ್ಯಕ್ತಿಯ ವೈಯಕ್ತಿಕ ಮಾಹಿತಿ ಬೇರೆಯವರು ಬಳಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸಂಶೋಧಕರು. 70 ಅಪ್ಲಿಕೇಷನ್‌ಗಳಲ್ಲಿರುವ ಮಾಹಿತಿ ಗಳನ್ನು ಆನ್‌ಲೈನ್ ಸೇವೆಗಳಿಗೆ ವರ್ಗಾಯಿಸ ಲಾಗಿದೆ. ಇದರಲ್ಲಿ 23 ಆ್ಯಪ್‌ಗಳಲ್ಲಿ ನೀಡಿರುವ ವ್ಯಕ್ತಿಯ ಗುರುತು ಪತ್ತೆ ಮಾಹಿತಿಯನ್ನು ಎನ್‌ಕ್ರಿಪ್ಟ್ ಮಾಡದೆ (ಗೂಢಲಿಪಿಯಾಗಿ ಪರಿವರ್ತಿಸದೆ) ಇಂಟರ್‌ನೆಟ್‌ನಲ್ಲಿ ಹರಿಯಬಿಡಲಾಗಿದೆ.
ಇನ್ನು ನಾಲ್ಕು ಆ್ಯಪ್‌ಗಳು, ವ್ಯಕ್ತಿಯ ಗುರುತು ಪತ್ತೆ ಮತ್ತು ಅವರ ದೇಹದ ಆರೋಗ್ಯಕ್ಕೆ ಸಂಬಂಧಿಸಿದವು. ಇವೂ ಸಹ ಬಳಕೆದಾರರಿಂದ ಸಂಗ್ರಹಿಸಿದ ಮಾಹಿತಿಗ ಳನ್ನು ಎನ್‌ಕ್ರಿಪ್ಟ್ ಮಾಡದೇ ಇಂಟರ್‌ನೆಟ್‌ಗೆ ದಾಟಿಸಿಬಿಡುತ್ತವೆ ಎಂದು ಅಧ್ಯಯನ ಎಚ್ಚರಿಸಿದೆ.
ರೋಗಿಗಳು ಮತ್ತು ಸಾರ್ವಜನಿಕರು ಬಳಸಬಹುದಾದ ಆ್ಯಪ್‌ಗಳು ಯಾವುವು ಎಂಬುದನ್ನು ಬ್ರಿಟನ್‌ನ ಎನ್‌ಎಚ್‌ಎಸ್ ಹೆಲ್ತ್ ಆ್ಯಪ್ ಲೈಬ್ರರಿಯಲ್ಲಿ ಪಟ್ಟಿ ಮಾಡಲಾಗಿದೆ. ಇಲ್ಲಿ ನೋಂದಾಯಿತ ಆ್ಯಪ್‌ಗಳು ವೈದ್ಯಕೀಯ ಸುರಕ್ಷತೆ ಮತ್ತು ಮಾಹಿತಿ ರಕ್ಷಣೆ ನಿಯಮವನ್ನು ಅನುಸರಿಸಬೇಕು. ಆದರೆ ಈ ಆ್ಯಪ್‌ಗಳಲ್ಲೇ ವೈಯಕ್ತಿಕ ಮತ್ತು ಆರೋಗ್ಯ ಸಂಬಂಧಿ ಮಾಹಿತಿಗಳಿಗೆ ರಕ್ಷಣೆ ಇಲ್ಲ ಎಂಬುದು ಬಹಳ ಕಳವಳದ ಸಂಗತಿ ಎನ್ನುತ್ತದೆ ಅಧ್ಯಯನ ತಂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.