ADVERTISEMENT

ಬಯೋಸೆನ್ಸರ್ಸ್‌ : ಭರವಸೆಯ ಬೆಳಕು

ಇ.ಎಸ್.ಸುಧೀಂದ್ರ ಪ್ರಸಾದ್
Published 9 ಜನವರಿ 2024, 23:30 IST
Last Updated 9 ಜನವರಿ 2024, 23:30 IST
   

ಸಾವು ಅನಿವಾರ್ಯವಲ್ಲ, ಆಯ್ಕೆ ಎಂಬ ಒಕ್ಕಣೆಯೊಂದಿಗೆ ಹಲವು ವರ್ಷಗಳ ಹಿಂದೆ ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನ ‘ಡೆತ್ ಆಫ್ ಡೆತ್ ಬೈ 2045‘. ಮೃತ್ಯುವಿಗೇ ಮೃತ್ಯು ಎಂಬ ಲೇಖನ ಆ ಕಾಲಕ್ಕೆ ಪ್ರಶ್ನೆ ಮೂಡಿಸಿತ್ತು. ಇದೀಗ ಇದು ಸಾಧ್ಯ ಎಂಬಂಥ ಬೆಳವಣಿಗೆಗಳು ವೈದ್ಯಕೀಯ ಕ್ಷೇತ್ರಗಳಲ್ಲಿ ಆಗಿವೆ. ಸದೃಢರಾಗಿ ದೀರ್ಘಾಯುಗಳಾಗುವ ನಿಟ್ಟಿನಲ್ಲಿ ಹಲವಾರು ಸಾಧನಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಅಂಥವುಗಳಲ್ಲಿ ಒಂದು ಬಯೊಸೆನ್ಸರ್ಸ್‌.

ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ, ಗೈರೋಸ್ಕೋಪ್‌ಗಳನ್ನೇ ಬಳಸಿ ಆರೋಗ್ಯ ಕಾಳಜಿಯ ಉಪಯುಕ್ತ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಮಾರ್ಟ್‌ವಾಚ್‌ಗಳ ಮೂಲಕ ದೇಹವು ಆಮ್ಲಜನಕ ಹೀರುವಿಕೆ ಪ್ರಮಾಣ, ರಕ್ತದೊತ್ತಡ, ನಿದ್ರೆಯ ಪ್ರಮಾಣ ಹೀಗೆ ಹಲವು ಸ್ಥಿತಿಗಳನ್ನು ತಿಳಿಸುವ ತಂತ್ರಾಂಶಗಳ ಅಭಿವೃದ್ಧಿಯಾಗಿವೆ. ಈಗ ತಂತ್ರಜ್ಞರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾರೋಗ್ಯದ ಸ್ಥಿತಿಗಳನ್ನು ಮೊದಲೇ ಅಂದಾಜಿಸುವ ಸಾಧನಗಳನ್ನು ಅಭಿವೃದ್ಧಿಪಡಿಸುತ್ತಲೇ ಇದ್ದಾರೆ.

ಕಣ್ಣನ್ನು ಗಮನಿಸಿ ಮುಂದಿನ ಐದು ವರ್ಷಗಳಲ್ಲಿ ಹೃದ್ರೋಗ ಸಮಸ್ಯೆ ಪತ್ತೆ ಮಾಡುವ ತಂತ್ರಾಂಶವನ್ನು ಗೂಗಲ್ ಪರಿಚಯಿಸುತ್ತಿರುವ ಕುರಿತು ಕಂಪನಿಯ ಸಿಇಒ ಸುಂದರ ಪಿಚೈ ಹೇಳಿದ್ದರು. ಕೃತಕ ಬುದ್ಧಿಮತ್ತೆ ಆಧಾರಿತ ಈ ತಂತ್ರಾಂಶದ ಅಭಿವೃದ್ಧಿಗೆ ಸುಮಾರು ಮೂರು ಲಕ್ಷ ಜನರ ಮಾಹಿತಿ ನೀಡಲಾಗಿದೆ. ಇದು ವೈದ್ಯರ ಕೆಲಸವನ್ನು ಇನ್ನಷ್ಟು ಸುಲಭಗೊಳಿಸಲಿದೆ.

ADVERTISEMENT

ಈ ಸಾಧನದಿಂದ ರಕ್ತ ಪರೀಕ್ಷೆ, ಬೃಹತ್ ಯಂತ್ರಗಳ ನೆರವಿನ ಅಗತ್ಯವಿಲ್ಲ. ಕೇವಲ ಒಂದು ಸೆನ್ಸರ್‌ ಕಣ್ಣಿನೊಳಗಿನ ರಕ್ತನಾಳದಲ್ಲಿ ರಕ್ತದ ಪರಿಚಲನೆ ಗ್ರಹಿಸಿಯೇ ಭವಿಷ್ಯದ ಆರೋಗ್ಯವನ್ನು ತಿಳಿಸಲಿದೆ. ಯಾವುದೇ ಅನಾಹುತಗಳು ಆಕಸ್ಮಿಕವಾಗಿರದೆ, ಜೀವನಶೈಲಿ, ಚಿಕಿತ್ಸೆಯ ಮೂಲಕ ಅಪಾಯವನ್ನು ತಪ್ಪಿಸುವ ಅಥವಾ ತಗ್ಗಿಸುವ ಸಾಧ್ಯತೆಗಳು ಹೆಚ್ಚು ಎಂದು ತಜ್ಞರು ಹೇಳುತ್ತಾರೆ.

ಇದೀಗ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಇಯರ್ ಬಡ್ ಮಾದರಿಯ ಬಯೊಸೆನ್ಸರ್ಸ್‌ ಒಂದನ್ನು ಅಭಿವೃದ್ಧಿಪಡಿಸಿದ್ದು, ಮೂರ್ಚೆ ರೋಗ ಕಾಡುವ ಮೊದಲೇ ಎಚ್ಚರಿಸುವ ತಂತ್ರಜ್ಞಾನ ಇದು ಎಂದಿದ್ದಾರೆ.

ಇಯರ್‌ ಬಡ್‌ಗಳ ಬಳಕೆ ತೀರಾ ಸಾಮಾನ್ಯ ಎನ್ನುವಂತಾಗಿದೆ. ಮೀಟಿಂಗ್, ಹಾಡು ಕೇಳಲು, ಕೈಗಳನ್ನು ಫೋನ್‌ ಹಿಡಿಯುವುದರಿಂದ ಸ್ವತಂತ್ರಗೊಳಿಸಿ ಆರಾಮವಾಗಿ ಓಡಾಡಲು ಈ ಸಾಧನದ ಬಳಕೆ ವ್ಯಾಪಕವಾಗಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಜ್ಞರು ಅಭಿವೃದ್ಧಿಪಡಿಸಿರುವ ಇಯರ್‌ ಬಡ್ ಕಿವಿಯೊಳಗಿನ ನರಗಳಿಂದ ಸೂಕ್ಷ್ಮ ಮಾಹಿತಿ ಸಂಗ್ರಹಿಸಿ ಮಿದುಳಿನ ನರದೌರ್ಬಲ್ಯದ ಮಾಹಿತಿಯನ್ನು ಮೊದಲೇ ತಿಳಿಸುತ್ತದೆ.

ಕೆಲಸ ಮಾಡುವುದು ಹೇಗೆ?

ಮಿದುಳಿನ ವಿದ್ಯುತ್ ಸಂಚಾರದ ಮಾಹಿತಿ ಹಾಗೂ ದೇಹದ ಬೆವರು ಸ್ರವಿಸುವಿಕೆಯ ಮಾಹಿತಿಯಷ್ಟೇ ಸಾಕು, ಮಿದುಳಿನ ನರದೌರ್ಬಲ್ಯದ ಮಾಹಿತಿ ಸಂಗ್ರಹಿಸುವ ಇಯರ್‌ ಬಡ್‌ ಇದು. ಈ ಸಾಧನದ ಅಭಿವೃದ್ಧಿಗೆ ಬಯೊಮೆಡಿಕಲ್, ರಸಾಯನವಿಜ್ಞಾನ, ಎಲೆಕ್ಟ್ರಿಕಲ್ ಮತ್ತು ನ್ಯಾನೊ ಎಂಜಿನಿಯರಿಂಗ್ ವಿಭಾಗದ ಸಂಶೋಧಕರು ಕೈಜೋಡಿಸಿದ್ದಾರೆ.

ಇಯರ್ ಬಡ್‌ನಲ್ಲಿ ಮಿದುಳಿನ ಕಾರ್ಯವೈಖರಿ ತಿಳಿಯುವ ಇಇಜಿ ಅಳವಡಿಸಲಾಗಿದೆ. ಇದು ಮಿದುಳಿನ ವಿದ್ಯುತ್‌ ಪ್ರಸಾರದ ಮಾಹಿತಿಯನ್ನು ಅರಿಯಲಿದೆ. ಜತೆಗೆ ದೇಹದ ಪ್ರಮುಖ ಅಂಗದ ಆರೋಗ್ಯದ ಸ್ಥಿತಿ ತಿಳಿಸುತ್ತದೆ. ಮತ್ತೊಂದೆಡೆ ದೇಹದ ಬೆವರಿನ ಮಾದರಿ ಪಡೆದು ಅದನ್ನು ಅಧ್ಯಯನಕ್ಕೆ ಒಳಪಡಿಸುತ್ತದೆ. ಇದರಿಂದ ವ್ಯಾಯಾಮ ಅಥವಾ ಇನ್ಯಾವುದೇ ಕ್ರಿಯೆಯಲ್ಲಿದ್ದಾಗ ನಮ್ಮ ದೇಹದ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಅಥವಾ ಒತ್ತಡ ಹೆಚ್ಚಾಗಿ ಮೂರ್ಛೆ ರೋಗಕ್ಕೆ ತುತ್ತಾಗುವ ಅಪಾಯದ ಕುರಿತೂ ಮಾಹಿತಿ ನೀಡಲಿದೆ.

ಇಇಜಿ ಪರೀಕ್ಷೆಗೆ ಬಳಸುವ ಹೆಡ್‌ಸೆಟ್‌ ಅಳವಡಿಸಿ ಮಾಹಿತಿ ಸಂಗ್ರಹಿಸಲಾಗಿದೆ. ರಕ್ತ ಮಾದರಿ ಸಂಗ್ರಹಿಸಿ ಅದರಿಂದಲೂ ದಾಖಲೆ ಸಂಗ್ರಹಿಸಲಾಗಿದೆ, ಕಿವಿಯಲ್ಲಿ ಬೆವರು ಸ್ರವಿಸುವ ಗ್ರಂಥಿಗಳಿರುತ್ತವೆ ಮತ್ತು ಕಿವಿಗಳು ಮಿದುಳಿಗೆ ಅತ್ಯಂತ ಸಮೀಪ. ಜತೆಗೆ ಇಯರ್‌ ಬಡ್‌ಗಳು ಹಲವು ವರ್ಷಗಳಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಕೆಯಲ್ಲಿವೆ. ಈ ಸಂಶೋಧನೆಯಲ್ಲಿ ಇದನ್ನು ಬಳಸಲು ತೀರ್ಮಾನಿಸಲಾಯಿತು ಎಂದು ಸಂಶೋಧಕ ಯುಚೆನ್ ಶು ಹೇಳಿದ್ದಾರೆ.

ಈ ಇಯರ್ ಬಡ್‌ನಲ್ಲಿ ಅತ್ಯಾಧುನಿಕ ರಾಸಾಯನಿಕ ಸೆನ್ಸರ್‌ಗಳನ್ನು ಬಳಸಲಾಗಿದೆ. ಜತೆಗೆ ಎಲೆಕ್ಟ್ರೊ ಫಿಸಿಯಾಲಜಿಕಲ್ ಸಿಗ್ನಲ್‌ಗಳನ್ನು ಸಂಗ್ರಹಿಸುವ ಸೆನ್ಸರ್‌ಗಳೂ ಇದರಲ್ಲಿವೆ. ವ್ಯಕ್ತಿಯ ದೇಹದ ರಾಸಾಯನಿಕ ಕ್ರಿಯೆ ಬದಲಾವಣೆ ಗ್ರಹಿಸಿ ಅದರ ಮಾಹಿತಿಯನ್ನು ತಂತ್ರಾಂಶಕ್ಕೆ ಇದು ರವಾನಿಸಲಿದೆ. ಕೃತಕ ಬುದ್ಧಿಮತ್ತೆಯು ಇದನ್ನು ವಿಶ್ಲೇಷಿಸಿ ಸದ್ಯ ಆಗುತ್ತಿರುವ ಮತ್ತು ಮುಂದೆ ಎಚ್ಚರಿಕೆ ವಹಿಸಬೇಕಾದ ಆರೋಗ್ಯ ಕಾಳಜಿಯ ಮಾಹಿತಿ ತಿಳಿಸಲಿದೆ.

ಭವಿಷ್ಯದಲ್ಲಿ ಈ ಇಯರ್‌ ಬಡ್‌ ಅನ್ನೇ ಬಳಸಿ ರಕ್ತದಲ್ಲಿನ ಸಕ್ಕರೆ ಅಂಶ, ಆಮ್ಲಜನಕ ಹೀರುವಿಕೆಯ ಪ್ರಮಾಣ ತಿಳಿಸುವ ಸಾಧನವನ್ನೂ ಅಳವಡಿಸುವ ನಿಟ್ಟಿನಲ್ಲಿ ಪ್ರಯೋಗಗಳು ನಡೆದಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಸದ್ಯ ಬಳಕೆಯಲ್ಲಿರುವ ಎಲೆಕ್ಟ್ರಾನಿಕ್ ಸಾಧನಗಳನ್ನೇ ಬಯೊಸೆನ್ಸರ್‌ಗಳನ್ನಾಗಿ ಮಾರ್ಪಡಿಸಿ ಮಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆಯಂತ ಆಧುನಿಕ ತಂತ್ರಜ್ಞಾನ ಬಳಸಿ ಉಪಯುಕ್ತ ಸಾಧನಗಳ ಅಭಿವೃದ್ಧಿ ನಡೆಯುತ್ತಿದೆ. ಇದರಿಂದ ಅನಾರೋಗ್ಯದ ಕುರಿತು ಮೊದಲೇ ಮಾಹಿತಿ ತಿಳಿಸಿ, ಮುಂಜಾಗ್ರತೆ ವಹಿಸಲು ಕಾಲಾವಕಾಶ ದೊರೆತಂತೆ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.