ADVERTISEMENT

ಎಲಾನ್‌ ಮಸ್ಕ್‌ನ ಸ್ಟಾರ್‌ಲಿಂಕ್ ಭಾರತ ಪ್ರವೇಶ: ಸ್ಪೆಕ್ಟ್ರಮ್‌ಗಾಗಿ ಮುಸುಕಿನ ಗುದ್ದಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜೂನ್ 2023, 11:17 IST
Last Updated 26 ಜೂನ್ 2023, 11:17 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ನವದೆಹಲಿ: ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಉದ್ಯಮಿ ಎಲಾನ್‌ ಮಸ್ಕ್‌, ತನ್ನ ಒಡೆತನದ ಉಪಗ್ರಹ ಆಧಾರಿತ ಸ್ಟಾರ್‌ಲಿಂಕ್ ವೈರ್‌ಲೆಸ್‌ ನೆಟ್‌ವರ್ಕ್‌ ಸೇವೆಯನ್ನು ಭಾರತದಲ್ಲಿ ಆರಂಭಿಸಲು ಉತ್ಸುಕತೆ ತೋರಿದ್ದರು. ಆದರೆ, ತರಂಗಾಂತರವನ್ನು ಹರಾಜು ಬದಲು ನೇರ ಪರವಾನಗಿ ಮೂಲಕ ನೀಡಬೇಕು ಎಂಬ ಬೇಡಿಕೆಗೆ ಜಿಯೋ ಒಡೆಯ ಮುಖೇಶ್ ಅಂಬಾನಿ ಸಿಡಿಮಿಡಿಗೊಂಡಿದ್ದಾರೆ.

ಎಲಾನ್ ಕೋರಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಅಂಬಾನಿ, ವಿದೇಶಿ ಕಂಪನಿಗಳು ಹರಾಜು ಪ್ರಕ್ರಿಯೆ ಮೂಲಕವೇ ಭಾರತವನ್ನು ಪ್ರವೇಶಿಸಬೇಕು ಎಂದು ಪ್ರತಿಪಾದಿಸಿದ್ದಾರೆ.

ಇದರಿಂದಾಗಿ ಪರವಾನಗಿ ನೀಡುವ ಮೂಲಕವೇ ಅನುಮತಿ ಕೇಳುತ್ತಿರುವ ಟಾಟಾ, ಸುನೀಲ್ ಭಾರತಿ ಮಿತ್ತಲ್ ಹಾಗೂ ಅಮೆಜಾನ್‌ ಸಾಲಿಗೆ ಸ್ಟಾರ್‌ಲಿಂಕ್ ಕೂಡಾ ಸೇರಿದೆ. 

ADVERTISEMENT

2010ರ ನಂತರ ಭಾರತದಲ್ಲಿನ ದೂರಸಂಪರ್ಕ ಕ್ಷೇತ್ರದಲ್ಲಿನ ಸೇವಾ ಅನುಮತಿಯನ್ನು ಹರಾಜು ಪ್ರಕ್ರಿಯೆ ಮೂಲಕವೇ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹಂಚಿಕೆ ಮಾಡುತ್ತಿದೆ. ಇದರ ಮೂಲಕ 77 ಶತಕೋಟಿ ಅಮೆರಿಕನ್ ಡಾಲರ್ ವಹಿವಾಟು ಸರ್ಕಾರಕ್ಕೆ ದಾಖಲಾಗುತ್ತಿದೆ. ಇದೀಗ ಉಪಗ್ರಹ ಮೂಲಕ ನೀಡಲಾಗುವ ನೆಟ್‌ವರ್ಕ್‌ ಸ್ಪೆಕ್ಟ್ರಂ ಹಂಚಿಕೆ ದೊಡ್ಡ ವಿಷಯವಾಗಲಿದೆ ಎಂದು ಸಿಎಲ್ಎಸ್‌ಎ ಅಭಿಪ್ರಾಯಪಟ್ಟಿದೆ.

ಈ ಸ್ಪರ್ಧೆಯಲ್ಲಿ ಅಮೆಜಾನ್‌ನ ಕ್ಯೂಪೆರ್, ಟಾಟಾ, ಭಾರ್ತಿ ಏರ್‌ಟೆಲ್‌ನ ಒನ್‌ ವೆಬ್‌, ಎಲ್‌ ಆ್ಯಂಡ್‌ ಟಿ ಕಂಪನಿಗಳು ಹರಾಜು ಪ್ರಕ್ರಿಯೆಯನ್ನು ವಿರೋಧಿಸಿವೆ. ಮತ್ತೊಂದೆಡೆ ರಿಲಯನ್ಸ್‌ ಜಿಯೊ ಮತ್ತು ವೊಡಾಫೋನ್–ಐಡಿಯಾ ಹರಾಜು ಪ್ರಕ್ರಿಯೆ ಮೂಲಕವೇ ಪರವಾನಗಿ ಹಂಚಿಕೆಗೆ ಪಟ್ಟು ಹಿಡಿದಿರುವುದು ಈ ಬಿಕ್ಕಟ್ಟಿಗೆ ಕಾರಣವಾಗಿವೆ.

ಜಾಗತಿಕ ಮಟ್ಟದಲ್ಲಿ ಸ್ಪೆಕ್ಟ್ರಂ, ಉಪಗ್ರಹ ಆದಾರಿತ ಸಂಪನ್ಮೂಲವನ್ನು ಐಟಿಯು ನಿಯಂತ್ರಿಸುತ್ತದೆ. ಆ ಮೂಲಕ ಆರ್ಬಿಟ್ ಸ್ಲಾಟ್‌ ಹಾಗೂ ತರಂಗಾಂತರ ಹಂಚಿಕೆಯನ್ನು ‘ಐಟಿಯು’ ನೋಡಿಕೊಳ್ಳುತ್ತಿದೆ. ಭಾರತದಲ್ಲಿ ಉಪಗ್ರಹಗಳ ಬಳಕೆ ಮತ್ತು ಬಳಕೆದಾರರ ಲಿಂಕ್‌ಗಳನ್ನು ಸ್ಪೆಕ್ಟ್ರಂ ಹರಾಜು ಮೂಲಕವೇ ಹಂಚಿಕೆ ಮಾಡುತ್ತಿದೆ. ಭಾರತದ ಈ ಮಾದರಿ ಅಮೆರಿಕ ಮತ್ತು ಬ್ರೆಜಿಲ್‌ನಲ್ಲೂ ಚಾಲ್ತಿಯಲ್ಲಿದೆ. 

ಉಪಗ್ರಹ ಸ್ಪೆಕ್ಟ್ರಂ ಹಂಚಿಕೆ ವಿಷಯವಾಗಿ ಕಂಪನಿಗಳಿಂದ ಬಂದಿರುವ 64 ಪ್ರತಿಕ್ರಿಯೆಗಳಲ್ಲಿ 48 ಪ್ರತಿಕ್ರಿಯೆಗಳು ಪರವಾನಗಿ ನೀಡುವ ಕುರಿತು ಹಾಗೂ 12 ಮತಗಳು ಹರಾಜು ಪ್ರಕ್ರಿಯೆ ಪರವಾಗಿ, ಉಳಿದವು ತಟಸ್ಥ ನಿಲುವು ಹೊಂದಿವೆ. 

ಅಮೆಜಾನ್‌ ತನ್ನ ಕ್ಯೂಪೆರ್ ಯೋಜನೆ ಮೂಲಕ ಉಪಗ್ರಹ ಆಧಾರಿತ ಅಂತರ್ಜಾಲ ಸಂಪರ್ಕ ಸೌಲಭ್ಯವನ್ನು 2024ರಿಂದ ಆರಂಭಿಸುವ ಯೋಜನೆ ಹೊಂದಿದೆ. ರಿಲಾಯನ್ಸ್ ಜಿಯೊ ಸದ್ಯ 44 ಕೋಟಿ ದೂರಸಂಪರ್ಕ ಗ್ರಾಹಕರನ್ನು ಹೊಂದಿದೆ. ಜತೆಗೆ 80ಲಕ್ಷ ಬ್ರಾಡ್‌ಬ್ಯಾಂಡ್‌ ಗ್ರಾಹಕರನ್ನು ಹೊಂದಿದೆ. 

ಸದ್ಯ ಭಾರತದಲ್ಲಿ 5ಜಿ ತರಂಗಾಂತರವನ್ನು ರಿಲಾಯನ್ಸ್ ಜಿಯೊ ಮತ್ತು ಭಾರತಿ ಏರ್‌ಟೆಲ್‌ ಜಾರಿಗೊಳಿಸುತ್ತಿವೆ. ಆದರೆ ಉಪಗ್ರಹ ಆಧಾರಿತ ಅಂತರ್ಜಾಲ ಸಂಪರ್ಕ ವ್ಯವಸ್ಥೆ ಜಾರಿಗೆ ಬಂದಿದ್ದೇ ಆದಲ್ಲಿ, 5ಜಿ ತರಂಗಾಂತರವನ್ನು ನೆಟ್‌ವರ್ಕ್‌ ಸಂಪರ್ಕವೇ ಇಲ್ಲದ ಸ್ಥಳಗಳಿಗೂ ನೀಡಲು ಸಾಧ್ಯ ಎಂದೆನ್ನಲಾಗಿದೆ. 

ಭಾರತದಲ್ಲಿ 5ಜಿ ಸೌಲಭ್ಯವು ಪ್ರತಿ ಜಿಬಿಗೆ 0.17 ಅಮೆರಿಕನ್ ಡಾಲರ್‌ಗೆ ಲಭ್ಯ. ಅಮೆರಿಕದಲ್ಲಿ 6 ಡಾಲರ್ ಹಾಗೂ ಚೀನಾದಲ್ಲಿ 0.4 ಡಾಲರ್‌ ಇದೆ. ಸ್ಪರ್ಧಾತ್ಮಕ ಬೆಲೆ ಮಾರುಕಟ್ಟೆಯಾದ ಭಾರತದಲ್ಲಿ  ಉಪಗ್ರಹ ಆಧಾರಿತ ದೂರಸಂಪರ್ಕ ಉದ್ಯಮವು ಶೇ 36ರ ದರದಲ್ಲಿ ಬೆಳವಣಿಗೆ ಕಾಣುತ್ತಿದೆ. 2030ರ ಹೊತ್ತಿಗೆ ಇದು 1.9ಶತಕೋಟಿ ಅಮೆರಿಕನ್ ಡಾಲರ್ ವಹಿವಾಟು ದಾಟಲಿದೆ ಎಂದು ಡಿಲಾಯ್ಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.