ADVERTISEMENT

EXPLAINER: ಏನಿದು ಆಟೊಮೊಬೈಲ್ ಲೋಕಕ್ಕೆ ಮಾರಕವಾದ BlackSuit ಕುತಂತ್ರಾಂಶ?

ರಾಯಿಟರ್ಸ್
Published 5 ಜುಲೈ 2024, 11:27 IST
Last Updated 5 ಜುಲೈ 2024, 11:27 IST
<div class="paragraphs"><p>ಸೈಬರ್ ದಾಳಿ (ಸಾಂದರ್ಭಿಕ ಚಿತ್ರ)</p></div>

ಸೈಬರ್ ದಾಳಿ (ಸಾಂದರ್ಭಿಕ ಚಿತ್ರ)

   

ಸ್ಯಾನ್‌ಫ್ರಾನ್ಸಿಸ್ಕೊ: ಅಂತರ್ಜಾಲವನ್ನೇ ಆಧರಿಸಿ ನಡೆಯುತ್ತಿರುವ ಜಗತ್ತಿನಲ್ಲಿ ಹ್ಯಾಕಿಂಗ್ ಎನ್ನುವ ತೂಗುಕತ್ತಿ ಸದಾ ತಲೆಮೇಲೆ ತೂಗುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಇದಕ್ಕೊಂದು ಹೊಸ ಸೇರ್ಪಡೆ ಕಾರು ಮಾರಾಟ ಜಾಲದಲ್ಲಿ ಬಳಕೆಯಾಗುತ್ತಿರುವ ಸಿಡಿಕೆ ಗ್ಲೋಬಲ್‌ಗೆ ಬ್ಲಾಕ್‌ಸೂಟ್‌ ಎಂಬ ಕುತಂತ್ರಾಂಶ ಬಳಕೆಯಾಗಿದ್ದು ಇಡೀ ಜಗತ್ತನ್ನೇ ನಿದ್ದೆಗೆಡಿಸಿದೆ.

ಜಗತ್ತಿನ ತಂತ್ರಾಂಶ ಅಭಿವೃದ್ಧಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳನ್ನು ಗುರಿಯಾಗಿಸಿ ನಡೆದ ಈ ದಾಳಿಯ ಆಘಾತ ಒಂದೆಡೆಯಾದರೆ, ದಾಳಿಕೋರರು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದು ಮತ್ತೊಂದು ಸುದ್ದಿಯಾಯಿತು. ಸಿಡಿಕೆ ತಂತ್ರಾಂಶವನ್ನು ಸಾಮಾನ್ಯವಾಗಿ ಕಾರುಗಳ ಮಾರಾಟ ಮಾಡುವ ಡೀಲರ್‌ಗಳು ಬಳಸುತ್ತಾರೆ. ಕಾರುಗಳ ಮಾರಾಟ ಹಾಗೂ ಇನ್ನಿತರ ವಹಿವಾಟುಗಳಿಗೆ ಇದು ಬಳಕೆಯಾಗುತ್ತದೆ. ಈ ಹ್ಯಾಕ್‌ನ ನಂತರ, ಈ ಇಡೀ ವ್ಯವಸ್ಥೆಯೇ ಕಂಪ್ಯೂಟರ್‌ ಬಳಕೆಯ ಬದಲಾಗಿ, ಪೆನ್ನು– ಹಾಳೆ ಬಳಕೆಗೆ ಬಂದು ನಿಂತಿದೆ ಎಂದು ವರದಿಯಾಗಿದೆ.

ADVERTISEMENT

ಬ್ಲಾಕ್‌ಸೂಟ್‌ ಎಂದರೇನು? ಇದರ ಹಿಂದಿರುವವರು ಯಾರು?

ಈ ಕುತಂತ್ರಾಂಶ ಸೃಷ್ಟಿಸಿದ ಸಮೂಹದ ಕುರಿತು ಹೆಚ್ಚಿನ ಮಾಹಿತಿ ಈವರೆಗೂ ತಿಳಿದುಬಂದಿಲ್ಲ. ಆದರೆ ಈ ಗುಂಪು 2023ರ ಮೇನಿಂದ ಸಕ್ರಿಯವಾಗಿದೆ. ರಾಯಲ್‌ಲಾಕರ್‌ ಎಂಬ ರಷ್ಯಾ ಸಂಪರ್ಕ ಹೊಂದಿರುವ ಹ್ಯಾಕಿಂಗ್ ತಂಡ ಇದಾಗಿರುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ಈ ತಂಡವು ಹೆಚ್ಚಾಗಿ ಅಮೆರಿಕ ಮೂಲದ ಕಂಪನಿಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸುತ್ತಿದೆ. ಇದೀಗ ಕಾಂಟಿ ಎಂಬ ಹೊಸ ಹೆಸರಿನೊಂದಿಗೆ ಈ ಗ್ಯಾಂಗ್ ದಾಳಿ ನಡೆಸುತ್ತಿದೆ. ಕುತಂತ್ರಾಂಶದ ಮೂಲಕ ಜಗತ್ತಿನ ಪ್ರಮುಖ ಐಟಿ ಕಂಪನಿಗಳ ಉತ್ಪನ್ನಗಳ ಮೇಲೆ ದಾಳಿ ಮಾಡುತ್ತಿದೆ. ಇವುಗಳಲ್ಲಿ ರಾಯಲ್ ಜತೆಗೆ ಲಾಕ್‌ಬಿಟ್‌ ಹಾಗೂ ಆಲ್ಫ್‌ವಿ ಕೂಡಾ ಇವೆ ಎಂದು ತಜ್ಞರು ಹೇಳಿದ್ದಾರೆ.

ಈ ಮೂರು ಹ್ಯಾಕರ್‌ಗಳಂತೆ ಬ್ಲಾಕ್‌ಸೂಟ್‌ ಹೆಚ್ಚು ಅಪಾಯಕಾರಿ ಅಲ್ಲ. ಹೀಗಾಗಿ ಇದರ ದಾಳಿಗೆ ಸಿಲುಕಿದವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇಲ್ಲ ಎಂದು ಸೈಬರ್ ಕ್ರೈಂ ವಿಶ್ಲೇಷಿಸುವ ಕಿಂಬರ್ಲಿ ಗೂಡಿ ಸಂಸ್ಥೆ ಹೇಳಿದೆ.

ಬ್ಲಾಕ್‌ಸೂಟ್‌ ದಾಳಿಗೆ ತುತ್ತಾದವರಲ್ಲಿ ಅಮೆರಿಕ ಕಂಪನಿಗಳ ಜತೆಗೆ, ಯುರೋಪ್ ಹಾಗೂ ಕೆನಡಾದ ಕಂಪನಿಗಳು ಸೇರಿವೆ.

ಬ್ಲಾಕ್‌ಸೂಟ್‌ನ ದಾಳಿಗೆ ತುತ್ತಾದ ಕಂಪನಿಗಳೆಷ್ಟು?

ಕನಿಷ್ಠ 92 ಕಂಪನಿಗಳು ಬ್ಲಾಕ್‌ಸೂಟ್‌ನ ದಾಳಿಗೆ ತುತ್ತಾಗಿವೆ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ ದಾಳಿಗೆ ತುತ್ತಾದವರ ಸಂಖ್ಯೆ ದೊಡ್ಡದಿದೆ.

ಇದರಲ್ಲಿ ಸರಕು ಹಾಗೂ ಶಿಕ್ಷಣಕ್ಕೆ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳೇ ಹೆಚ್ಚು. ದಾಳಿ ನಡೆಸಿದವರು ರಷ್ಯನ್ ಭಾಷೆ ಬಳಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇದು ರಾಷ್ಯಾ ಮೂಲದ ಹ್ಯಾಕರ್‌ಗಳ ಕೆಲಸ ಎಂದು ಗೂಡಿ ಹೇಳಿದೆ.

ಬ್ಲಾಕ್‌ಸೂಟ್ ಹೇಗೆ ಕೆಲಸ ಮಾಡುತ್ತದೆ?

ಬ್ಲಾಕ್‌ಸೂಟ್‌ ಎಂಬುದು ಎರಡು ಬಗೆಯ ಸುಲಿಗೆ ನಡೆಸುವ ದಾಳಿಕೋರರ ತಂಡ. ಮೊದಲು ದಾಳಿ ನಡೆಸುವ ಕಂಪನಿಯ ಅತ್ಯಮೂಲ್ಯ ಮಾಹಿತಿಯನ್ನು ಕದಿಯುತ್ತದೆ. ನಂತರ ಇಡೀ ವ್ಯವಸ್ಥೆಯನ್ನೇ ನಿಷ್ಕ್ರಿಯಗೊಳಿಸುತ್ತದೆ. ನಂತರ ಆ ಮಾಹಿತಿಯನ್ನು ಸೋರಿಕೆ ಮಾಡುವ ಬೆದರಿಕೆ ಒಡ್ಡುತ್ತದೆ. ಇಷ್ಟುಮಾತ್ರವಲ್ಲ ಬ್ಲಾಕ್‌ಸೂಟ್ ತನ್ನ ಬಳಿ ಇರುವ ಈ ಕುತಂತ್ರಾಂಶವನ್ನು ಇತರ ಸಣ್ಣ ಗುಂಪುಗಳಿಗೆ ನೀಡುವ ಮೂಲಕ ಸೈಬರ್ ಅಪರಾಧಕ್ಕೆ ನೆರವಾಗುತ್ತಿದೆ ಎಂದು ಗೂಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.