ನವದೆಹಲಿ: ಸೆಮಿಕಂಡಕ್ಟರ್ ಉತ್ಪಾದನಾ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಭಾರತದಲ್ಲಿ 200ಕ್ಕೂ ಹೆಚ್ಚು ಕಂಪನಿಗಳಿದ್ದು, 2025ರ ಹೊತ್ತಿಗೆ ಸುಮಾರು 10 ಲಕ್ಷ ನುರಿತ ತಂತ್ರಜ್ಞರ ಅಗತ್ಯವಿದೆ ಎಂದು ಸೆಮಿಕಂಡಕ್ಟರ್ ಕ್ಷೇತ್ರದ ಪ್ರಮುಖ ಮಾರುಕಟ್ಟೆಯ ತಜ್ಞರು ಅಂದಾಜು ಮಾಡಿದ್ದಾರೆ.
ಸ್ಮಾರ್ಟ್‌ವಾಚ್‌ನಿಂದ ಹಿಡಿದು ಸೂಪರ್ ಕಂಪ್ಯೂಟರ್‌ವರೆಗೂ ಸೆಮಿಕಂಡಕ್ಟರ್ ಇರುವ ಚಿಪ್ ಅತ್ಯಗತ್ಯ. ಕೆಲ ತಿಂಗಳ ಹಿಂದೆ ಕಚ್ಚಾ ವಸ್ತು ಲಭ್ಯತೆಯ ಕೊರತೆಯಿಂದ ಸೆಮಿಕಂಡಕ್ಟರ್ ಸಿಗುವುದೇ ಕಷ್ಟವಾಗಿತ್ತು. ಇದೀಗ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರು ಸಿಗುವುದು ಕಷ್ಟವಾಗಿದೆ ಎನ್ನುವುದು ಈ ಕ್ಷೇತ್ರದ ತಂತ್ರಜ್ಞರ ಆತಂಕ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಮೆರಿಕದ ಉದ್ಯಮಗಳಿಗೆ ಸದ್ಯ 10 ಸಾವಿರ ನುರಿತ ತಂತ್ರಜ್ಞರ ಅಗತ್ಯವಿದೆ.
ಇಂಡಿಯಾ ಬ್ರಾಂಡ್ ಈಕ್ವಿಟಿ ಫೌಂಡೇಷನ್ ವರದಿಯ ಪ್ರಕಾರ ಭಾರತದಲ್ಲಿ ಸುಮಾರು 200ಕ್ಕೂ ಹೆಚ್ಚು ಸೆಮಿಕಂಡಕ್ಟರ್ ವಿನ್ಯಾಸ ಹಾಗೂ ಎಂಬೆಡೆಡ್ ತಂತ್ರಾಂಶ ಕಂಪನಿಗಳಿವೆ. ಹೀಗಾಗಿ ಭಾರತ ತನ್ನ ಈ ಸಾಮರ್ಥ್ಯ ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಸಾಧ್ಯತೆ ಇದೆ. ಅದನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿನ ತಂತ್ರಜ್ಞರ ಕೊರತೆ ನೀಗಿಸುವ ಕಡೆ ತ್ವರಿತ ಕ್ರಮ ಅಗತ್ಯ ಎಂದು ಕೈಗಾರಿಕೋದ್ಯಮಿಗಳು ಅಭಿಪ್ರಾಯಪಡುತ್ತಿದ್ದಾರೆ.
ಸಾಫ್ಟ್‌ವೇರ್ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಭಾರತ, ಹಾರ್ಡ್‌ವೇರ್ ಕ್ಷೇತ್ರದಲ್ಲಿ ಅಷ್ಟಾಗಿ ಬೆಳವಣಿಗೆ ಕಂಡಿಲ್ಲ. ಅದೂ ಅಲ್ಲದೆ ಕಳೆದ ಹಲವು ವರ್ಷಗಳಿಂದ ಈ ಕ್ಷೇತ್ರದ ಬೆಳವಣಿಗೆ ನಿಂತಲ್ಲೇ ನಿಂತಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಚೀನಾ, ಯುರೋಪ್ ಹಾಗೂ ಅಮೆರಿಕಾದಲ್ಲಿ ಈ ಕ್ಷೇತ್ರದ ಉದ್ಯಮಗಳಿಗೆ ನೀಡಲಾಗುತ್ತಿರುವ ರಿಯಾಯಿತಿಗಳು ಹೆಚ್ಚು ಕೈಗಾರಿಕೋದ್ಯಮಿಗಳನ್ನು ಆಕರ್ಷಿಸುತ್ತಿದೆ.
ಅದರ ನಡುವೆಯೂ ಭಾರತ ತನ್ನ ನೀತಿಯಲ್ಲಿ ಒಂದಷ್ಟು ಬದಲಾವಣೆ ಮೂಲಕ ಹೊಸ ಸಾಧ್ಯತೆ ಕಡೆ ಮುಖ ಮಾಡಿದೆ.
ಎಲೆಕ್ಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ದೂರಸಂಪರ್ಕ, ಬಾಹ್ಯಾಕಾಶ, ಸೇನೆ ಮತ್ತು ವಿಮಾನಯಾನ ಹಾಗೂ ಆಟೊಮೋಟಿವ್ ಕ್ಷೇತ್ರಗಳಲ್ಲಿ ಸೆಮಿಕಂಡಕ್ಟರ್ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ.
ಭಾರತದ ಸೆಮಿಕಂಡಕ್ಟರ್ ಮಾರುಕಟ್ಟೆಯು 2021ರಲ್ಲಿ ₹1.89ಲಕ್ಷ ಕೋಟಿ ಮೊತ್ತದ್ದಾಗಿತ್ತು.
ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಉದ್ಯಮವು 2021ರಲ್ಲಿ ₹43ಲಕ್ಷ ಕೋಟಿಯಷ್ಟಿತ್ತು.
2028ರಲ್ಲಿ ಭಾರತದಲ್ಲಿ ಈ ಕ್ಷೇತ್ರ ₹6.6ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಉದ್ಯಮ ಶೇ 6.7ರ ದರದಲ್ಲಿ ವೃದ್ಧಿಯಾಗುತ್ತಿದ್ದರೆ, ಭಾರತದಲ್ಲಿ ಇದು ₹17.10ರ ದರದಲ್ಲಿ ವೃದ್ಧಿಯಾಗುತ್ತಿದೆ.
2014ರಲ್ಲಿ ಜಾರಿಗೆ ಬಂದ ಮೇಕ್ ಇನ್ ಇಂಡಿಯಾ ಮೂಲಕ ಜಾಗತಿಕ ಮಟ್ಟಕ್ಕೆ ಭಾರತದಲ್ಲಿ ಉತ್ಪನ್ನ ತಯಾರಿಸುವ ಉದ್ಯಮಗಳಿಗೆ ಉತ್ತೇಜನ ನೀಡಲಾಗಿದೆ.
ಸೆಮಿಕಂಡಕ್ಟರ್ ಉದ್ಯಮ ಉತ್ತೇಜಿಸಲು ಎಲೆಕ್ಟ್ರಾನಿಕ್ ಕ್ಷೇತ್ರಕ್ಕೆ ಹೆಚ್ಚಿನ ರಿಯಾಯಿತಿಗಳನ್ನು ಸರ್ಕಾರ ನೀಡುತ್ತಿದೆ.
ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮ ಆರಂಭಿಸಲು ₹1.39ಲಕ್ಷ ಕೋಟಿ ರಿಯಾಯಿತಿ ಪ್ಯಾಕೇಜ್ ಅನ್ನು ಸರ್ಕಾರ ಘೋಷಿಸಿದೆ.
ವಿನ್ಯಾಸ ಕ್ಷೇತ್ರ, ಚಿಪ್ ಕ್ಷೇತ್ರದ ಸ್ಟಾರ್ಟ್‌ಅಪ್, ಎಲೆಕ್ಟ್ರಾನಿಕ್ ಬಿಡಿಭಾಗಗಳು ಹಾಗೂ ಸೆಮಿಕಂಡಕ್ಟರ್ ಕ್ಷೇತ್ರದ ಉತ್ತೇಜನ
ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಅಗತ್ಯವಿರುವ ಮೌನವಸಂಪನ್ಮೂಲ ಅಭಿವೃದ್ಧಿಗೂ ವಿವಿಧ ಕಾರ್ಯಕ್ರಮ
ಸೆಮಿಕಂಡಕ್ಟರ್ ಕ್ಷೇತ್ರ ಭವಿಷ್ಯದಲ್ಲಿ ಇನ್ನಷ್ಟು ಬೆಳೆಯಲಿದೆ. ಅದಕ್ಕೆ ನುರಿತ ತಂತ್ರಜ್ಞರ ಅಗತ್ಯ ಇನ್ನಷ್ಟು ಇದ್ದೇ ಇರುತ್ತದೆ. ಹೀಗಾಗಿ ನುರಿತ ತಂತ್ರಜ್ಞರು ನಿರಂತರವಾಗಿ ಸಿಗುವಂತೆ ಮಾಡಲು ಸರ್ಕಾರ ಯೋಜನೆ ರೂಪಿಸುವ ಅಗತ್ಯವಿದೆ. ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಗೆ ಮುಖ್ಯ ಕೇಂದ್ರವಾಗುವ ಅವಕಾಶಗಳಿವೆ ಎಂದು ಭಾರತ ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ಒಕ್ಕೂಟದ ಉಪಾಧ್ಯಕ್ಷ ಅನುರಾಗ್ ಅವಸ್ತಿ ಅವರು ಇತ್ತೀಚೆಗೆ ಲೇಖನವೊಂದರಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.