ನವದೆಹಲಿ: ವಂಚನೆಯ ಉದ್ದೇಶದ ಹಣಕಾಸಿನ ಆ್ಯಪ್‌ಗಳಿಗೆ ಲಗಾಮು ಹಾಕಲು ಕೇಂದ್ರ ಹಣಕಾಸು ಸಚಿವಾಲಯವು, ಆರ್‌ಬಿಐ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜೊತೆ ಕೆಲಸ ಮಾಡುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವಂಚನೆಯ ಉದ್ದೇಶದ ಆ್ಯಪ್‌ಗಳ ವಿಚಾರವಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕು, ಭಾರಿ ಲಾಭ ತಂದುಕೊಡುವ ಹೇಳಿಕೆಗಳನ್ನು ಕೇಳಿ ಮಾರುಹೋಗಬಾರದು ಎಂದು ಎಚ್ಚರಿಸಿದ್ದಾರೆ. ‘ನಾವು ಇಂತಹ
ಆ್ಯಪ್‌ಗಳ ವಿರುದ್ಧ ಹಿಂದೆಂದೂ ಕಾಣದ ಮಟ್ಟದಲ್ಲಿ, ಲಗಾಮು ಹಾಕುವ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ತುಮಕೂರಿನಲ್ಲಿ ಹೇಳಿದ್ದಾರೆ.
‘ಎಚ್ಚರಿಕೆ ಇರಬೇಕು. ಹಣದ ವಿಚಾರದಲ್ಲಿ ಎರಡು ಬಾರಿ ಪರಿಶೀಲನೆ ನಡೆಸಿಕೊಳ್ಳಬೇಕು, ಕುರಿಮಂದೆಯಂತೆ ಸಾಗಬಾರದು’ ಎಂದು ಕಿವಿಮಾತು ಹೇಳಿದ್ದಾರೆ. ಹಣಕಾಸಿನ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುವ ವ್ಯಕ್ತಿಗಳನ್ನು ನಿಯಂತ್ರಣಕ್ಕೆ ಒಳಪಡಿಸುವ ಪ್ರಸ್ತಾವ ತಮ್ಮ ಮುಂದೆ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.