ADVERTISEMENT

ಜಗತ್ತಿನ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರಾಟ ಕಂಪನಿಯಾಗಿ ಹೊರಹೊಮ್ಮಿದ ಆ್ಯಪಲ್

ಏಜೆನ್ಸೀಸ್
Published 28 ಜನವರಿ 2021, 8:40 IST
Last Updated 28 ಜನವರಿ 2021, 8:40 IST
ಆ್ಯಪಲ್ ಐಫೋನ್
ಆ್ಯಪಲ್ ಐಫೋನ್   

ಬೆಂಗಳೂರು: ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಐಫೋನ್ ಮಾರಾಟ ಮಾಡುವ ಮೂಲಕ ಆ್ಯಪಲ್ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ. ನಾಲ್ಕನೇ ತ್ರೈಮಾಸಿಕ ವರದಿ ಬಳಿಕ ಆ್ಯಪಲ್ ಮಾರುಕಟ್ಟೆ ಮೌಲ್ಯ ಮತ್ತು ಮಾರಾಟ ವಿವರ ಬಹಿರಂಗಪಡಿಸಿದ್ದು, ಐಫೋನ್ ಮಾರಾಟದಲ್ಲಿ ವಿಶೇಷ ದಾಖಲೆ ನಿರ್ಮಿಸಿದೆ.

ಹುವಾಯ್ ಫೋನ್ ಮೇಲೆ ಅಮೆರಿಕದಲ್ಲಿ ನಿರ್ಬಂಧ ಹೇರಿದ್ದರಿಂದ, ಹುವಾಯ್ ಮಾರಾಟ ಕುಸಿದಿದ್ದು, ಆ್ಯಪಲ್‌ಗೆ ಹೆಚ್ಚಿನ ಪ್ರಯೋಜನವಾಗಿದೆ.

ಹೊಸ ಸರಣಿಯ ಮತ್ತು 5G ಸಹಿತ ಐಫೋನ್ 12 ಮಾರಾಟದಲ್ಲಿ ಗರಿಷ್ಠ ಸಾಧನೆ ಮಾಡಿರುವ ಆ್ಯಪಲ್, ಮೊದಲ ಬಾರಿಗೆ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ $100 ಬಿಲಿಯನ್ ಆದಾಯ ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದೆ.

ADVERTISEMENT

ಚೀನಾದಲ್ಲೂ ಆ್ಯಪಲ್ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಐಫೋನ್ 12 ಸರಣಿಯನ್ನು ಮಾರಾಟ ಮಾಡಿದ್ದು, ಹಾಂಗ್ ಕಾಂಗ್ ಮತ್ತು ತೈವಾನ್‌ನಲ್ಲೂ ಕಳೆದ ತ್ರೈಮಾಸಿಕಕ್ಕಿಂತ ಈ ಬಾರಿ ಶೇ 57 ಹೆಚ್ಚಳ ದಾಖಲಿಸಿದೆ. ವಾರ್ಷಿಕ ಶೇ 6.2 ಪ್ರಗತಿಯೊಂದಿಗೆ, ಸ್ಯಾಮ್‌‌ಸಂಗ್ ಎಲೆಕ್ಟ್ರಾನಿಕ್ಸ್ ಅನ್ನು ಹಿಂದಿಕ್ಕಿ ಆ್ಯಪಲ್ ಮೊದಲ ಸ್ಥಾನ ಪಡೆದುಕೊಂಡಿದೆ.

ಆ್ಯಪಲ್ ಐಫೋನ್ ರಫ್ತು ಶೇ 22 ಹೆಚ್ಚಳವಾಗಿದ್ದು, ಕಳೆದ ತ್ರೈಮಾಸಿಕದಲ್ಲಿ 90.1 ಮಿಲಿಯನ್ (9.01 ಕೋಟಿ) ದಾಖಲೆಯ ಐಫೋನ್ ರಫ್ತಾಗಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಶೇ 23.4 ಪಾಲು ಆಗಿದೆ. ರಜಾ ಅವಧಿ ಮತ್ತು ಹಬ್ಬ, ವರ್ಷಾಂತ್ಯದ ಆಫರ್ ಕೊಡುಗೆಗಳು ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.