ADVERTISEMENT

ಆ್ಯಪಲ್‌: ಹೊಸ ಚಿಪ್, ಮ್ಯಾಕ್‌ಬುಕ್‌ ಪ್ರೊ, ಏರ್‌ಪಾಡ್ಸ್‌ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2021, 7:08 IST
Last Updated 19 ಅಕ್ಟೋಬರ್ 2021, 7:08 IST
ಹೊಸ ಮ್ಯಾಕ್‌ಬುಕ್‌ ಪ್ರೊ ಅನಾವರಣ
ಹೊಸ ಮ್ಯಾಕ್‌ಬುಕ್‌ ಪ್ರೊ ಅನಾವರಣ   

ಬೆಂಗಳೂರು: ಆ್ಯಪಲ್‌ ಇಂಕ್‌ ಸೋಮವಾರ ಎರಡು ಹೊಸ ಚಿಪ್‌ಗಳು, ಮ್ಯಾಕ್‌ಬುಕ್‌ ಪ್ರೊ ಲ್ಯಾಪ್‌ಟಾಪ್‌ಗಳು ಹಾಗೂ ಮೂರನೇ ತಲೆಮಾರಿನ ಏರ್‌ಪಾಡ್‌ ವೈರ್‌ಲೆಸ್‌ ಇಯರ್‌ಬಡ್‌ ಬಿಡುಗಡೆ ಮಾಡಿದೆ.

ಎರಡು ಹೊಸ ಚಿಪ್‌

ಆ್ಯಪಲ್‌ 'ಎಂ1 ಪ್ರೊ' ಮತ್ತು 'ಎಂ1 ಮ್ಯಾಕ್ಸ್‌' ಹೆಸರಿನ ಎರಡು ಚಿಪ್‌ಗಳನ್ನು ಪ್ರಕಟಿಸಿದೆ. ಹಿಂದಿನ ಎಂ1 ಚಿಪ್‌ಗಳಿಗಿಂತ ಮತ್ತಷ್ಟು ವೇಗ ಹಾಗೂ ಸಮರ್ಥಗೊಳಿಸಲಾಗಿದೆ. ಕಂಪ್ಯೂಟರ್‌ಗಳಲ್ಲಿ ವಿಡಿಯೊ ಪ್ರೊಸೆಸಿಂಗ್‌ ಉತ್ತಮಗೊಳಿಸುತ್ತದೆ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಬ್ಯಾಟರಿ ಬಾಳಿಕೆ ಹೆಚ್ಚಿಸುತ್ತದೆ.

ADVERTISEMENT

10–ಕೋರ್‌ ಸಿಪಿಯು, 32–ಕೋರ್‌ ಜಿಪಿಯು, 64ಜಿಬಿ ಮೆಮೊರಿ ಹೊಂದಿರುವ ಹೊಸ ಚಿಪ್‌ಗಳು ಪ್ರತಿ ಸೆಕೆಂಡ್‌ಗೆ 200–400ಜಿಬಿ ಮೆಮೊರಿ ಬ್ಯಾಂಡ್‌ವಿಡ್ತ್‌ ಸಾಮರ್ಥ್ಯ ತೋರುತ್ತವೆ.

ಹೊಸ ಮ್ಯಾಕ್‌ಬುಕ್‌

ಅಭಿವೃದ್ಧಿ ಪಡಿಸಲಾಗಿರುವ 'ಎಂ1 ಪ್ರೊ' ಮತ್ತು 'ಎಂ1 ಮ್ಯಾಕ್ಸ್‌' ಚಿಪ್‌ಗಳನ್ನು ಹೊಂದಿರುವ ಮ್ಯಾಕ್‌ಬುಕ್‌ ಪ್ರೊ ಲ್ಯಾಪ್‌ಗಳನ್ನೂ ಆ್ಯಪಲ್‌ ಅನಾವರಣಗೊಳಿಸಿದೆ. ವಿನ್ಯಾಸದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿದ್ದು, 1080ಪಿ ಕ್ಯಾಮೆರಾ ಅಳವಡಿಸಲಾಗಿದೆ. 14 ಇಂಚು ಮತ್ತು 16 ಇಂಚು ಎರಡು ಮಾದರಿಗಳಲ್ಲಿ ಲ್ಯಾಪ್‌ಟಾಪ್‌ ಲಭ್ಯವಿದೆ.

ಹೊಸ ಚಿಪ್‌ಗಳಿಂದಾಗಿ ಬ್ಯಾಟರಿ ಚಾರ್ಜ್‌ ಉಳಿಯುವಿಕೆ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ. ಒಮ್ಮೆ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿ, 14 ಇಂಚಿನ ಲ್ಯಾಪ್‌ಟಾಪ್‌ ಮಾದರಿಯಲ್ಲಿ ನಿರಂತರ 17 ಗಂಟೆಗಳ ವಿಡಿಯೊ ಪ್ಲೇಬ್ಯಾಕ್‌ ಮಾಡಬಹುದು, 16 ಇಂಚಿನ ಮ್ಯಾಕ್‌ಬುಕ್‌ನಲ್ಲಿ 21 ಗಂಟೆಗಳ ವರೆಗೂ ವಿಡಿಯೊ ವೀಕ್ಷಣೆ ಸಾಧ್ಯವಾಗಲಿದೆ.

* 14 ಇಂಚು ಮ್ಯಾಕ್‌ಬುಕ್‌ ಪ್ರೊ– ₹1.94 ಲಕ್ಷ
* 16 ಇಂಚು ಮ್ಯಾಕ್‌ಬುಕ್‌ ಪ್ರೊ– ₹2.39 ಲಕ್ಷ; ಅಧಿಕ ಸಾಮರ್ಥ್ಯದ ಟಾಪ್‌–ಎಂಡ್‌ ಮಾದರಿಗೆ 6,099 ಡಾಲರ್‌ ಬೆಲೆ ನಿಗದಿಯಾಗಿದೆ.

ಮೂರನೇ ತಲೆಮಾರಿನ ಏರ್‌ಪಾಡ್ಸ್‌

ಏರ್‌ಪಾಡ್ಸ್‌ನ ಮೂರನೇ ಆವೃತ್ತಿಯನ್ನು ಆ್ಯಪಲ್‌ ಬಿಡುಗಡೆ ಮಾಡಿದೆ. ಈ ಹೊಸ ಇಯರ್‌ಬಡ್ಸ್‌ಬೆಲೆ ₹18,500(179 ಡಾಲರ್‌) ಇದೆ. ಏರ್‌ಪಾಡ್ಸ್‌ ಪ್ರೊನಲ್ಲಿ ಕೊಡಲಾಗಿರುವ ಹಲವು ಗುಣಲಕ್ಷಣಗಳು ಇದರಲ್ಲೂ ಇವೆ. ಉತ್ತಮ ಗುಣಮಟ್ಟದ ಆಡಿಯೊ, ಹೆಚ್ಚುವರಿ ಬ್ಯಾಟರಿ ಸಾಮರ್ಥ್ಯ ಹಾಗೂ ಹೊಸ ವಿನ್ಯಾಸದೊಂದಿಗೆ ಮೂರನೇ ತಲೆಮಾರಿನ ಏರ್‌ಪಾಡ್ಸ್‌ ಬಿಡುಗಡೆಯಾಗಿದೆ.

ಮ್ಯಾಗ್ನೆಟಿಕ್‌ ವೈರ್‌ಲೆಸ್‌ ಚಾರ್ಜರ್‌ ಇರುವ ಇಯರ್‌ಬಡ್‌ ಕೇಸ್‌ ಏರ್‌ಪಾಡ್ಸ್‌ ಜೊತೆ ಸಿಗುತ್ತದೆ. ಅಮೆರಿಕದಲ್ಲಿ ಏರ್‌ಪಾಡ್ಸ್‌ ಆರಂಭಿಕ ಮಾದರಿಗೆ ಬೆಲೆ ಕಡಿತಗೊಳಿಸಲಾಗಿದ್ದು,129 ಡಾಲರ್‌ಗಳಿಗೆ (ಸುಮಾರು₹10,000) ಸಿಗಲಿದೆ.

ಹೊಸ ಲ್ಯಾಪ್‌ಟಾಪ್‌ಗಳು ಮತ್ತು ಇಯರ್‌ಬಡ್‌ಗಳನ್ನು ಆನ್‌ಲೈನ್‌ ಮೂಲಕ ಖರೀದಿಸಬಹುದಾಗಿದ್ದು, ಇದೇ 26ರಿಂದ ಆ್ಯಪಲ್‌ ಸ್ಟೋರ್‌ಗಳಲ್ಲಿಯೂ ಲಭ್ಯವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.