ಸ್ಯಾನ್‌ಫ್ರಾನ್ಸಿಸ್ಕೊ: ಆ್ಯಪಲ್ ಕಂಪನಿಯ ವಾರ್ಷಿಕ ಸಮಾವೇಶದಲ್ಲಿ ಬಹುನಿರೀಕ್ಷಿತ ಐಫೋನ್ 16 ಸರಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.
ಆ್ಯಪಲ್ ಪಾರ್ಕ್‌ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂಪನಿಯು ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ನಿರೀಕ್ಷೆಯಂತೆ ಐಫೋನ್ –16 ಸರಣಿಯಲ್ಲಿ ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಎಂಬ ಹೊಸ ನಾಲ್ಕು ಮಾದರಿಗಳನ್ನು ಪರಿಚಯಿಸಲಾಗಿದೆ. ಈ ಮಾದರಿಗಳು ವಿನ್ಯಾಸ, ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ಆಧುನಿಕ ತಂತ್ರಜ್ಞಾನದ ಹಾರ್ಡ್‌ವೇರ್‌ಗಳನ್ನು ಬಳಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಐಫೋನ್ 16 ಸ್ಮಾರ್ಟ್‌ಫೋನ್ 6.1 ಇಂಚಿನ ಪರದೆ, 16 ಪ್ಲಸ್ ಆವೃತ್ತಿಯು 6.7 XDR OLED ಪ್ಯಾನಲ್ ಹೊಂದಿರಲಿದೆ. ಆದರೆ, ಪಿಕ್ಸೆಲ್ ಸಾಂದ್ರತೆ 460 ಪಿಪಿಐ ಹಾಗೂ 60Hz ರಿಫ್ರೆಶ್ ರೇಟ್ ಇದೆ. ಫೋನ್‌ನ ಹೊರ ಕವಚವು ಏರೋಸ್ಪೇಸ್ ಗುಣಮಟ್ಟದ ಅಲ್ಯೂಮಿನಿಯಂನಿಂದ ಸಿದ್ಧಪಡಿಸಲಾಗಿದೆ. ಈ ಬಾರಿ ಕ್ಯಾಮೆರಾವನ್ನು ಲಂಬವಾಗಿ ಜೋಡಿಸುವ ಮೂಲಕ ಹಿಂದಿನ ಮೂರು ಆವೃತ್ತಿಗಳ ವಿನ್ಯಾಸವನ್ನು ಆ್ಯಪಲ್ ಬದಲಿಸಿದೆ.
ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಅನುಕ್ರಮವಾಗಿ 6.3 ಇಂಚು ಮತ್ತು 6.9 ಇಂಚಿನ ಪರದೆಯನ್ನು ಹೊಂದಿರಲಿದೆ. ಈ ಹಿಂದಿನ ಐಫೋನ್ 15 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಕ್ರಮವಾಗಿ 6.1 ಹಾಗೂ 6.7 ಇಂಚುಗಳನ್ನು ಹೊಂದಿದ್ದವು. ಹೀಗಾಗಿ ದೊಡ್ಡ ಪರದೆ, ದೊಡ್ಡ ಬ್ಯಾಟರಿ ಬಳಕೆದಾರರಿಗೆ ಸಿಗಲಿದೆ. ಪ್ರೊ ಮಾದರಿಯ ಫೋನ್‌ಗಳ ಕ್ಯಾಮೆರಾಗಳ ಹಾರ್ಡ್‌ವೇರ್, ಸೆನ್ಸರ್‌ಗಳು ಬೇರೆಯೇ ಆಗಿವೆ. ಗುಣಮಟ್ಟದ ಚಿತ್ರ ಹಾಗೂ ವಿಡಿಯೊ ಚಿತ್ರೀಕರಣ ಇದರಿಂದ ಸಾಧ್ಯ.
ಐಫೋನ್ 16 ಮತ್ತು 16 ಪ್ಲಸ್ ಸ್ಮಾರ್ಟ್‌ಫೋನ್‌ನ ಮತ್ತೊಂದು ವಿಶೇಷವೆಂದರೆ ಆ್ಯಕ್ಷನ್ ಬಟನ್, ಇದನ್ನು ಮೊದಲು ಐಫೋನ್ 15 ಪ್ರೊ ಸರಣಿಯೊಂದಿಗೆ ಪರಿಚಯಿಸಲಾಗಿತ್ತು. ಇದು ಬಳಕೆದಾರರಿಗೆ ತಮ್ಮ ಮೆಚ್ಚಿನ ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಲು, ಪ್ರೋಗ್ರಾಂ ಮಾಡಲು ಅಥವಾ ಸಿರಿ ಶಾರ್ಟ್‌ಕಟ್‌ಗಳನ್ನು ಟ್ರಿಗರ್ ಮಾಡಲು ಅನುಮತಿಸುತ್ತದೆ. ಕ್ಯಾಮೆರಾ, ಫ್ಲ್ಯಾಶ್‌ಲೈಟ್ ಅಥವಾ ಆ್ಯಪ್‌ಗಳನ್ನು ತ್ವರಿತವಾಗಿ ತೆರೆಯಬಹುದು, ರಿಂಗ್ ಮತ್ತು ಸೈಲೆಂಟ್ ಮೋಡ್ ನಡುವೆ ಬದಲಾಯಿಸಬಹುದು.
ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿ 48 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾದೊಂದಿಗೆ 12MP ಅಲ್ಟ್ರಾ ವೈಡ್ ಆ್ಯಂಗಲ್ ಸೆನ್ಸರ್ ಇದೆ. ಜೊತೆಗೆ 12MP ಸೆಲ್ಫಿ ಕ್ಯಾಮೆರಾ ಇದೆ.
ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ನಲ್ಲಿ 48 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾದೊಂದಿಗೆ 12MP ಅಲ್ಟ್ರಾ ವೈಡ್ ಆ್ಯಂಗಲ್ ಸೆನ್ಸರ್ ಇದೆ. ಜೊತೆಗೆ 12MP ಸೆಲ್ಫಿ ಕ್ಯಾಮೆರಾ ಇದೆ.
ಸಿನಿಮ್ಯಾಟಿಕ್ ವಿಡಿಯೊ ವೈಶಿಷ್ಟ್ಯವಂತೂ ಚೆನ್ನಾಗಿದೆ. ವಿಡಿಯೊ ರೆಕಾರ್ಡಿಂಗ್‌ನಲ್ಲಿ ಆಂಡ್ರಾಯ್ಡ್ ಫೋನ್‌ಗಳಿಗಿಂತ ಐಫೋನ್ ಚೆನ್ನಾಗಿದೆ ಎಂಬುದು ಬಹುತೇಕರು ಒಪ್ಪುವ ವಿಚಾರ. ವಿಡಿಯೊ ಕ್ರಿಯೇಟರ್‌ಗಳಿಗೆ ವ್ಲಾಗರ್ (ವಿಡಿಯೊ ಬ್ಲಾಗರ್) ಮತ್ತು ಫೋನ್‌ಗಳ ಮೂಲಕವೇ ಚಿತ್ರೀಕರಣ ನಡೆಸುವವರಿಗೆ ಈ ಫೋನ್ ಖಂಡಿತಾ ಇಷ್ಟವಾಗಬಹುದು.
ಐಫೋನ್ ಪ್ರೊ ಮ್ಯಾಕ್ಸ್‌ನಲ್ಲಿ ಸತತ 33 ಗಂಟೆಗಳವರೆಗೆ ವಿಡಿಯೊ ರೆಕಾರ್ಡಿಂಗ್‌ಗೆ ಅನುಕೂಲವಾಗುವಂತೆ ಬ್ಯಾಟರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಐಫೋನ್ 16 ಸ್ಮಾರ್ಟ್‌ಫೋನ್ 128GB, 256GB ಮತ್ತು 512GB ಸ್ಟೋರೇಜ್‌ಗಳಲ್ಲಿ ಲಭ್ಯವಿದೆ. ಇವುಗಳ ದರ ಕ್ರಮವಾಗಿ ₹79,900, ₹ 89,999 ಮತ್ತು ₹1,09,900.
ಐಫೋನ್ 16 ಪ್ಲಸ್ ಸ್ಮಾರ್ಟ್‌ಫೋನ್ 128GB, 256GB ಮತ್ತು 512GB ಸ್ಟೋರೇಜ್‌ಗಳಲ್ಲಿ ಲಭ್ಯವಿದೆ. ಇವುಗಳ ದರ ಕ್ರಮವಾಗಿ ₹89,900, ₹99,999 ಮತ್ತು ₹1,19,900.
ಐಫೋನ್ 16 ಮತ್ತು 16 ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಕಪ್ಪು, ಬಿಳಿ, ಗುಲಾಬಿ, ಟೀಲ್ ಮತ್ತು ಅಲ್ಟ್ರಾಮರೀನ್ ಬಣ್ಣಗಳಲ್ಲಿ ದೊರೆಯುತ್ತವೆ.
ಐಫೋನ್ 16 ಪ್ರೊ ಸ್ಮಾರ್ಟ್‌ಫೋನ್ 128GB, 256GB, 512GB ಮತ್ತು 1TB ಸ್ಟೋರೇಜ್‌ಗಳಲ್ಲಿ ಲಭ್ಯವಿದೆ. ಇವುಗಳ ದರ ಕ್ರಮವಾಗಿ ₹1,19,900, ₹1,29,999, ₹1,49,999 ಮತ್ತು ₹1,69,900.
ಐಫೋನ್ 16 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್ 256GB, 512GB ಮತ್ತು 1TB ಸ್ಟೋರೇಜ್‌ಗಳಲ್ಲಿ ಲಭ್ಯವಿದೆ. ಇವುಗಳ ದರ ಕ್ರಮವಾಗಿ ₹1,44,900, ₹1,64, 999 ಮತ್ತು ₹1,84,900.
ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಕಪ್ಪು, ಬಿಳಿ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಿದೆ.
ಎಲ್ಲಾ ಹೊಸ ಐಫೋನ್ 16 ಸರಣಿಯ ಮಾದರಿಗಳು ಸೆಪ್ಟೆಂಬರ್ 13ರಂದು ಮುಂಗಡ ಬುಕ್ಕಿಂಗ್‌ಗೆ ಲಭ್ಯವಿರುತ್ತವೆ. ಸೆಪ್ಟೆಂಬರ್ 20ರಂದು ಮಳಿಗೆಗಳಲ್ಲಿ ಸಿಗುತ್ತವೆ ಎಂದು ಕಂಪನಿ ತಿಳಿಸಿದೆ.
ಈ ಎಲ್ಲಾ ಫೋನ್‌ಗಳೂ ಆಧುನಿಕ ಕೃತಕ ಬುದ್ಧಿಮತ್ತೆಯನ್ನು ಹೊಂದಿವೆ ಎನ್ನುವುದು ವಿಶೇಷ. ಇದರ ಭಾಗವೇ ಆಗಿರುವ ಆ್ಯಪಲ್‌ನ ‘ಸಿರಿ’ ಕೂಡಾ ಕೃತಕ ಬುದ್ಧಿಮತ್ತೆ ಮೂಲಕ ಹೊಸ ಸ್ವರೂಪ ಪಡೆದಿರುವ ಸಾಧ್ಯತೆ ಇದೆ. ಧ್ವನಿಯು ಭಾವನೆಗಳಿಂದ ಕೂಡಿದ್ದು, ಮನುಷ್ಯರೊಂದಿಗಿನ ಸಂವಹನಕ್ಕೆ ಸರಿಸಮಾನವಾಗಿದೆ ಎಂದೇ ಬಿಟಾ ಆವೃತ್ತಿ ಬಳಕೆದಾರರು ಹೇಳಿದ್ದಾರೆ.
ಆ್ಯಪಲ್‌ನ ಐಒಎಸ್ 18 ಬಿಟಾ ಈಗಾಗಲೇ ಬಿಡುಗಡೆಯಾಗಿದ್ದು, ಐಫೋನ್ ಬಳಕೆದಾರರಲ್ಲಿ ಹೊಸ ಹುರುಪು ಮೂಡಿಸಿದೆ. ಈ ಬಾರಿ ಕನ್ನಡವನ್ನೂ ಒಳಗೊಂಡು 9 ಭಾರತೀಯ ಭಾಷೆಗಳಲ್ಲಿ ಸಿರಿ ಲಭ್ಯ. ತೆಲುಗು, ಬಂಗಾಳಿ, ಗುಜರಾತಿ, ಹಿಂದಿ, ಮಲಯಾಳ, ಮರಾಠಿ, ಪಂಜಾಬಿ ಹಾಗೂ ತಮಿಳು ಭಾಷೆಗಳಲ್ಲೂ ಸಿರಿ ಪ್ರತಿಕ್ರಿಯಿಸಲಿದೆ ಎಂಬುದು ಆ್ಯಪಲ್ ಬಳೆದಾರರಲ್ಲಿ ಹೊಸ ವಿಶ್ವಾಸ ಮೂಡಿಸಿದೆ. ಈ ಎಲ್ಲಾ ಕುತೂಹಲಕ್ಕೂ ಸೋಮವಾರ ರಾತ್ರಿ ನಡೆಯಲಿರುವ ಸಮಾವೇಶ ತೆರೆಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.