ಬೆಂಗಳೂರು: ಟ್ರೆಕ್ಕಿಂಗ್ ಹೋಗಿದ್ದ ಸಂದರ್ಭದಲ್ಲಿ ಕಣಿವೆಗೆ ಉರುಳಿ ಬಿದ್ದ ಯುವಕನೋರ್ವನನ್ನು ಆ್ಯಪಲ್ ಸ್ಮಾರ್ಟ್‌ವಾಚ್‌ನ ತುರ್ತು ಕರೆ ಫೀಚರ್ ರಕ್ಷಿಸಿದೆ.
ಮಹಾರಾಷ್ಟ್ರದ ರಾಯಘಡದ ಸಮಿತ್ ನೀಲೇಶ್ ಮೆಹ್ತಾ ಎಂಬ ಯುವಕ ಗೆಳೆಯರ ಜತೆ ಕಳೆದ ಜುಲೈನಲ್ಲಿ ಟ್ರೆಕ್ಕಿಂಗ್ ಹೋಗಿದ್ದರು. ಲೋನವಾಲಾದ ವಿಸಾಪುರ್ ಕೋಟೆ ನೋಡಿ ಮರಳುವಾಗ, ಕಾಲು ಜಾರಿ ಸುಮಾರು 150 ಅಡಿ ಆಳದ ಕಣಿವೆಗೆ ಬಿದ್ದಿದ್ದರು.
ಸಮಿತ್ ಅವರ ಗೆಳೆಯರು ಮುಂದೆ ತೆರಳಿದ್ದರಿಂದ, ಅವರಿಗೆ ಸಮಿತ್ ಕಣಿವೆಗೆ ಬಿದ್ದಿರುವುದು ಅರಿವಿಗೆ ಬಂದಿರಲಿಲ್ಲ.
ಈ ಸಂದರ್ಭದಲ್ಲಿ ಎರಡೂ ಕಾಲಿನ ಪಾದಕ್ಕೆ ಗಾಯವಾಗಿದೆ. ಅಲ್ಲದೆ, ಸಮಿತ್ ಫೋನ್ ಅವರ ಗೆಳೆಯನ ಬ್ಯಾಗ್‌ನಲ್ಲಿತ್ತು. ಆದರೆ ಸಮಿತ್ ಕೈಯಲ್ಲಿ ಆ್ಯಪಲ್ ವಾಚ್ ಇದ್ದು, ಅದರ ಮೂಲಕ ತುರ್ತು ಕರೆ ಮಾಡಿ ಪಾಲಕರನ್ನು ಮತ್ತು ಸಹಾಯವಾಣಿಯನ್ನು ಸಂಪರ್ಕಿಸಿದ್ದಾರೆ. ಗೆಳೆಯರನ್ನು ಕೂಗಿದರೂ, ಅವರಿಗೆ ಸಮಿತ್ ಧ್ವನಿ ಕೇಳಿಸಿಲ್ಲ. ಮಾತ್ರವಲ್ಲದೆ, ಕಣಿವೆಗೆ ಬಿದ್ದಿದ್ದರಿಂದ ಸಹಾಯ ಮಾಡುವ ಸ್ಥಿತಿಯೂ ಇರಲಿಲ್ಲ.
ಸಮಿತ್‌ರಿಂದ ತುರ್ತು ಕರೆ ಪಡೆದುಕೊಂಡು, ಅದಾದ ಕೆಲವೇ ಗಂಟೆಗಳಲ್ಲಿ ರಕ್ಷಣಾ ತಂಡ ಸಮಿತ್ ಇದ್ದ ಜಾಗವನ್ನು ತಲುಪಿದ್ದು, ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದೆ. ಜತೆಗೆ ನಂತರದಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದು, ಸಮಿತ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಮಿತ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿ, ಹೇಗೆ ಸ್ಮಾರ್ಟ್‌ವಾಚ್ ಒಂದು ತನ್ನ ಜೀವ ಉಳಿಸಲು ನೆರವಾಯಿತು ಎಂದು ವಿವರಿಸಿದ್ದಾರೆ.
ಜತೆಗೆ, ಆ್ಯಪಲ್ ಸಿಇಒ ಟಿಮ್ ಕುಕ್ ಅವರಿಗೂ ಇ ಮೇಲ್ ಮಾಡಿ, ಆ್ಯಪಲ್ ವಾಚ್ ತುರ್ತು ಕರೆ ಫೀಚರ್‌ನಿಂದಾಗಿ ತನ್ನ ಜೀವ ಉಳಿಯಿತು, ಅದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ. ಸಮಿತ್ ಇ ಮೇಲ್‌ಗೆ ಟಿಮ್ ಕುಕ್ ಪ್ರತಿಕ್ರಿಯಿಸಿದ್ದು, ಬೇಗನೆ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.